ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಟೆಕ್ಟೀವ್ ದಿವಾಕರನಾಗಿ ಆಯುಷ್ಮಾನ್‌ ಖುರಾನ?

ರೀಮೇಕ್‌ ಹಕ್ಕು ₹75 ಲಕ್ಷಕ್ಕೆ ಮಾರಾಟ
Last Updated 27 ಮಾರ್ಚ್ 2019, 12:08 IST
ಅಕ್ಷರ ಗಾತ್ರ

ಜಯತೀರ್ಥ ನಿರ್ದೇಶನದ ‘ಬೆಲ್‌ ಬಾಟಂ’ ಸಿನಿಮಾ ಐವತ್ತ ದಿನ ಪೂರೈಸುವಲ್ಲಿ ಇನ್ನು ಕೆಲವೇ ಹೆಜ್ಜೆಗಳ ಅಂತರದಲ್ಲಿದೆ. ಚಿತ್ರಮಂದಿರದಲ್ಲಿ ಹದವಾದ ಸದ್ದು ಮಾಡುತ್ತಲೇ ನಿರ್ಮಾಪಕರ ಜೇಬನ್ನೂ ತುಂಬಿಸುತ್ತಿರುವ ಈ ಚಿತ್ರದ ನಾಯಕ ಡಿಟೆಕ್ಟಿವ್‌ ದಿವಾಕರ. ತನ್ನ ಮೊದ್ದುಗುಣ ಮತ್ತು ಪತ್ತೆದಾರಿ ಕೆಲಸಗಳಿಂದಲೇ ಜನರಿಗೆ ಇಷ್ಟವಾಗಿರುವ ದಿವಾಕರ ಇದೀಗ ಬಾಲಿವುಡ್‌ ಬಾಗಿಲನ್ನೂ ಬಡಿಯುತ್ತಿದ್ದಾನೆ. ಹೌದು, ‘ಬೆಲ್‌ ಬಾಟಂ’ ಚಿತ್ರದ ರಿಮೇಕ್‌ ಹಕ್ಕುಗಳು ಹಿಂದಿ ಮತ್ತು ತೆಲುಗಿನಲ್ಲಿ ಮಾರಾಟವಾಗಿವೆ.

ಸ್ಟಂಟ್‌ ಮಾಸ್ಟರ್‌ ರವಿಮರ್ವ ತಮ್ಮ ಕೆಎನ್‌ ಎಂಟರ್‌ಪ್ರೈಸಸ್‌ ಕಂಪನಿಯ ಅಡಿಯಲ್ಲಿ ಎರಡೂ ಭಾಷೆಗಳಲ್ಲಿಈ ಚಿತ್ರದ ರೀಮೇಕ್‌ ಹಕ್ಕುಗಳನ್ನು ಖರೀದಿಸಿದ್ದಾರೆ.

‘ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿಯೂ ಈ ಚಿತ್ರ ಯಶಸ್ವಿಯಾಗುತ್ತದೆ ಎಂಬ ಕಾರಣಕ್ಕೆ ರೀಮೇಕ್‌ ಹಕ್ಕುಗಳನ್ನು ₹ 75 ಲಕ್ಷಗಳಿಗೆ ಖರೀದಿಸಿದ್ದೇನೆ. ಹಿಂದಿ ಭಾಷೆಯಲ್ಲಿ ನಾನೇ ನಿರ್ದೇಶನ ಮಾಡುವ ಇಂಗಿತ ಇದೆ. ನಿರ್ಮಾಣದಲ್ಲಿ ಕೈಜೋಡಿಸುವಂತೆ ರಿಲಾಯನ್ಸ್‌ ಕಂಪನಿ ಜತೆ ಮಾತುಕತೆ ನಡೆಸಿದ್ದೇವೆ. ತೆಲುಗಿನಲ್ಲಿ ಅಶ್ವಿನಿ ದತ್‌ ನಿರ್ಮಾಣ ಸಹಯೋಗ ನೀಡುತ್ತಿದ್ದಾರೆ. ತೆಲುಗಿನಲ್ಲಿ ಯಾರು ನಿರ್ದೇಶಿಸಲಿದ್ದಾರೆ ಎನ್ನುವುದು ಇನ್ನೂ ನಿರ್ಧರಿತವಾಗಿಲ್ಲ’ ಎಂದು ವಿವರಣೆ ನೀಡುತ್ತಾರೆ ರವಿವರ್ಮ.

ಕಳೆದ ಎರಡು ಮೂರು ದಿನಗಳಿಂದ ಈ ಕುರಿತು ಮಾತುಕತೆ ನಡೆಯುತ್ತಿದ್ದು ಇನ್ನು ಎರಡು ದಿನಗಳಲ್ಲಿ ತೆಲುಗು ಮತ್ತು ಹಿಂದಿಯ ನಿರ್ಮಾಣ ಸಹಯೋಗ ಮಾಡುತ್ತಿರುವವರು ಸಿನಿಮಾ ವೀಕ್ಷಿಸಲಿದ್ದಾರೆ.

ದಿವಾಕರನಾಗಿ ಆಯುಷ್ಮಾನ್‌?

ಬಾಲಿವುಡ್‌ನಲ್ಲಿ ನಿರ್ಮಾಣವಾಗುತ್ತಿರುವ ‘ಬೆಲ್‌ ಬಾಟಂ’ನಲ್ಲಿ ಡಿಟೆಕ್ಟಿವ್‌ ದಿವಾಕರನಾಗಿ ಆಯುಷ್ಮಾನ್‌ ಖುರಾನ ನಟಿಸುವ ಸಾಧ್ಯತೆಗಳಿವೆ. ರವಿಮರ್ವ ಅವರೇ ಈ ಸುಳಿವನ್ನು ನೀಡುತ್ತಾರೆ. ‘ಹಿಂದಿಯಲ್ಲಿ ಆಯುಷ್ಮಾನ್‌ ನಟಿಸಬೇಕು ಎನ್ನುವುದು ನಮ್ಮ ಆಸೆ. ಈ ಕುರಿತು ಮಾತುಕತೆಗಳು ನಡೆಯುತ್ತಿವೆ. ಆದರೆ ಇನ್ನೂ ಅಂತಿಮ ತಿರ್ಮಾನವಾಗಿಲ್ಲ. ಚಿತ್ರ ವೀಕ್ಷಿಸಿದ ನಂತರ ಒಪ್ಪಿಕೊಳ್ಳುತ್ತಾರೆ ಎಂಬ ವಿಶ್ವಾಸ ಇದೆ’ ಎನ್ನುತ್ತಾರೆ ರವಿಮರ್ಮ.

ತೆಲುಗಿನಲ್ಲಿ ಜನಪ್ರಿಯ ನಟ ನಾನಿ ಈ ಚಿತ್ರದಲ್ಲಿ ನಟಿಸುವ ಎಲ್ಲ ಸಾಧ್ಯತೆಗಳೂ ಇವೆಯಂತೆ. ನಿರ್ಮಾಣ ಜವಾಬ್ದಾರಿ ಹೊತ್ತಿರುವ ಅಶ್ವನಿ ದತ್‌ ಕೂಡ ನಾನಿ ಅವರನ್ನು ಹಾಕಿಕೊಂಡು ಸಿನಿಮಾ ಮಾಡುವ ಒಲವು ವ್ಯಕ್ತಪಡಿಸಿದ್ದಾರಂತೆ.

ಕನ್ನಡ ಚಿತ್ರಮಂದಿರಗಳಲ್ಲಿ ಇಂದಿಗೂ ಜನರನ್ನು ಸೆಳೆಯುತ್ತಿರುವ ಬೆಲ್‌ ಬಾಟಂನಲ್ಲಿ ರಿಷಬ್‌ ಶೆಟ್ಟಿ ಮತ್ತು ಹರಿಪ್ರಿಯಾ ಮುಖ್ಯಭೂಮಿಯಲ್ಲಿದ್ದರು. ಹಿಂದಿ ಮತ್ತು ತೆಲುಗಿನಲ್ಲಿ ನಾಯಕಿಯರಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬುದು ಇನ್ನೂ ನಿರ್ಧರಿತವಾಗಿಲ್ಲ. ಕನ್ನಡದಾಚೆಗೂ ಸದ್ದು ಮಾಡುತ್ತಿರುವ ‘ಪತ್ತೆದಾರಿ ದಿವಾಕರ’ ಕನ್ನಡ ಚಿತ್ರರಂಗದ ಕುರಿತು ಉಳಿದ ಭಾಷೆಗಳ ಸಿನಿಮಾಕರ್ತರಲ್ಲಿ ಹುಟ್ಟಿರುವ ಕುತೂಹಲವನ್ನು ಇನ್ನಷ್ಟುಹೆಚ್ಚಿಸುತ್ತಿರುವುದಂತೂ ಸತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT