ಗುರುವಾರ , ಏಪ್ರಿಲ್ 9, 2020
19 °C

ಆಚಾರ್ಯನ ತೊರೆದ ತ್ರಿಶಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೆಗಾಸ್ಟಾರ್‌ ಚಿರಂಜೀವಿ ನಟನೆಯ ಬಹುನಿರೀಕ್ಷೆಯ ‘ಆಚಾರ್ಯ’ ಚಿತ್ರದಿಂದ ನಟಿ ತ್ರಿಶಾ ಕೃಷ್ಣನ್‌ ಹೊರ ನಡೆದಿದ್ದಾರೆ. ಇದು ಅವರ ಅಭಿಮಾನಿಗಳಿಗೂ ಶಾಕಿಂಗ್‌ ಸುದ್ದಿ. ತ್ರಿಶಾ ಹೊರಬರುತ್ತಿದ್ದಂತೆ ಅಭಿಮಾನಿಗಳು ಬೇಸರ ತೋಡಿಕೊಂಡಿದ್ದಾರೆ. ಚಿತ್ರದಿಂದ ಹೊರಬರಲು ನಿಜಕಾರಣವನ್ನೂ ತ್ರಿಶಾ ಬಿಚ್ಚಿಟ್ಟಿದ್ದಾರೆ.

‘ಕೆಲವೊಮ್ಮೆ ವಿಷಯಗಳು ಆರಂಭದಲ್ಲಿ ಹೇಳಿದ್ದಕ್ಕಿಂತ ಮತ್ತು ಚರ್ಚಿಸಿದ್ದಕ್ಕಿಂತ ಭಿನ್ನವಾಗಿರುತ್ತವೆ. ಸೃಜನಶೀಲತೆಗೆ ಸಂಬಂಧಿಸಿ ಇಂತಹ ಭಿನ್ನತೆಗಳಿಂದಾಗಿ ನಾನು ಚಿರಂಜೀವಿ ಸರ್ ಅವರ ಚಿತ್ರದ ಭಾಗವಾಗದಿರಲು ನಿರ್ಧರಿಸಿದ್ದೇನೆ. ಚಿತ್ರತಂಡಕ್ಕೆ ಒಳ್ಳೆಯದಾಗಲಿ’ ಎಂದು ತ್ರಿಶಾ ಟ್ವೀಟ್‌ ಮಾಡಿದ್ದಾರೆ.

ಅಲ್ಲದೆ, ಅವರು ‘ನಾನು ಹೊಸದಾದ ಒಂದು ಅದ್ಭುತ ಯೋಜನೆಯೊಂದಿಗೆ ತೆಲುಗು ಪ್ರೇಕ್ಷಕರ ಎದುರು ಆದಷ್ಟು ಬೇಗ ಬರುತ್ತೇನೆ’ ಎಂದೂ ತಮ್ಮ ಅಭಿಮಾನಗಳ ಬಳಿ ಕ್ಷಮೆಯಾಚಿಸಿರುವ ರೀತಿಯಲ್ಲಿ ಬರೆದುಕೊಂಡಿದ್ದಾರೆ. 

ಚಿರಂಜೀವಿಯವರಿಗೆ ‘ಆಚಾರ್ಯ’ 152ನೇ ಚಿತ್ರ. ಈ ಚಿತ್ರದಲ್ಲಿ ಇವರಿಗೆ ಜೋಡಿಯಾಗಿ 36ರ ಹರೆಯದ ತ್ರಿಶಾ ನಟಿಸಬೇಕಿತ್ತು. 2006ರಲ್ಲಿ ತೆರೆಕಂಡಿದ್ದ ‘ಸ್ಟ್ಯಾಲಿನ್’ ಸಿನಿಮಾದಲ್ಲಿ ಈ ಜೋಡಿ ಒಟ್ಟಾಗಿಸಿ ಕಾಣಿಸಿಕೊಂಡಿದ್ದರು. ಹದಿನಾಲ್ಕು ವರ್ಷಗಳ ನಂತರ ಮತ್ತೆ ಈ ಜೋಡಿಯನ್ನು ತೆರೆ ಮೇಲೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದರು. ಈಗ ಸಹಜವಾಗಿಯೇ ಅವರಿಗೆಲ್ಲರಿಗೂ ನಿರಾಶೆಯಾಗಿದೆ. 

ಕೊನಿದೆಲಾ ಪ್ರೊಡಕ್ಷನ್ ಕಂಪನಿ ಮತ್ತು ಮ್ಯಾಟಿನಿ ಎಂಟರ್‌ಟೈನ್‌ಮೆಂಟ್‌ ನಿರ್ಮಾಣ ಮಾಡುತ್ತಿರುವ ‘ಆಚಾರ್ಯ’ ಚಿತ್ರಕ್ಕೆ ನಿರ್ದೇಶಕ ಕೊರಟಾಲ ಶಿವ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಮಣಿ ಶರ್ಮ ಅವರ ಸಂಗೀತವಿದೆ. ಇದು ₹140 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ. ಚಿತ್ರದ ಟೈಟಲ್‌ ಕೂಡ ರಹಸ್ಯವಾಗಿಟ್ಟು, ವಿಶೇಷ ಸಂದರ್ಭದಲ್ಲಿ ಟೈಟಲ್‌ ಪ್ರಕಟಿಸುವ ಯೋಜನೆಯಲ್ಲಿ ಚಿತ್ರತಂಡವಿತ್ತು. ಆದರೆ, ಚಿರಂಜೀವಿ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಬಾಯಿತಪ್ಪಿ ಚಿತ್ರದ ಟೈಟಲ್‌ ರಿವೀಲ್‌ ಮಾಡಿ ಪೇಚಿಗೆ ಸಿಲುಕಿದ್ದರು.

ತ್ರಿಶಾ ಜಾಗಕ್ಕೆ ಕಾಜಲ್‌!

ತ್ರಿಶಾ ಜಾಗ ತುಂಬಲು ದಕ್ಷಿಣ ಭಾರತದ ಮತ್ತೊಬ್ಬ ಸ್ಟಾರ್‌ ನಟಿ ಕಾಜಲ್‌ ಅಗರ್‌ವಾಲ್‌ ಸಿದ್ಧವಾಗಿದ್ದಾರೆ. ಈಗಾಗಲೇ ಚಿತ್ರತಂಡ ಅವರೊಂದಿಗೆ ಮಾತುಕತೆ ನಡೆಸಿದೆ. ಪಾತ್ರಕ್ಕೆ ಹೊಂದಿಕೆಯಾಗುತ್ತಾರಾ ಎನ್ನುವುದನ್ನು ಕಂಡುಕೊಳ್ಳಲು ಲುಕ್‌ ಟೆಸ್ಟ್‌ ಕೂಡ ನಡೆಸಲಾಗಿದೆಯಂತೆ.

ಕಾಜಲ್ ಬಳಿ ಕಮಲ್ ಹಾಸನ್ ಅಭಿನಯದ ‘ಇಂಡಿಯನ್-2 ’ಸಿನಿಮಾ ಬಿಟ್ಟರೆ ಬೇರೆ ಯಾವುದೇ ಸಿನಿಮಾಗಳಿಲ್ಲ. ‘ಆಚಾರ್ಯ’ದಲ್ಲಿ ಮೆಗಾಸ್ಟಾರ್‌ ಕೈಹಿಡಿಯಲು ಕಾಜಲ್‌ ಕಾಲ್‌ ಶೀಟ್‌ ಕೊಡುವುದು ಪಕ್ಕಾ ಎನ್ನುವ ಮಾತುಗಳು ಟಾಲಿವುಡ್‌ನಲ್ಲಿ ಕೇಳಿಬರುತ್ತಿವೆ. 

ನಿರ್ದೇಶಕ ಕೊರಟಾಲ ಶಿವ ಅವರು ಸದ್ಯ ಹೈದರಾಬಾದ್‌ನಲ್ಲಿ ಚಿತ್ರದ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಚಿರಂಜೀವಿ ನಿಭಾಯಿಸುತ್ತಿರುವ ಪಾತ್ರದಲ್ಲಿ ಯುವಕನಾಗಿ ಕಾಣಿಸಿಕೊಳ್ಳಬೇಕಿರುವ ಭಾಗದಲ್ಲಿ ಅವರ ಪುತ್ರ ರಾಮಚರಣ್‌ ಕಾಣಿಸಿಕೊಳ್ಳಬೇಕೆನ್ನುವುದು ನಿರ್ದೇಶಕರ ಇಂಗಿತ. ಈ ಬಗ್ಗೆ ಅವರು ರಾಮ್‌ಚರಣ್‌ಗೆ ಕೋರಿಕೆ ಇಟ್ಟಿದ್ದಾರಂತೆ. ಆದರೆ, ರಾಮ್‌ಚರಣ್‌ ಅವರು ಎಸ್‌.ಎಸ್‌. ರಾಜಮೌಳಿ ಅವರ ‘ಆರ್‌ಆರ್‌ಆರ್‌’ ಚಿತ್ರದಲ್ಲಿ ನಟಿಸುತ್ತಿರುವುದರಿಂದ ಈ ಅವಕಾಶ ಒಪ್ಪಿಕೊಂಡಿಲ್ಲ ಎನ್ನಲಾಗುತ್ತಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)