ಬೆಂಗಳೂರು: 14ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗುರುವಾರ ಮುಕ್ತಾಯಗೊಂಡಿದ್ದು, ಇಂಡೋನೇಷ್ಯಾದ ‘ಬಿಫೋರ್ ನೌ ಆಂಡ್ ದೆನ್’ ಹಾಗೂ ಇರಾನ್‌ನ ‘ಮದರ್‌ಲೆಸ್’ ಚಿತ್ರಗಳು ಏಷ್ಯನ್ ವಿಭಾಗದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಗಳಿಸಿವೆ.
14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ವಿಧಾನಸೌಧದ ಬಾಂಕ್ವೆಟ್ ಹಾಲ್‌ನಲ್ಲಿ ನಡೆಯಿತು. ಕನ್ನಡ ವಿಭಾಗದಲ್ಲಿ ಅತ್ಯುತ್ತಮ ಚಿತ್ರವಾಗಿ ‘ನಾನು ಕುಸುಮ’ ಪ್ರಶಸ್ತಿ ಗಳಿಸಿದರೆ, ‘ಹದಿನೇಳೆಂಟು’ ದ್ವಿತೀಯ ಹಾಗೂ ‘ಫೋಟೋ’ ತೃತೀಯ ಸ್ಥಾನವನ್ನು ಪಡೆದುಕೊಂಡಿವೆ.
ಏಷ್ಯನ್ ವಿಭಾಗದಲ್ಲಿ ಕನ್ನಡದ ‘ವಿರಾಟಪುರ ವಿರಾಗಿ’ ಮೂರನೇ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದು
ಕೊಂಡಿದ್ದು, ಚಿತ್ರಭಾರತಿ ಭಾರತೀಯ ಸಿನಿಮಾ ಸ್ಪರ್ಧಾ ವಿಭಾಗದಲ್ಲಿ ಕನ್ನಡದ ‘ಕೋಳಿ ಎಸರು’ ಅತ್ಯುತ್ತಮ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಪೋಷಕ ನಟ ದೊಡ್ಡಣ್ಣ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಯಿತು. ವಾರ್ತಾ ಇಲಾಖೆಯ ಆಯುಕ್ತ ಡಾ.ಪಿ.ಎಸ್.ಹರ್ಷ, ನಿರ್ದೇಶಕರಾದ ಡಿ.ಪಿ.ಮುರಳಿಧರ, ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ನರಹರಿ ರಾವ್ ವೇದಿಕೆಯಲ್ಲಿದ್ದು ಪ್ರಶಸ್ತಿ ವಿತರಿಸಿದರು. ಚುನಾವಣಾ ನೀತಿ ಸಂಹಿತೆ ಘೋಷಣೆಯಾದ ಹಿನ್ನೆಲೆಯಲ್ಲಿ ಯಾವ ಜನಪ್ರತಿನಿಧಿಗಳೂ ಭಾಗವಹಿಸಲಿಲ್ಲ.
‘ಹೊಸತಾಗಿ ಚಿತ್ರ ನಿರ್ಮಾಣ ಮಾಡುವವರಿಗೆ ಚಿತ್ರೋತ್ಸವ ಒಂದು ಅತ್ಯುತ್ತಮ ವೇದಿಕೆ. ಸತ್ಯಜಿತ್ ರೇ ಅವರಂತಹ ನಿರ್ದೇಶಕರ ಪ್ರತಿಭೆಗೆ ಮೊದಲು ಮನ್ನಣೆ ಸಿಕ್ಕಿದ್ದು ಚಿತ್ರೋತ್ಸವ
ದಿಂದ. 1972ರಲ್ಲಿ ನಾನು ಮೊದಲು ಬೆಂಗಳೂರಿನಲ್ಲಿ ಚಿತ್ರೋತ್ಸವ ಆಯೋಜಿಸಿದ್ದೆ. ಅಲ್ಲಿಂದ ನಂತರ ಬೆಂಗಳೂರಿನಲ್ಲಿ ಸಾಕಷ್ಟು ಚಿತ್ರೋತ್ಸವ
ಗಳು ನಡೆಯುತ್ತಿವೆ. ಸುಚಿತ್ರಾ ಫಿಲಂ ಸೊಸೈಟಿ ಚಿತ್ರರಂಗದ ಸಾಕಷ್ಟು ಕಾರ್ಯಕ್ರಮ ನಡೆಸುತ್ತಿದೆ’ ಎಂದು ನರಹರಿ ರಾವ್ ಹೇಳಿದರು.
ಅವ್ಯವಸ್ಥೆಯ ಆಗರ: ಚಿತ್ರೋತ್ಸವದ ಆಯೋಜನೆ ಕುರಿತು ಅಸಮಾಧಾನದ ಮಾತುಗಳು ಕೇಳಿಬಂದಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಲ ಜನಸಂದಣಿ ಜಾಸ್ತಿಯಾಗಿದೆ ಎಂದು ಸಮಿತಿ ಹೇಳಿಕೊಂಡಿದೆ. ಆದಾಗ್ಯೂ ಪ್ರಚಾರದ ಕೊರತೆ ಎದ್ದು ಕಾಣುತ್ತಿತ್ತು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ಅನೇಕರಿಗೆ ಪಾಸ್ ವಿಳಂಬವಾಗಿದೆ. ಮೊದಲ ದಿನವೂ ಪಾಸ್‌ಗಳು, ಮಾಹಿತಿ ಪುಸ್ತಕಗಳು ಸರಿಯಾಗಿ ಸಿಗಲಿಲ್ಲ. ಇನ್ನೂ ಸ್ಪರ್ಧೆ ವಿಭಾಗದಲ್ಲಿ ಹಣ ಪಾವತಿಸಿ, ಚಿತ್ರ ಆಯ್ಕೆಯಾಗದ ನಿರ್ಮಾಣ ಸಂಸ್ಥೆಗಳಿಗೆ ಮಾಹಿತಿ ಪತ್ರವೂ ತಲುಪಿಲ್ಲ ಎಂಬ ದೂರು ಕೇಳಿಬಂದಿದೆ. ಚಿತ್ರೋತ್ಸವದಲ್ಲಿ ಭಾಗವಹಿಸಿದ ವಿದೇಶಿ ಮತ್ತು ಹೊರ ರಾಜ್ಯಗಳ ನಿರ್ದೇಶಕರ ಸಂಖ್ಯೆಯೂ ಕಡಿಮೆ. ರಿಷಬ್ ಶೆಟ್ಟಿ ಸಂವಾದಕ್ಕೆ ಬಹಳ ನಿರೀಕ್ಷೆಯಿತ್ತಾದರೂ, ಅವರು ಕೂಡ ಸಂವಾದದಲ್ಲಿ ಭಾಗಿಯಾಗಲಿಲ್ಲ.
‘ನಾನು ಕುಸುಮಾ’ ಹೆಸರು ಹರಿದಾಡಿತ್ತು!
‘ಚಿತ್ರೋತ್ಸವ ಒಂದು ದಿನ ಬಾಕಿ ಇರುವಾಗಲೇ ಮೊದಲ ಬಹುಮಾನವಾಗಿ ‘ನಾನು ಮತ್ತು ಕುಸುಮ’ ಮತ್ತು ಉಳಿದೆರಡು ಚಿತ್ರಗಳನ್ನು ಲಾಬಿ ಮಾಡಿ ಆಯ್ಕೆ ಮಾಡಿದ್ದಾರೆ. ಇದೇ ನಿಜವಾಗಿದ್ದರೆ ಅರ್ಹ ಚಿತ್ರಗಳು ಮತ್ತು ಪ್ರಾಮಾಣಿಕ ನಿರ್ಮಾಪಕ, ನಿರ್ದೇಶಕರುಗಳ ಪಾಡೇನು?’ ಎಂಬ ಸಂದೇಶ ಚಿತ್ರರಂಗದ ಸಾಕಷ್ಟು ವಾಟ್ಸ್ ಆ್ಯಪ್ ಗುಂಪುಗಳಲ್ಲಿ ಹರಿದಾಡಿತ್ತು. ‘ನಾನು ಕುಸುಮಾ’ ಚಿತ್ರಕ್ಕೆ ಅತ್ಯುತ್ತಮ ಪ್ರಶಸ್ತಿ ನೀಡಿದ್ದನ್ನು ನಿರ್ದೇಶಕ ಪೃಥ್ವಿ ಕೊಣನೂರು ವೇದಿಕೆ ಮುಂದೆಯೇ ವಿರೋಧಿಸಿದರು. ‘ಬೆಂಗಳೂರು ಚಿತ್ರೋತ್ಸವದಲ್ಲಿ ತುಂಬ ಹಿಂದಿನಿಂದ ಕೆಟ್ಟ ಕೆಟ್ಟ ಸಿನಿಮಾಗಳಿಗೆ ಅತ್ಯುತ್ತಮ ಚಿತ್ರ ಪ್ರಶಸ್ತಿ ಬರುತ್ತಿದೆ. ಇದನ್ನು ಸರಿಪಡಿಸಿಕೊಳ್ಳದಿದ್ದರೆ ಬೆಲೆ ಕಳೆದುಕೊಳ್ಳುತ್ತದೆ. ಹಿಂದಿನ ಸಲ ಚಿತ್ರೋತ್ಸವದಲ್ಲಿ ನನ್ನ ಸಿನಿಮಾಕ್ಕೆ ಮೊದಲ ಪ್ರಶಸ್ತಿ ಬಂದರೂ ಉಳಿದ ಕೆಲ ಉತ್ತಮ ಚಿತ್ರಗಳು ಆಯ್ಕೆಯಾಗಿರಲಿಲ್ಲ. ಪ್ರತಿಭಾನ್ವಿತರಿಗೆ ಅನ್ಯಾಯ ಆಗುತ್ತಿದೆ. ಪಿ.ಶೇಷಾದ್ರಿ, ಕಾಸರವಳ್ಳಿಯವರಂತಹ ಹಿರಿಯರಿಗೆ ಇದೆಲ್ಲ ಕಾಣುತ್ತಿಲ್ಲವೇ ಎಂದು’ ಪೃಥ್ವಿ ಪ್ರಶ್ನಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.