ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಲುವಿನ ಗಣಿ ಬನಾರಸ್‌ ಧನಿ: ನಟಿ ಸೋನಲ್‌ ಮೊಂತೆರೋ ಜೊತೆ ಸಂದರ್ಶನ

Last Updated 4 ನವೆಂಬರ್ 2022, 0:30 IST
ಅಕ್ಷರ ಗಾತ್ರ

ಕೋಸ್ಟಲ್‌ವುಡ್‌ನಿಂದ ಸ್ಯಾಂಡಲ್‌ವುಡ್‌ಗೆ ಹೆಜ್ಜೆ ಇಟ್ಟ ಸೋನಲ್‌ ಮೊಂತೆರೋ, ಸದ್ಯ ಚಂದನವನದಲ್ಲಿ ಹೆಚ್ಚಿನ ಸಿನಿಮಾ ಬ್ಯಾಂಕ್‌ ಹೊಂದಿದ ನಟಿಯರ ಪೈಕಿ ಮುಂಚೂಣಿಯಲ್ಲಿದ್ದಾರೆ. ಸದ್ಯ ‘ಬನಾರಸ್‌’ ಗುಂಗಿನಲ್ಲಿರೋ ಇವರ ಜೊತೆಗೆ ಮಾತುಕತೆಯ ಸುತ್ತು...

–––

ಸೋನಲ್‌ ಸಿನಿಮಾ ಬ್ಯಾಂಕ್‌ ತಿಂಗಳುರುಳಿದಂತೆ ಹಿಗ್ಗುತ್ತಿದೆ ಅಲ್ಲವೇ?

ಹೀಗೊಮ್ಮೆ ಹಿಂದಿರುಗಿ ನೋಡಿದಾಗ ನನಗೂ ಹೆಮ್ಮೆ ಆಗುತ್ತದೆ. ಕೋಸ್ಟಲ್‌ವುಡ್‌ನಿಂದ(ತುಳು ಸಿನಿಮಾ) ನನ್ನ ಸಿನಿಪಯಣ ಆರಂಭವಾಗಿದ್ದೇ ಆಕಸ್ಮಿಕ. ‘ಎಕ್ಕಸಕ’ ಸಿನಿಮಾ 100 ದಿನ ಓಡಿದಾಗ, ನನ್ನ ಸಿನಿಜೀವನವೇ ಬದಲಾಯಿತು. ಅಲ್ಲಿಂದೀಚೆಗೆ ಒಂದಲ್ಲಾ ಒಂದು ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಪ್ರತಿಯೊಬ್ಬ ಕಲಾವಿದನ ಬದುಕಿನಲ್ಲಿ ಒಂದು ಬ್ರೇಕ್‌ ಎನ್ನುವುದು ಇರುತ್ತದೆ. ಅದು ಸಿಕ್ಕಿದ್ದು ಯೋಗರಾಜ್‌ ಭಟ್‌ ನಿರ್ದೇಶನದ ‘ಪಂಚತಂತ್ರ’ ಸಿನಿಮಾದಲ್ಲಿ. ಗಾಂಧಿನಗರಕ್ಕೆ ಸೋನಲ್‌ ಯಾರೆಂಬುದು ತಿಳಿಯಿತು. ನನ್ನ ಸಿನಿಗ್ರಾಫ್‌ಗೆ ಕಿಕ್‌ಸ್ಟಾರ್ಟ್‌ ನೀಡಿದ ಸಿನಿಮಾ ಅದು. ತರುಣ್‌ ಸುಧೀರ್‌ ನಿರ್ದೇಶನದ ‘ರಾಬರ್ಟ್‌’ ಸಿನಿಪಯಣಕ್ಕೆ ಅತಿ ದೊಡ್ಡ ತಿರುವು ನೀಡಿತು. ನನ್ನ ವೃತ್ತಿ ಬದುಕು ರಾಕೆಟ್‌ನಂತೆ ಏರಿತು. ಒಳ್ಳೊಳ್ಳೆಯ ಕಥೆಯುಳ್ಳ ಸಿನಿಮಾಗಳ ಆಫರ್‌ಗಳು ಬಂದವು. ‘ಬನಾರಸ್‌’ ಇದರಲ್ಲೊಂದು.

ಸದ್ಯ ನನ್ನ ಕೈಯಲ್ಲಿ ವಿನೋದ್‌ ಪ್ರಭಾಕರ್‌ ನಟನೆಯ ‘ಮಾದೇವ’, ವಸಿಷ್ಠ ಸಿಂಹ ಅವರ ಜೊತೆಗೆ ಒಂದು ಸಿನಿಮಾ, ಡಾರ್ಲಿಂಗ್‌ ಕೃಷ್ಣ ಅವರ ಜೊತೆಗಿನ ‘ಶುಗರ್‌ ಫ್ಯಾಕ್ಟರಿ’, ಉಪೇಂದ್ರ ಅವರ ಜೊತೆಗೆ ‘ಬುದ್ಧಿವಂತ–2’, ಯೋಗರಾಜ್‌ ಭಟ್‌ ನಿರ್ದೇಶನದ ‘ಗರಡಿ’ ಹಾಗೂ ವಿನಯ್‌ ಚಂದ್ರ ನಿರ್ದೇಶನದ ‘ಭಾರತದ ಕೋಗಿಲೆ’ ಎಂದೇ ಜನಪ್ರಿಯರಾಗಿದ್ದ ಸರೋಜಿನಿ ನಾಯ್ಡು ಅವರ ಜೀವನಾಧಾರಿತ ಸಿನಿಮಾವಿದೆ. ಹರಿಪ್ರಸಾದ್‌ ಅವರ ನಿರ್ದೇಶನದ ‘ಪದವಿಪೂರ್ವ’, ಅನೂಪ್ ಆಂಟೋನಿ ನಿರ್ದೇಶನದ ‘ಭಗವಾನ್‌ ಶ್ರೀ ಕೃಷ್ಣ ಪರಮಾತ್ಮ’ವೂ ಈ ಪಟ್ಟಿಯಲ್ಲಿದೆ.

‘ಗರಡಿ’ ಪ್ರವೇಶ ಅನಿರೀಕ್ಷಿತವಾಗಿತ್ತಲ್ಲವೇ?

ಖಂಡಿತವಾಗಿಯೂ. ಯೋಗರಾಜ್‌ ಭಟ್‌ ಅವರು ತಮ್ಮ ಸಿನಿಮಾಗಳಲ್ಲಿ ಹೊಸ ನಟಿಯನ್ನೇ ಕಾಸ್ಟ್‌ ಮಾಡುತ್ತಾರೆ. ಹೀಗಿದ್ದಾಗ, ಅವರ ಸಿನಿಮಾದಲ್ಲಿ ಎರಡನೇ ಅವಕಾಶ ಸಿಕ್ಕಿರುವುದು ನನ್ನ ಪುಣ್ಯ. ನನ್ನ ಸಿನಿಪಯಣದಲ್ಲಿ ನಿರೀಕ್ಷೆಯನ್ನು ಇಟ್ಟುಕೊಂಡು ನಾನು ಕೆಲಸ ಮಾಡಿಲ್ಲ. ಆಗಿರುವುದೆಲ್ಲ, ಸಿಕ್ಕಿರುವ ಅವಕಾಶಗಳೆಲ್ಲ ಹರಿಯುವ ನದಿಯಂತೆ ಬಂದಿವೆ. ನಾಳೆಯನ್ನು ನಂಬಿಕೊಂಡು ಬದುಕಿಲ್ಲ.

l‘ಬನಾರಸ್‌’ ಅನುಭವ...?

ಈ ಸಿನಿಮಾ ನನಗೆ ಬಹಳ ವಿಶೇಷ ವಾದದ್ದು. ಏಕೆಂದರೆ ಇದು ನನ್ನ ಮೊದಲ ಪ್ಯಾನ್‌ ಇಂಡಿಯಾ ಸಿನಿಮಾ. ಜಯತೀರ್ಥ ಅವರ ಸಿನಿಮಾ ಒಂದು ರೀತಿ ದೃಶ್ಯಕಾವ್ಯವಿದ್ದಂತೆ. ಚಂದನವನಕ್ಕೆ ಕಾಲಿಟ್ಟ ಸಂದರ್ಭದಲ್ಲಿ, ನನಗೆ ಯೋಗರಾಜ್‌ ಭಟ್‌, ತರುಣ್‌ ಸುಧೀರ್‌ ಹಾಗೂ ಜಯತೀರ್ಥ ಅವರ ಜೊತೆ ಕೆಲಸ ಮಾಡಬೇಕು ಎನ್ನುವ ಆಸೆ ಇತ್ತು. ಈ ಮೂರೂ ಆಸೆಯೂ ಈಡೇರಿದೆ. ಜಯತೀರ್ಥ ಅವರು ಸಿನಿಮಾವನ್ನು ನೋಡುವ ರೀತಿಯೇ ಅದ್ಭುತ. ಅವರ ಸಿನಿಮಾಗಳಲ್ಲಿ ನಟಿಗೆ ಹೆಚ್ಚಿನ ಪ್ರಾಧಾನ್ಯ ಇದೆ. ‘ಬನಾರಸ್‌’ ಚಿತ್ರದಲ್ಲೂ ಕಥೆ ಎತ್ತ ಸಾಗಿದರೂ, ನನ್ನ ಪಾತ್ರವಾದ ‘ಧನಿ’ ಸುತ್ತ ಸುತ್ತುತ್ತದೆ. ಇಲ್ಲಿ ಪ್ರತಿಯೊಂದು ದೃಶ್ಯವೂ ಕಲಾಕೃತಿಯಂತಿದೆ. ಬನಾರಸ್‌ನ ಎಲ್ಲ ಘಾಟ್‌ಗಳಲ್ಲೂ ಚಿತ್ರೀಕರಣ ಮಾಡಿದ್ದೇವೆ. ಇದನ್ನು ಅದ್ಭುತವಾಗಿ ತೋರಿಸಿದ್ದಾರೆ. ಜಯತೀರ್ಥ ಅವರ ಪ್ರತಿ ಸಿನಿಮಾದಲ್ಲೂ ಒಂದು ಜಾನಪದ ಸ್ಪರ್ಶ ಇರುತ್ತದೆ. ಅವರೊಬ್ಬ ಪರಿಪೂರ್ಣ ನಿರ್ದೇಶಕ.

‘ಬನಾರಸ್‌’ ಒಂದು ಇಂಟೆನ್ಸ್‌ ಲವ್‌ಸ್ಟೋರಿ. ಅದಕ್ಕಿಂತ ಹೆಚ್ಚಾಗಿ ಇದೊಂದು ವಿಭಿನ್ನ ಜಾನರ್‌ನ ಸಿನಿಮಾ. ಪ್ರೇಮಕಥೆ, ಟೈಂ ಟ್ರಾವೆಲ್‌, ಸೈ–ಫೈ, ಥ್ರಿಲ್‌, ಸಸ್ಪೆನ್ಸ್‌ ಹೀಗೆ ಎಲ್ಲ ಜಾನರ್‌ನ ಮಿಶ್ರಣ ಈ ಸಿನಿಮಾ.

ಝೈದ್‌ ಖಾನ್‌ ಅವರನ್ನು ನಟನಾಗಿ ಕಂಡ ಬಗೆ...

ರಾಜಕೀಯ ಕುಟುಂಬದ ವ್ಯಕ್ತಿ, ಶೋಆಫ್‌ ಇರುತ್ತೆ ಎಂದೆಲ್ಲಾ ಝೈದ್‌ ಅವರ ಬಗ್ಗೆ ಆರಂಭದಲ್ಲಿ ಅಂದುಕೊಂಡಿದ್ದೆ. ಅತ್ತ ಝೈದ್‌ ಕೂಡಾ ನನ್ನ ಬಗ್ಗೆ ಈ ರೀತಿಯೇ ಅಂದುಕೊಂಡಿದ್ದರು. ‘ಸಿನಿಮಾಗಳನ್ನು ಮಾಡಿದ್ದಾಳೆ, ಇವಳಿಗೆ ಆ್ಯಟಿಟ್ಯೂಡ್‌ ಇರುತ್ತೆ’ ಎಂದು ಅವರು ಅಂದುಕೊಂಡಿದ್ದರು. ಇಬ್ಬರ ತಲೆಯಲ್ಲೂ ನಕಾರಾತ್ಮಕ ಅಭಿಪ್ರಾಯಗಳೇ ತುಂಬಿದ್ದವು. ಈ ಪ್ರಶ್ನೆಗಳು ಬಗೆಹರಿದಿದ್ದು, ಬನಾರಸ್‌ ಸೆಟ್‌ನಲ್ಲಿ. ಅವರೊಬ್ಬ ಅತ್ಯುತ್ತಮ ಕಲಾವಿದ. ಯಾವ ಹಮ್ಮುಬಿಮ್ಮು ಇಲ್ಲದ ವ್ಯಕ್ತಿ. ಅನುಪಮ್‌ ಖೇರ್‌
ನಟನಾ ಶಾಲೆಯಲ್ಲಿ ತರಬೇತಿ ಪಡೆದು ನಟನೆಗೆ ಹೆಜ್ಜೆ ಇಟ್ಟವರು ಅವರು. ಅವರ ಅಭಿನಯ ಮೊದಲ ಸಿನಿಮಾದಂತಿಲ್ಲ. ಉರ್ದು ಮಿಶ್ರಿತ ಕನ್ನಡ ಸ್ಲ್ಯಾಂಗ್‌ ಸಮಸ್ಯೆ ಎದುರಾಗುತ್ತಿತ್ತು. ಇದನ್ನೂ ಅವರು ಸರಿಪಡಿಸಿಕೊಂಡಿದ್ದರು.

ಬನಾರಸ್‌ ಸ್ಥಳದಲ್ಲಿನ ಶೂಟಿಂಗ್‌ ಅನುಭವದ ಬಗ್ಗೆ..

ಬನಾರಸ್‌ ಮಣ್ಣಿನಲ್ಲಿ ಒಂದು ಶಕ್ತಿಯಿದೆ. ಅಲ್ಲಿ ಹೆಜ್ಜೆ ಇಟ್ಟ ಕೂಡಲೇ ಧರ್ಮ ಎನ್ನುವುದನ್ನು ಮರೆತು ಬಿಡುತ್ತೇವೆ. ಮನಸ್ಸಿನೊಳಗೆ ಏನೇ ಪ್ರಕ್ಷುಬ್ಧ ಸ್ಥಿತಿ ಇದ್ದರೂ ಅಲ್ಲಿನ ವಾತಾವರಣವೇ ನಿಮ್ಮನ್ನು ಶಾಂತಿಯತ್ತ ಕೊಂಡೊಯ್ಯುತ್ತದೆ. 45 ದಿನ ಬನಾರಸ್‌ನಲ್ಲಿ ಚಿತ್ರೀಕರಿಸಿದ್ದೇವೆ. ಅದೊಂದು ಪುಣ್ಯಕ್ಷೇತ್ರ. ಅಲ್ಲಿಗೆ ಹೋದರೆ ಖಂಡಿತವಾಗಿಯೂ ನೀವು ಬದಲಾಗಿ ಹೊರಲೋಕಕ್ಕೆ ಹೆಜ್ಜೆ ಇಡುತ್ತೀರಿ. ವಯಸ್ಸಾದ ಬಳಿಕ ಇಂಥ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಬೇಕು ಎನ್ನುತ್ತಾರೆ. ಆದರೆ ನನ್ನ ಪ್ರಕಾರ ಯುವಜನತೆ ಇಲ್ಲಿಗೆ ಭೇಟಿ ಕೊಡಬೇಕು. ಜೀವನವನ್ನು ಅದ್ಭುತವಾಗಿ, ಕಟ್ಟುವ ವಾತಾವರಣ ಅಲ್ಲಿದೆ. ದ್ವೇಷ, ಕೋಪ ಬಿಟ್ಟು ಬದುಕೋಣ ಎನ್ನುವ ವೈಬ್ರೇಷನ್‌ ಅಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT