ಗುರುವಾರ , ಏಪ್ರಿಲ್ 15, 2021
30 °C

‘ಆರ್‌ಆರ್‌ಆರ್‌’ನಿಂದ ಹೊರಬಿದ್ದ ಅಲಿಯಾ ಭಟ್‌? ಪ್ರಿಯಾಂಕಾ ಚೋಪ್ರಾಗೆ ಚಾನ್ಸ್‌!

ಕೆ.ಎಚ್‌. ಓಬಳೇಶ್‌ Updated:

ಅಕ್ಷರ ಗಾತ್ರ : | |

Alia Bhatt

ಎಸ್.ಎಸ್‌. ರಾಜಮೌಳಿ ಆ್ಯಕ್ಷನ್ ಕಟ್‌ ಹೇಳಿರುವ ‘ಆರ್‌ಆರ್‌ಆರ್’ (ರೌದ್ರಂ ರಣಂ ರುಧಿರಂ) ಚಿತ್ರದಲ್ಲಿ ಬಾಲಿವುಡ್‌ ಬೆಡಗಿ ಅಲಿಯಾ ಭಟ್‌ ಅವರು, ನಟ ರಾಮ್‌ ಚರಣ್‌ ಜೊತೆಗೆ ರೊಮ್ಯಾನ್ಸ್‌ ಮಾಡಲಿದ್ದಾರೆ ಎಂಬ ಸುದ್ದಿ ಎಲ್ಲರಿಗೂ ಗೊತ್ತೇ ಇತ್ತು. ಇದಕ್ಕೆ ಬಂಡವಾಳ ಹೂಡಿರುವ ಡಿವಿವಿ ಎಂಟರ್‌ಟೈನ್‌ಮೆಂಟ್ಸ್‌ ಕೂಡ ಅಲಿಯಾ ನಟನೆಯ ಬಗ್ಗೆ ಖಚಿತಪಡಿಸಿತ್ತು.

ಕೋವಿಡ್‌–19 ಪರಿಣಾಮ ಈ ಚಿತ್ರದ ಶೂಟಿಂಗ್‌ ಸ್ಥಗಿತಗೊಂಡಿದೆ. ಈ ನಡುವೆಯೇ ಅಲಿಯಾ ಭಟ್‌ ಚಿತ್ರದಿಂದ ಹೊರ ನಡೆದಿದ್ದಾರೆ ಎಂಬ ಸುದ್ದಿ ಟಾಲಿವುಡ್‌ ಪಡಸಾಲೆಯಿಂದ ಹೊರಬಿದ್ದಿದೆ. ಡೇಟ್‌ ಹೊಂದಾಣಿಕೆ ಕೊರತೆಯೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.

ಪ್ರಸ್ತುತ ಆಕೆ ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ ಹಿಂದಿಯ ‘ಗಂಗೂಬಾಯಿ ಕಾತೇವಾಡಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಆಕೆಯದು ಮುಂಬೈನ ಮಾಫಿಯಾ ಕ್ವೀನ್‌ ಪಾತ್ರ. ಬಹುನಿರೀಕ್ಷಿತ ಸಿನಿಮಾ ಇದು. ಇದರ ಶೂಟಿಂಗ್‌ ಕೂಡ ದೀರ್ಘ ಸಮಯ ಹಿಡಿಯಲಿದೆಯಂತೆ. ಮತ್ತೊಂದೆಡೆ ‘ಬ್ರಹ್ಮಾಸ್ತ್ರ’ ಚಿತ್ರದಲ್ಲೂ ಆಕೆ ನಟಿಸುತ್ತಿದ್ದಾರೆ. ಹಾಗಾಗಿ, ‘ಆರ್‌ಆರ್‌ಆರ್’ ಚಿತ್ರದಲ್ಲಿ ನಟಿಸಲು ಸಮಯದ ಹೊಂದಾಣಿಕೆಯ ಸಮಸ್ಯೆ ಎದುರಾಗಿದೆಯಂತೆ. ಈ ಬಗ್ಗೆ ರಾಜಮೌಳಿಗೂ ಆಕೆ ಮನವರಿಕೆ ಮಾಡಿಕೊಟ್ಟಿದ್ದಾರಂತೆ. ಹಾಗಾಗಿಯೇ, ಅಲಿಯಾ ಭಟ್‌ ಜಾಗಕ್ಕೆ ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಅವರನ್ನು ಕರೆತರಲು ರಾಜಮೌಳಿ ನಿರ್ಧರಿಸಿದ್ದಾರೆ ಎಂಬುದು ಟಾಲಿವುಡ್‌ ಅಂಗಳದ ಸದ್ಯದ ಮಾತು.

ನಟ ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಸಾವಿನ ಬಳಿಕ ಬಾಲಿವುಡ್‌ನಲ್ಲಿ ಸ್ವಜನಪಕ್ಷಪಾತದ ವಿರುದ್ಧ ದೊಡ್ಡ ಕೂಗು ಎದ್ದಿದೆ. ಇದರ ಬಿಸಿ ಅಲಿಯಾ ನಟನೆಯ ‘ಸಡಕ್‌ 2’ ಚಿತ್ರಕ್ಕೂ ತಟ್ಟಿದೆ. ಸುಶಾಂತ್‌ ಅವರ ಲಕ್ಷಾಂತರ ಅಭಿಮಾನಿಗಳು ಈ ಚಿತ್ರದ ಟ್ರೇಲರ್‌ ವಿರುದ್ಧ ಡಿಸ್‌ಲೈಕ್‌ ಮೂಲಕ ಅಭಿಮಾನ ಕೂಡ ಆರಂಭಿಸಿದ್ದಾರೆ. ಈ ಬೆಳವಣಿಗೆಯೂ ‘ಆರ್‌ಆರ್‌ಆರ್’ ಸಿನಿಮಾಕ್ಕೆ ತಟ್ಟಬಹುದು ಎಂಬುದು ನಿರ್ಮಾಪಕರ ಆತಂಕ. ಈ ಬೆಳವಣಿಗೆ ಕೂಡ ಅಲಿಯಾ ‘ಆರ್‌ಆರ್‌ಆರ್‌’ನಿಂದ ಹೊರಹೋಗುವ ಕಾರಣಗಳಲ್ಲಿ ಒಂದಾಗಿದೆ ಎನ್ನುತ್ತವೆ ಟಾಲಿವುಡ್‌ ಮೂಲಗಳು.

ಈಗಾಗಲೇ, ಅಲಿಯಾ ಅವರ ಈ ತೀರ್ಮಾನದಿಂದ ಚಿತ್ರತಂಡ ಹೊಸ ನಾಯಕಿಯ ಹುಡುಕಾಟದಲ್ಲಿ ತೊಡಗಿದೆಯಂತೆ. ಚಿತ್ರತಂಡದ ಮೊದಲ ಆಯ್ಕೆ ಪ್ರಿಯಾಂಕಾ ಚೋಪ್ರಾ ಅಂತೆ. ಈ ಹಿಂದೆ ರಾಮ್‌ ಚರಣ್‌ ಮತ್ತು ಪ್ರಿಯಾಂಕಾ ಚೋಪ್ರಾ ‘ಜಂಜೀರ್‌’ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದೇ ಇದಕ್ಕೆ ಕಾರಣ. ಆದರೆ, ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾ ಮಕಾಡೆ ಮಲಗಿತ್ತು. ಆದರೆ, ಈ ಪಿಡಿಯಾಡಿಕ್‌ ಚಿತ್ರಕ್ಕೆ ಪ್ರಿಯಾಂಕಾ ಅವರೇ ಸೂಕ್ತ ಎನ್ನುವುದು ರಾಜಮೌಳಿಯ ಇಂಗಿತ.  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು