ಶುಕ್ರವಾರ, ನವೆಂಬರ್ 22, 2019
22 °C

ಫಿಟ್‌ನೆಸ್‌ಗೆ ಹೊಸ ವಿಳಾಸ ‘ಏರಿಯಲ್ ಯೋಗ’

Published:
Updated:
Prajavani

ದೇಹವನ್ನು ಫಿಟ್‌ ಆಗಿ ಇಟ್ಟುಕೊಳ್ಳುವುದಕ್ಕೆ ನೆರವಾಗುವ ಪ್ರಮುಖ ವ್ಯಾಯಾಮಗಳಲ್ಲಿ ಯೋಗಾಭ್ಯಾಸವೂ ಒಂದು. ಯೋಗವನ್ನು ನಿತ್ಯ ಅಭ್ಯಸಿಸುವುದರಿಂದ ಆಗುವ ಪ್ರಯೋಜನಗಳು ಹಲವು. ಯೋಗಾಭ್ಯಾಸ ಮಾಡಿರುವವರಿಗೆ ಏರಿಯಲ್ ಯೋಗದ ಮಾಹಿತಿ ಇರಬಹುದು. ಯೋಗಾಭ್ಯಾಸದ ಈ ವಿಶಿಷ್ಟ ವಿಧಾನದ ಕುರಿತು ತಿಳಿಯೋಣ.

ಜನರಲ್ಲಿ ಆರೋಗ್ಯ ಕಾಳಜಿ ಹೆಚ್ಚಿದಂತೆಲ್ಲಾ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳುವ ಹೊಸ ಹೊಸ ವಿಧಾನಗಳನ್ನು ಕಂಡುಕೊಳ್ಳಲಾಗುತ್ತಿದೆ. ಪ್ರಸ್ತುತ ಏರಿಯಲ್ ಯೋಗ ಎಂಬ ವಿಶಿಷ್ಟ ಮತ್ತು ಉಪಯುಕ್ತ ವ್ಯಾಯಾಮದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆಗುತ್ತಿದೆ. ಇನ್‌ಸ್ಟಾಗ್ರಾಂನಲ್ಲಿ ಏರಿಯಲ್ ಯೋಗದ ಚಿತ್ರಗಳು ಹೆಚ್ಚು ಹರಿದಾಡುತ್ತಿವೆ. ದೇಶದ ಪ್ರಮುಖ ನಗರಗಳಲ್ಲಿ ಏರಿಯಲ್ ಯೋಗ ತರಬೇತಿ ಕೇಂದ್ರಗಳು ಕೂಡ ಆರಂಭವಾಗಿವೆ.

ಮಾಡುವುದು ಹೇಗೆ?

ಇತರೆ ವ್ಯಾಯಾಮ ಮತ್ತು ಯೋಗಾಭ್ಯಾಸಗಳಿಗೆ ಹೋಲಿಸಿದರೆ ಏರಿಯಲ್ ಯೋಗ ಅಭ್ಯಾಸ ಮಾಡುವುದು ತ್ರಾಸದಾಯಕ. ಹೊಸಬರಿಗೆ ವಿಚಿತ್ರವೂ ಎನಿಸುತ್ತದೆ. ಇದನ್ನು ಆರಂಭಿಸುವ ಮುನ್ನ ಸೂಕ್ತ ತರಬೇತಿ ಪಡೆದು, ದೇಹವನ್ನು ಆ ವ್ಯಾಯಾಮ ಮಾಡುವುದಕ್ಕೆ ಅನುಕೂಲವಾಗುವಂತೆ ಬದಲಿಸಿಕೊಳ್ಳಬೇಕು.

ಈ ಯೋಗಾಭ್ಯಾಸ ಮಾಡುವುದಕ್ಕೆ ದೃಢವಾದ ಬಟ್ಟೆ ಬೇಕಾಗುತ್ತದೆ. ಇದನ್ನು ವ್ಯಾಯಾಮ ಮಾಡುವುದಕ್ಕೆ ನೆರವಾಗುವಂತೆ ತಯಾರಿಸಲಾಗಿರುತ್ತದೆ. ಇದನ್ನು ಸ್ವಿಂಗ್ ಅಥವಾ ಹ್ಯಾಮಾಕ್ ಎನ್ನುತ್ತಾರೆ. ಇದರಲ್ಲಿ ಹಲವು ವಿಧಗಳಿದ್ದು, ವ್ಯಾಯಾಮಕ್ಕೆ ತಕ್ಕಂತೆ ವಿವಿಧ ವಿಧಗಳಲ್ಲಿ ದೊರೆಯುತ್ತದೆ.

ಇದನ್ನು ಮೇಲ್ಛಾವಣಿಗೆ (ರೂಫ್‌ಟಾಪ್‌) ನೇತು ಹಾಕಿ ಅದರ ಸಹಾಯದಿಂದ ಯೋಗದ ವಿವಿಧ ಆಸನಗಳನ್ನು ಅಭ್ಯಾಸ ಮಾಡಬೇಕಾಗುತ್ತದೆ. ದೇಹವನ್ನು ನೆಲಕ್ಕೆ ತಾಕಿಸದಂತೆ ಅಭ್ಯಾಸ ಮಾಡುವ ಆಸನಗಳೂ ಇದ್ದು, ಸ್ವಿಂಗ್ ಸಹಾಯದಿಂದ ಮಾಡಬೇಕಾಗುತ್ತದೆ. ಇದಕ್ಕೆ ನೆರವಾಗುವಂತೆ ತರಬೇತುದಾರರ ಸಲಹೆ ಪಡೆದು ಸೂಕ್ತ ಉಡುಗೆ ಧರಿಸುವುದು ಕೂಡ ಕಡ್ಡಾಯ.

ಯೋಗಕ್ಕೆ ಹೋಲಿಸಿದರೆ, ಏರಿಯಲ್ ಯೋಗ ಅಭ್ಯಾಸ ಮಾಡುವಾಗ ದೇಹ ಹೆಚ್ಚು ಒತ್ತಡಕ್ಕೆ ಒಳಗಾಗುತ್ತದೆ. ಹೀಗಾಗಿ ಈ ಯೋಗಾಭ್ಯಾಸಕ್ಕೆ ನೆರವಾಗುವಂತೆ ಸೂಕ್ತ ಆಹಾರವನ್ನೂ ಸೇವಿಸಬೇಕು.

ಆರಂಭದಲ್ಲಿ ಸುಲಭ ಆಸನಗಳನ್ನು ಅಭ್ಯಸಿಸಿ ಹಂತ ಹಂತವಾಗಿ ವಿವಿಧ ಆಸನಗಳನ್ನು ಅಭ್ಯಸಿಸುತ್ತಾ ಹೋದರೆ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳಬಹುದು.

ಈ ಯೋಗಾಭ್ಯಾಸದಿಂದ ದೇಹದ ಎಲ್ಲ ಅಂಗಾಂಗಗಳಿಗೆ ಕಸರತ್ತು ದೊರೆಯುತ್ತದೆ. ಎಲ್ಲ ಮಾಂಸಖಂಡಗಳು, ನರಗಳು ದೃಢವಾಗುತ್ತವೆ. ಮುಖ್ಯವಾಗಿ ಕೀಲುಗಳ ಸಮಸ್ಯೆಗೆ ಇದು ಹೆಚ್ಚು ಪರಿಣಾಮಕಾರಿಯಾಗಿ ನೆರವಾಗುತ್ತದೆ. ನಿತ್ಯ ಚಟುವಟಿಕೆಗಳಿಂದ ಮೂಳೆಗಳು ಮತ್ತು ಮಾಂಸಖಂಡಗಳ ಮೇಲೆ ಬೀಳುವ ಒತ್ತಡವನ್ನು ದೂರ ಮಾಡುತ್ತದೆ.

ಉಪಯೋಗಗಳು

- ಬೆನ್ನು ನೋವು ಸಮಸ್ಯೆಗೆ ಪರಿಹಾರ.

- ದೇಹದಲ್ಲಿರುವ ಕಲ್ಮಶಗಳನ್ನು ಹೊರ ಹಾಕುತ್ತದೆ.

- ವಿವಿಧ ಬಗೆಯ ಹೃದ್ರೋಗಗಳಿಂದ ದೂರವಿರಿಸುತ್ತದೆ.

- ತೂಕ ಇಳಿಸಿಕೊಳ್ಳುವುದಕ್ಕೆ ಉತ್ತಮ ವ್ಯಾಯಾಮ.

- ದೇಹದ ಕೋರ್‌ಸ್ಟ್ರೆಂತ್ ಹೆಚ್ಚಿಸುವಲ್ಲಿ ಸಹಕಾರಿ.

- ಜೀರ್ಣಾಂಗ ವ್ಯವಸ್ಥೆಯ ಕಾರ್ಯಕ್ಷಮತೆ ಹೆಚ್ಚಿಸಿ, ಅಜೀರ್ಣ ಸಮಸ್ಯೆಗಳನ್ನು ನಿವಾರಿಸುತ್ತದೆ.

- ನರಮಂಡಲ ವ್ಯವಸ್ಥೆಯನ್ನು ಚುರುಕುಗೊಳಿಸಿ, ನೆನಪಿನ ಶಕ್ತಿ ಹೆಚ್ಚಿಸುತ್ತದೆ.

- ಯೋಗಾಸನಗಳನ್ನು ಅಭ್ಯಾಸ ಮಾಡುವಾಗ ದೇಹದಲ್ಲಿ ರಕ್ತಚಲನೆ ಚುರುಕಾಗಿ, ಎಲ್ಲ ಅಂಗಾಂಗಗಳಿಗೂ ಸರಾಗವಾಗಿ ರಕ್ತ ಪೂರೈಕೆಯಾಗುತ್ತದೆ.

- ದೇಹದಲ್ಲಿ ಸೆರೆಟೊನಿನ್‌ ಗ್ರಂಥಿ ಹೆಚ್ಚಿನ ಪ್ರಮಾಣದಲ್ಲಿ ಸ್ರವಿಸುವುದಕ್ಕೆ ಈ ವ್ಯಾಯಾಮ ನೆರವಾಗುತ್ತದೆ. ಇದರಿಂದ ದೇಹ  ಉಲ್ಲಾಸವಾಗಿರುತ್ತದೆ.

- ಚಿಕ್ಕಂದಿನಿಂದಲೇ ಅಭ್ಯಾಸ ಮಾಡುವುದು ಆರಂಭಿಸಿದರೆ ದೇಹದ ಎತ್ತರ ಹೆಚ್ಚಿಸಲು ನೆರವಾಗುತ್ತದೆ. ಕಾರಣ ಈ ಯೋಗಾಭ್ಯಾಸ ಮಾಡುವಾಗ ಪಿಟ್ಯುಟರಿ ಗ್ರಂಥಿ ಕೂಡ ಹೆಚ್ಚು ಸ್ರವಿಸುತ್ತದೆ.

 

ಪ್ರತಿಕ್ರಿಯಿಸಿ (+)