ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಿಯಾವಾದ ‘ಆದಿಲಕ್ಷ್ಮಿ ಪುರಾಣಗಳು’

Last Updated 19 ಜುಲೈ 2019, 20:09 IST
ಅಕ್ಷರ ಗಾತ್ರ

ಪುರುಷ ಪ್ರಧಾನವಾಗಿದ್ದ ಚಿತ್ರರಂಗದಲ್ಲಿ ಈಗ ಮಹಿಳಾಮಣಿಗಳ ದರ್ಬಾರ್‌ ಶುರುವಾಗಿದೆ ಎನ್ನಲು ಅಡ್ಡಿಯಿಲ್ಲ. ಮಹಿಳೆಯರು ನಾವು ಯಾವುದರಲ್ಲೂ ಕಡಿಮೆ ಇಲ್ಲ. ಅವಕಾಶ ಸಿಕ್ಕಿದರೆ ಎಲ್ಲ ಕ್ಷೇತ್ರಕ್ಕೂ ಸೈ ಮತ್ತು ಜೈ ಎನ್ನುವ ಸಂದೇಶ ನೀಡಲು ಸಜ್ಜಾಗಿದ್ದಾರೆ ಈಗ ಚಿತ್ರರಂಗದ ಮಹಿಳಾಮಣಿಗಳು!

ಕಳೆದ ವಾರ ಬಿಡುಗಡೆಯಾದ ‘ಯಾನ’ ಸಿನಿಮಾ ನಿರ್ದೇಶನ, ಕಥೆ–ಚಿತ್ರಕಥೆ, ಸಂಭಾಷಣೆಯ ಹೊಣೆಯಿಂದ ವಿಜಯಲಕ್ಷ್ಮಿ ಸಿಂಗ್ ಗಮನ ಸೆಳೆದಿದ್ದರು. ಜತೆಗೆ ತಮ್ಮ ಮೂವರು ಹೆಣ್ಣು ಮಕ್ಕಳನ್ನು ಆ ಚಿತ್ರದಲ್ಲಿ ನಾಯಕಿಯರನ್ನಾಗಿಸಿ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ ದಾಖಲೆ ನಿರ್ಮಿಸಿದ್ದರು. ಈಗ ಇಂತಹದ್ದೇ ಹಲವು ವಿಶೇಷಗಳಿಂದ ಗಮನ ಸೆಳೆಯುತ್ತಿದೆ ಇದೇ ಶುಕ್ರವಾರ ತೆರೆಗೆ ಬರಲಿರುವ ‘ಆದಿಲಕ್ಷ್ಮಿ ಪುರಾಣಗಳು’ ಚಿತ್ರವು. ಈ ಸಿನಿಮಾದ ನಿರ್ದೇಶಕಿ, ಚೆನ್ನೈನ ಪ್ರಿಯಾ ವಿ. ಅವರು ಜನಪ್ರಿಯ ಬಹುಭಾಷಾ ನಟಿ ಸುಹಾಸಿನಿ ಮತ್ತು ಹೆಸರಾಂತ ನಿರ್ದೇಶಕ ಮಣಿರತ್ನಂ ದಂಪತಿಯ ಗರಡಿಯಲ್ಲಿ ಪಳಗಿದ್ದಾರೆ‌. ಪ್ರಿಯಾ ತಮ್ಮಸಿನಿ ಜರ್ನಿ ಕುರಿತ ಅನಿಸಿಕೆಗಳನ್ನು ‘ಸಿನಿಮಾ ಪುರವಣಿ’ ಜತೆಗೆ ಹಂಚಿಕೊಂಡಿದ್ದಾರೆ.

ನಾನು ಮೂಲತಃ ಬರಹಗಾರ್ತಿ.ನನಗೆ ಬಾಲ್ಯದಿಂದಲೂ ಕಥೆ ಬರೆಯುವುದರಲ್ಲಿ ಆಸಕ್ತಿ ಇತ್ತು. ರಂಗಭೂಮಿಯಲ್ಲೂ ಆಸಕ್ತಿ ಇದ್ದ ಕಾರಣಕ್ಕೆ ನಾಟಕಗಳು, ರಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಬೆಳೆದುಬಂದೆ.1990ರ ಅವಧಿಯಲ್ಲಿ ನಾನು ಕಾಲೇಜು ದಿನಗಳಲ್ಲಿ ಇದ್ದಾಗ, ನಟಿ, ನಿರ್ದೇಶಕಿ ಸುಹಾಸಿನಿ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತ್ತು. ಆಗ ಅವರು ತಮಿಳು ಧಾರಾವಾಹಿಯೊಂದನ್ನು ನಿರ್ದೇಶಿಸುತ್ತಿದ್ದರು. ಆ ಧಾರಾವಾಹಿಯಲ್ಲಿ ನನಗೆ ಸಣ್ಣ ಪಾತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತ್ತು. ಆಗ ಅವರ ನಿರ್ದೇಶನ ಹತ್ತಿರದಿಂದ ನೋಡುವ ಅವಕಾಶ ಲಭಿಸಿತು. ನಾನೂ ನಿರ್ದೇಶಕಿಯಾಗಲು ನಿಜವಾಗಿಯೂ ಸುಹಾಸಿನಿ ಅವರೇ ಸ್ಫೂರ್ತಿ. ಅವರಿಂದಲೇ ನಾನು ನಿರ್ದೇಶನಕ್ಕೆ ಕಾಲಿಟ್ಟಿದ್ದು ಎಂದು ಮಾತು ವಿಸ್ತರಿಸಿದರು ಪ್ರಿಯಾ.

‘ನಿರ್ದೇಶನದ ಮೇಲಿರುವ ಆಸಕ್ತಿ ಬಗ್ಗೆ ಸುಹಾಸಿನಿ ಅವರಲ್ಲಿ ಹೇಳಿಕೊಂಡಾಗ, ಅವರು ಸಿನಿಮಾ ಬಗ್ಗೆ ಹೆಚ್ಚು ಅಧ್ಯಯನ ಮಾಡುವಂತೆ ಸಲಹೆ ಕೊಟ್ಟರು. ಆನಂತರ ಫಿಲ್ಮ್‌ ಇನ್ಸಿಟಿಟ್ಯೂಟ್‌ ಸೇರಿದೆ.ಅಲ್ಲದೆ, ಸುಹಾಸಿನಿ ಅವರು ನಿರ್ದೇಶಿಸಿದ ‘ಇಂದ್ರ’ ಸಿನಿಮಾಕ್ಕೆ ಸಹ ನಿರ್ದೇಶಕಿಯಾಗಿಯೂ ಕೆಲಸ ಮಾಡಿದೆ. ಮಣಿರತ್ನಂ ಅವರೊಟ್ಟಿಗೆನಿರ್ದೇಶನದ ವ್ಯಾಕರಣ ಕಲಿಯುವ ಅವಕಾಶವೂ ಸಿಕ್ಕಿತು. ತಮಿಳಿನಲ್ಲೂ ಎರಡು ಸಿನಿಮಾಗಳನ್ನು ನಿರ್ದೇಶಿಸಿದ್ದೇನೆ’ ಎನ್ನುವ ಮಾತು ಸೇರಿಸಿದರು ಅವರು.

‘ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಾಗ ಒಂದು ರೀತಿಯಲ್ಲಿ ಅವ್ಯಕ್ತ ಭಯ ನನ್ನಲ್ಲಿ ಆವರಿಸಿತು. ಏಕೆಂದರೆ ನನ್ನ ಪಾಲಿಗೆ ಕನ್ನಡ ಚಿತ್ರರಂಗ ಹೊಸದು. ಹೇಗಪ್ಪಾ ಇಲ್ಲಿ ಅಸ್ತಿತ್ವ ಕಂಡುಕೊಳ್ಳುವುದು ಎನ್ನುವ ದಿಗಿಲು ಇತ್ತು. ಆದರೆ, ಇಲ್ಲಿ ಕೆಲಸ ಆರಂಭಿಸಿದ ನಂತರ ಕನ್ನಡದಲ್ಲಿ ಇದು ನನಗೆಮೊದಲ ಚಿತ್ರ ಎನಿಸಲೇ ಇಲ್ಲ. ಕನ್ನಡ ಕಲಾವಿದರು ಮತ್ತು ಕನ್ನಡದ ಜತೆಗೆ ಒಂದು ಭಾವನಾತ್ಮಕ ಬೆಸುಗೆ ಬೆಳೆಯಿತು.ಈಗ ಅಲ್ಪಸ್ವಲ್ಪ ಕನ್ನಡವನ್ನೂ ಕಲಿತುಕೊಳ್ಳುತ್ತಿದ್ದೇನೆ. ‘ಆದಿಲಕ್ಷ್ಮಿ ಪುರಾಣಗಳು’ ಸಿನಿಮಾ ಮುಗಿಸುವ ವೇಳೆಗೆ ನಾನೊಂದು ಬ್ಯೂಟಿಫುಲ್‌ ಜರ್ನಿ ಮಾಡಿದ ಅನುಭವ ದಕ್ಕಿಸಿಕೊಂಡೆ’ ಎಂದು ಖುಷಿಯಿಂದ ಹೇಳಿಕೊಂಡರು ಪ್ರಿಯಾ.

ಸಾಮಾಜಿಕ ಸಮಸ್ಯೆಯ ಒಂದು ಎಳೆ ಇಟ್ಟುಕೊಂಡು ಮಾಡಿರುವ ಒಂದು ಲಘು ದಾಟಿಯ ಸಿನಿಮಾ ಇದು.ಬೆಂಗಳೂರಿನ ನೈಟ್‌ ಲೈಫ್‌ನ ಇನ್ನೊಂದು ಮುಖ ಅನಾವರಣಗೊಳಿಸುವ ಸಣ್ಣ ಪ್ರಯತ್ನ ಎನ್ನಬಹುದೇನೊ. ಇದರಲ್ಲಿ ನಾಯಕ ಮತ್ತು ನಾಯಕಿಗೆ ಸಮಾನ ಆದ್ಯತೆ ಇದೆ. ಸಮಾಜಕ್ಕೆ ತೊಡಕಾಗಿರುವ ಮಾದಕ ವಸ್ತು ಮತ್ತು ಆ ಜಾಲ ನಿರ್ವಹಿಸುವ ಮಾಫಿಯಾ ಮಟ್ಟಹಾಕಲು ಮುಂದಾಗುವ ಪೊಲೀಸ್‌ ಅಧಿಕಾರಿಯ ಪಾತ್ರ ಆದಿಯದು. ಲಕ್ಷ್ಮಿಯದು ಒಬ್ಬ ಕಾಂಪ್ಲೆಕ್ಸ್‌ ಗರ್ಲ್‌ (ಸಂಕೀರ್ಣ ವ್ಯಕ್ತಿತ್ವದ ಹುಡುಗಿ) ಪಾತ್ರ. ಈ ಪಾತ್ರದಲ್ಲಿ ಹಲವು ಶೇಡ್‌ಗಳಿವೆ. ಇದೊಂದು ಪಕ್ಕಾ ಕುಟುಂಬ ಮನರಂಜನೆಯ ಸಿನಿಮಾ. ಲವ್‌ ಸ್ಟೋರಿಯೂ ಇದೆ.ಆದಿ ಮತ್ತು ಲಕ್ಷ್ಮಿ ಇವೆರಡೂ ನನ್ನ ಕನಸಿನ ಪಾತ್ರಗಳು. ಈ ಪಾತ್ರಗಳಿಗೆ ನಿರೂಪ್‌ ಮತ್ತು ರಾಧಿಕಾ ಜೀವತುಂಬಿ ಅಭಿನಯಿಸುವ ಮೂಲಕ ನ್ಯಾಯ ಒದಗಿಸಿದ್ದಾರೆ. ಇನ್ನೂ ಆದಿಯ ಟಿಪಿಕಲ್‌ ತಂದೆ–ತಾಯಿಯಾಗಿ ತಾರಾ ಮತ್ತು ಸುಚೇಂದ್ರ ಪ್ರಸಾದ್‌ ಪಾತ್ರಗಳಂತೂ ಪ್ರೇಕ್ಷಕರಿಗೆ ಪಕ್ಕಾ ಎಂಟರ್‌ಟೈನ್‌ಮೆಂಟ್‌ ನೀಡಲಿವೆ ಎಂದು ಹೇಳಲು ಮರೆಯಲಿಲ್ಲ ಅವರು.

ಈ ಸಿನಿಮಾ ಎಲ್ಲರಿಗೂ ತಲುಪಬೇಕೆನ್ನುವುದು ನಮ್ಮ ಆಶಯ. ಇದು ನಮಗೆ ಕನ್ನಡದಲ್ಲೂ ಒಂದು ವೇದಿಕೆ, ಅವಕಾಶ ಒದಗಿಸಿಕೊಡುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೇಲೆ ಕೆಲ ಕಾಲ ಚಿತ್ರರಂಗದಿಂದ ದೂರವುಳಿದಿದ್ದ ರಾಧಿಕಾ ಪಂಡಿತ್‌ ಅವರೂ ಈ ಸಿನಿಮಾ ಮೂಲಕ ಚಿತ್ರರಂಗಕ್ಕೆ ಮರಳಿ ಬರುತ್ತಿರುವುದರಿಂದ ಅವರಿಗೂ ಈ ಸಿನಿಮಾ ವಿಶೇಷವಾಗಿದೆ.

ಈ ಚಿತ್ರತಂಡದಲ್ಲಿ ಮಹಿಳೆಯರ ‌ದರ್ಬಾರ್‌ ಜೋರಾಗಿರುವ ಬಗ್ಗೆ ಮಾತು ಹೊರಳಿದಾಗ, ‘ಬೆಂಗಳೂರಿನಲ್ಲೇ ನೆಲೆ ನಿಂತಿರುವ ಚೆನ್ನೈ ಮೂಲದ ಪ್ರೀತಾ ಜಯರಾಮನ್‌ ಈ ಚಿತ್ರಕ್ಕೆ ಛಾಯಾಗ್ರಹಣ ನೀಡಿದ್ದಾರೆ. ನಾನು ಮತ್ತು ವರಲಕ್ಷ್ಮಿ, ಒಗ್ಗರಣೆ, ಬಾಕ್ಸರ್‌ ಸಿನಿಮಾಗಳಿಗೆ ಪ್ರೀತಾ ಛಾಯಾಗ್ರಹಣ ಮಾಡಿದ್ದಾರೆ. ಇವರು ತಮಿಳು ಮತ್ತು ಕನ್ನಡದಲ್ಲೂಹಲವು ಸಿನಿಮಾಗಳಿಗೆ ಛಾಯಾಗ್ರಹಣ ಮಾಡಿದ್ದಾರೆ.ಸಹ ನಿರ್ದೇಶಕಿಯಾಗಿ ರೀಮಾ ಕೆಲಸ ಮಾಡಿದ್ದಾರೆ. ನಾಯಕ ನಿರೂಪ್‌ ಭಂಡಾರಿಯವರಿಗೂ ವಸ್ತ್ರ ವಿನ್ಯಾಸ ಮಾಡಿರುವುದು ಮಹಿಳಾ ಕಲಾವಿದರೇ. ನಟಿ ರಾಧಿಕಾ ಪಂಡಿತ್‌ಗೂ ವಸ್ತ್ರವಿನ್ಯಾಸ ಮಾಡಿರುವುದು ಸಾನಿಯಾ ಎನ್ನುವವರು.ಸೌಂಡ್‌ ಮಿಕ್ಸಿಂಗ್‌ (ಧ್ವನಿ ಮಿಶ್ರಣ) ಗೀತಾ ಗುರಪ್ಪ ಅವರದ್ದು. ನಾನು ಉದ್ದೇಶಪೂರ್ವಕವಾಗಿಯಂತೂ ಮಹಿಳಾ ತಂತ್ರಜ್ಞರನ್ನೇ ಆಯ್ಕೆ ಮಾಡಿಕೊಂಡಿಲ್ಲ. ಇದು ಜಸ್ಟ್‌ ಹ್ಯಾಪನ್ಡ್‌. ನಮ್ಮ ಅರಿವಿಗೆ ಬಾರದೇ ಸಂಭವಿಸಿರುವಕಾಕತಾಳೀಯ ಪ್ರಸಂಗ’ ಎನ್ನುತ್ತಾರೆ ನಿರ್ದೇಶಕಿ ಪ್ರಿಯಾ.

‘ಆದಿಲಕ್ಷ್ಮಿ ಪುರಾಣಗಳು‘ ಚಿತ್ರೀಕರಣ 45 ದಿನಗಳಲ್ಲಿ ಮುಗಿಸಿದೆವು. ಚಿತ್ರದ ಬಹುತೇಕ ದೃಶ್ಯಗಳನ್ನು ಬೆಂಗಳೂರು ನಗರದಲ್ಲೇ ಚಿತ್ರೀಕರಿಸಿದ್ದೇವೆ. ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಅವರ ಸಹಕಾರ, ಪ್ರೋತ್ಸಾಹವನ್ನು ನಾವಂತೂ ಯಾವತ್ತಿಗೂ ಮರೆಯುವಂತೆಯೇ ಇಲ್ಲ. ಲೇಖಕರು, ನಿರ್ದೇಶಕರು, ಕಲಾವಿದರಿಗೆ ಈ ನೆಲದಲ್ಲಿ ಎಷ್ಟೊಂದು ಗೌರವ ಸಿಗುತ್ತದೆ ಎನ್ನುವುದನ್ನು ಸ್ವತಃ ಅನುಭವಿಸಿದ್ದೇವೆ.ಇಲ್ಲಿನ ಚಿತ್ರರಂಗದಲ್ಲಿ ಸಿಕ್ಕಿದ ಗೌರವಕ್ಕೆ ನಾನು ಅಕ್ಷರಶಃ ಮನಸೋತಿದ್ದೇನೆ’ ಎಂದು ಹೇಳುವಾಗ ಪ್ರಿಯಾ ಅವರ ಮಾತಿನಲ್ಲಿ ಕನ್ನಡಿಗರ ಹೃದಯ ವೈಶಾಲ್ಯತೆ ಸ್ಮರಿಸುವ ಧ್ವನಿ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT