ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರ್ಡರ್‌ ಮಿಸ್ಟರಿ; ಅರಿಷಡ್ವರ್ಗ ಗೆಲ್ಲುವ ಆಟ...

Last Updated 27 ಮಾರ್ಚ್ 2019, 9:17 IST
ಅಕ್ಷರ ಗಾತ್ರ

ಅರಿಷಡ್ವರ್ಗಗಳನ್ನು ಗೆದ್ದರೆ ಬದುಕು ಹಸನಾಗುತ್ತದೆ ಎನ್ನುವುದು ಭಾರತೀಯ ತತ್ವಶಾಸ್ತ್ರ ಹೇಳುವ ಮಾತು. ಆದರೆ ಇಂದು ನಾವು ಬದುಕುತ್ತಿರುವ ಭೋಗಸಂಸ್ಕೃತಿಗೆ ನಮ್ಮೆಲ್ಲ ಸಂಸ್ಕೃತಿಯನ್ನೂ, ಜೀವನಶೈಲಿಯನ್ನೂ ಅಡವಿಟ್ಟಿರುವ ಕಾಲಘಟ್ಟದಲ್ಲಿ ಅರಿಷಡ್ವರ್ಗಗಳ ಹಂಗಿಲ್ಲದೆಯೇ ಬದುಕುವುದು ಸಾಧ್ಯವೇ?

ಇಂಥದ್ದೊಂದು ಗಹನವಾದ ಪ್ರಶ್ನೆಯನ್ನು ಸಿನಿಮಾ ಮಾಧ್ಯಮದ ಚೌಕಟ್ಟಿನೊಳಗೆ ಕೇಳುವ ಪ್ರಯತ್ನ ಮಾಡುತ್ತಿದೆ ಹೊಸಬರ ತಂಡ. ಅಂದಹಾಗೆ ಈ ಸಿನಿಮಾದ ಹೆಸರೂ ‘ಅರಿಷಡ್ವರ್ಗ’ ಎಂದೇ.

ಅರವಿಂದ್‌ ಕಾಮತ್‌ ನಿರ್ದೇಶಿಸಿರುವ ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ಆರು ಪಾತ್ರಗಳಿವೆ. ಒಂದೊಂದು ಪಾತ್ರಗಳೂ ಅರಿಷಡ್ವರ್ಗದ ಒಂದೊಂದು ಗುಣಗಳನ್ನು ಪ್ರತಿನಿಧಿಸುತ್ತವೆ. ಹಾಗಂತ ತೆರೆಯ ಮೇಲೆ ಇದು ಕಾಮ, ಇದು ಕ್ರೋಧ, ಇದು ಲೋಭ ಎಂದೆಲ್ಲ ವಾಚ್ಯವಾಗಿ ಹೇಳಲು ಹೊರಟಿಲ್ಲ ನಿರ್ದೇಶಕರು. ತೆರೆಯ ಮೇಲೆ ಕಾಣಿಸುವ ಬಿಂಬಗಳ ಮೂಲಕ ನೋಡುಗರ ಮನಸೊಳಗೆ ಜಿಜ್ಞಾಸೆ ಹುಟ್ಟಿಸುವುದೇ ಒಳ್ಳೆಯ ಸಿನಿಮಾ ಎನ್ನುವುದು ಅವರಿಗೆ ಗೊತ್ತಿದೆ. ಹಾಗಾಗಿಯೇ ಅವರು ಒಂದು ಮರ್ಡರ್‌ ಮಿಸ್ಟರಿ ಕಥೆಯ ಮೂಲಕ ಮನುಷ್ಯನ ಮೂಲಗುಣಗಳ ಶೋಧನೆಗೆ ಇಳಿದಿದ್ದಾರೆ.

ಸಿನಿಮಾ ವಿಶ್ಲೇಷಕ ಹರೀಶ್‌ ಮಲ್ಯ ಮತ್ತವರ ಸ್ನೇಹಿತರು ಸೇರಿಕೊಂಡು ಹಣ ಹಾಕಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ‘ಇದು ಇಂದು ಕನ್ನಡದಲ್ಲಿ ಬರುತ್ತಿರುವ ಮಾಮೂಲಿ ರೀತಿಯ ಸಿನಿಮಾ ಅಲ್ಲ’ ಎಂದು ಅವರು ಸ್ಪಷ್ಟವಾಗಿಯೇ ಹೇಳುತ್ತಾರೆ. ‘ಸಾಮಾನ್ಯವಾಗಿ ಕಮರ್ಷಿಯಲ್‌ ಸಿನಿಮಾಗಳಲ್ಲಿ ಇರುವಂತೆ ಶುಭಾಂತ್ಯ ಇರುವುದಿಲ್ಲ. ಹಾಗಂತ ದುಃಖಾಂತ್ಯವೂ ಇರುವುದಿಲ್ಲ. ಈ ಸಿನಿಮಾದ ಪಾತ್ರಗಳು ಒಳ್ಳೆಯವರು ಅಥವಾ ಕೆಟ್ಟವರು ಆಗಿರುವುದಿಲ್ಲ. ಮನುಷ್ಯನಲ್ಲಿನ ಒಳಿತು–ಕೆಡುಕು ಎರಡನ್ನೂ ಒಳಗೊಂಡ ಬೂದು ಬಣ್ಣದ ವಲಯವನ್ನು ಪ್ರತಿನಿಧಿಸುವಂಥ ಪಾತ್ರಗಳಿರುತ್ತವೆ. ನೋಡುಗನಲ್ಲಿ ಒಂದಿಷ್ಟು ಪ್ರಶ್ನೆಗಳನ್ನು ಹುಟ್ಟಿಸುವ, ಜಿಜ್ಞಾಸೆ ಹುಟ್ಟಿಸುವ ರೀತಿಯಲ್ಲಿ ಈ ಸಿನಿಮಾ ಕೊನೆಗೊಳ್ಳುತ್ತದೆ’ ಎಂದು ವಿವರಿಸುತ್ತಾರೆ ಹರೀಶ್‌.

ಅರವಿಂದ್‌ ಕಾಮತ್‌ಗೆ ಇದು ಮೊದಲ ಸಿನಿಮಾ. ಚಿತ್ರದಲ್ಲಿನ ಆರು ಹಾಡುಗಳಿಗೆ ಉದಿತ್‌ ಹರಿದಾಸ್‌ ರಾಗ ಸಂಯೋಜಿಸಿದ್ದಾರೆ. ‘ಲೂಸಿಯಾ’ ಸಿನಿಮಾದಲ್ಲಿ ‘ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ’ ಹಾಡು ಹಾಡಿದ್ದ ಅವರಿಗಿದು ಸಂಗೀತ ನಿರ್ದೇಶಕನಾಗಿ ಮೊದಲ ಸಿನಿಮಾ. ಪವನ್‌ ಕುಮಾರ್‌ ಆರು ಹಾಡುಗಳಿಗೂ ಸಾಹಿತ್ಯ ಬರೆದಿದ್ದಾರೆ. ನಟನಾಗಿ ಗುರ್ತಿಸಿಕೊಂಡಿದ್ದ ಬಾಲಾಜಿ ಮನೋಹರ್‌ ಕೂಡ ‘ಅರಿಷಡ್ವರ್ಗ’ದ ಮೂಲಕ ಛಾಯಾಗ್ರಾಹಕರಾಗಿ ಪರಿಚಿತರಾಗುತ್ತಿದ್ದಾರೆ.

ಈಗಾಗಲೇ ಚಿತ್ರ ಪೂರ್ಣಗೊಂಡಿದ್ದು ಪ್ರಮಾಣೀಕರಣ ಮಂಡಳಿಯಿಂದ ‘ಎ’ ಪ್ರಮಾಣಪತ್ರ ಪಡೆದುಕೊಂಡಿದೆ. ಹಾಗಂತ ಇದರಲ್ಲಿ ಅಶ್ಲೀಲ ದೃಶ್ಯಗಳೇನೂ ಇಲ್ಲ. ಆದರೆ ನಗರ ಬದುಕಿನ ಲೈಂಗಿಕತೆಯನ್ನು ಬಿಂಬಿಸುವ ಕೆಲವು ದೃಶ್ಯಗಳಿರುವ ಕಾರಣಕ್ಕೆ ‘ಎ’ ಪ್ರಮಾಣಪತ್ರ ನೀಡಲಾಗಿದೆಯಂತೆ. ಹಾಗಿದ್ದರೂ ಚಿತ್ರ ವೀಕ್ಷಿಸಿದ ಪ್ರಮಾಣೀಕರಣ ಮಂಡಳಿಯವರು ‘ಕನ್ನಡದಲ್ಲಿ ಇಂಥದ್ದೊಂದು ಚಿತ್ರ ತಯಾರಾಗಿರುವುದು ನಿಜಕ್ಕೂ ಸೋಜಿಗ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರಂತೆ.

ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ಹಂತಹಂತವಾಗಿ ಚಿತ್ರದ ಕುರಿತು ಮಾಹಿತಿ ನೀಡುವ, ಪ್ರಚಾರಕಾರ್ಯವನ್ನು ತಂಡ ಆರಂಭಿಸಿದೆ. ಮೊದಲ ಹಂತವಾಗಿ ಪ್ರತಿಯೊಂದು ಪಾತ್ರಗಳನ್ನೂ ಪರಿಚಯಿಸಲಾಗುತ್ತಿದೆ.

ಸದ್ಯಕ್ಕೆ ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಾಣುವ ಅವಕಾಶಗಳ ಪರಿಶೀಲನೆಯಲ್ಲಿರುವ ಚಿತ್ರತಂಡ ಜೂನ್‌ನಲ್ಲಿ ತೆರೆಗೆ ಬರುವ ಆಲೋಚನೆಯಲ್ಲಿದೆ. ಅವಿನಾಶ್‌ ಮತ್ತು ಸಂಯುಕ್ತಾ ಹೊರನಾಡು ಇಬ್ಬರನ್ನು ಬಿಟ್ಟರೆ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಎಲ್ಲರೂ ಹೊಸಬರು.

ಜಗತ್ತಿನ ಸಿನಿಮಾಗಳ ಪರಿಚಯವಿರುವ, ಹೊಸ ರೀತಿ ಯೋಚಿಸಬಲ್ಲ ಒಂದಿಷ್ಟು ಯುವ ಮನಸ್ಸುಗಳು ಸೇರಿಕೊಂಡು ‘ಅರಿಷಡ್ವರ್ಗ’ವನ್ನು ಹೊಸ ಬಗೆಯಲ್ಲಿ ಪರಿಚಯಸುವ ಪ್ರಯತ್ನದಲ್ಲಿದ್ದಾರೆ. ಅರಿಷಡ್ವರ್ಗಗಳನ್ನು ಗೆಲ್ಲುವುದು ಎಷ್ಟು ಸಾಧ್ಯವೋ, ಎಷ್ಟು ಸಾಧುವೋ ಬೇರೆಯದೇ ಚರ್ಚೆ. ಆದರೆ ಹೊಸ ಮನಸ್ಸುಗಳು ಮಾಡಿದ ಈ ಪ್ರಯೋಗಶೀಲ ಸಿನಿಮಾ ಗೆಲ್ಲುವುದಂತೂ ಕನ್ನಡ ಚಿತ್ರರಂಗದ ಆರೋಗ್ಯದ ದೃಷ್ಟಿಯಿಂದ ಅಗತ್ಯ ಎಂದು ಹೇಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT