ಶುಕ್ರವಾರ, ಅಕ್ಟೋಬರ್ 23, 2020
21 °C

ಸುಶಾಂತ್ ಸಿಂಗ್ ರಜಪೂತ್ ಪ್ರಕರಣ: ಸಿಬಿಐಗೆ ವರದಿ ಸಲ್ಲಿಸಿದ ಏಮ್ಸ್ ವೈದ್ಯರ ತಂಡ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

Sushant Singh Rajput

ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಿನ ಕಾರಣಗಳ ಮರುಪರಿಶೀಲನೆಗೆ ಮುಂದಾಗಿದ್ದ ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ (ಏಮ್ಸ್) ವಿಧಿವಿಜ್ಞಾನ ಪ್ರಯೋಗಾಲಯ ತಂಡವು ತನ್ನ ವರದಿಯನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಸಲ್ಲಿಸಿದೆ.

ಪ್ರಕರಣದಲ್ಲಿ ಯಾವುದೇ ತೀರ್ಮಾನಕ್ಕೆ ಬರುವ ಮೊದಲು ಸಿಬಿಐ ವರದಿಯನ್ನು ಪರಿಶೀಲಿಸುತ್ತಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಮರಣೋತ್ತರ ಮತ್ತು ಒಳಾಂಗಗಳ (ಕರಳು) ವರದಿಗಳನ್ನು ವಿವರವಾಗಿ ವಿಶ್ಲೇಷಿಸಲು ಸಿಬಿಐ ಕೋರಿಕೆಯ ಮೇರೆಗೆ ಡಾ. ಸುಧೀರ್ ಗುಪ್ತಾ ಅವರ ಅಧ್ಯಕ್ಷತೆಯಲ್ಲಿ ವಿಧಿವಿಜ್ಞಾನ ವೈದ್ಯಕೀಯ ಮಂಡಳಿಯನ್ನು ರಚಿಸಲಾಗಿತ್ತು. ಸಭೆಯ ಬಳಿಕ ಮಂಡಳಿ ತನ್ನ ವರದಿಯನ್ನು ಸೋಮವಾರ ಸಿಬಿಐಗೆ ಸಲ್ಲಿಸಿದೆ.

ಡಾ. ಗುಪ್ತಾ ನೇತೃತ್ವದ ತಂಡವು ಸೆಪ್ಟೆಂಬರ್ 7 ರಂದು ರಜಪೂತ್ ಸಾವಿನಲ್ಲಿ ವಿಷ ಸೇವನೆಯನ್ನು ಪರೀಕ್ಷಿಸಲು ಒಳಾಂಗಗಳ ಪರೀಕ್ಷೆಯನ್ನು ನಡೆಸಿದೆ. 

ವಿಧಿವಿಜ್ಞಾನ ಪರೀಕ್ಷೆ ಮತ್ತು ಹೆಚ್ಚಿನ ತನಿಖೆಗಾಗಿ ಸಿಬಿಐ ಕೂಡ ಮೂರು ಸದಸ್ಯರ ವಿಶೇಷ ತಂಡವನ್ನು ರಜಪೂತ್ ಅವರ ಮುಂಬೈ ಮನೆಗೆ ಕರೆದೊಯ್ದಿದೆ.

ಡಾ. ಗುಪ್ತಾ ಅವರ ವಿಧಿವಿಜ್ಞಾನ ತಂಡವು ಈ ಹಿಂದೆ ಶೀನಾ ಬೋರಾ ಕೊಲೆ ಪ್ರಕರಣ ಮತ್ತು ಸುನಂದಾ ಪುಷ್ಕರ್ ಸಾವಿನಂತ ಉನ್ನತ ಮಟ್ಟದ ಪ್ರಕರಣಗಳನ್ನು ನಿರ್ವಹಿಸಿದೆ. ಈ ಸಂದರ್ಭಗಳಲ್ಲಿ ಅದು ವೈದ್ಯಕೀಯ ಕಾನೂನು ಸಲಹೆಯನ್ನು ನೀಡಿದೆ. 

ಪ್ರಸ್ತುತ ತನಿಖೆಯ ಕುರಿತು ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಡಾ. ಗುಪ್ತಾ, ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಏಮ್ಸ್ ಮತ್ತು ಸಿಬಿಐ ಕೆಲ ಒಪ್ಪಂದ ಮಾಡಿಕೊಂಡಿವೆ. ಆದರೆ ಈ ವಿಚಾರವಾಗಿ ಹೆಚ್ಚಿನ ಚರ್ಚೆಯ ಅಗತ್ಯವಿದೆ. ಸುಶಾಂತ್ ಸಿಂಗ್ ರಜಪೂತ್ ಸಾವಿನ ವಿಚಾರದಲ್ಲಿ ತಾರ್ಕಿಕ ತೀರ್ಮಾನಕ್ಕೆ ಬರಲು ಕೆಲವು ಕಾನೂನು ಅಂಶಗಳನ್ನು ಪರಿಶೀಲಿಸುವ ಅವಶ್ಯಕತೆಯಿದೆ. ಇದು ಸಂಪೂರ್ಣವಾಗಿ ನಿರ್ಣಾಯಕವಾಗಿರುತ್ತದೆ ಎಂದಿದ್ದಾರೆ.

ರಜಪೂತ್ ಸಾವಿಗೆ ಸಂಬಂಧಿಸಿದಂತೆ ನಟಿ ರಿಯಾ ಚಕ್ರವರ್ತಿ ಮತ್ತು ಇತರರ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿದೆ. ಸುಶಾಂತ್ ಜೂನ್ 14ರಂದು ಮುಂಬೈನ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು