ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: ‘ಬಾಲಿವುಡ್‌ನ 15 ತಾರೆಯರು ಸ್ಪಂದಿಸಲಿಲ್ಲ’

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್‌ ಸ್ಪಷ್ಟನೆ
Last Updated 19 ಫೆಬ್ರುವರಿ 2019, 12:05 IST
ಅಕ್ಷರ ಗಾತ್ರ

ಬೆಂಗಳೂರು: ‘ಸಂಭಾವನೆ ವಿಚಾರದಲ್ಲಿ ಬಾಲಿವುಡ್‌ ತಾರೆಯರ ಬೇಡಿಕೆಗೆ ತಕ್ಕಂತೆ ಅಕಾಡೆಮಿಯು ಹೊಂದಾಣಿಕೆ ಮಾಡಿಕೊಳ್ಳಲು ಸಿದ್ಧವಿಲ್ಲ. ಹಾಗಾಗಿ, ಯಾವೊಬ್ಬ ಹಿಂದಿಯ ನಟ, ನಟಿಯನ್ನೂ 11ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನೆಗೆ ಆಹ್ವಾನಿಸುತ್ತಿಲ್ಲ’ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್ ಸ್ಪಷ್ಟಪಡಿಸಿದರು.

‘ಬಾಲಿವುಡ್‌ ಮಂದಿಯದೊಂದು ಕ್ರಮವಿದೆ. ಅವರು ಮನೆ ಬಿಡುವಾಗಲೇ ಸಂಭಾವನೆಯ ಮೀಟರ್‌ ಕೂಡ ಚಾಲೂ ಆಗುತ್ತದೆ. ಅವರೊಟ್ಟಿಗೆ ಮೇಕ‍ಪ್‌ ಮನ್, ಸೆಕ್ಯೂರಿಟಿ ಗಾರ್ಡ್‌, ಮ್ಯಾನೇಜರ್‌ಗಳು ಬರುತ್ತಾರೆ. ಇಲ್ಲಿಯೇ ಮೂರು ದಿನಗಳ ಕಾಲ ಪ್ರತಿಷ್ಠಿತ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡುತ್ತಾರೆ. ತಾರೆಯರ ಸಂಭಾವನೆಯೂ ಸೇರಿದಂತೆ ಅವರ ಎಲ್ಲಾ ವೆಚ್ಚ ₹ 1 ಕೋಟಿ ದಾಟುತ್ತದೆ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

‘ಜನರ ತೆರಿಗೆ ಹಣದಿಂದ ಚಲನಚಿತ್ರೋತ್ಸವ ನಡೆಯುತ್ತಿದೆ. ಇನ್ನೊಂದೆಡೆ ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಸರ್ಕಾರ ಸೂಚಿಸಿದೆ. ರಾಜ್ಯದ 100 ತಾಲ್ಲೂಕುಗಳು ಬರಪೀಡಿತವಾಗಿವೆ. ನೆರೆಯಿಂದ ಕೊಡಗು ಸಂತ್ರಸ್ತವಾಗಿದೆ. ರಾಜ್ಯದ ಅತಿಥಿಯಾಗಿ ಆಗಮಿಸುವಂತೆ ಬಾಲಿವುಡ್‌ನ 15ಕ್ಕೂ ಹೆಚ್ಚು ನಟ, ನಟಿಯರನ್ನು ಕೋರಿದೆ. ಹಿಂದಿನ ಚಲನಚಿತ್ರೋತ್ಸವಗಳಲ್ಲಿ ನೀಡಿರುವಂತೆಯೇ ಸಂಭಾವನೆ ನೀಡಲು ಕೋರಿಕೆ ಮುಂದಿಟ್ಟರು. ನನ್ನ ಮನವಿಗೆ ಅವರು ಸ್ಪಂದಿಸಲಿಲ್ಲ’ ಎಂದು ತಿಳಿಸಿದರು.

ಅರ್ಥಪೂರ್ಣವಾಗಿ ಚಲನಚಿತ್ರೋತ್ಸವ ಆಚರಿಸಲಾಗುತ್ತಿದೆ. ಪಾರದರ್ಶಕತೆ ಕಾಯ್ದುಕೊಳ್ಳಲಾಗಿದೆ. ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡಿಲ್ಲ ಎಂದರು.

₹ 4 ಕೋಟಿ ಅನುದಾನ:ದೇಶ, ವಿದೇಶಗಳ ವಿವಿಧ ಭಾಷೆಯ ಸಿನಿಮಾಗಳ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸುವ ಚಲನಚಿತ್ರೋತ್ಸವವು ಇದೇ 21ರಿಂದ 28ರವರೆಗೆ ನಗರದ ಒರಾಯನ್‌ ಮಾಲ್‌ನಲ್ಲಿ ನಡೆಯಲಿದೆ. ಚಿತ್ರೋತ್ಸವಕ್ಕೆ ಸರ್ಕಾರದಿಂದ ₹ 4 ಕೋಟಿ ಅನುದಾನ ಬಿಡುಗಡೆಯಾಗಿದೆ. ಕಳೆದ ವರ್ಷ ₹ 6 ಕೋಟಿ ಖರ್ಚಾಗಿತ್ತು.

ಕರ್ನಾಟಕ ಚಲನಚಿತ್ರ ಅಕಾಡೆಮಿ ಸಂಘಟಿಸಿರುವ ಈ ಚಲನಚಿತ್ರೋತ್ಸವಕ್ಕೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಸುಚಿತ್ರಾ ಫಿಲಂ ಸೊಸೈಟಿ ಸಹಯೋಗ ನೀಡಿವೆ. ಈ ಬಾರಿ ವಿಧಾನಸೌಧದ ಮುಂಭಾಗ ಸಮಾರಂಭ ಆಯೋಜಿಸುತ್ತಿಲ್ಲ. ವಿಧಾನಸೌಧದ ಬ್ಯಾಕ್ವೆಂಟ್‌ ಹಾಲ್‌ನಲ್ಲಿ ಸಂಘಟಿಸಲಾಗಿದೆ.ಫೆ. 21ರಂದು ಸಂಜೆ 6ಗಂಟೆಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅಧಿಕೃತವಾಗಿ ಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಚಿತ್ರೋತ್ಸವದ ಆರಂಭದ ಸಿನಿಮಾವಾಗಿ ಇರಾನ್‌ ದೇಶದ ನಿರ್ದೇಶಕ ಪೇಮನ್‌ ಮಾದಿ ನಿರ್ದೇಶಿಸಿರುವ ‘ಬಾಂಬ್‌ ಎ ಲವ್‌ ಸ್ಟೋರಿ ಪ್ರದರ್ಶನವಾಗಲಿದೆ.‌

ಫೆ. 28ರಂದು ಸಂಜೆ 6ಗಂಟೆಗೆ ಸಮಾರೋಪ ನಡೆಯಲಿದೆ. ರಾಜ್ಯಪಾಲ ವಜುಭಾಯಿ ವಾಲಾ ಅವರು ಸ್ಪರ್ಧಾತ್ಮಕ ವಿಭಾಗಗಳಲ್ಲಿ ಪುರಸ್ಕೃತವಾದ ಸಿನಿಮಾಗಳಿಗೆ ಬಹುಮಾನ ವಿತರಿಸಲಿದ್ದಾರೆ. ಮುಕ್ತಾಯದ ಸಿನಿಮಾವಾಗಿ ಇರಾನ್‌ನ ‘ಟೇಲ್‌ ಆಫ್‌ ದಿ ಸಿ’ ಪ್ರದರ್ಶನಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT