ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಪಾತ್ರಕ್ಕಾಗಿ ಪಲ್ಲಂಗ' ವಿಶ್ವದೆಲ್ಲೆಡೆ ಜೀವಂತ: ಅದಾ ಶರ್ಮಾ

Last Updated 8 ಮೇ 2020, 6:57 IST
ಅಕ್ಷರ ಗಾತ್ರ

'ಪಾತ್ರಕ್ಕಾಗಿ ಪಲ್ಲಂಗ' (ಕಾಸ್ಟಿಂಗ್ ಕೌಚ್‌) ಇದು ಕಳೆದೆರಡು ವರ್ಷಗಳ ಹಿಂದೆ ಭಾರತೀಯ ಸಿನಿರಂಗದಲ್ಲಿ ಸಾಕಷ್ಟು ಸುದ್ದಿ ಮಾಡಿದ ವಿಷಯವಾಗಿತ್ತು. ಚಂದನವನ ಸೇರಿದಂತೆ ಬಾಲಿವುಡ್, ಟಾಲಿವುಡ್‌, ಕಾಲಿವುಡ್‌ ಹಾಗೂ ಮಾಲಿವುಡ್‌ ಅಲ್ಲದೇ ಹಾಲಿವುಡ್‌ ನಟಿಯರು ಕೂಡ ಕಾಸ್ಟಿಂಗ್ ಕೌಚ್ ಕುರಿತಂತೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದರು.

ಕಳೆದೊಂದಷ್ಟು ದಿನದಿಂದ ಮೌನವಾಗಿದ್ದ ಕಾಸ್ಟಿಂಗ್ ಕೌಚ್ ವಿಷಯ ಈಗ ಮತ್ತೆ ಸದ್ದು ಮಾಡಿದೆ. ನಟಿ ಅದಾ ಶರ್ಮಾ ‘ಕಾಸ್ಟಿಂಗ್ ಕೌಚ್ ಎನ್ನುವುದು ಭಾರತ ಮಾತ್ರವಲ್ಲ, ವಿಶ್ವದೆಲ್ಲೆಡೆ ಜೀವಂತವಾಗಿದೆ’ ಎನ್ನುವ ಮೂಲಕ ಈ ಸುದ್ದಿಗೆ ಮತ್ತೆ ಜೀವ ತಂದಿದ್ದಾರೆ.

ಬಾಲಿವುಡ್‌ನ ‘1920’ ಎಂಬ ಯಶಸ್ವಿ ಚಿತ್ರದ ಮೂಲಕ ಸಿನಿ ಪಯಣ ಆರಂಭಿಸಿದವರು ನಟಿ ಅದಾ ಶರ್ಮಾ. ಬಾಲಿವುಡ್‌ ಸೇರಿದಂತೆ ದಕ್ಷಿಣ ಸಿನಿರಂಗದಲ್ಲಿ ಮಿಂಚಿದ್ದ ಈ ನಟಿ ಇತ್ತೀಚೆಗೆ ಕಾಸ್ಟಿಂಗ್ ಕೌಚ್‌ ಬಗ್ಗೆ ಮಾತನಾಡಿದ್ದಾರೆ. ಕಾಸ್ಟಿಂಗ್ ಕೌಚ್ ಎನ್ನುವುದು ಪ್ರಪಂಚದೆಲ್ಲೆಡೆ ಜೀವಂತವಾಗಿದೆ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಈ ಹಿಂದೆ ಕೆಲ ಬಾಲಿವುಡ್‌ ನಟಿಯರು ಕೂಡ ದಕ್ಷಿಣ ಭಾರತ ಸಿನಿರಂಗದಲ್ಲಿ ತಾವು ಎದುರಿಸಿದ ಕಾಸ್ಟಿಂಗ್ ಕೌಚ್ ಅನುಭವದ ಕುರಿತು ಹಂಚಿಕೊಂಡಿದ್ದರು.

ಈ ಬಗ್ಗೆ ಏಜೆನ್ಸಿಯೊಂದಕ್ಕೆ ಹೇಳಿಕೆ ನೀಡಿದ ಅದಾ ‘ಕಾಸ್ಟಿಂಗ್ ಕೌಚ್ ಎನ್ನುವುದು ಕೇವಲ ದಕ್ಷಿಣ ಹಾಗೂ ಉತ್ತರ ಭಾರತಕ್ಕೆ ಮಾತ್ರ ಸೀಮಿತವಾಗಿರುವುದಲ್ಲ. ನನಗನ್ನಿಸಿದ ಹಾಗೆ ಇದು ಪ್ರಪಂಚದೆಲ್ಲೆಡೆ ಹರಡಿದೆ. ಈ ರೀತಿ ದೌರ್ಜನ್ಯ ವಿಶ್ವದೆಲ್ಲೆಡೆ ನಡೆಯುತ್ತಿದೆ’ ಎಂದಿದ್ದಾರೆ.

‘ಆದರೆ ಪ್ರತಿ ವಿಷಯದಲ್ಲೂ ಆಯ್ಕೆ ಇರುವಂತೆ ಇದರಲ್ಲೂ ಆಯ್ಕೆ ಇದೆ. ನಮ್ಮ ಆಯ್ಕೆಯ ಮೇಲೆ ಎಲ್ಲವೂ ಅವಲಂಬಿತವಾಗಿದೆ’ ಎಂದು ದಿಟ್ಟವಾಗಿ ನುಡಿದಿದ್ದಾರೆ.

ಇವರು ನಟಿಸಿದ್ದ ‘ಕಮಾಂಡೊ 3’ ಸಿನಿಮಾ ಬಿಡುಗಡೆಯಾಗಿದ್ದು, ಸದ್ಯ ’ಮ್ಯಾನ್ ಟು ಮ್ಯಾನ್’ ಸಿನಿಮಾ ಇನ್ನಷ್ಟೇ ತೆರೆ ಕಾಣಬೇಕಿದೆ. ಈ ಚಿತ್ರದಲ್ಲಿ ನವೀನ್ ಕಸ್ತೂರಿಯ ನಾಯಕನಾಗಿ ನಟಿಸುತ್ತಿದ್ದಾರೆ. ಹುಡುಗನೊಬ್ಬ ಸರ್ಜರಿ ಮುಖಾಂತರ ಹುಡುಗಿಯಾಗಿ ಬದಲಾಗುವ ಕಥೆಯನ್ನು ಹೊಂದಿದೆ ಈ ಚಿತ್ರ. ನಾಯಕ ನಾಯಕಿಯನ್ನು ಪ್ರೀತಿಸಿ ಮದುವೆಯಾಗುತ್ತಾನೆ. ಮದುವೆಯಾದ ಮೇಲೆ ತನ್ನ ಹೆಂಡತಿ ಮಹಿಳೆಯಲ್ಲಾ ಪುರುಷ ಎಂಬುದು ನಾಯಕನಿಗೆ ತಿಳಿಯುತ್ತದೆ. ಇದರ ಸುತ್ತ ನಡೆಯುವ ಕಥೆಯೇ ಮ್ಯಾನ್‌ ಟು ಮ್ಯಾನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT