ಮಂಗಳವಾರ, ಫೆಬ್ರವರಿ 25, 2020
19 °C

ಸೂಪರ್ ಸ್ಟಾರ್, ಮುದ್ದಿನ ಮಾವಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜನಪ್ರಿಯ ನಟ ವಿಷ್ಣುವರ್ಧನ್‌ ಮಧ್ಯಮ ವರ್ಗದ ಕುಟುಂಬದಿಂದ ಬಂದ ನಟನಿಗೆ ತಮ್ಮ ಮುದ್ದಿನ ಕುವರಿ ಕೀರ್ತಿಯವರನ್ನು ಮದುವೆ ಮಾಡಿ ಕೊಟ್ಟರು. ಅವರ ಪ್ರೀತಿಯ ಅಳಿಮಯ್ಯನ ಮಾತುಗಳಲ್ಲೇ ಆ ಕಥೆ ಕೇಳಿ.

ಧಾರವಾಡದಿಂದ ನಾನು ಬೆಂಗಳೂರಿಗೆ ಬಂದ ಮೇಲೆ ಆರ್ಕಿಟೆಕ್ಚರ್ ಸಂಸ್ಥೆಯೊಂದರಲ್ಲಿ ಒಳಾಂಗಣ ವಿನ್ಯಾಸಕಾರನಾಗಿ ಕೆಲಸ ಮಾಡಲು ಪ್ರಾರಂಭಿಸಿದೆ. ಆಫೀಸ್‌ ವೇಳೆ ಮುಗಿದ ನಂತರ ರಂಗಭೂಮಿ ಚಟುವಟಿಕೆಗಳು. ನಾನು ಪಾತ್ರ ಮಾಡುತ್ತಿದ್ದ ನಾಟಕವೊಂದರ ನಿರ್ದೇಶಕರು ಬೇರಾರು ಅಗಿರಲಿಲ್ಲ. ನಟ ವಿಷ್ಣುವರ್ಧನ್‌ ಅವರ ಸ್ವಂತ ಅಣ್ಣ!

ವಿಷ್ಣುವರ್ಧನ್‌ ಅವರು ಕುಟುಂಬ ಸಮೇತರಾಗಿ ನಾಟಕ ನೋಡಲು ಬಂದಿದ್ದರು. ಅವರ ತಾರಾ ಪತ್ನಿ ಭಾರತಿ ಮತ್ತು ಅವರ ಇಬ್ಬರು ಪುತ್ರಿಯರಾದ ಚಂದನ ಹಾಗೂ ಕೀರ್ತಿ ಬಂದಾಗ ನಮ್ಮ ತಂಡಕ್ಕೆಲ್ಲ ರೋಮಾಂಚನ.

ನಾಟಕ ಪ್ರದರ್ಶನದ ನಂತರ ವಿಷ್ಣುವರ್ಧನ್‌ ಅವರು ನನ್ನ ಅಭಿನಯ ಮೆಚ್ಚಿಕೊಂಡರಷ್ಟೇ ಅಲ್ಲದೆ ಶಂಕರನಾಗ್ ಅವರಿಗೆ ಹೋಲಿಸಿದರು. ನನ್ನ ಆನಂದಕ್ಕೆ ಪಾರವೇ ಇರಲಿಲ್ಲ. ಹಾಗೆ ಭಾವಪರವಶನಾಗಿದ್ದೆ. ಒಂದು ದಿನ ಅವರು ನನ್ನ ಮುಂದೆ ಮದುವೆ ಪ್ರಸ್ತಾಪ ಇಟ್ಟರು. ಅದು ಅವರ ಮಗಳು ಕೀರ್ತಿಯನ್ನು ಮದುವೆಯಾಗುವ ಪ್ರಸ್ತಾಪ! 

ನನ್ನ ಮೊದಲನೇ ಚಿತ್ರ ಬಿಡುಗಡೆಯಾಗಿ ಎರಡನೇ ಚಿತ್ರಕ್ಕೆ ಸಹಿ ಹಾಕಿಯಾದ ಕೆಲವೇ ದಿನಗಳಲ್ಲಿ ಅವರ ಕುಟುಂಬವನ್ನು ಭೇಟಿ ಮಾಡಲು ಹೋದೆ. ಹೋದ ಮೇಲೆ ಅವರ ಜೊತೆ ನನ್ನ ಆತಂಕ ಹಂಚಿಕೊಂಡೆ. ‘ನಾನಾದರೋ ಮಧ್ಯಮ ವರ್ಗದ ಕುಟುಂಬದಿಂದ ಬಂದವನು ಮತ್ತು ನನ್ನ ವೃತ್ತಿ ಈಗತಾನೆ ಆರಂಭವಾಗಿದೆ. ಅಂತಹುದರಲ್ಲಿ ನೀವು ಮುದ್ದಿನಿಂದ ಬೆಳೆಸಿದ ಮಗಳು ನನ್ನೊಂದಿಗೆ ಹೊಂದಿಕೊಳ್ಳಬಹುದೇ?  ಅವರ ಜೀವನಶೈಲಿಯ ಭರಿಸಲು ನನ್ನಿಂದ ಕಷ್ಟವಾಗಬಹುದು’ ಎಂದು ಸಂದೇಹ ವ್ಯಕ್ತಪಡಿಸಿದೆ. 

ತಾಳ್ಮೆಯಿಂದ ನನ್ನ ಮಾತೆಲ್ಲ ಕೇಳಿಸಿಕೊಂಡ ವಿಷ್ಣುವರ್ಧನ್‌ ಅವರು ಒಂದು ಮಾತು ಹೇಳಿದರು. ‘ಆಗಲೇ ಸೂಪರ್ ಸ್ಟಾರ್ ಆಗಿದ್ದ ಭಾರತಿ ಅವರನ್ನು ವಿವಾಹವಾಗುವ ಸಂದರ್ಭದಲ್ಲಿ ನನ್ನ ಪರಿಸ್ಥಿತಿ ಹಾಗೇ ಆಗಿತ್ತು’ ಎಂದರು. ಅವರ ಶ್ರೇಷ್ಠತೆ ಹಾಗೂ ನಮ್ರತೆಯ ಪರಿಚಯ ಆ ಘಳಿಗೆಯಲ್ಲಿ ನನಗಾಯಿತು.

‘ನಾನು ಜನರ ಕಣ್ಣುಗಳನ್ನು ನೋಡುತ್ತೇನೆ, ಅವು ಸುಳ್ಳಾಡುವುದಿಲ್ಲ. ನೀವೋಬ್ಬ ಒಳ್ಳೆಯ ಮನುಷ್ಯ ಎಂಬುವುದು ನನಗೆ ಗೊತ್ತು ಮತ್ತು ನನಗಷ್ಟೇ ಸಾಕು. ನನ್ನ ಮಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತೀರೆಂಬ ಭರವಸೆ ನನಗಿದೆ’ ಎಂದರು.

ನನ್ನ ಹೃದಯ ಹಗುರಾಯಿತು. ವಿಷ್ಣುವರ್ಧನ್‌ ಅವರಿಗೆ ನಾನೊಬ್ಬ ಗಾಯಕನೆಂದೂ ಗೊತ್ತಿತ್ತು. ಹಾಡೊಂದನ್ನು ಹಾಡಲು ಹೇಳಿದರು. ಪ್ರಪಂಚದ ಅತ್ಯಂತ ಸುಂದರ ಹುಡುಗಿ ಕೀರ್ತಿಯವರಿಗಾಗಿ ಹಾಡು ಹಾಡಿದೆ. ಆ ದಿವಸ ನಮ್ಮ ಪ್ರೇಮಜ್ಯೋತಿ ಹೊತ್ತಿಕೊಂಡಿತು ಮತ್ತು ಕೀರ್ತಿ ಅವರ ಅಪ್ಪ–ಅಮ್ಮ ನನಗೂ ಅಪ್ಪ ಮತ್ತು ಅಮ್ಮನಾದರು. 

ಮೊದಲಿನಿಂದಲೂ ಅಪ್ಪಾವರು ನನ್ನ ಬಗ್ಗೆ ಪ್ರೊಟೆಕ್ಟಿವ್. ಅವರೊಬ್ಬ ತತ್ತ್ವಜ್ಞಾನಿ ಹಾಗೂ ಮಾರ್ಗದರ್ಶಕರೂ ಹೌದು. ಆದರೆ ಬಹುಮಟ್ಟಿಗೆ ನನ್ನೊಡನೆ ಸ್ನೇಹಿತನಾಗಿರಲು ಬಯಸಿದರು. ಒಮ್ಮೆ, ಚೆನ್ನೈನಲ್ಲಿದ್ದ ಅಪ್ಪಾರವರಿಗೆ ನಾನು ನಟಿಸಿದ ಚಿತ್ರದ ಧ್ವನಿಮುದ್ರಿಕೆ ಬಿಡುಗಡೆ ಸಂದರ್ಭದಲ್ಲಿ ನನಗಾಗಿದ್ದ ಅವಮಾನ ಮತ್ತು ನನ್ನೆಡೆಗೆ ತೋರಿದ ನಿರ್ಲಕ್ಷ್ಯವೆರಡೂ ತಿಳಿಯಿತು.

ಕರೆ ಮಾಡಿ ನನ್ನನ್ನು ಸಂತೈಸಿ ಆ ಕೂಡಲೇ ಚೆನ್ನೈಗೆ ಹೊರಟು ಬರುವಂತೆ ತಿಳಿಸಿದರು. ಆ ಬಗ್ಗೆ ನಾನು ತೀರ್ಮಾನ ತೆಗೆದುಕೊಳ್ಳುವಷ್ಟರಲ್ಲಿ ನನ್ನ ಹೆಸರಿಗೆ ವಿಮಾನದ ಟಿಕೇಟ್‌ ಕಳಿಸಿಬಿಟ್ಟಿದ್ದರು. ಚೆನ್ನೈ ತಲುಪಿದ ಮೇಲೆ ನನಗೆ ಅವಾಕ್ಕಾಯಿತು. ನನ್ನ ಬಗ್ಗೆ ಚಿಂತೆ ಮಾಡುತ್ತಾ ಇಡೀ ರಾತ್ರಿ ಚಿಕ್ಕ ಮಗುವಿನಂತೆ ಅಪ್ಪಾವರು ಅತ್ತಿದ್ದರು. ನಾವಿಬ್ಬರೂ ಒಟ್ಟಿಗೆ ನಟಿಸಿದ್ದೇವೆ, ಆಟವಾಡಿದ್ದೇವೆ, ಹಾಡಿದ್ದೇವೆ, ಪ್ರಯಾಣ ಮಾಡಿದ್ದೇವೆ, ವ್ಯಾಯಾಮ ಮಾಡಿದ್ದೇವೆ ಮತ್ತು ಒಟ್ಟಿಗೇ ನಕ್ಕಿದ್ದೇವೆ. ಹಲವಾರು ವಿಷಯಗಳ ಕುರಿತು ಚರ್ಚಿಸಿದ್ದೇವೆ. ಈ ಅನುಭವಗಳೆಲ್ಲ ನನ್ನ ವ್ಯಕ್ತಿತ್ವವನ್ನು ಅಗಾಧವಾಗಿ ಶ್ರೀಮಂತಗೊಳಿಸಿವೆ.

ಒಮ್ಮೆ ಧರ್ಮಸ್ಥಳಕ್ಕೆ ಹೋಗಿದ್ದೆವು. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಮಂಜುನಾಥ ಸ್ವಾಮಿಯ ಲಾಕೆಟ್ ಉಳ್ಳ ಚಿನ್ನದ ಸರವೊಂದನ್ನು ಅಪ್ಪಾ ಅವರ ಕೊರಳಿಗೆ ಹಾಕಿದರು. ಕೆಲವೇ ಕ್ಷಣಗಳಲ್ಲಿ ಅಪ್ಪಾ ಅವರು ಅದನ್ನು ಹೊರತೆಗೆದು, ನನ್ನ ಕತ್ತಿಗೆ ಹಾಕಿ ನನ್ನನ್ನು ಹರಸಿದರು. ದಿಗ್ಭ್ರಮೆಗೊಂಡ ನಾನು ಮಾತೇ ಹೊರಡದೆ ಮೂಕನಾಗಿದ್ದೆ. ನಮ್ಮ ನಡುವಿನ ಈ ಬಂಧನವನ್ನು (ಸಂಬಂಧ), ನನ್ನ ಮೇಲಿನ ಅವರ ಕಾಳಜಿಯನ್ನು ಏನೆಂದು ಬಣ್ಣಿಸಲಿ?

ಹಿಂದಿರುಗಿ ನೋಡುವಾಗ ನನ್ನನ್ನೇ ಕೇಳಿಕೊಳ್ಳುತ್ತೇನೆ– ‘ ನನಗಿಂತ ಎಷ್ಟೋ ಸ್ಫುರದ್ರೂಪಿ ಮತ್ತು ಹೆಚ್ಚು ವಿದ್ಯಾವಂತ ಶ್ರೀಮಂತ ಹುಡುಗರಿದ್ದರೂ ಅವರೇಕೆ ನನ್ನನ್ನೇ ಅಳಿಯನನ್ನಾಗಿ ಆರಿಸಿಕೊಂಡರು?’ ಎಂದು. ಅಪ್ಪಾ ಅವರು ಅಧ್ಯಾತ್ಮಿಕತೆಯಲ್ಲಿ ಉತ್ತರ ಹುಡುಕುವವರು. ಯಾವುದೇ ಉತ್ತರ ದೊರೆಯದಿದ್ದಾಗ ಸುಮ್ಮನೆ ಮೇಲಕ್ಕೆ ಕೈದೋರಿ ಹೀಗೆ ಹೇಳುತ್ತಿದ್ದರು– ‘ಇದೆಲ್ಲ ಆ ಸರ್ವಶಕ್ತನಿಂದಲೇ’ .. ಬಹುಶಃ ನನ್ನ ಪ್ರಶ್ನೆಗೂ ಇದೇ ಉತ್ತರವೇನೋ!

ಅನಿರುದ್ಧ ಜತ್ಕರ (ಲೇಖಕರು ನಟ, ಗಾಯಕರು)

ಕನ್ನಡಕ್ಕೆ: ಜಯಶ್ರೀ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)