ಶನಿವಾರ, ಸೆಪ್ಟೆಂಬರ್ 18, 2021
22 °C
ಆರೋಪಿ ಹೇಳಿಕೆ ಆಧರಿಸಿ ಚಾರ್ಜ್‌ಶೀಟ್

ಡ್ರಗ್ಸ್‌ ಪ್ರಕರಣ: ಚಾರ್ಜ್‌ಶೀಟ್‌ನಲ್ಲಿ ನಿರೂಪಕಿ, ನಟಿ ಅನುಶ್ರೀ ಹೆಸರು ಉಲ್ಲೇಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಮಾದಕವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದು, ಅದರಲ್ಲಿ ನಿರೂಪಕಿ ಹಾಗೂ ನಟಿ ಅನುಶ್ರೀ ಅವರ ಹೆಸರು ಉಲ್ಲೇಖ ಮಾಡಲಾಗಿದೆ.

ಅನುಶ್ರೀ ಡ್ರಗ್ಸ್ ಸೇವನೆ ಜೊತೆಗೆ ಅದರ ಸಾಗಾಟವನ್ನೂ ಮಾಡುತ್ತಿದ್ದರು ಎಂದು ಪ್ರಕರಣದ ಎರಡನೇ ಆರೋಪಿ ಕಿಶೋರ್ ಅಮಾನ್ ಶೆಟ್ಟಿ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ. ಇದನ್ನು ಆಧರಿಸಿ ಚಾರ್ಜ್‌ಶೀಟ್‌ನಲ್ಲಿ ಅನುಶ್ರೀ ಹೆಸರು
ಪ್ರಸ್ತಾಪಿಸಲಾಗಿದೆ.

‘ರೂಮ್‌ಗೆ ಅನುಶ್ರೀ ಡ್ರಗ್ಸ್ ತರುತ್ತಿದ್ದರು. ಕಿಶೋರ್ ಮತ್ತು ತರುಣ್ ಜೊತೆ ಸಾಕಷ್ಟು ಬಾರಿ ಅನುಶ್ರೀ ಕೂಡ ಡ್ರಗ್ಸ್ ಸೇವನೆ ಮಾಡಿದ್ದರು. 2007-08ರಲ್ಲಿ ರಿಯಾಲಿಟಿ ಶೋ ಒಂದಕ್ಕೆ ಸಂಬಂಧಿಸಿದಂತೆ ತರುಣ್ ರೂಮ್‌ನಲ್ಲಿ ಅನುಶ್ರೀಗೆ ಡಾನ್ಸ್ ತರಬೇತಿ ನೀಡುತ್ತಿದ್ದೆ. ಈ ಸಂದರ್ಭದಲ್ಲಿ ಅನುಶ್ರೀ ಡ್ರಗ್ಸ್ ಖರೀದಿಸಿ ತರುತ್ತಿದ್ದರು. ನಮಗೂ ಡ್ರಗ್ಸ್ ನೀಡಿ, ಅನುಶ್ರೀ ಕೂಡ ಊಟದ ಮೊದಲು ಡ್ರಗ್ಸ್ ಸೇವಿಸುತ್ತಿದ್ದರು’ ಎಂದು ಕಿಶೋರ್ ಶೆಟ್ಟಿ ವಿಚಾರಣೆ ವೇಳೆ ಬಹಿರಂಗ ಪಡಿಸಿದ್ದಾನೆ.

ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ 2020ರ ಸೆಪ್ಟೆಂಬರ್‌ 26ರಂದು ಅನುಶ್ರೀ ಅವರನ್ನು ಮಂಗಳೂರು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಆದರೆ, ಮತ್ತೆ ವಿಚಾರಣೆಗೆ ಕರೆಸಿರಲಿಲ್ಲ. ಪ್ರಕರಣದಲ್ಲಿ ಅನುಶ್ರೀ ಹೆಸರು ಕೈಬಿಡುವಂತೆ ಪ್ರಭಾವಿ ರಾಜಕಾರಣಿಗಳು ಪೊಲೀಸರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬಂದಿತ್ತು.

ಡಿಸೆಂಬರ್‌ನಲ್ಲೇ ಚಾರ್ಜ್‌ಶೀಟ್‌: ಮಾದಕ ವಸ್ತುವಿಗೆ ಸಂಬಂಧಿಸಿದಂತೆ 2020 ಸೆಪ್ಟೆಂಬರ್ 19ರಂದು ಪ್ರಕರಣ ದಾಖಲಾಗಿತ್ತು. 2020ರ ಡಿಸೆಂಬರ್ 11ರಂದು ಕೋರ್ಟ್‌ಗೆ ಜಾರ್ಜ್‌ಶೀಟ್‌ ಸಲ್ಲಿಸಿರುವುದಾಗಿ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

‘ಈ ಜಾರ್ಜ್‌ಶೀಟ್‌ನಲ್ಲಿ ಅನುಶ್ರೀಯನ್ನು ಆರೋಪಿ ಎಂದು ಉಲ್ಲೇಖಿಸಲಾಗಿಲ್ಲ. ಆರೋಪಿ ಕಿಶೋರ್ ಶೆಟ್ಟಿ ಹೇಳಿಕೆಯಲ್ಲಿ ಅನುಶ್ರೀ ಬಗ್ಗೆ ಪ್ರಸ್ತಾಪಿಸಿರುವುದನ್ನು ಉಲ್ಲೇಖಿಸಲಾಗಿದೆ. ಕಿಶೋರ್ ಶೆಟ್ಟಿಯನ್ನು ಮತ್ತೆ ವಿಚಾರಣೆ ನಡೆಸುವ ಅಗತ್ಯವಿಲ್ಲ. ಪ್ರಕರಣದ ತನಿಖೆಯನ್ನು ಮುಗಿಸಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದೇವೆ’ ಎಂದು ಸ್ಪಷ್ಟಪಡಿಸಿದ್ದಾರೆ.

ಅನುಶ್ರೀ ಮೇಲೆ ಬಂದ ಆರೋಪಕ್ಕೆ ಪೂರಕ ಸಾಕ್ಷಿಗಳು ಪೊಲೀಸರಿಗೆ ಲಭ್ಯವಾಗಿಲ್ಲ. ಹಾಗಾಗಿ ಅವರನ್ನು ಆರೋಪಿಯಾಗಿ ಮಾಡಿಲ್ಲ. ಬಂಧಿತ ಆರು ಆರೋಪಿಗಳ ಮೇಲೆ ಪೊಲೀಸರು ಜಾರ್ಜ್‌ಶೀಟ್‌ ಸಲ್ಲಿಸಿದ್ದು, ಐವರಿಗೆ ಜಾಮೀನು ಸಿಕ್ಕಿದೆ. ಒಬ್ಬ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ.

‘ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ’

ಬೆಳಗಾವಿ: ‘ಮಾದಕವಸ್ತು ಪ್ರಕರಣದಲ್ಲಿ ಯಾರನ್ನೂ ಕೈಬಿಡುವ ಪ್ರಶ್ನೆಯೇ ಇಲ್ಲ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಇಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಚಲನಚಿತ್ರ ನಟಿ, ನಿರೂಪಕಿ ಅನುಶ್ರೀ ಇರಲಿ, ಯಾರೇ ಆಗಿರಲಿ ಅವರ ವಿಷಯದಲ್ಲಿ ರಾಜಕೀಯ ಒತ್ತಡವೇ
ನಿಲ್ಲ. ಮಾದಕವಸ್ತು ಪ್ರಕರಣಕ್ಕೆ ಯಾರೂ ಒತ್ತಡ ಹಾಕುವು
ದಿಲ್ಲ. ಇಂತಹ ಪ್ರಕರಣದಲ್ಲಿ ನಮ್ಮ ಸರ್ಕಾರವು ಬಹಳಷ್ಟು ಕಠಿಣಕ್ರಮಗಳನ್ನು ಕೈಗೊಂಡಿದೆ. ಅಪರಾಧಿಗಳು ಶಿಕ್ಷೆಗೆ ಗುರಿಯಾಗುವುದು ಖಚಿತ. ಎಷ್ಟೇ ಪ್ರಭಾವಿಗಳಾಗಿದ್ದರೂ ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು. ‘ಪೊಲೀಸರ ಮೇಲೆ ಒತ್ತಡವಿದೆ ಎನ್ನುವುದು ಊಹಾಪೋಹ. ಯಾರ ಒತ್ತಡಕ್ಕೂ ನಮ್ಮ ಪೊಲೀಸರು ಬಗ್ಗುವುದಿಲ್ಲ’ ಎಂದು ತಿಳಿಸಿದರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು