ಶುಕ್ರವಾರ, ಆಗಸ್ಟ್ 12, 2022
22 °C

ಮೈಸೂರು ಮೃಗಾಲಯದಿಂದ ಜಾಗ್ವಾರ್‌ ದತ್ತು ಪಡೆದ ನಟಿ ಅಮೂಲ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮೃಗಾಲಯದಲ್ಲಿರುವ ಪ್ರಾಣಿ, ಪಕ್ಷಿಗಳನ್ನು ದತ್ತು ಪಡೆಯಲು ನಟ ದರ್ಶನ್‌ ಅವರು ಕರೆಗೆ ಕೈಜೋಡಿಸಿರುವ ನಟಿ ಅಮೂಲ್ಯ ಜಗದೀಶ್‌, ಮೈಸೂರಿನ ಮೃಗಾಲಯದಲ್ಲಿನ ಜಾಗ್ವಾರ್‌ ಒಂದನ್ನು ದತ್ತು ಪಡೆದಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅಮೂಲ್ಯ, ‘ನಮ್ಮ ಕಡೆಯಿಂದ ಅಳಿಲು ಸೇವೆ ಸಲ್ಲಿಸಿರುವ ಖುಷಿ ನೀಡಿದೆ. ಇಂತಹ ಒಂದು ಉತ್ತಮ ಕಾರ್ಯಕ್ಕೆ ಬೆಂಬಲ ನೀಡಿ, ಪ್ರೋತ್ಸಾಹ ನೀಡುತ್ತಿರುವ ದರ್ಶನ್‌ ಅವರಿಗೆ ಧನ್ಯವಾದಗಳು’ ಎಂದು ತಿಳಿಸಿದ್ದಾರೆ. ಟ್ವೀಟ್‌ ಜೊತೆಗೆ ಕರ್ನಾಟಕದ ಮೃಗಾಲಯ ಪ್ರಾಧಿಕಾರ ನೀಡಿರುವ ಪ್ರಮಾಣ ಪತ್ರವನ್ನು ಅಮೂಲ್ಯ ಪೋಸ್ಟ್‌ ಮಾಡಿದ್ದಾರೆ. ಮುಂದಿನ ಒಂದು ವರ್ಷದವರೆಗೆ ಆ ಪ್ರಾಣಿಯ ನಿರ್ವಹಣಾ ವೆಚ್ಚವನ್ನು ನಟಿ ಅಮೂಲ್ಯ ಭರಿಸಿದ್ದಾರೆ. 

ಪ್ರಾಣಿ, ಪಕ್ಷಿಗಳನ್ನು ದತ್ತು ಪಡೆಯಲು ದರ್ಶನ್‌ ಅವರು ಕರೆ ನೀಡಿದ ಬೆನ್ನಲ್ಲೇ ಇತ್ತೀಚೆಗಷ್ಟೇ ನಟ ಉಪೇಂದ್ರ ಇದೇ ಮೃಗಾಲಯದಿಂದ ಆಫ್ರಿಕನ್‌ ಆನೆಯೊಂದನ್ನು ಹಾಗೂ ಚಾಮುಂಡಿ ಹೆಸರಿನ ಆನೆ ಮರಿಯನ್ನು ನಿರ್ಮಾಪಕರಾದ ಉಮಾಪತಿ ಶ್ರೀನಿವಾಸ ಗೌಡ ಅವರು ದತ್ತು ಪಡೆದಿದ್ದರು.

‘ಕೋವಿಡ್‌ ಮಹಾಮಾರಿಯಿಂದ ಮಾನವಕುಲಕ್ಕೆ ಎಷ್ಟು ತೊಂದರೆ ಆಗಿದೆಯೋ ಅಷ್ಟೇ ತೊಂದರೆ ಪ್ರಾಣಿಸಂಕುಲಕ್ಕೂ ಆಗಿದೆ. ಕೋವಿಡ್‌ನಿಂದಾಗಿ ಕಳೆದ ಒಂದೂವರೆ ವರ್ಷದಿಂದ ಈ ಮೃಗಾಲಯಗಳು ಸಂಕಷ್ಟದಲ್ಲಿವೆ. ಜನರು ಈ ಪ್ರಾಣಿಗಳನ್ನು ದತ್ತು ಪಡೆಯಬಹುದು. ಒಂದು ಲವ್‌ಬರ್ಡ್‌ಗೆ ವರ್ಷಕ್ಕೆ ₹1 ಸಾವಿರ, ಹುಲಿಗೆ ₹1 ಲಕ್ಷ ಹಾಗೂ ಆನೆಗೆ ₹1.17 ಲಕ್ಷ ನೀಡಿ ದತ್ತುಪಡೆದು ಪ್ರಾಣಿಸಂಕುಲ ಉಳಿಸಲು, ಮೃಗಾಲಯ ಬೆಳೆಸಲು ಎಲ್ಲರೂ ಕೈಜೋಡಿಸಿ’ ಎಂದು ದರ್ಶನ್‌ ವಿಡಿಯೊ ಸಂದೇಶದಲ್ಲಿ ತಿಳಿಸಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು