ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಕೀಯ ಸಿಬ್ಬಂದಿಯನ್ನು ದೇವರಿಗೆ ಹೋಲಿಸಿದ ಬಿಗ್‌ಬಿ: ವಿಡಿಯೊ ಸಂದೇಶ

Last Updated 12 ಜುಲೈ 2020, 6:04 IST
ಅಕ್ಷರ ಗಾತ್ರ

ಕೋವಿಡ್‌–19 ದೃಢಪಡುತ್ತಲೇ ಮುಂಬೈ ನಾನಾವತಿ ಆಸ್ಪತ್ರೆಗೆ ದಾಖಲಾಗಿರುವ ಬಾಲಿವುಡ್‌ ನಟ ‘ಬಿಗ್‌ ಬಿ’ ಅಮಿತಾಭ್‌ ಬಚ್ಚನ್‌ ಆಸ್ಪತ್ರೆಯಿಂದಲೇ ಪೋಸ್ಟ್‌ ಮಾಡಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಕಪ್ಪು, ಬಿಳಿ ಜರ್ಸಿ, ತಲೆಗೆ ಬ್ಯಾಂಡ್ ಮತ್ತು ದೊಡ್ಡ ಕನ್ನಡಕ‌ ಧರಿಸಿರುವ ಅಮಿತಾಭ್‌ ಎರಡೂವರೆ ನಿಮಿಷದ ವಿಡಿಯೊದಲ್ಲಿ ವೈದ್ಯರು, ದಾದಿಯರು ಮತ್ತು ವೈದ್ಯಕೀಯ ಸಿಬ್ಬಂದಿಯನಿಸ್ವಾರ್ಥ ಸೇವೆಯನ್ನು ಬಾಯ್ತುಂಬಾ ಹೊಗಳಿದ್ದಾರೆ.

ಗುಜರಾತ್‌ನ ಸೂರತ್‌ ನಗರದಲ್ಲಿ ಅಂಟಿಸಿದ್ದ ಫಲಕವೊಂದರಲ್ಲಿ ಕಂಡುಬಂದ ದೇವರು ಮತ್ತು ವೈದ್ಯರಿಗೆ ಸಂಬಂಧಿಸಿದ ವಿಷಯವನ್ನು ಈಚೆಗೆ ತಾವು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದನ್ನು ಪ್ರಸ್ತಾಪಿಸುತ್ತಾ ಅವರು ಮಾತು ಆರಂಭಿಸಿದ್ದಾರೆ.

‘ಮಂದಿರಗಳು ಏಕೆ ಬಂದ್‌ ಆಗಿವೆ ಎಂದು ನಿಮಗೆ ಗೊತ್ತೆ? ಏಕೆಂದರೆ ದೇವರು ಬಿಳಿ ಕೋಟ್‌ ಧರಿಸಿ, ಆಸ್ಪತ್ರೆಗಳಲ್ಲಿ ರೋಗಿಗಳ ಸೇವೆಯಲ್ಲಿ ತೊಡಗಿದ್ದಾನೆ’ ಎಂದು ಆ ಫಲಕದಲ್ಲಿ ಬರೆಯಲಾಗಿತ್ತು. ನಿಜಕ್ಕೂ ಅದರಲ್ಲಿ ಅತಿಶಯೋಕ್ತಿ ಏನಿಲ್ಲ. ಈ ಸಂಕಷ್ಟ ಸಮಯದಲ್ಲಿ ರೋಗಿಗಳ ಸೇವೆಯಲ್ಲಿ ತೊಡಗಿರುವಎಲ್ಲ ಆಸ್ಪತ್ರೆಗಳ ವೈದ್ಯಕೀಯ ಸಿಬ್ಬಂದಿಯಲ್ಲಿ ನನಗೆ ಆ ಈಶ್ವರ (ದೇವರು) ಕಾಣುತ್ತಿದ್ದಾನೆ’ ಎಂದು ಭಾವುಕರಾಗಿ ಮಾತನಾಡಿದ್ದಾರೆ.

‘ಜೀವದ ಹಂಗು ತೊರೆದು ಹಗಲುರಾತ್ರಿ ಮಾನವೀಯತೆಗಾಗಿ ಕೆಲಸ ಮಾಡುತ್ತಿರುವ ನಿಮಗೆ ಶಿರಬಾಗಿ ನಮಿಸುತ್ತೇನೆ. ನೀವು ಇಲ್ಲದಿದ್ದರೆ ಮಾನವೀಯತೆಗೆ ಅರ್ಥವಾದರೂ ಎಲ್ಲಿ ಇರುತ್ತಿತ್ತು ಹೇಳಿ’ ಎಂದು ಅಮಿತಾಭ್ ಪ್ರಶ್ನಿಸಿದ್ದಾರೆ.

‘ಇದು ಇಡೀ ಮನುಕುಲದ ಪರೀಕ್ಷಾ ಸಮಯ. ಜೀವಗಳನ್ನು ರಕ್ಷಿಸುವ ಕೆಲಸದಲ್ಲಿ ತೊಡಗಿರುವ ನಿಮಗೆ ನಾವೆಲ್ಲ ಆಭಾರಿಯಾಗಿದ್ದೇವೆ. ಇಡೀ ದೇಶ ನಿಮ್ಮನ್ನು ಅತ್ಯಂತ ಸ್ನೇಹಭಾವ ಮತ್ತು ಗೌರವದಿಂದ ಕಾಣುತ್ತದೆ. ಇದು ನಮಗೆಲ್ಲ ನಿರಾಶೆ ಮತ್ತು ಹತಾಶೆಯ ಸಮಯ. ಹಾಗಂತ ಯಾರೂ ಆತಂಕ ಮತ್ತು ಖಿನ್ನತೆಗೆ ಒಳಗಾಗಬೇಕಿಲ್ಲ. ಎಲ್ಲರೂ ಒಂದಾಗಿ ಎದುರಿಸೋಣ. ಈಗ ಎದುರಾಗಿರುವ ಈ ಸಂಕಷ್ಟ ಕಾಲದಿಂದ ಎಲ್ಲರೂ ಖಂಡಿತ ಹೊರಬರುತ್ತೇವೆ. ಎಲ್ಲರೂ ಧೈರ್ಯವಾಗಿರಿ’ ಎಂದು ಬಚ್ಚನ್‌ ಧೈರ್ಯ ತುಂಬಿದ್ದಾರೆ.

ಕೋವಿಡ್‌–19 ದೃಢಪಡುತ್ತಲೇ ಆ ವಿಷಯವನ್ನು ಅವರು ಟ್ವಿಟರ್‌‌ ಮೂಲಕ ದೃಢಪಡಿಸಿದ್ದರು. ಆಸ್ಪತ್ರೆಗೆ ದಾಖಲಾಗಿದ್ದು, ಕುಟುಂಬ ಸದಸ್ಯರು ಮತ್ತು ಆಪ್ತ ಸಹಾಯಕ ಸಿಬ್ಬಂದಿ ಪರೀಕ್ಷೆಗೆ ಒಳಗಾಗಿದ್ದಾರೆ. ಕಳೆದ 10 ದಿನಗಳಿಂದ ನನ್ನೊಂದಿಗೆ ಒಡನಾಟದಲ್ಲಿರುವ ಎಲ್ಲರೂ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಅವರು ಮನವಿ‌ ಮಾಡಿದ್ದರು.

‘ನನಗೆ ಮತ್ತು ನನ್ನ ತಂದೆಗೆ ಕೋವಿಡ್‌–19 ದೃಢಪಟ್ಟಿದೆ. ಇಬ್ಬರಲ್ಲೂ ಅಲ್ಪ ಪ್ರಮಾಣದ ರೋಗಲಕ್ಷಣ ಕಾಣಿಸಿಕೊಂಡಿವೆ. ಇಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದು, ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಕುಟುಂಬದ ಸದಸ್ಯರು ಮತ್ತು ಮನೆಯ ಸಹಾಯಕ ಸಿಬ್ಬಂದಿಯ ತಪಾಸಣೆ ನಡೆಯುತ್ತಿದ್ದೆ. ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ’ ಎಂದು ಅಭಿಷೇಕ್‌ ಬಚ್ಚನ್‌ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT