ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜೀವ ಚಿತ್ರದ ನಾಯಕಿ ಅಕ್ಷತಾಗೆ ಡಬಲ್ ಧಮಾಕಾ

Last Updated 1 ಜನವರಿ 2020, 9:00 IST
ಅಕ್ಷರ ಗಾತ್ರ

ದಕ್ಷಿಣ ಭಾರತದ ಚಿತ್ರರಂಗದಲ್ಲಿ ‌ಸಕ್ರಿಯವಾಗಿರುವನಟಿ ಅಕ್ಷತಾ ಶ್ರೀಧರ ಶಾಸ್ತ್ರಿ ಯೂ2 ಚಾನೆಲ್‌ನಲ್ಲಿ ನಿರೂಪಕಿಯಾಗಿ ಮೊದಲು ಕ್ಯಾಮೆರಾ ಎದುರಿಸಿದವರು. ಇವರು ಬೆಂಗಳೂರಿನ ಬೆಡಗಿ. ಕಾಲಿವುಡ್‌ನ‘ಮಿಸ್ ಪನ್ನಿಡತಿಂಗಅಪ್ಪುರಂ ವರುತ್ತಪದುವಿಂಗ’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದರು. ಪಿಯುಸಿ ಓದುತ್ತಿರುವಾಗಲೇ ಸಿನಿಮಾದಲ್ಲಿ ನಟಿಸುವ ಅವಕಾಶ ಬಂದರೂಬಿ.ಕಾಂ ಪದವಿ ಮುಗಿಯುವವರೆಗೆ ನಟನೆಗೆ ಇಳಿಯಲಿಲ್ಲ.ಓದು ಒಂದು ಹಂತಕ್ಕೆ ಬಂದ ನಂತರ ಚಿತ್ರರಂಗಕ್ಕೆ ಕಾಲಿಟ್ಟು, ಬದುಕು ಕಟ್ಟಿಕೊಳ್ಳುತ್ತಿರುವ ಪ್ರತಿಭಾವಂತೆ.

‘ಉದ್ದಿಶ್ಯ’, ‘ತ್ರಾಟಕ’, ‘ಶ್‌.. ಎಚ್ಚರಿಕೆ’, ‘ಪಾರ್ಥಸಾರಥಿ’ ‘ಪಾನಿಪುರಿ’ ಸೇರಿಹತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದರೂ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿಲ್ಲ. ‘ರಾಜಣ್ಣನ ಮಗ’ ಸಿನಿಮಾ ನನಗೆ ಕನ್ನಡದಲ್ಲಿ ಹೆಸರು ಕೊಟ್ಟರೆ, ತಮಿಳಿನ ‘ತೆರುನಾಯ್ಗಳ್‌’ ಜನಪ್ರಿಯತೆ ಕೊಟ್ಟಿತ್ತು. ಅದು ಬಿಟ್ಟರೆ ಬೇರೆ ಚಿತ್ರಗಳು ನಿರೀಕ್ಷಿತ ಯಶಸ್ಸು ನೀಡಲಿಲ್ಲ’ ಎನ್ನುವ ನಿರಾಸೆ ಅವರದ್ದು.ವೃತ್ತಿ ಬದುಕಿನಲ್ಲಿ ಒಂದು ಬ್ರೇಕ್‌ಗಾಗಿ ಕಾಯುತ್ತಿರುವ ಇವರು, ಫ್ಲೈಯಿಂಗ್‌ ಕಿಂಗ್‌ ಮಂಜು ನಿರ್ದೇಶನದ ‘ರಾಜೀವ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ನಾಯಕನಾಗಿಮದನ್‌ ಪಟೇಲ್‌ ಮೂರು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಇದೇ ವಾರ (ಜ.3) ತೆರೆಕಾಣುತ್ತಿದೆ.

ಅಕ್ಷತಾ ಪ್ರಧಾನ ಭೂಮಿಕೆಯಲ್ಲಿರುವಮಲಯಾಳದ ‘ಕೊಚ್ಚಿ ಶಾಧಿ ಚೆನ್ನೈ ಯಟ್‌ 03’ ಚಿತ್ರವು ಇದೇ ವಾರ ಬಿಡುಗಡೆಯಾಗುತ್ತಿದೆ. ಈ ಚಿತ್ರತಮಿಳಿನಲ್ಲಿ ‘ವನ್‌ಮುರೈ’ ಹೆಸರಿನಲ್ಲಿ ಈ ವಾರವೇ ತೆರೆಕಾಣುತ್ತಿದೆ. ಈ ಚಿತ್ರಗಳು ಖಂಡಿತಾ ಬ್ರೇಕ್‌ ನೀಡಲಿವೆ ಎನ್ನುವುದುಅವರ ನಿರೀಕ್ಷೆ.ತಮ್ಮ ಚಿತ್ರ ಬದುಕಿನ ಕುರಿತು ಹಲವು ಮಾಹಿತಿಗಳನ್ನುಅಕ್ಷತಾ ‘ಸಿನಿಮಾ ಪುರವಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.

‘ನಮ್ಮದು ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬ. ಅಮ್ಮನಿಗೆ ಮಗಳು ನಟಿಯಾಗುವುದು ಅಷ್ಟಾಗಿ ಇಷ್ಟ ಇರಲಿಲ್ಲ. ಓದಿನತ್ತ ಗಮನಹರಿಸಲು ಸಲಹೆ ಕೊಡುತ್ತಿದ್ದರು. ಹಲವು ಧಾರಾವಾಹಿಗಳಲ್ಲಿ ನಟಿಸುವ ಅವಕಾಶ ಬಂದರೂ ಒಪ್ಪಿರಲಿಲ್ಲ.ಐ.ಟಿ ಕಂಪನಿಯಲ್ಲಿ ಕ್ವಾಲಿಟಿ ಅನಾಲಿಸ್ಟ್‌ ಆಗಿ ಮೂರು ತಿಂಗಳು ಕೆಲಸ ಕೂಡ ಮಾಡಿದ್ದೆ. ನಟಿಸುವ ಅವಕಾಶಗಳು ಪದೇ ಪದೇ ಬಂದಾಗ ಅಮ್ಮನಿಗೂ ಒಪ್ಪಿಗೆ ನೀಡದೆ ಇರಲು ಆಗಲಿಲ್ಲ. ನಟನೆಯಲ್ಲಿದ್ದ ಆಸಕ್ತಿ ನನ್ನನ್ನು ಸಿನಿಮಾದತ್ತ ಕರೆತಂದಿತು’ ಎಂದು ಅವರು ಮಾತಿಗಾರಂಭಿಸಿದರು.

ರಾಜೀವ ಚಿತ್ರದತ್ತ ಮಾತು ಹೊರಳಿಸಿದ ಅವರು, ಈ ಚಿತ್ರದಲ್ಲಿ ನನ್ನದು ವೈದ್ಯಕೀಯ ಶಿಕ್ಷಣ ಓದುವ, ಹಳ್ಳಿ ಹುಡುಗಿಯ ಪಾತ್ರ. ಸಂಪೂರ್ಣ ಸಂಪ್ರದಾಯಸ್ಥ ಕುಟುಂಬದ ಹುಡುಗಿ. ಪಾತ್ರಕ್ಕೆ ನ್ಯಾಯ ಸಲ್ಲಿಸಿರುವ ತೃಪ್ತಿ ಇದೆ. ಚಿತ್ರ ನೋಡಲು ಕಾತರಳಾಗಿದ್ದೇನೆ ಎಂದರು.

‘ನನಗೆ ಬಜೆಟ್‌ ಮುಖ್ಯವಲ್ಲ. ರಾಜೀವ ಚಿತ್ರಕ್ಕೂ ಅಷ್ಟೇ, ನಾನು ಬಜೆಟ್‌ ನೋಡಲಿಲ್ಲ. ಒಳ್ಳೆಯ ಸ್ಕ್ರಿಪ್ಟ್‌ ಮತ್ತು ಒಳ್ಳೆಯ ಪಾತ್ರದ ಕಾರಣಕ್ಕೆ ನಟಿಸಲು ಒಪ್ಪಿದೆ. ನಾನು ಇವತ್ತಿಗೂ ಸಹಾಯಕರನ್ನು ನೇಮಿಸಿಕೊಂಡಿಲ್ಲ. ಸಹಾಯಕರಿಗೆ ಭರಿಸಬೇಕಾದ ವೆಚ್ಚವನ್ನು ಚಿತ್ರತಂಡಕ್ಕೆ ಉಳಿಸಿದ್ದೇನೆ’ ಎನ್ನುವ ಮಾತು ಸೇರಿಸಿದರು.

ಸಿನಿಮಾಗಳಲ್ಲಿ ನಾಯಕನನ್ನು ವಿಜೃಂಭಿಸಿ, ನಾಯಕಿಯನ್ನು ಬದಿಗೆ ಸರಿಸುವ ಕ್ರಮಕ್ಕೆ ಅಕ್ಷತಾ ಕಡುವಿರೋಧಿ. ‘ಅಭಿನಯಕ್ಕೆ ಹೆಚ್ಚು ಅವಕಾಶವೇ ಇಲ್ಲದೆಸುಮ್ಮನೆ ಗ್ಲಾಮರಾಗಿ ಕಾಣಿಸುವ ಪಾತ್ರಗಳೆಂದರೆ ಇಷ್ಟವಿಲ್ಲ.ದೀಪಿಕಾ ಪಡುಕೋಣೆ, ನಯನಾತಾರಾ, ರಾಧಿಕಾ ಪಂಡಿತ್‌ ಅವರಂತೆ ಬೋಲ್ಡ್‌ ಮತ್ತು ಲೀಡ್‌ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಇಷ್ಟ. ಸಿನಿಮಾಗಳಲ್ಲಿಹೀರೊಗಳನ್ನು ಮಾತ್ರ ಹೈಲೈಟ್‌ ಮಾಡುತ್ತಾರೆ. ನಮ್ಮ ಪಾತ್ರಕ್ಕೂ ಪ್ರಾಮುಖ್ಯತೆ ಇರಬೇಕು. ಇನ್ನುಮುಂದೆ ಅಂತಹ ಪಾತ್ರಗಳನ್ನು ಮಾತ್ರ ಆಯ್ದುಕೊಳ್ಳುತ್ತೇನೆ. ಒಳ್ಳೆಯ ಬ್ಯಾನರ್‌ ಮತ್ತು ಒಳ್ಳೆಯ ಸ್ಕ್ರಿಪ್ಟ್‌ ಬಂದರೆ ಮಾತ್ರ ನಟಿಸುತ್ತೇನೆ. ಇಲ್ಲದಿದ್ದರೆ ನಟನೆಯಿಂದಲೇ ದೂರವಿರುತ್ತೇನೆ’ ಎಂದರು.

ಅಕ್ಷತಾ ಕನ್ನಡದಲ್ಲಿ ನಟಿಸಿರುವ ಅಂಬಾಸಡರ್‌ ಚಿತ್ರ ಮತ್ತು ತೆಲುಗಿನಲ್ಲಿ ನಟಿಸಿರುವ ‘ಆಕಾಶವಾಣಿ ವಿಶಾಖಪಟ್ಟಣ ಕೇಂದ್ರಂ’ ಚಿತ್ರವೂ ಬಿಡುಗಡೆಗೆ ಸಿದ್ಧವಾಗಿವೆ. ಇನ್ನೊಂದು ತೆಲುಗು ಚಿತ್ರ‘ಕೃಷ್ಣಕುಮಾರಿ’ಯಲ್ಲಿ ನಟಿಸಿದ್ದು, ಇದರ ನಿರ್ದೇಶಕರು ಅಕಾಲಿಕ ಸಾವನ್ನಪ್ಪಿದ್ದರಿಂದಚಿತ್ರ ಅರ್ಧಕ್ಕೆ ನಿಂತಿದೆ. ‘ತೆಲುಗು ನಿರ್ದೇಶಕರ ಒಂದು ಪ್ಯಾನ್‌ ಇಂಡಿಯಾ ಸಿನಿಮಾದಲ್ಲಿ ನೆಗೆಟಿವ್‌ ಶೇಡ್‌ ಇರುವ ವಿಲನ್‌ ಪಾತ್ರದಲ್ಲಿ ನಟಿಸಲಿದ್ದೇನೆ. ಆ ಚಿತ್ರ ಫೆಬ್ರುವರಿಯಲ್ಲಿ ಶುರುವಾಗಲಿದೆ. ಅದಕ್ಕೆ ಸಾಕಷ್ಟು ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ’ ಎಂದರು.

ಒಂದು ವರ್ಷ ಖಿನ್ನತೆಗೆ ಹೋಗಿದ್ದೆ...

ಕೊಚ್ಚಿಯಲ್ಲಿಕಳೆದ ವರ್ಷ ಡಿಸೆಂಬರ್‌ನಲ್ಲಿ ಒಂದು ಕಹಿ ಘಟನೆ ನಡೆಯಿತು. ಹೋಟೆಲ್‌ ಕೊಠಡಿಬಿಲ್‌ ಪಾವತಿಸಿಲ್ಲವೆಂದು ನನ್ನನ್ನು ಸೇರಿ ಇಡೀ ಚಿತ್ರತಂಡವನ್ನು ಹೋಟೆಲ್‌ನಲ್ಲಿ ಕೂಡಿಟ್ಟಿದ್ದರು. ಗೂಂಡಾಗಳು ನನಗೆ ಬೆದರಿಕೆಯೊಡ್ಡಿದ್ದರು. ಕೊನೆಗೆ ನಾನೇ ಹಣ ಪಾವತಿಸಿ ಚಿತ್ರತಂಡವನ್ನು ಬಿಡಿಸಿಕೊಂಡು ಹೊರಬಂದೆ. ಈ ಘಟನೆಯಿಂದ ನಾನು ನಿಜಕ್ಕೂ ಒಂದು ವರ್ಷ ಖಿನ್ನತೆಗೆ ಜಾರಿದ್ದೆ. ಅದರಿಂದ ಹೊರಗೆ ಬರಲು ಸ್ವಲ್ಪ ಕಷ್ಟವಾಯಿತು. ಚಿತ್ರದ ನಿರ್ಮಾಪಕರು ಬೇಕೆಂದು ಆ ರೀತಿ ಮಾಡಲಿಲ್ಲ, ಅವರ ಕೈಯಲ್ಲಿ ಆ ಸಮಯ ದುಡ್ಡು ಇರಲಿಲ್ಲ. ಆ ನಂತರ ಚಿತ್ರದ ನಿರ್ಮಾಪಕರು ನನಗೆ ಯಾವ ನಾಯಕಿಯೂ ಈ ರೀತಿ ಬೆಂಬಲ ನೀಡಿರಲಿಲ್ಲವೆಂದು ಕ್ಷಮೆ ಕೇಳಿ, ನಾನು ಹೋಟೆಲ್‌ಗೆ ಪಾವತಿಸಿದ ಹಣವನ್ನು ನನಗೆ ಸಂದಾಯ ಮಾಡಿದರು. ಚಿತ್ರದ ಪ್ರಚಾರಕ್ಕೂ ಕರೆಸಿಕೊಂಡರು. ಈ ಘಟನೆಯ ನಂತರ ಸಿನಿಮಾ ಎಂದರೆ ಹಿಂಜರಿಕೆ. ಸುರಕ್ಷತೆಗೆ ಮೊದಲ ಆದ್ಯತೆ ಕೊಡುತ್ತಿದ್ದೇನೆ ಎನ್ನುತ್ತಾರೆ ಅಕ್ಷತಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT