ಬುಧವಾರ, ಜೂನ್ 3, 2020
27 °C

ಸಂಕ್ರಾಂತಿಗೆ ರಜನಿಯ ‘ಅಣ್ಣಾತೆ’ ಥಿಯೆಟರ್‌ಗೆ ಲಗ್ಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ತಮಿಳುನಾಡು ಸರ್ಕಾರ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಕೆಲಸಕ್ಕೆ ಅನುಮತಿ ನೀಡಿದೆ. ಹಾಗಾಗಿ, ಕಾಲಿವುಡ್‌ನಲ್ಲಿ ಲಾಕ್‌ಡೌನ್‌ ಅವಧಿಯಲ್ಲೂ ಕೊಂಚಮಟ್ಟಿಗೆ ಸಿನಿಮಾದ ಚಟುವಟಿಕೆಗಳು ಗರಿಗೆದರಿವೆ. ಇದು ‘ಸೂಪರ್‌ ಸ್ಟಾರ್’ ರಜನಿಕಾಂತ್‌ ಅಭಿಮಾನಿಗಳಲ್ಲೂ ಸಂತಸಕ್ಕೆ ಕಾರಣವಾಗಿದೆ.

‘ತಲೈವ’ ನಟನೆಯ ಸಿರುಥೈ ಶಿವ ಆ್ಯಕ್ಷನ್‌ ಕಟ್‌ ಹೇಳಿರುವ ‘ಅಣ್ಣಾತೆ’ ಚಿತ್ರ ಕುತೂಹಲ ಹೆಚ್ಚಿಸಿರುವುದು ದಿಟ. ಕೊರೊನಾ ಭೀತಿ ಕಾಣಿಸಿಕೊಳ್ಳದಿದ್ದರೆ ಈ ವೇಳೆಗೆ ಥಿಯೇಟರ್‌ಗೆ ಬರಲು ಚಿತ್ರತಂಡ ಸಿದ್ಧತೆ ನಡೆಸಿತ್ತು. ಈಗ ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ನಡೆಯುತ್ತಿದ್ದು, 2021ರ ಸಂಕ್ರಾಂತಿ ಹಬ್ಬಕ್ಕೆ ಸಿನಿಮಾ ಬಿಡುಗಡೆ ಮಾಡುವುದಾಗಿ ಈ ಚಿತ್ರ ನಿರ್ಮಾಣ ಸಂಸ್ಥೆಯಾದ ಸನ್‌ ಪಿಕ್ಚರ್ಸ್‌ ಅಧಿಕೃತವಾಗಿ ಟ್ವಿಟರ್‌ನಲ್ಲಿ ಘೋಷಿಸಿದೆ.

ರಜನಿ ನಟಿಸಿದ್ದ ‘ಪೆಟ್ಟಾ’ ಮತ್ತು ‘ದರ್ಬಾರ್’ ಸಿನಿಮಾಗಳ ಬಳಿಕ ಬರುತ್ತಿರುವ ಸಿನಿಮಾ ಇದು. ಅಂದಹಾಗೆ ಈ ಎರಡೂ ಸಿನಿಮಾಗಳೂ ಸಂಕ್ರಾಂತಿ ಹಬ್ಬದಂದೇ ತೆರೆಕಂಡಿದ್ದವು. ಆದರೆ, ಪರದೆ ಮೇಲೆ ರಜನಿ ಮಾಡಿದ್ದ ಮೋಡಿ ಗಲ್ಲಾಪೆಟ್ಟಿಗೆಯಲ್ಲಿ ಫಲ ಕೊಡಲಿಲ್ಲ. ಹಾಗಾಗಿ, ‘ಅಣ್ಣಾತೆ’ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಿಸಿರುವುದು ಸಹಜ.

ಡಿ. ಇಮಾನ್‌ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಮೋಷನ್‌ ಪೋಸ್ಟರ್‌ಗೆ ಅವರು ನೀಡಿದ್ದ ರೆಟ್ರೊ ಶೈಲಿಯ ಹಿನ್ನೆಲೆ ಸಂಗೀತ ರಜನಿಯ ಅಭಿಮಾನಿಗಳಲ್ಲಿ ಸಂತಸ ಮೂಡಿಸಿತ್ತು. ಅಂದಹಾಗೆ ‘ದರ್ಬಾರ್‌’ನಲ್ಲಿ ರಜನಿಗೆ ನಾಯಕಿಯಾಗಿದ್ದ ನಯನತಾರಾ ಅವರೇ ಈ ಚಿತ್ರದಲ್ಲೂ ‘ತಲೈವ’ನಿಗೆ ಜೋಡಿಯಾಗಿದ್ದಾರೆ. ಕೀರ್ತಿ ಸುರೇಶ್‌ ಅವರು ರಜನಿಯ ಪುತ್ರಿಯ ಪಾತ್ರದಲ್ಲಿ ನಟಿಸಿದ್ದಾರಂತೆ. ಉಳಿದಂತೆ ಖುಷ್ಬೂ, ಮೀನಾ, ಪ್ರಕಾಶ್‌ ರಾಜ್ ಮುಖ್ಯಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹೈದರಾಬಾದ್‌ನ ರಾಮೋಜಿ ಫಿಲ್ಮ್‌ ಸಿಟಿಯಲ್ಲಿಯೇ ಚಿತ್ರದ ಬಹುತೇಕ ಭಾಗದ ಚಿತ್ರೀಕರಣ ನಡೆದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು