ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಂದವಾದ’ ಅನುಷಾ

Last Updated 24 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ತುಮಕೂರಿನ ಅನುಷಾ ರಂಗನಾಥ್‌ ನಾಯಕಿಯಾಗಿ ನಟಿಸಿರುವ ಮೂರನೆಯ ಚಿತ್ರ ‘ಅಂದವಾದ’ ಇದೇ ಶುಕ್ರವಾರ ತೆರೆಕಾಣಲಿದೆ. ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಹೊಂದಿರುವ ಇವರು ತಮ್ಮ ಸಿನಿ ಕರಿಯರ್‌ ಬಗೆಗಿನ ಹಲವು ಸಂಗತಿಗಳನ್ನು ‘ಸಿನಿಮಾ ಪುರವಣಿ’ ಜತೆಗೆ ಹಂಚಿಕೊಂಡಿದ್ದಾರೆ.

ಚಿತ್ರರಂಗದಲ್ಲಿ ಒಳ್ಳೆಯ ಅವಕಾಶಗಳನ್ನು ಬಾಚಿಕೊಳ್ಳಲು ಎದುರು ನೋಡುತ್ತಿರುವನಟಿ ಅನುಷಾ ರಂಗನಾಥ್‌.ಓದಿದ್ದು ಸಿವಿಲ್‌ ಎಂಜಿನಿಯರಿಂಗ್‌. ಶಾಲಾ– ಕಾಲೇಜಿನಲ್ಲಿರುವಾಗಲೇ ರೂಢಿಸಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿನ ಆಸಕ್ತಿ ಮತ್ತು ಅಭಿರುಚಿ ಅವರನ್ನು ಬಣ್ಣದ ಲೋಕಕ್ಕೆ ಕರೆತಂದಿದೆ. ಕಿರುತೆರೆ ಮತ್ತು ಹಿರಿತೆರೆಯಲ್ಲಿ ಏಕಕಾಲಕ್ಕೆ ಬಣ್ಣದ ಬದುಕು ಆರಂಭಿಸಿದ ಅನುಷಾ, ‘ಗೋಕುಲದಲ್ಲಿ ಸೀತೆ’ ಸೀರಿಯಲ್‌ನಲ್ಲೇ ತಮ್ಮಅಭಿನಯ ಚಾತುರ್ಯ ತೋರಿಸಿದ್ದರು.

‘ಸೋಡಾ ಬುಡ್ಡಿ’ ಮತ್ತು ‘ಒನ್ಸ್‌ ಮೋರ್‌ ಕೌರವ’ ಚಿತ್ರಗಳಿಂದ ಸ್ಯಾಂಡಲ್‌ವುಡ್‌ ಗಮನವನ್ನೂ ಸೆಳೆದ ಅನುಷಾ, ತನ್ನಲ್ಲಿರುವ ಅಭಿನಯ ಪ್ರತಿಭೆಯನ್ನು ಪೂರ್ಣ ಪ್ರಮಾಣದಲ್ಲಿ ತೋರಿಸಲು ಒಳ್ಳೆಯ ಅವಕಾಶಗಳಿಗಾಗಿ ಕಾದು ಕುಳಿತಿದ್ದಾರೆ. ಹಾಗಂತ ಅವರ ಮುಂದೆ ಅವಕಾಶಗಳಿಲ್ಲವೆಂದಲ್ಲ,ಸದ್ಯ ವಿನಯ್‌ ರಾಜ್‌ಕುಮಾರ್‌ ನಾಯಕನಾಗಿರುವ ‘ಟೆನ್‌’ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

ಅನುಷಾ ಅವರ ನಟನೆಯ ಮೂರನೆಯ ಚಿತ್ರ ‘ಅಂದವಾದ’ ಇದೇ ಶುಕ್ರವಾರ ತೆರೆಕಾಣುತ್ತಿದೆ. ಇದು ‘ಮುಂಗಾರು ಮಳೆ’ ಸಿನಿಮಾದಂತೆಯೇ ಸಿನಿ ರಸಿಕರನ್ನು ಮೋಡಿ ಮಾಡಲಿದೆ ಎನ್ನುವ ನಿರೀಕ್ಷೆ ಹುಟ್ಟುಹಾಕಿದೆ.

ಚಿತ್ರದಬಗ್ಗೆ ಖುಷಿಯಲ್ಲೇಮಾತು ಆರಂಭಿಸಿದ ಅನುಷಾ, ‘ಚಿತ್ರದಲ್ಲಿ ನನ್ನದು ಸಾಮಾನ್ಯ ಹುಡುಗಿ, ಸುಳ್ಳುಬುರುಕಿಯ ಪಾತ್ರ. ಸುಳ್ಳು ಹೇಳುತ್ತಲೇ ನಾಯಕನನ್ನು ಕಾಡುತ್ತೇನೆ.ನಾಯಕನೊಂದಿಗೆ ಚಿಕ್ಕಂದಿನಿಂದ ಇದ್ದಸ್ನೇಹ ಪ್ರೀತಿಗೆ ತಿರುಗುತ್ತದೆ. ಒಂದು ಪರಿಶುದ್ಧ ಪ್ರೇಮಕಥೆ ಅಂದವಾಗಿ ತೆರೆ ಮೇಲೆಮೂಡಿಬಂದಿದೆ ಎನ್ನಬಹುದು.ಕ್ಲೈಮ್ಯಾಕ್ಸ್‌ ಕೂಡ ತುಂಬಾ ಪರಿಣಾಮಕಾರಿಯಾಗಿದೆ’ ಎನ್ನಲು ಮರೆಯಲಿಲ್ಲ ಅವರು.

‘ಸೋಡಾ ಬುಡ್ಡಿ’ ಚಿತ್ರದಲ್ಲಿನ ನನ್ನ ನಟನೆಯನ್ನು ನೋಡಿದ್ದ ನಿರ್ದೇಶಕ ಚಲ ಅವರು, ‘ಅಂದವಾದ’ದಲ್ಲಿ ನನಗೊಂದು ಅಂದವಾದ ಪಾತ್ರದಲ್ಲಿ ನಟಿಸುವ ಅವಕಾಶ ನೀಡಿದರು. ಈ ಚಿತ್ರದಲ್ಲಿ ನಾಯಕನಿಗೆ ಇರುವಷ್ಟೇ ಸ್ಕೋಪ್‌ ಮತ್ತು ಸ್ಪೇಸ್‌ ಎರಡೂ ಇದೆ’ ಎಂದು ಮಾತು ವಿಸ್ತರಿಸಿದರು.

ಸಕಲೇಶಪುರ ಭಾಗದಲ್ಲೇ ಶೇ 80ರಷ್ಟು ಚಿತ್ರೀಕರಣ ನಡೆದಿದೆ. ಹಾಡುಗಳ ಚಿತ್ರೀಕರಣ ಚಿಕ್ಕಮಗಳೂರು ಮತ್ತು ಅಂಡಮಾನ್‌ನಲ್ಲಿ ಆಗಿದೆ. ಮಳೆ ಮತ್ತು ಮಂಜಿನ ವಾತಾವರಣದಲ್ಲಿ ಸೆರೆ ಹಿಡಿದಿರುವ ಪ್ರತಿ ದೃಶ್ಯವೂ ಇಡೀ ಚಿತ್ರವನ್ನು ತುಂಬಾ ಫ್ರೆಷ್‌ ಆಗಿ ಕಾಣಿಸುವಂತೆ ಮಾಡಿದೆ.ಸೋನುನಿಗಂ, ವಿಜಯ್‌ ಪ್ರಕಾಶ್‌ ಹಾಗೂ ಆಲಾ ಅವರು ಹಾಡಿರುವ ಹಾಡುಗಳೂ ಕೇಳಲು, ನೋಡಲು ಅಷ್ಟೇ ಖುಷಿ ನೀಡುತ್ತವೆ ಎನ್ನುವ ಅನುಷಾ ಅವರಿಗೆ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳೂ ಇವೆ.

‘ನಾನು ಈವರೆಗೆ ಮಾಡಿರುವ ಪಾತ್ರಗಳು ತುಂಬಾ ಖುಷಿ ಮತ್ತು ತೃಪ್ತಿ ನೀಡಿವೆ. ಹೆಚ್ಚು ಪ್ರಾಮುಖ್ಯತೆ ಇರುವ ಮತ್ತು ನನಗೆ ಸವಾಲೆನಿಸುವ ಪಾತ್ರಗಳನ್ನು ಎದುರು ನೋಡುತ್ತಿದ್ದೇನೆ. ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆ ನಿಲ್ಲಬೇಕೆಂಬ ಬಗ್ಗೆ ತುಂಬಾ ತಲೆ ಕೆಡಿಸಿಕೊಂಡವಳಲ್ಲ, ಮುಂದೆಯೂ ಆ ರೀತಿ ತಲೆ ಕೆಡಿಸಿಕೊಳ್ಳುವುದಿಲ್ಲ. ಯಾವುದಾದರೂ ಒಂದು ಪಾತ್ರ ಸಿಕ್ಕರೆ ಸಾಕೆಂದು ಸಿಕ್ಕಿದ್ದನೆಲ್ಲವನ್ನೂ ಒಪ್ಪಿಕೊಳ್ಳಲು ರೆಡಿ ಇಲ್ಲ, ಚಿತ್ರದಿಂದ ಚಿತ್ರಕ್ಕೆ ಪಾತ್ರಗಳು ಭಿನ್ನವಾಗಿರಬೇಕು’ ಎನ್ನುವ ಅವರ ಮಾತಿನಲ್ಲಿ ಪಾತ್ರದ ಆಯ್ಕೆಯಲ್ಲಿ ಜಾಣ್ಮೆವಹಿಸುವ, ಸವಾಲಿಗೆ ಒಡ್ಡಿಕೊಳ್ಳಲು ಸಿದ್ಧಳಾಗಿರುವ ಧ್ವನಿ ಕಾಣಿಸುತ್ತಿತ್ತು. ಹಾಗೆಯೇಇವರು ಕನ್ನಡ ಚಿತ್ರರಂಗದಲ್ಲಿ ಬ್ಯು‌ಸಿ ಮತ್ತು ಬೇಡಿಕೆಯಲ್ಲಿರುವನಟಿ ಆಶಿಕಾ ರಂಗನಾಥ್‌ ಅವರಿಗೆ ಅಕ್ಕನೂ ಹೌದು.

‘ತಂಗಿ ಆಶಿಕಾ ಅಥವಾ ನನಗೆ ಯಾವುದೇ ಸ್ಕ್ರಿಪ್ಟ್‌ ಬರಲಿ, ಇಬ್ಬರೂ ಕುಳಿತು ಅಪ್ಪ– ಅಮ್ಮನ ಜತೆ ಚರ್ಚಿಸುತ್ತೇವೆ. ನಾವಿಬ್ಬರೂ ಯಾವತ್ತೂ ಒಬ್ಬರಿಗೊಬ್ಬರು ಪೈಪೋಟಿ ನಡೆಸುವವರಲ್ಲ, ಅದರಲ್ಲೂ ನಾನಂತು ತಂಗಿಯೊಂದಿಗೆ ಸ್ಪರ್ಧೆಗೆ ಬಿದ್ದವಳಲ್ಲ. ಬೀಳುವುದೂ ಇಲ್ಲ. ಒಬ್ಬರಿಗೊಬ್ಬರು ಬೆಂಬಲವಾಗಿದ್ದೇವೆ. ಕರಿಯರ್‌ಗೂ ಪರಸ್ಪರ ನೈತಿಕ ಬೆಂಬಲ ಕೊಟ್ಟುಕೊಳ್ಳುತ್ತೇವೆ’ ಎಂದು ತಂಗಿಯ ಬಗ್ಗೆಯೂ ಹೆಮ್ಮೆಪಟ್ಟರು.

‘ಬಾಲಿವುಡ್‌, ಹಾಲಿವುಡ್‌ನಲ್ಲಿ ನಟಿಯರ ಗ್ಲಾಮರ್‌, ಬೋಲ್ಡ್‌ ಲುಕ್‌ ನೋಡುವುದಕ್ಕಿಂತಲೂ ಕೊಟ್ಟ ಪಾತ್ರಕ್ಕೆ ಯಾವ ರೀತಿ ನ್ಯಾಯ ಒದಗಿಸಬಲ್ಲರು ಎನ್ನುವುದನ್ನು ನೋಡುತ್ತಾರೆ. ಯಾವುದೇ ನಟಿಗೆ ಗ್ಲಾಮರ್‌, ಬೋಲ್ಡ್‌ನೆಸ್‌ ಮುಖ್ಯವಲ್ಲ, ನನ್ನ ಪ್ರಕಾರ ನಮ್ಮ ಟೈಮ್‌ ಮತ್ತು ಲಕ್‌ ಬಹಳ ಮುಖ್ಯ’ ಎನ್ನುವ ಅನುಷಾ, ಅದೃಷ್ಟವನ್ನು ಹೆಚ್ಚು ನಂಬುವ ನಟಿ ಎನ್ನುವುದು ಅವರ ಮಾತಿನಲ್ಲೇ ದೃಢವಾಗುತ್ತದೆ. ಮದುವೆ ಬಗ್ಗೆ ಸದ್ಯಕ್ಕೆ ಯಾವುದೇ ಯೋಚನೆಯನ್ನೂ ಮಾಡಿಲ್ಲ ಎನ್ನುವುದನ್ನು ದೃಢವಾಗಿಯೇ ಹೇಳಿದರು.

ಮುಂದಿನ ಯೋಜನೆಗಳ ಬಗ್ಗೆಯೂ ಮಾತನಾಡಿದ ಅವರು, ಎರಡುಹೊಸ ಸ್ಕ್ರಿಪ್ಟ್‌ಗಳು ಬಂದಿದ್ದವು. ಕಥೆ ಇಷ್ಟವಾಗಲಿಲ್ಲ. ಹಾಗಾಗಿ ಚಿತ್ರ ಒಪ್ಪಿಕೊಳ್ಳಲಿಲ್ಲ. ಒಳ್ಳೆಯ ಸ್ಕ್ರಿಪ್ಟ್‌ ಸಿಗಬೇಕು,ಒಳ್ಳೆಯ ಚಿತ್ರತಂಡದ ಜತೆಗೆ ಕೆಲಸ ಮಾಡಬೇಕೆನ್ನುವ ಆಸೆ ಎಲ್ಲರಿಗೂ ಇರುವಂತೆಯೇ ನನಗೂ ಇದೆ. ಹಾಗಂತ ಪರಭಾಷೆ ಚಿತ್ರರಂಗದತ್ತ ಮುಖಮಾಡಲಾರೆ. ಸ್ಯಾಂಡಲ್‌ವುಡ್‌ನಲ್ಲೇ ಮಾಡಲು ಸಾಕಷ್ಟು ಕೆಲಸವಿದೆ ಎಂದರು.

‘ಒಂದು ಚಿತ್ರದಲ್ಲಿ ನಟಿಸಿದ ನಂತರ ಅದರ ಮೇಲೆ ತುಂಬಾ ನಿರೀಕ್ಷೆ ಇಟ್ಟುಕೊಂಡು ಫಲಿತಾಂಶಕ್ಕಾಗಿ ಕಾಯುತ್ತಾಕೂರುವ ಜಾಯಮಾನ ನನ್ನದಲ್ಲ. ಸಿಕ್ಕ ಅವಕಾಶದಲ್ಲಿ ಗರಿಷ್ಠ ಕೆಲಸ ಮಾಡಿ ಮುಂದೆ ಸಾಗಬೇಕು ಅಷ್ಟೇ. ಇಂತಹ ನಟ, ಇಂತಹ ನಿರ್ದೇಶಕರ ಜತೆಗೇ ಕೆಲಸ ಮಾಡಬೇಕೆಂಬ ಕನಸುಗಳು, ಗುರಿಗಳೂ ಇಲ್ಲ. ಯಾರೇ ಆಗಿರಲಿ, ಒಳ್ಳೆಯವರಾಗಿದ್ದರೆ ಮತ್ತುತಿಳಿದವರಾಗಿದ್ದರೆ ಅವರು ಹೊಸಬರಿರಲಿ, ಹಳಬರಿರಲಿ ಅಂತಹವರೊಂದಿಗೆ ಕೆಲಸ ಮಾಡಲು ಸದಾ ಸಿದ್ಧ’ ಎಂದು ಪಕ್ಕಾ ವಾಸ್ತವವಾದಿಯಂತೆ ಹೇಳಿದರು.

‘ಸಿನಿಮಾ ಬಗ್ಗೆ ತಾಂತ್ರಿಕವಾಗಿ ತಿಳಿದುಕೊಳ್ಳುವ ಕುತೂಹಲ ಇದೆ. ನಿರ್ದೇಶನ ಮಾಡುವ ಕನಸೇನು ಇಲ್ಲ. ಆದರೆ, ಪ್ರೊಡಕ್ಷನ್‌ ಬಗ್ಗೆ ಬಹಳ ಆಸಕ್ತಿ ಇದೆ. ಚಿತ್ರ ನಿರ್ಮಾಣಕ್ಕೆ ಬೇಕಾದ ಅನುಭವ ಗಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಅನುಭವವೇ ನಿಜವಾದ ಪಾಠವಲ್ಲವೇ’ ಎನ್ನುವ ಅನುಷಾ, ಭವಿಷ್ಯದಲ್ಲಿ ನಿರ್ಮಾಪಕಿಯಾಗುವ ಕನಸನ್ನೂ ಬಿಚ್ಚಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT