ಬುಧವಾರ, ನವೆಂಬರ್ 13, 2019
28 °C

ಅಕ್ಷಯ್‌ ಮಗಳಿಗೆ ಬಡತನ ದರ್ಶನ

Published:
Updated:

ಪತ್ನಿ ಟ್ವಿಂಕಲ್‌ ಖನ್ನಾ ಮತ್ತು ಮಕ್ಕಳ ಜತೆ ಮುಂಬೈನಲ್ಲಿ ಜನಸಾಮಾನ್ಯರಂತೆ ಆಟೊದಲ್ಲಿ ಓಡಾಡಿ ಗಮನ ಸೆಳೆದಿದ್ದ ನಟ ಅಕ್ಷಯ್ ಕುಮಾರ್‌ ಈಗ ಮತ್ತೊಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ.

ಹೆಚ್ಚು ಸಂಭಾವನೆ ಪಡೆಯುವ ಟಾಪ್‌ 10 ನಟರ ಪಟ್ಟಿಯಲ್ಲಿರುವ ಅಕ್ಷಯ್‌ ಕುಮಾರ್‌ ಸದ್ಯ ಬಾಲಿವುಡ್‌ನಲ್ಲಿ ಬಹು ಬೇಡಿಕೆಯ ನಟ. ಒಂದಾದ ಮೇಲೊಂದರಂತೆ ವಿಭಿನ್ನ ಹಾಗೂ ಹಿಟ್‌ ಚಿತ್ರಗಳನ್ನು ನೀಡುತ್ತಿರುವ ಅಕ್ಷಯ್‌ ಕುಮಾರ್ ನಟಿಸಿದ ‘ಹೌಸ್‌ಫುಲ್‌ –4’ ಬಿಡುಗಡೆಯಾದ ಮೊದಲ ವಾರದಲ್ಲೇ ಕೋಟ್ಯಂತರ ರೂಪಾಯಿ ಸಂಪಾದಿಸಿದೆ. ಆದರೆ, ಅಕ್ಷಯ್‌ ಸುದ್ದಿಯಲ್ಲಿರುವುದು ಅದಾವುದಕ್ಕೂ ಅಲ್ಲ!

ಮಗಳು ನಿತಾರಾ ಜತೆ ಬೆಳಗಿನ ವಾಯು ವಿಹಾರಕ್ಕೆ ತೆರಳಿದ್ದ ಬಾಲಿವುಡ್‌ ಖಿಲಾಡಿ ಕುಡಿಯಲು ನೀರು ಕೇಳಿಕೊಂಡು ಕೊಳೆಚೆ ಪ್ರದೇಶದಲ್ಲಿ ವಾಸವಾಗಿದ್ದ ಬಡ ದಂಪತಿ ಗುಡಿಸಲಿಗೆ ಹೋಗುವ ಮೂಲಕ ಸುದ್ದಿಯಲ್ಲಿದ್ದಾರೆ!  

ಅಂದು ನಡೆದದ್ದು ಇಷ್ಟು...ಶಿಸ್ತಿನ ಜೀವನಕ್ಕೆ ಹೆಸರಾಗಿರುವ ಅಕ್ಷಯ್‌ ಯಾವುದೇ ಕಾರಣಕ್ಕೂ ಬೆಳಗಿನ ವಾಯು ವಿಹಾರ ತಪ್ಪಿಸುವುದಿಲ್ಲ.  ಅಪ್ಪನ ಜತೆ ವಾಕಿಂಗ್‌ ತೆರಳಿದ್ದ ಅಕ್ಷಯ್‌ ಕುಮಾರ್‌ ಮಗಳು ನಿತಾರಾಗೆ ಬಾಯಾರಿ ಕುಡಿಯಲು ನೀರು ಬೇಕು ಎಂದು ಕೇಳಿದ್ದಾಳೆ. ಕೂಡಲೇ ಅಕ್ಷಯ್‌, ಮಗಳ ಕೈ ಹಿಡಿದು ನೇರವಾಗಿ ಅಲ್ಲಿದ್ದ ಗುಡಿಸಲಿನೊಳಗೆ ಹೊಕ್ಕಿದ್ದಾರೆ.

 

ಯಾವ ಹಮ್ಮು, ಬಿಮ್ಮು ಇಲ್ಲದೇ ಬಾಗಿಲು ಬಳಿ ನಿಂತು ಕುಡಿಯಲು ನೀರು ಕೊಡುವಂತೆ ಕೇಳಿದ್ದಾರೆ. ಅಪ್ಪ–ಮಗಳ ಜೋಡಿಯನ್ನು ತಮ್ಮ ಜೋಪಡಿಯ ಬಾಗಿಲಲ್ಲಿ ಕಂಡ ಬಡ ದಂಪತಿಯ ಖುಷಿಗೆ ಪಾರವೇ ಇರಲಿಲ್ಲ. ಅಕ್ಷಯ್ ಮತ್ತು ನಿತಾರಾಳನ್ನು ಪ್ರೀತಿಯಿಂದ ಸ್ವಾಗತಿಸಿದ ವೃದ್ಧ ದಂಪತಿ ಕುಡಿಯಲು ನೀರು ಕೊಟ್ಟು, ಜತೆಗೆ ಬೆಲ್ಲದ ರೊಟ್ಟಿ ನೀಡಿ ಸತ್ಕರಿಸಿದ್ದಾರೆ.

ವೃದ್ಧ ದಂಪತಿ ತೋರಿದ ನಿರ್ವಾಜ್ಯ ಪ್ರೀತಿ ಮತ್ತು ಅತಿಥಿ ಸತ್ಕಾರದಿಂದ ಮನ ತುಂಬಿ ಬಂದ ಸುದ್ದಿಯನ್ನು ಅಕ್ಷಯ್‌ ಕುಮಾರ್‌ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ವೃದ್ಧ ದಂಪತಿಯ ಚಿತ್ರವನ್ನೂ ಹಂಚಿಕೊಂಡಿದ್ದಾರೆ. ಅವರು ಟ್ವಿಟ್ಟರ್‌ ಖಾತೆಯಲ್ಲಿ ಏನು ಬರೆದಿದ್ದಾರೆ ಅವರ ಮಾತಲ್ಲೇ ಕೇಳಿ.

ಇದನ್ನೂ ಓದಿ: ಬೆಲ್‌ ಬಾಟಂ ಚಿತ್ರದ ಹಿಂದಿ ರಿಮೇಕ್‌ಗೆ ಅಕ್ಷಯ್‌ ಕುಮಾರ್‌ ನಾಯಕ

‘ಇಂದು ಬೆಳಗಿನ ವಾಯುವಿಹಾರದ ವೇಳೆ ನನ್ನ ಮಗಳು ಜೀವನದ ಅತಿ ದೊಡ್ಡ ಪಾಠ ಕಲಿತಿದ್ದಾಳೆ. ಕುಡಿಯಲು ನೀರು ಕೇಳಿಕೊಂಡು ಗುಡಿಸಲು ಪ್ರವೇಶಿಸಿದರೆ ನಮಗೆ ಅಲ್ಲಿ ಸಿಕ್ಕಿದ್ದು ಪ್ರೀತಿ ತುಂಬಿದ ಬೆಲ್ಲದ ರೊಟ್ಟಿ! ದಯೆ ಮತ್ತು ಕರುಣೆಯ ಬೆಟ್ಟದಂತಿದ್ದ ವೃದ್ಧ ದಂಪತಿ ನೀರು ಕೇಳಿದರೆ ಸ್ವಾದಿಷ್ಟ ಬೆಲ್ಲದ ರೊಟ್ಟಿಯನ್ನು ಪ್ರೀತಿಯಿಂದ ಉಣ ಬಡಿಸಿದರು. ಅಲ್ಲಿ ನನ್ನ ಮಗಳಿಗೆ ಬಡತನ ಮತ್ತು ಮಾನವೀಯತೆಯ ದರ್ಶನವಾಯಿತು.ಇದು ಆಕೆಯ ಜೀವನದ ದೊಡ್ಡ ಪಾಠ. ಆ ಬಡ ದಂಪತಿಯ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅದನ್ನು ಕಂಡು ನನಗೆ ಹೃದಯ ತುಂಬಿ ಬಂದಿದೆ’ ಎಂದು ಅಕ್ಷಯ್‌ ಕುಮಾರ್‌ ಭಾವುಕರಾಗಿ ಬರೆದಿದ್ದಾರೆ.

ತಾನೊಬ್ಬ ಸೆಲೆಬ್ರಿಟಿ ಎಂಬ ಹಮ್ಮು ಇಲ್ಲದೆ ಜನಸಾಮಾನ್ಯರೊಂದಿಗೆ ಬೆರೆಯುವ ಅಕ್ಷಯ್‌ ಕುಮಾರ್‌ ಸರಳ ಸ್ವಭಾವಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಈ ಹಿಂದೆಯೂ ಅವರು ತಮ್ಮ ಮಕ್ಕಳಿಗೆ ಸಹಜ ಮತ್ತು ಸರಳ ಬದುಕಿನ ಪಾಠ ಕಲಿಸಲು ಅವರೊಂದಿಗೆ ಆಟೊದಲ್ಲಿ ಸುತ್ತಾಡಿದ್ದರು. ಮಕ್ಕಳಿಗೆ ಮುಂಬೈ ಮಹಾನಗರದ ಮತ್ತೊಂದು ಮುಖ, ಜನಸಾಮಾನ್ಯರ ಜೀವನದ ದರ್ಶನ ಮಾಡಿಸಿದ್ದರು. 

ಪ್ರತಿಕ್ರಿಯಿಸಿ (+)