ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಗೋಳಿ ಮಂಜಣ್ಣ’ನ ಪರಾಕ್ರಮ ತ್ರಿಭಾಷೆಗಳಲ್ಲಿ

Last Updated 31 ಅಕ್ಟೋಬರ್ 2020, 13:15 IST
ಅಕ್ಷರ ಗಾತ್ರ

ಸುಮಾರು 17 ಮತ್ತು 18ನೇ ಶತಮಾನಗಳ ಮಧ್ಯದಲ್ಲಿ ಜೀವಿಸಿದ್ದ ತುಳು ನಾಡಿನ ವೀರಪುರುಷ ‘ಅಗೋಳಿ ಮಂಜಣ್ಣ’ನ ಪರಾಕ್ರಮವನ್ನು ತೆರೆಯ ಮೇಲೆ ತರಲು ನಿರ್ದೇಶಕ ಸುಧೀರ್ ಅತ್ತಾವರ್ ಸಜ್ಜಾಗಿದ್ದಾರೆ.

ಕನ್ನಡ-ತುಳು-ಮರಾಠಿ ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಟೀಸರ್‌ ನವೆಂಬರ್‌ 26ರಂದು ಕಾರ್ಕಳದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ. ಅಗೋಳಿ ಮಂಜಣ್ಣನ ಪಾತ್ರದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಕ್ರೀಡಾಪಟು ರೋಹಿತ್ ಕುಮಾರ್ ಕಟೀಲು ಬಣ್ಣ ಹಚ್ಚುತ್ತಿದ್ದಾರೆ.

ಮಂಜಣ್ಣನ ಪಾತ್ರಕ್ಕಾಗಿ ಅವರು ದೇಹ ಹುರಿಗೊಳಿಸುತ್ತಿರುವ ಜೊತೆಗೆ, ಕುದುರೆ ಸವಾರಿ, ಕತ್ತಿ ವರಸೆ, ಕುಸ್ತಿ ಮೊದಲಾದ ಕಲೆಗಳನ್ನು ರೋಹಿತ್ ಈಗಾಗಲೇ ಕಲಿಯಲು ಆರಂಭಿಸಿದ್ದಾರೆ.

ಸ್ಯಾಂಡಲ್‌ವುಡ್‌ನ ಭಾವನಾ ರಾಮಣ್ಣ, ದುನಿಯ ರಶ್ಮಿ, ವಿನಯ ಪ್ರಸಾದ್, ರಾಮಕೃಷ್ಣ ಹಾಗೂ ಮೋಹನ್ ಆಳ್ವ, ಮಾಜಿ ಸಚಿವ ಅಭಯಚಂದ್ರ ಜೈನ್ ಕೂಡ ಬಣ್ಣ ಹಚ್ಚುತ್ತಿದ್ದಾರೆ. ಇದರ ಜೊತೆ ಹಿಂದಿ ಹಾಗೂ ಮರಾಠಿ ಕಲಾವಿದರು ಕೂಡ ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮುಂಬೈನ ಸಕ್ಸಸ್ ಫಿಲ್ಮ್ಸ್ ಪ್ರೊಡಕ್ಷನ್ ಬ್ಯಾನರ್‌ನಡಿ ತಯಾರಾಗುತ್ತಿರುವ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಲು ಉದಯ ಕುಮಾರ್ ಶೆಟ್ಟಿ ಕೈಜೋಡಿಸಿದ್ದಾರೆ.

ಗುರುಕಿರಣ್ ಅವರ ಸಂಗೀತ ನಿರ್ದೇಶನ, ವಿದ್ಯಾಧರ್ ಶೆಟ್ಟಿ ಅವರ ಸಂಕಲನ ಈ ಚಿತ್ರಕ್ಕೆ ಇದೆ.

ಯಾರು ಈ ಅಗೋಳಿ ಮಂಜಣ್ಣ?

ಮಂಗಳೂರಿನ ಸುತ್ತ ಮುತ್ತ ಜೀವಿಸಿದ್ದ ಪರಮ ಪರಾಕ್ರಮಿ ಈ ಅಗೋಳಿ ಮಂಜಣ್ಣ; ಬಲಾಡ್ಯ ಮತ್ತು ಶೂರನಾಗಿದ್ದ. ಜತೆಗೆ ದೈವಾಂಶ ಸಂಭೂತ ವ್ಯಕ್ತಿಯಾಗಿದ್ದ ಎಂದು ಯಕ್ಷಗಾನ ಮತ್ತು ಪಾಡ್ದನಗಳಲ್ಲಿ ಉಲ್ಲೇಖವಿದೆ. ಆದರೂ, ತುಳುನಾಡಿನ ವೀರಪುರುಷರಾಗಿದ್ದ ಕೋಟಿ-ಚೆನ್ನಯ್ಯ ಮತ್ತು ಕಾಂತಬಾರೆ-ಬುಧಬಾರೆಯರಿಗೆ ಪ್ರಾಪ್ತಿಯಾಗಿರುವ ದೈವತ್ವ ಅಗೋಳಿ ಮಂಜಣ್ಣನಿಗೆ ಪ್ರಾಪ್ತಿಯಾಗದೆ ಉಳಿದುಹೋಗಿರುವುದು ಮಾತ್ರ ಪ್ರಶ್ನಾರ್ಥವಾಗಿರುವ ವಿಚಾರ. (ಸಿನಿಮಾದಲ್ಲಿ ಈ ಬಗ್ಗೆ ಬೆಳಕು ಚೆಲ್ಲಲಾಗಿದೆಯೇ...?) ಈತನ ಬಗ್ಗೆ ಪಂಜ ಮಂಗೇಶರಾಯರು, ಮಂಜೇಶ್ವರ ಗೋವಿಂದ ಪೈಗಳು ತಮ್ಮ ಗ್ರಂಥಗಳಲ್ಲಿ ಪ್ರಚಲಿತದಲ್ಲಿದ್ದ ಜನಪದ ಕಥೆಗಳನ್ನು ಉಲ್ಲೇಖಿಸಿದ್ದರೂ, ಈ ಇತಿಹಾಸ ಪುರುಷನ ಬಗ್ಗೆ ಸಮಗ್ರ ಅಧ್ಯಯನ ಮತ್ತು ಗ್ರಂಥ ರೂಪದ ದಾಖಲೆಗಳು ಎಲ್ಲೂ ಕಂಡುಬರುತ್ತಿಲ್ಲ. ಈತನ ಕಾಲಘಟ್ಟ ಮತ್ತು ವೈವಾಹಿಕ ಜೀವನದ ಬಗ್ಗೆಯೂ ಸಾಕಷ್ಟು ಗೊಂದಲ ಗಳಿವೆ. ನಿರ್ದೇಶಕರಿಗೆ ಇದೇ ಒಂದು ಸವಾಲು...! ಹಾಗಾಗಿಯೇ ಶಿಲಾಶಾಸನ ಮತ್ತು ಕೈಫಿಯತ್ತುಗಳ ಅಧ್ಯಯನದ ಜೊತೆಗೆ ಎ.ಸಿ. ಬರ್ನಲ್, ಸ್ಟಾರ್ಕ್‌ ಸ್ಟುವರ್ಟ್, ಥರ್ಸ್ಟನ್, ಮಕ್ಕಾನ್, ವಾಬ್ ದೊಡ್ಡಮನಿ, ಫ್ರಾನ್ಸಿಸ್ ಬೆಕನಾನ್, ಕೇಶವ ಕೃಷ್ಣ ಕುಡ್ವ, ಗಣಪತಿ ರಾವ್ ಐಗಳ್, ಮಯಿಲೈ ಶೀನಿ ವೆಂಕಟ ಸ್ವಾಮಿ(ತಮಿಳು) , ಡಾ.ಪಾದೂರ್ ಗುರುರಾಜ್ ಭಟ್, ಡಾ.ವಸಂತ ಮಾಧವ, ಪು. ಶ್ರೀನಿವಾಸ್ ಭಟ್ ಮೊದಲಾದವರ ಗ್ರಂಥಗಳ ಪರಮಾರ್ಶೆಯ ಜತೆಗೆ ಹಿರಿಯ ಇತಿಹಾಸ ತಜ್ಞರ ಮತ್ತು ಮೇಧಾವಿಗಳೊಂದಿಗೆ ಚಿತ್ರತಂಡ ವಿಸ್ತ್ರತ ಚರ್ಚೆ ನಡೆಸುತ್ತಿದೆ. ಜತೆಗೆ ದಾಖಲೆಗಳನ್ನು ಸಂಗ್ರಹಿಸುವುದರಲ್ಲಿ ತೊಡಗಿದೆ.

ಪ್ರೊ.ಜಯಪ್ರಕಾಶ್ ಮಾವಿನಕುಳಿ, ಇಂದಿರಾ ಹೆಗಡೆ, ಡಾ.ಚಂದ್ರಕಲಾ ನಂದಾವರ್, ಡಾ.ಸಾಯಿ ಗೀತಾ ಹೆಗ್ಡೆ, ಬೆನೆಟ್ ಅಮನ್ನ ಮೊದಲಾದ ಲೇಖಕರೊಂದಿಗೆ ವಿಸ್ತ್ರತ ವಿಚಾರ ವಿನಿಮಯ ಮತ್ತು ಸಮಾಲೋಚನೆಯನ್ನೂ ನಡೆಸುತ್ತಿದ್ದಾರಂತೆ ನಿರ್ದೇಶಕರು.

ಮಂಜಣ್ಣ ಸೇನಾಧಿಪತಿ ತುಳು ನಾಡನ್ನು ಮಂಗಳೂರಿನಿಂದ ಆಳುತ್ತಿದ್ದ ಇಕ್ಕೇರಿ ಅರಸರ ಪ್ರತಿನಿಧಿಗೆ, ದಕ್ಷಿಣ ಕನ್ನಡ ಜಿಲ್ಲೆಯನ್ನು ಪದೇ ಪದೇ ಸುಲಿಗೆ ಮಾಡಿ, ಉಪಟಳ ನೀಡುತ್ತಿದ್ದ ಕೇರಳದ ಕೋಲತ್ತೀರಿ ಅರಸರನ್ನು ಹತ್ತಿಕ್ಕುವುದೇ ಚಿಂತೆಯಾಗಿತ್ತು. ಅದಾಗಲೇ ತನ್ನ ಪೌರುಷ ಮತ್ತು ಅಸಾಧಾರಣ ಸಾಮರ್ಥ್ಯದಿಂದ ಸಾವಂತರಸರ ಗಮನ ಸೆಳೆದಿದ್ದ ಮಂಜಣ್ಣನಿಗೇ ಸೇನಾಧಿಪತಿ ಪಟ್ಟ ಕಟ್ಟಿ, ಅವನ ಮುಂದಾಳುತನದಲ್ಲಿ ಸಾವಂತರು, ಕೋಲತ್ತೇರಿ ಅರಸರನ್ನು ಸದೆಬಡಿಯಲು ಸೈನ್ಯ ಕಳುಹಿಸಿಕೊಡುತ್ತಾರೆ. ಕೋಲತ್ತೇರಿ ಅರಸರನ್ನು ಹಿಮ್ಮೆಟ್ಟಿಸುವಲ್ಲಿ ಮಂಜಣ್ಣನ ಪ್ರತಾಪವನ್ನು ಸಿನಿಮಾದಲ್ಲಿ ರೋಚಕವಾಗಿ ಚಿತ್ರಿಸಲಾಗುತ್ತಿದೆಯಂತೆ.

ಮುಲ್ಕಿ ಸೀಮೆಯನ್ನು ಆಳುತ್ತಿದ್ದ ಸಾವಂತರಸರು ಮಹಾರಾಷ್ಟ್ರದ ಸಾವಂತವಾಡಿ ಮೂಲದವರು. ಮಹಾರಾಷ್ಟ್ರದಲ್ಲಿ ಈಗಲೂ ಸಾವಂತವಾಡಿ ಇದೆ. ಮೂಲತಹ ಇವರು ಆಲೂಪರು ಮತ್ತು ವಿಜಯನಗರದ ಅರಸರ ಸಾವಂತರಾಗಿದ್ದರು. ಮಂಜಣ್ಣ ಇದೇ ಸಾವಂತರ ಸೈನ್ಯದ ಸೇನಾಪಧಿಪತಿಯಾಗಿದ್ದ ಎನ್ನುವುದೇ ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT