ಭಾನುವಾರ, ಜುಲೈ 3, 2022
23 °C

‘ಬಂಗಾರ’ಕ್ಕೆ 50: ಕನ್ನಡ ಸಿನಿಮಾ ಉದ್ಯಾನದ ಚಿನ್ನದ ಮಲ್ಲಿಗೆಯ ಹೊಳಪು

ರಘುನಾಥ ಚ.ಹ. Updated:

ಅಕ್ಷರ ಗಾತ್ರ : | |

ಡಾ.ರಾಜ್‌ಕುಮಾರ್‌

‘ಬಂಗಾರದ ಮನುಷ್ಯ’ ಚಿತ್ರಕ್ಕೀಗ ಐವತ್ತು ತುಂಬಿದ ಸಂಭ್ರಮ. ಕನ್ನಡ ಸಿನಿಮಾ ಉದ್ಯಾನದ ಚಿನ್ನದ ಮಲ್ಲಿಗೆಯ ಹೊಳಪು ಮತ್ತು ಪರಿಮಳ ಈಗಲೂ ತಾಜಾ.

ಐವತ್ತು ವರ್ಷಗಳ ಹಿಂದೆ, 1972ರ ಮಾರ್ಚ್‌ 31ರಂದು ತೆರೆಕಂಡ ‘ಬಂಗಾರದ ಮನುಷ್ಯ’ ಸಿನಿಮಾದ ನೆನಪುಗಳನ್ನು ಮೆಲುಕುಹಾಕುವುದೂ ಉತ್ಕರ್ಷದ ದಿನಗಳ ಬಂಗಾರದ ಗಣಿಯ ನೆನಪುಗಳನ್ನು ಹೆಕ್ಕುವುದೂ ಭಿನ್ನವೇನಲ್ಲ. ‘ಬಂಗಾರದ ಮನುಷ್ಯ’ ಹಲವು ಕಾರಣಗಳಿಂದ ಅಪರಂಜಿ ಚಿನ್ನ.

‘ಬಂಗಾರದ ಮನುಷ್ಯ’ ಸಿನಿಮಾ ರೂಪುಗೊಂಡಿದ್ದೇ ಒಂದು ಸ್ವಾರಸ್ಯಕರ ಕಥೆ. ಟಿ.ಕೆ. ರಾಮರಾವ್‌ರ ಕಾದಂಬರಿ ಹಸ್ತಪ್ರತಿ ರೂಪದಲ್ಲಿದ್ದಾಗಲೇ ‘ಪ್ರಜಾಮತ’ದ ಸಂಪಾದಕ ದ್ವಾರಕಾನಾಥ್‌ರ ಮೂಲಕ ನಿರ್ದೇಶಕ ಸಿದ್ದಲಿಂಗಯ್ಯನವರಿಗೆ ತಲುಪಿತ್ತು. ಕಾದಂಬರಿ ಮೆಚ್ಚಿಕೊಂಡ ಅವರು, ಹಲವು ನಿರ್ಮಾಪಕರನ್ನು ಸಂಪರ್ಕಿಸಿದರೂ ಯಾರೊಬ್ಬರೂ ಸಿನಿಮಾ ನಿರ್ಮಾಣಕ್ಕೆ ಮುಂದಾಗಲಿಲ್ಲ. ಹಾಗೆ ಕೈಚೆಲ್ಲಿದವರಲ್ಲಿ ಕೆ.ಸಿ.ಎನ್‌. ಗೌಡರೂ ಒಬ್ಬರು. ಮುಂದೆ ಕಾದಂಬರಿ ಪುಸ್ತಕರೂಪದಲ್ಲಿ ಬಂತು. ಒಂದು ದಿನ, ‘ಇದು ಚೆನ್ನಾಗಿದೆ ನೋಡಿ’ ಎಂದು ಕೆ.ಸಿ.ಎನ್. ಗೌಡರು ಪುಸ್ತಕ ಹಿಡಿದುಕೊಂಡು ಬಂದರು. ‘ಇದರ ಬಗ್ಗೆ ಈ ಮೊದಲೇ ನಿಮ್ಮ ಬಳಿ ಹೇಳಿದ್ದೆ. ನೀವು ಒಪ್ಪಿರಲಿಲ್ಲ’ ಎಂದು ಸಿದ್ಧಲಿಂಗಯ್ಯ ಗೊಣಗಿದರು. ಗೌಡರು ಪ್ರತಿಕ್ರಿಯಿಸಿದ್ದು: ‘ಈಗ ಸಿನಿಮಾ ಮಾಡೋಣ.’


ನಿರ್ದೇಶಕ ಸಿದ್ದಲಿಂಗಯ್ಯ

ಕೆ.ಸಿ.ಎನ್. ಗೌಡರೊಂದಿಗೆ ಗೋಪಾಲ್ ಹಾಗೂ ಆರ್. ಲಕ್ಷ್ಮಣ್ ‘ಬಂಗಾರದ ಮನುಷ್ಯ’ ಚಿತ್ರ ನಿರ್ಮಾಣದಲ್ಲಿ ಕೈಜೋಡಿಸಿದ್ದರು. ಆ ಚಿತ್ರಕ್ಕೆ ಆ ಕಾಲಕ್ಕೆ ಖರ್ಚಾದ ಮೊತ್ತ ಹನ್ನೆರಡೂವರೆ ಲಕ್ಷ (ಹತ್ತೊಂಬತ್ತು ಪ್ರಿಂಟ್) ರೂಪಾಯಿ. ಸಿನಿಮಾ ತೆರೆಕಂಡಾಗ ಒಳ್ಳೆಯ ಆರಂಭವೇನೂ ದೊರೆಯಲಿಲ್ಲ. ಎರಡು ದಿನ ಹೌಸ್‌ಫುಲ್ ಬೋರ್ಡ್‌ ಬೀಳಲಿಲ್ಲ. ಸಿನಿಮಾ ನೋಡಿದ ನಿರ್ದೇಶಕ ಪುಟ್ಟಣ್ಣ ಕಣಗಾಲ್‌, ‘ಗೌಡರನ್ನು ದೇವರೇ ಕಾಪಾಡಬೇಕು!’ ಎಂದು ಉದ್ಗರಿಸಿದ್ದರು. ‘ಸಿದ್ಧಲಿಂಗಯ್ಯ ಗೌಡರನ್ನು ಮುಳುಗಿಸಿದ’ ಎಂದು ಗಾಂಧಿನಗರವೂ ಅಡಿಗೆರೆ ಎಳೆಯಿತು. ಪೇಚುಮೋರೆ ಹಾಕಿಕೊಂಡ ಗೌಡರಿಗೆ ಸಿದ್ಧಲಿಂಗಯ್ಯನವರು ಹೇಳಿದ್ದು: ‘ಸ್ವಾಮಿ, ನೀವು ದುಡ್ಡು ಗೋಣಿಚೀಲದಲ್ಲಿ ಸುರಿಯಲಿಲ್ಲ. ನೋಟು ನೋಟನ್ನೂ ಎಣಿಸಿಕೊಟ್ಟಿದ್ದೀರಿ. ಆ ತಾಳ್ಮೆ ಈಗಲೂ ಇರಲಿ.’ ಆ ಮಾತನ್ನು ನಿಜಗೊಳಿಸುವಂತೆ ಮೂರನೇ ದಿನ ಹೌಸ್‌ಫುಲ್ ಬೋರ್ಡ್‌ ಬೆಳಕುಕಂಡಿತು! ‘ಬಂಗಾರದ ಮನುಷ್ಯ’ ಬಿಡುಗಡೆಯ ದಿನ ಪತ್ರಕರ್ತರಿಗೆ ಸಿನಿಮಾ ತೋರಿಸುವುದಕ್ಕೂ ಹಿಂಜರಿದಿದ್ದ ನಿರ್ಮಾಪಕರು, ಮೂರು ದಿನಗಳ ಕಲೆಕ್ಷನ್ ನೋಡಿದ ನಂತರವೇ ಮಾಧ್ಯಮದವರಿಗೆ ಸಿನಿಮಾ ತೋರಿಸಿದರು. ನಂತರ‍ದ್ದು 104 ವಾರಗಳ ದಾಖಲೆ ಪ್ರದರ್ಶನ.

ವಿದ್ಯಾವಂತ ತರುಣನೊಬ್ಬ ಬಂಜರು ಭೂಮಿಗೆ ಬೆವರು ಬಸಿದು ಕೃಷಿ ಮಾಡುವ ಕಥೆ ‘ಬಂಗಾರದ ಮನುಷ್ಯ’ ಚಿತ್ರದ್ದು. ಕಥಾನಾಯಕನ ಕೃಷಿ ಸಾಧನೆಯ ಜೊತೆಗೆ ಪ್ರೇಮದ ಕಥೆ, ತ್ಯಾಗದ ಉದಾತ್ತತೆಯೂ ಚಿತ್ರದಲ್ಲಿದೆ. ‘ಆಗದು ಎಂದು ಕೈಲಾಗದು ಎಂದು ಕೈ ಕಟ್ಟಿ ಕುಳಿತರೆ / ಸಾಗದು ಕೆಲಸವು ಮುಂದೆ...’, ‘ದುಡಿಮೆಯ ನಂಬಿ ಬದುಕು / ಅದರಲೆ ದೇವರ ಹುಡುಕು...’ ಎನ್ನುವ ಸಿನಿಮಾದ ಸ್ಫೂರ್ತಿಗೀತದಿಂದ ಪ್ರೇರಿತರಾಗಿ, ಅನೇಕ ಕೃಷಿ ಪದವೀಧರರು ನೇಗಿಲು ಹಿಡಿದಿದ್ದರು. ತಮ್ಮ ಎಸ್ಟೇಟ್‌ಗಳಿಗೆ ‘ಬಂಗಾರದ ಮನುಷ್ಯ ಎಸ್ಟೇಟ್’ ಎಂದು ನಾಮಕರಣ ಮಾಡಿದವರೂ ಇದ್ದರು.

‘ಬಂಗಾರದ ಮನುಷ್ಯ’ ಸಿನಿಮಾದ ಅದ್ಭುತ ಯಶಸ್ಸಿಗೆ ಕಾರಣವೇನು? ‘ಬಂಗಾರದ ಮನುಷ್ಯ’ ಚಿತ್ರದ ನಾಯಕ ರಾಜೀವನ ಪಾತ್ರ ಅನೇಕ ಸಹೃದಯರಿಗೆ ತಮ್ಮದೇ ಪಾತ್ರ ಅನ್ನಿಸಿದ್ದು ಸಿನಿಮಾದ ಯಶಸ್ಸಿಗೆ ಪ್ರಮುಖ ಕಾರಣ. ಮತ್ತೊಂದು ಕಾರಣ, ಚಿತ್ರತಂಡದ ಬದ್ಧತೆ. ಸಿನಿಮಾದ ರಜತ ಮಹೋತ್ಸವ ಸಂದರ್ಭದಲ್ಲಿ ಗೌಡರು – ‘ಒಂದು ಗುಲಗಂಜಿಯಷ್ಟು ಬಂಗಾರವನ್ನು ಪಡೆಯಲು ಗಣಿಯಲ್ಲಿ ಎಷ್ಟು ಪರಿಶ್ರಮ ಪಡುತ್ತಾರೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಅಷ್ಟೇ ಪರಿಶ್ರಮ ಬಂಗಾರದ ಮನುಷ್ಯ ಚಿತ್ರದ ಯಶಸ್ಸಿನ ಹಿಂದೆಯೂ ಇದೆ’ ಎಂದಿದ್ದರು. ಅವರ ಮಾತು ನಿಜ. ಸಿನಿಮಾದ ಆತ್ಮದಂತಿರುವ ಸಂಗೀತವನ್ನೇ ನೋಡಿ: ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್ ಕರ್ನಾಟಕದಾದ್ಯಂತ ಸಂಚರಿಸಿ ಸಂಗ್ರಹಿಸಿದ್ದ ಜನಪದ ಗೀತೆಗಳ ಪ್ರೇರಣೆಯನ್ನು ರಾಗ ಸಂಯೋಜನೆಗೆ ಬಳಸಿಕೊಂಡಿದ್ದರು. ಕಂಪೋಸಿಂಗ್‌ ಸಂದರ್ಭದಲ್ಲಿ ನಿರ್ದೇಶಕ, ಗೀತರಚನೆಕಾರರೊಂದಿಗೆ – ಚಿತ್ರದ ಹಂಚಿಕೆದಾರರು, ನಿರ್ಮಾಪಕರು, ನಾಯಕ ರಾಜ್ ಕುಮಾರ್, ನೃತ್ಯ ನಿರ್ದೇಶಕ ಉಡುಪಿ ಜಯರಾಂ ಹಾಗೂ ಛಾಯಾಗ್ರಾಹಕರೂ ಇರುತ್ತಿದ್ದರಂತೆ. ಹಾಡುಗಳ ಚಿತ್ರೀಕರಣಕ್ಕೆ ನಿರ್ದೇಶಕರು ಕ್ರೇನ್ ಬಯಸಿದಾಗ, ಗೌಡರು ಹೊಸ ಕ್ರೇನನ್ನೇ ಖರೀದಿಸಿದರಂತೆ.

‘ಬಂಗಾರದ ಮನುಷ್ಯ’ ತೆರೆಕಂಡು ಐವತ್ತು ವರ್ಷಗಳಾದವು. ಈ ಐದು ದಶಕಗಳಲ್ಲಿ ಕನ್ನಡದ ಬೆಳ್ಳಿತೊರೆಯಲ್ಲಿ ಸಾಕಷ್ಟು ನೀರು ಹರಿದಿದೆ. ಆದರೆ, ಮತ್ತೊಬ್ಬ ರಾಜೀವನನ್ನು ಸೃಷ್ಟಿಸುವುದು ಚಿತ್ರರಂಗಕ್ಕೆ ಸಾಧ್ಯವಾಗಿಲ್ಲ. ‘ಬಂಗಾರದ ಮನುಷ್ಯ’ ಯುಗದ ಸಿನಿಮಾ: ಕಥನ, ಕನ್ನಡತನ, ನಿರೂಪಣೆ, ಆಶಯ, ಯಶಸ್ಸು, ಸಾಮಾಜಿಕ ಪರಿಣಾಮ – ಎಲ್ಲ ದೃಷ್ಟಿಗಳಿಂದಲೂ ‘ಬಂಗಾರದ ಮನುಷ್ಯ’ನಿಗೆ ಪರ್ಯಾಯಗಳಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು