ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವದ 100 ಮಂದಿ ಪ್ರಭಾವಿಗಳ ಪಟ್ಟಿಯಲ್ಲಿ ನಟ ಆಯುಷ್ಮಾನ್‌ ಖುರಾನಗೆ ಸ್ಥಾನ

Last Updated 23 ಸೆಪ್ಟೆಂಬರ್ 2020, 7:05 IST
ಅಕ್ಷರ ಗಾತ್ರ

ಬಾಲಿವುಡ್‌ ನಟ ಆಯುಷ್ಮಾನ್‌ ಖುರಾನ ಟೈಮ್‌ ನಿಯತಕಾಲಿಕೆ ಪ್ರಕಟಿಸಿರುವ 2020ನೇ ಸಾಲಿನ ವಿಶ್ವದ ನೂರು ಮಂದಿ ‍ಪ್ರಭಾವಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಆಯುಷ್ಮಾನ್‌ ಬೆಳ್ಳಿತೆರೆ ಪ್ರವೇಶಿಸಿದ್ದು ‘ವಿಕ್ಕಿ ಡೋನರ್’ ಚಿತ್ರದ ಮೂಲಕ. ಇತ್ತೀಚೆಗೆ ಒಟಿಟಿಯಲ್ಲಿ ಬಿಡುಗಡೆಯಾದ ‘ಗುಲಾಬೊ ಸಿತಾಬೊ’ ಚಿತ್ರದವರೆಗೂ ಭಿನ್ನ ಬಗೆಯ ಪಾತ್ರಗಳಿಗೆ ಬಣ್ಣ ಹಚ್ಚಿರುವುದು ಅವರ ಹೆಗ್ಗಳಿಕೆ.

ಪ್ರಸ್ತುತ ಡ್ರಗ್ಸ್‌ ಜಾಲದೊಳಗೆ ಸಿಲುಕಿರುವ ಆರೋಪ ಎದುರಿಸುತ್ತಿರುವ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ, ಟೈಮ್‌ ನಿಯತಕಾಲಿಕೆಗೆ ಪುಟ್ಟದೊಂದು ಲೇಖನ ಕೂಡ ಬರೆದಿದ್ದಾರೆ. ಇದರಲ್ಲಿ ಅವರು ಆಯುಷ್ಮಾನ್‌ ಖುರಾನ ಅವರ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿರುವುದು ವಿಶೇಷ.

‘ವಿಕ್ಕಿ ಡೋನರ್‌ ಚಿತ್ರದ ಮೂಲಕ ವೃತ್ತಿಬದುಕು ಆರಂಭಿಸಿದ ಆಯುಷ್ಮಾನ್‌ ಈಗ ಮನರಂಜನಾ ಕ್ಷೇತ್ರದ ಭಾಗವಾಗಿದ್ದಾರೆ. ಪ್ರೇಕ್ಷಕರಿಗೆ ಮನರಂಜನೆ ನೀಡಲು ಹಲವು ವರ್ಷಗಳಿಂದ ಅವಿರತವಾಗಿ ದುಡಿಯುತ್ತಿದ್ದಾರೆ. ವಿಭಿನ್ನ ಪಾತ್ರಗಳು ಮತ್ತು ಉತ್ತಮ ಸಿನಿಮಾಗಳ ಮೂಲಕ ಜನರಿಗೆ ಹತ್ತಿರವಾಗಿದ್ದಾರೆ. ಪ್ರಸ್ತುತ ಹೀರೊ ಪ್ರಧಾನ ಚಿತ್ರಗಳು ಒಂದೇ ಮಾದರಿಯ ಏಕತಾನತೆ ಸೃಷ್ಟಿಸುತ್ತಿವೆ. ಈ ನಡುವೆಯೂ ಆಯುಷ್ಮಾನ್‌ ಖುರಾನ ಸವಾಲಿನ ಪಾತ್ರಗಳ ಮೂಲಕ ಈ ಸಿದ್ಧಸೂತ್ರವನ್ನು ಮುರಿಯುತ್ತಿದ್ದಾರೆ’ ಎಂದು ಬಣ್ಣಿಸಿದ್ದಾರೆ ದೀಪಿಕಾ ಪಡುಕೋಣೆ.

‘ಈ ಗೌರವಕ್ಕೆ ಪಾತ್ರನಾಗಿರುವುದಕ್ಕೆ ನನಗೆ ಖುಷಿಯಾಗುತ್ತಿದೆ. ಸಿನಿಮಾಗಳ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗೆ ಶ್ರಮಿಸುವುದಷ್ಟೇ ನನ್ನ ಗುರಿ. ಸಿನಿಮಾಕ್ಕೆ ಜನರು ಮತ್ತು ಸಮಾಜವನ್ನು ಬದಲಾಯಿಸುವ ಶಕ್ತಿಯಿದೆ ಎಂದು ನಂಬಿದ್ದೇನೆ. ಒಳ್ಳೆಯ ಕಂಟೆಂಟ್‌ಗಳ ಆಯ್ಕೆಯ ಮೂಲಕ ನನ್ನ ದೇಶ ಮತ್ತು ಜನರಿಗೆ ಮನರಂಜನೆ ನೀಡಲು ಸಾಧ್ಯವಾಗಿದೆ’ ಎಂದು ಆಯುಷ್ಮಾನ್‌ ಖುರಾನ ಪ್ರತಿಕ್ರಿಯಿಸಿದ್ದಾರೆ.

ಪ್ರಯೋಗಕ್ಕೆ ಒಗ್ಗಿಕೊಂಡ ನಟ

ಪ್ರಯೋಗಾತ್ಮಕ ಪಾತ್ರಗಳಿಗೆ ಜೀವ ತುಂಬುದರಲ್ಲಿ ಆಯುಷ್ಮಾನ್‌ ಎತ್ತಿದ ಕೈ. ಕಿರುತೆರೆಯಲ್ಲಿ ಭವಿಷ್ಯದ ಹುಡುಕಾಟ ನಡೆಸಿದ್ದ ಅವರಿಗೆ ಬಾಲಿವುಡ್‌ನಲ್ಲಿ ಭದ್ರನೆಲೆ ಒದಗಿಸಿದ್ದು ‘ವಿಕ್ಕಿ ಡೋನರ್’ ಚಿತ್ರ. ಇದು ತೆರೆಕಂಡಿದ್ದು 2012ರಲ್ಲಿ. ಇದರಲ್ಲಿನ ವೀರ್ಯ ದಾನ ಮಾಡುವ ಯುವಕನ ಪಾತ್ರ ಪ್ರೇಕ್ಷಕರ ಮನ ಸೆಳೆದಿತ್ತು.

2013ರಲ್ಲಿ ರೋಹನ್ ಸಿಪ್ಪಿ ನಿರ್ದೇಶಿಸಿದ ‘ನೌಟಂಕಿ ಸಾಲಾ’, 2014ರಲ್ಲಿ ನೂಪುರ್ ಆಸ್ತಾನಾ ಆ್ಯಕ್ಷನ್‌ ಕಟ್‌ ಹೇಳಿದ ‘ಬೇವಕೂಫಿಯಾನ್’ ಸಿನಿಮಾದಲ್ಲೂ ಆಯುಷ್ಮಾನ್ ಅವರದು ಮಾಗಿದ ನಟನೆ. ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿದ್ದು ಶರತ್ ಕಠಾರಿಯಾ ನಿರ್ದೇಶಿಸಿದ ‘ಧಮ್ ಲಗಾ ಕೆ ಹೈಸಾ’ ಚಿತ್ರ. ಇದು ತೆರೆಕಂಡಿದ್ದು 2015ರಲ್ಲಿ.

2017ರಲ್ಲಿ ಅಶ್ವಿನಿ ಅಯ್ಯರ್ ತಿವಾರಿ ನಿರ್ದೇಶನದ ‘ಬರೇಲಿ ಕಿ ಬರ್ಫಿ’, 2017ರಲ್ಲಿ ಆರ್.ಎಸ್. ಪ್ರಸನ್ನ ಆ್ಯಕ್ಷನ್‌ ಕಟ್‌ ಹೇಳಿದ ‘ಶುಭ ಮಂಗಲ್ ಸಾವಧಾನ್’, 2018ರಲ್ಲಿ ಅಮಿತ್ ರವೀಂದ್ರನಾಥ್ ನಿರ್ದೇಶಿಸಿದ ‘ಬದಾಯಿ ಹೊ’ ಸಿನಿಮಾಗಳಲ್ಲಿ ನಟಿಸುವ ಮೂಲಕ ತಾನು ಹಾಸ್ಯಪಾತ್ರಗಳಿಗೂ ಸೈ ಎನ್ನುವುದನ್ನು ಆಯುಷ್ಮಾನ್ ಸಾಬೀತುಪಡಿಸಿದರು.

ಎರಡು ವರ್ಷದ ಹಿಂದೆ ತೆರೆಕಂಡ ಶ್ರೀರಾಮ್ ರಾಘವನ್ ನಿರ್ದೇಶಿಸಿದ ‘ಅಂಧಾದುನ್‌’ ಚಿತ್ರ ಆಯುಷ್ಮಾನ್‌ ವೃತ್ತಿಬದುಕಿಗೆ ಹೊಸದೊಂದು ತಿರುವು ನೀಡಿತು. ಇದರಲ್ಲಿ ಅವರದ್ದು ಅಂಧನ ಪಾತ್ರ. ಯುವಕನೊಬ್ಬ ಅಂಧನಂತೆ ನಟಿಸುತ್ತಲೇ ತನ್ನ ಸುತ್ತಲೂ ನಡೆಯುವ ಅಪರಾಧ ಕೃತ್ಯಗಳಿಗೆ ಸಾಕ್ಷಿಯಾಗುತ್ತಾ ಕೊನೆಗೆ ತಾನೂ ಆ ಷಡ್ಯಂತ್ರಕ್ಕೆ ಸಿಲುಕುವುದೇ ಇದರ ಕಥಾಹಂದರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT