ಶನಿವಾರ, ಅಕ್ಟೋಬರ್ 23, 2021
20 °C

ಕ್ರಿಸ್‌ಮಸ್‌ಗೆ ಬರ್ತಾನೆ ‘ಬಡವ ರಾಸ್ಕಲ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಲು ಸಾಲು ಚಿತ್ರಗಳಲ್ಲಿ ಬಣ್ಣಹಚ್ಚುತ್ತಿರುವ ನಟ ಡಾಲಿ ಧನಂಜಯ್‌ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. 2021ರಲ್ಲಿ ‘ಪೊಗರು’, ‘ಯುವರತ್ನ’ ಬಳಿಕ ಇದೇ 14ರಂದು ತೆರೆಕಾಣುತ್ತಿರುವ ನಟ ದುನಿಯಾ ವಿಜಯ್‌ ನಟಿಸಿ, ನಿರ್ದೇಶಿಸಿರುವ ‘ಸಲಗ’ದಲ್ಲೂ ‘ಸಾಮ್ರಾಟ್‌’ ಎಂಬ ಖಡಕ್‌ ಪೊಲೀಸ್‌ ಅಧಿಕಾರಿ ಪಾತ್ರಕ್ಕೆ ಧನಂಜಯ್‌ ಬಣ್ಣಹಚ್ಚಿದ್ದಾರೆ. 

ಇದೀಗ ಧನಂಜಯ್‌ ಅವರೇ ತಮ್ಮ ಡಾಲಿ ಪಿಕ್ಚರ್ಸ್ ಲಾಂಛನದಡಿ ನಿರ್ಮಾಣ ಮಾಡಿರುವ ‘ಬಡವ ರಾಸ್ಕಲ್‌’ ಡಿ.24ರಂದು ತೆರೆಕಾಣಲಿದೆ. ಸೆ.24ರಂದೇ ಈ ಚಿತ್ರ ತೆರೆಕಾಣಬೇಕಿತ್ತು. ಆದರೆ ಚಿತ್ರಮಂದಿರಗಳಲ್ಲಿ ಶೇ 100 ಆಸನ ಭರ್ತಿಗೆ ಸರ್ಕಾರ ಅವಕಾಶ ನೀಡದೇ ಇದ್ದ ಕಾರಣ ಚಿತ್ರ ಬಿಡುಗಡೆ ಮುಂದೂಡಲಾಗಿತ್ತು. ವಾಸುಕಿ ವೈಭವ್‌ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಧನಂಜಯ್‌ ಅವರೇ ಸಾಹಿತ್ಯ ಬರೆದಿರುವ ಚಿತ್ರದ ಹಾಡು ‘ಉಡುಪಿ ಹೋಟೆಲ್ಲು’ ಈಗಾಗಲೇ ಹಿಟ್‌ ಆಗಿದ್ದು, ಧನಂಜಯ್‌–ಅಮೃತ ಅಯ್ಯಂಗಾರ್ ಜೋಡಿ ಪ್ರೇಕ್ಷಕರನ್ನು ಸೆಳೆದಿದೆ. 

ಚಿತ್ರದಲ್ಲಿ ಬಹುತೇಕ ಕಲಾವಿದರು ಧನಂಜಯ್‌ ಅವರ ರಂಗಭೂಮಿ, ಕಾಲೇಜು ಗೆಳೆಯರೇ ಆಗಿದ್ದು, ಶಂಕರ್ ಗುರು ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಶಂಕರ್ ಗುರು ಅವರೇ ಬರೆದಿದ್ದು, ಇದು ಇವರ ನಿರ್ದೇಶನದ ಚೊಚ್ಚಲ ಚಿತ್ರ. ಮಧ್ಯಮ ವರ್ಗದ ಜನರ ದಿನನಿತ್ಯದ ಜೀವನದಲ್ಲಿ ನಡೆಯುವ ಘಟನೆಗಳೆ ಈ ಚಿತ್ರದ ಕಥಾಹಂದರ. ರಂಗಾಯಣ ರಘು, ತಾರಾ, ಸ್ಪರ್ಶ ಚಿತ್ರ ಖ್ಯಾತಿಯ ರೇಖಾ, ನಾಗಭೂಷಣ್, ಪೂರ್ಣಚಂದ್ರ ಪ್ರಮುಖ ತಾರಾಬಳಗದಲ್ಲಿದ್ದಾರೆ‌.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.