ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್‌ ಪರಂಪರೆಯ ‘ಕಲಾತಪಸ್ವಿ’ ತೆರೆಮರೆಗೆ

ಐದೂವರೆ ದಶಕಗಳ ದಣಿವರಿಯದ ಸಿನಿ ಪಯಣ l ಕನ್ನಡ ಚಿತ್ರರಂಗದ ಸಜ್ಜನ ನಟ ರಾಜೇಶ್
Last Updated 19 ಫೆಬ್ರುವರಿ 2022, 20:58 IST
ಅಕ್ಷರ ಗಾತ್ರ

ಬೆಂಗಳೂರು: ‘ರವಿವರ್ಮನಕುಂಚದ ಕಲೆ ಬಲೆ ಸಾಕಾರಾವೋ...’– ಸೊಸೆ ತಂದ ಸೌಭಾಗ್ಯ ಚಿತ್ರದಲ್ಲಿ ಪಿ.ಬಿ.ಶ್ರೀನಿವಾಸ್‌ ಗಾಯನಕ್ಕೆ ರಾಜೇಶ್‌ ಅವರು ನಟಿ ವಿಜಯಲಲಿತಾ ಅವರೊಂದಿಗೆ ಹೆಜ್ಜೆ ಹಾಕಿದ ನೆನಪು ಸಿನಿಪ್ರಿಯರಿಗೆ ಇನ್ನೂ ಹಸಿರಾಗಿದೆ. ಅದು ರಾಜೇಶ್‌ ಕಲಾ ಬದುಕಿನ ಪರ್ವಕಾಲ. ಹಾಗೆ ಸಜ್ಜನಿಕೆಯ ಪಾತ್ರಗಳಲ್ಲಿ, ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡು ಮನೆಮಾತಾಗಿದ್ದ ರಾಜೇಶ್‌ ಅವರು ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದು ಇನ್ನಷ್ಟೇ ಬಿಡುಗಡೆಯಾಗಬೇಕಿರುವ ಶ್ರೀನಿ ಅಭಿನಯದ ‘ಓಲ್ಡ್‌ಮಾಂಕ್’ ಚಿತ್ರ.

ಅಭಿನಯದ ಉತ್ಸಾಹ ಬತ್ತಿರಲಿಲ್ಲ. ಆದರೆ ಆರೋಗ್ಯ ಕೇಳುತ್ತಿರಲಿಲ್ಲ. ಹಾಗಾಗಿ ಸುಮಾರು ಎರಡು ವರ್ಷಗಳಿಂದ ಅವರು ಕ್ಯಾಮೆರಾ ಕಣ್ಣಿನಿಂದ ಸ್ವಲ್ಪ ದೂರವಿದ್ದರು.

ಮುನಿಚೌಡಪ್ಪ ರಾಜೇಶ್‌ ಆದದ್ದು:
ರಾಜೇಶ್ ಜನಿಸಿದ್ದು ಬೆಂಗಳೂರಿನಲ್ಲಿ. ಅವರ ಮೂಲ ಹೆಸರು ಮುನಿಚೌಡಪ್ಪ. ರಂಗಭೂಮಿ ನಟನೆಯ ವೇಳೆ ಅವರು ವಿದ್ಯಾಸಾಗರ್ ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದರು. ತಮ್ಮದೇ ಆದ ‘ಶಕ್ತಿ ನಾಟಕ ಮಂಡಳಿ’ಯನ್ನು ಕಟ್ಟಿದ್ದರು. ‘ನಿರುದ್ಯೋಗಿ ಬಾಳು’, ‘ಬಡವನ ಬಾಳು’, ‘ವಿಷಸರ್ಪ’, ‘ನಂದಾ ದೀಪ’, ‘ಚಂದ್ರೋದಯ’, ‘ಕಿತ್ತೂರು ರಾಣಿ ಚೆನ್ನಮ್ಮ’ ಅವರು ಅಭಿನಯಿಸಿದ ಪ್ರಮುಖ ನಾಟಕಗಳು. ಈ ನಡುವೆ ಕೆಲಕಾಲ ಅವರು ಲೋಕೋಪಯೋಗಿ ಇಲಾಖೆಯಲ್ಲಿ ಶೀಘ್ರಲಿಪಿ ಮತ್ತು ಬೆರಳಚ್ಚುಗಾರರಾಗಿ ಕೆಲಸ ಮಾಡಿದ್ದರು.

1960ರ ದಶಕದಲ್ಲಿ ಅವರು ‘ವೀರ ಸಂಕಲ್ಪ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು. 1968ರಲ್ಲಿ ತೆರೆಕಂಡ ‘ನಮ್ಮ ಊರು’ (ಸಿ.ವಿ. ಶಿವಶಂಕರ್‌ ನಿರ್ದೇಶನ) ಚಿತ್ರದ ಬಳಿಕ ಅವರು ತಮ್ಮ ಹೆಸರನ್ನು ರಾಜೇಶ್‌ ಎಂದು ಬದಲಾಯಿಸಿಕೊಂಡರು.ಈ ಚಿತ್ರಕ್ಕೆ ಅವರು ಹಿನ್ನೆಲೆ ಗಾಯಕರೂ ಆಗಿದ್ದರು.

‘ಕಪ್ಪು ಬಿಳುಪು’, ‘ಎರಡು ಮುಖ’, ‘ಪುಣ್ಯ ಪುರುಷ’, ‘ಕಾಣಿಕೆ’, ‘ಬೃಂದಾವನ’, ‘ಸುಖ ಸಂಸಾರ’, ‘ದೇವರ ಮಕ್ಕಳು’, ‘ಪೂರ್ಣಿಮಾ’, ‘ನಮ್ಮ ಬದುಕು’, ‘ಭಲೇ ಅದೃಷ್ಟವೋ ಅದೃಷ್ಟ’, ‘ಭಲೇ ಭಾಸ್ಕರ’, ‘ವಿಷಕನ್ಯೆ’, ‘ಕ್ರಾಂತಿವೀರ’, ‘ಬಿಡುಗಡೆ’, ‘ಊರ್ವಶಿ’, ‘ದೇವರ ಗುಡಿ’, ‘ಕಾವೇರಿ’, ‘ಬದುಕು ಬಂಗಾರವಾಯಿತು’, ‘ದೇವರ ದುಡ್ಡು’, ‘ಸೊಸೆ ತಂದ ಸೌಭಾಗ್ಯ’, ‘ಚದುರಿದ ಚಿತ್ರಗಳು’, ‘ವಸಂತ ನಿಲಯ’, ‘ಕಲಿಯುಗ’, ‘ತವರು ಮನೆ’, ‘ತವರು ಮನೆ ಉಡುಗೊರೆ’ ಸೇರಿದಂತೆ 150ಕ್ಕೂ ಅಧಿಕ ಸಿನಿಮಾಗಳಲ್ಲಿ ರಾಜೇಶ್ ನಟಿಸಿದ್ದಾರೆ.

‘ಕಲಾತಪಸ್ವಿ’ ರಾಜೇಶ್ ಅವರ ಆತ್ಮಚರಿತ್ರೆಯ ಶೀರ್ಷಿಕೆ. ವೃತ್ತಿಬದುಕಿನ ಪರ್ವದ ದಿನಗಳಲ್ಲಿ ಅಂದು ಶ್ರೀಮಂತವಾದ ತಮಿಳು ಚಿತ್ರರಂಗದಿಂದ ಅವಕಾಶಗಳು ಕೂಡಿಬಂದರೂ ಕನ್ನಡದ ನೆಲದಲ್ಲೇ ಏನನ್ನಾದರೂ ಸಾಧಿಸುವ ಇಚ್ಚೆಯಿಂದ ಅಲ್ಲಿನ ಅವಕಾಶಗಳನ್ನು ವಿನಯದಿಂದಲೇ ನಿರಾಕರಿಸಿದ್ದರು.

ರಾಜ್‌ಕುಮಾರ್‌, ಉದಯ ಕುಮಾರ್‌, ಕಲ್ಯಾಣ್‌ ಕುಮಾರ್‌ರಂತಹ ದಿಗ್ಗಜರೊಂದಿಗೆ ಅಭಿನಯಿಸಿದ ಅಗ್ಗಳಿಕೆ ರಾಜೇಶ್‌ ಅವರದ್ದು. ಈ ಮೂವರನ್ನೂ ರಾಜೇಶ್‌ ತುಂಬು ಅಭಿಮಾನದಿಂದ ಕಂಡಿದ್ದರು. ರಾಜ್‌ಕುಮಾರ್‌ ಅವರ ತೂಕದ ವ್ಯಕ್ತಿತ್ವ, ಉದಯ ಕುಮಾರ್‌,ಕಲ್ಯಾಣ್‌ ಕುಮಾರ್‌ ಅವರ ಸಜ್ಜನಿಕೆ ಬಗ್ಗೆ ಮುಕ್ತಕಂಠದಿಂದ ಶ್ಲಾಘಿಸಿದ್ದರು.

ಕನ್ನಡ ಚಿತ್ರರಂಗಕ್ಕೆ ರಾಜೇಶ್ ಅವರ ಕೊಡುಗೆಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ 2012 ರಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು.

ಉಳಿಸಿಕೊಳ್ಳಲು ಆಗಲಿಲ್ಲ:
‘ಮಾವನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂಬ ಬೇಸರವಿದೆ. ಡಾ.ರಾಜ್‌ಕುಮಾರ್‌ ಅವರ ಪಂಕ್ತಿ ಯಲ್ಲಿದ್ದ ನಟ. ಸುಮಾರು 55 ವರ್ಷಗಳಿಂದ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರಿಲ್ಲ ಎನ್ನುವುದು ದುಃಖ ತಂದಿದೆ’ ಎಂದು ನಟಹಾಗೂ ರಾಜೇಶ್‌ ಅವರ ಅಳಿಯ ಅರ್ಜುನ್‌ ಸರ್ಜಾ ವ್ಯಥೆಪಟ್ಟರು.

‘ಸಮರ್ಥ, ಅದ್ಭುತ ಕಲಾವಿದರ ಪಟ್ಟಿಯಲ್ಲಿ ಇದ್ದ ಕಲಾವಿದ ರಾಜೇಶ್‌. ಅವರ ಜೊತೆ ಸುಮಾರು 15 ಚಿತ್ರಗಳಲ್ಲಿ ನಟಿಸುವ ಯೋಗ ನನ್ನದಾಗಿತ್ತು. ಆರೋಗ್ಯವನ್ನು ತುಂಬಾ ಚೆನ್ನಾಗಿ ಕಾಪಾಡಿಟ್ಟುಕೊಂಡ ಅತ್ಯಂತ ಶಿಸ್ತಿನ ಮನುಷ್ಯ. ಅವರ ಜತೆ ಪಾತ್ರ ಮಾಡಿದ್ದು, ಜತೆಗಿದ್ದದ್ದು ಜನ್ಮಾಂತರದ ಪುಣ್ಯ’ ಎಂದು ನಟ ದೊಡ್ಡಣ್ಣ ಹೇಳಿದರು.

‘ರಾಜೇಶ್‌ ಅವರು ಯಾವುದೇ ಪಾತ್ರದ ಅಭಿನಯದಲ್ಲಿ ನವರಸ ತುಂಬುವ ವ್ಯಕ್ತಿ. ಅವರ ಜೊತೆ
ಪಾತ್ರ ಮಾಡುವುದು ಬಹಳ ಕಷ್ಟ. ಒಳ್ಳೆಯ ಅಭಿನಯದ ಜೊತೆಗೆ ಪಕ್ಕದವರೂ ಅಷ್ಟೇ ಚೆನ್ನಾಗಿ ಅಭಿನಯ ಮಾಡಬೇಕು ಎನ್ನುವ ಶಿಸ್ತು ಅವರಲ್ಲಿತ್ತು. ಅವರು ತುಂಬು ಜೀವನ ಮಾಡಿದ್ದಾರೆ’ ಎಂದು ನಟ ‘ಮುಖ್ಯಮಂತ್ರಿ’ ಚಂದ್ರು ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT