ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟರಾಗಬೇಕೆಂದು ಬಂದಿದ್ದ ಭಗವಾನ್‌, ನಿರ್ದೇಶಕರಾದರು!

Last Updated 20 ಫೆಬ್ರುವರಿ 2023, 6:31 IST
ಅಕ್ಷರ ಗಾತ್ರ

ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎಸ್ ಕೆ ಭಗವಾನ್ (95) ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಮರೆಯಲಾಗದ ಹೆಸರು ಬಿ.ದೊರೈರಾಜ್‌ ಮತ್ತು ಭಗವಾನ್‌. ವರನಟ ಡಾ.ರಾಜ್‌ಕುಮಾರ್‌ ಅವರನ್ನು ಜೇಮ್ಸ್‌ ಬಾಂಡ್‌ ರೀತಿ ತೋರಿಸಿದ್ದು ಇದೇ ಜೋಡಿ.

1968ರಲ್ಲಿ ತೆರೆಕಂಡ ಡಾ.ರಾಜ್‌ ಅಭಿನಯದ ‘ಜೇಡರ ಬಲೆ’ ಈ ಜೋಡಿ ನಿರ್ದೇಶನದ ಮೊದಲ ಚಿತ್ರ. ಇದು ಕನ್ನಡದ ಮೊದಲ ಬಾಂಡ್ ಶೈಲಿಯ ಸಿನಿಮಾ ಕೂಡ. ಸಿನಿಮಾಗಳಿಗೆ ಕ್ಯಾಮೆರಮನ್‌ ಆಗಿದ್ದ ದೊರೈ ಮತ್ತು ಭಗವಾನ್‌ ಒಟ್ಟಾಗಿದ್ದೆ ಒಂದು ಆಸಕ್ತಿದಾಯಕ ಕಥೆ.

ಭಗವಾನ್‌ ನಟರಾಗಬೇಕೆಂಬ ಕನಸಿನೊಂದಿಗೆ ಚಿತ್ರರಂಗಕ್ಕೆ ಬಂದವರು. ದೊರೈ ಕ್ಯಾಮೆರಮನ್‌ ಆಗಿ ಚಿತ್ರರಂಗದಲ್ಲಿ ತೊಗಡಿಸಿಕೊಂಡವರು. ದೊರೈ ಮಾತು ಕಡಿಮೆ, ಕೆಲಸ ಜಾಸ್ತಿ ಎಂಬ ವ್ಯಕ್ತಿತ್ವ. ಭಗವಾನ್‌ ಅವರದ್ದು ಗಟ್ಟಿ ಬರವಣಿಗೆ. ಭಗವಾನ್‌ ಸಿನಿಮಾ ವಿತರಣೆ ಸಂಸ್ಥೆ ಪ್ರಕಾಶ್‌ ಪಿಕ್ಚರ್ಸ್‌ನಲ್ಲಿ ಪ್ರತಿನಿಧಿಯಾಗಿದ್ದರು. ಅಲ್ಲಿ ಅವರಿಗೆ ದೊರೈ ಪರಿಚಯವಾಗಿತ್ತು.

ಅದಕ್ಕೂ ಮೊದಲು ಭಗವಾನ್‌ 1956ರಲ್ಲಿ ‘ಭಾಗೋದ್ಯಯ’ ಚಿತ್ರದಲ್ಲಿ ನಟಿಸಿದ್ದರು. ಪಿ.ವಿ.ಬಾಬು ನಿರ್ದೇಶನದ ಚಿತ್ರದಲ್ಲಿ ಸಹ ನಿರ್ದೇಶಕರಾಗಿಯೂ ಕೆಲಸ ಮಾಡುತ್ತಾರೆ. ದೊರೈ ಸಿಗುವವರೆಗೂ ಭಗವಾನ್‌ ಏಕಾಂಗಿಯಾಗಿ ಸಿನಿಮಾ ನಿರ್ದೇಶನ ಮಾಡಿರಲಿಲ್ಲ. ಪ್ರಾರಂಭದಲ್ಲಿ ಎ.ಸಿ.ನರಸಿಂಹ ಮೂರ್ತಿ ಜೊತೆ ಸೇರಿ ‘ಸಂಧ್ಯಾರಾಗ’ ಚಿತ್ರ ನಿರ್ದೇಶನ ಮಾಡುತ್ತಾರೆ. 1966ರಲ್ಲಿ ಈ ಚಿತ್ರ ತೆರೆಗೆ ಬರುತ್ತದೆ. ‘ರಾಜದುರ್ಗದ ರಹಸ್ಯ’ಚಿತ್ರದಲ್ಲಿಯೂ ನರಸಿಂಹ ಮೂರ್ತಿ ಜೊತೆ ನಿರ್ದೇಶಕರಾಗಿ ಕೆಲಸ ಮಾಡುತ್ತಾರೆ.

1968ರಲ್ಲಿ ‘ಜೇಡರ ಬಲೆ’ ದೊರೈ ಮತ್ತು ಭಗವಾನ್‌ ಒಟ್ಟಿಗೆ ಮಾಡಿದ ಸಿನಿಮಾ. ಆ ಕಾಲಕ್ಕೆ ಸೂಪರ್‌ ಹಿಟ್‌ ಸಿನಿಮಾವದು. ಜೇಮ್ಸ್‌ ಬಾಂಡ್‌ ಆಗಿ ಅಣ್ಣಾವ್ರು ಮಿಂಚುತ್ತಾರೆ. ಅದೊಂದೇ ಸಿನಿಮಾದಿಂದ ಈ ನಿರ್ದೇಶಕ ಜೋಡಿ ಜನಪ್ರಿಯವಾಗುತ್ತದೆ. ಅಲ್ಲಿಂದ ನಂತರ ಇಬ್ಬರು ಒಟ್ಟಾಗಿ 29 ಸಿನಿಮಾಗಳನ್ನು ನಿರ್ದೇಶನ ಮಾಡುತ್ತಾರೆ.

ಮೈಸೂರಿನಲ್ಲಿ ಜನಿಸಿದ್ದ ಎಸ್‌.ಕೆ.ಭಗವಾನ್‌ ಬೆಂಗಳೂರಿನಲ್ಲಿ ಶಿಕ್ಷಣ ಪಡೆದರು. ಹಿರಣ್ಣಯ್ಯ ಮಿತ್ರ ಮಂಡಳಿ ನಾಟಕಗಳ ಮೂಲಕ ಬಣ್ಣದ ಬದುಕನ್ನು ಆರಂಭಿಸುತ್ತಾರೆ. ರಾಜ್‌ಕುಮಾರ್‌ಗೆ ಆಪ್ತರಾಗಿದ್ದ ಭಗವಾನ್‌, ಉತ್ತಮ ಸಂಭಾಷಣಾಕಾರರಾಗಿದ್ದರು. ‘ಗೋವಾದಲ್ಲಿ ಸಿ.ಐ.ಡಿ 99’, ‘ಆಪರೇಷನ್‌ ಡೈಮಂಡ್‌ ರಾಕೆಟ್‌’,‘ಆಪರೇಷನ್‌ ಜಾಕ್‌ಪಾಟ್‌ನಲ್ಲಿ ಸಿ.ಐ.ಡಿ 999’, ‘ಗಿರಿಕನ್ಯೆ’, ‘ಎರಡು ಕನಸು’, ‘ನಾನೊಬ್ಬ ಕಳ್ಳ’, ‘ಚಂದನದ ಗೊಂಬೆ’, ‘ಮುನಿಯನ ಮಾದರಿ’, ‘ಗಾಳಿ ಮಾತು’, ‘ಕಸ್ತೂರಿ ನಿವಾಸ’ದಂತಹ ಸೂಪರ್‌ ಹಿಟ್‌ ಸಿನಿಮಾ ಈ ಜೋಡಿ ನಿರ್ದೇಶನದಲ್ಲಿ ತೆರೆ ಕಾಣುತ್ತೆ.‌‌

ಸ್ವಲ್ಪ ಕಾಲ ರಾಜ್‌ಕುಮಾರ್‌ ಅವರಿಂದ ದೂರಾಗಿದ್ದರು:
ರಾಜ್‌ಕುಮಾರ್‌ಗೆ ಒಂದರ ಹಿಂದೆ ಒಂದರಂತೆ ಹಿಟ್‌ ಚಿತ್ರಗಳನ್ನು ನೀಡಿದ್ದ ಭಗವಾನ್‌, ‘ಯಾರಿವನು’ ಸಿನಿಮಾ ಶೂಟಿಂಗ್‌ ಸಮಯದಲ್ಲಿ ತಮ್ಮದಲ್ಲದ ತಪ್ಪಿಗೆ ವಿವಾದಕ್ಕೆ ಗುರಿಯಾಗುತ್ತಾರೆ. 1984ರಲ್ಲಿ ಈ ಸಿನಿಮಾ ಚಿತ್ರೀಕರಣದ ವೇಳೆ ರಾಜ್‌ಕುಮಾರ್‌ ಅವರ ಮೇಲೆ ಹಲ್ಲೆ ನಡೆಯುತ್ತೆ. ಈ ಸಿನಿಮಾದ ನಿರ್ದೇಶಕರು ಭಗವಾನ್‌. ಈ ಹಲ್ಲೆಯಿಂದಾಗಿ ನಿರ್ದೇಶಕರು ಮುಜುಗರಕ್ಕೊಳಗಾಗಬೇಕಾದ ಪ್ರಸಂಗ ಎದುರಾಗುತ್ತದೆ. ಈ ಘಟನೆ ಬಳಿಕ 8 ವರ್ಷ ರಾಜ್‌ಕುಮಾರ್‌ ಜೊತೆ ದೊರೈ–ಭಗವಾನ್‌ ಸಿನಿಮಾ ಮಾಡಿರಲಿಲ್ಲ. 1992ರಲ್ಲಿ ‘ಜೀವನ ಚೈತ್ರ’ ಸಿನಿಮಾ ಮೂಲಕ ಮತ್ತೆ ಒಂದಾಗುತ್ತಾರೆ. ಆ ಸಿನಿಮಾ ಕೂಡ ಸೂಪರ್‌ ಹಿಟ್‌ ಆಗುತ್ತದೆ.

ಅದಾದ ಬಳಿಕ ‘ಒಡಹುಟ್ಟಿದವರು’ ಅಣ್ಣಾವ್ರ ಜೊತೆ ಈ ಜೋಡಿಯ ಕೊನೆಯ ಸಿನಿಮಾ. 1993ರಲ್ಲಿ ಅನಂತ್‌ನಾಗ್‌ಗೆ ‘ಮಾಂಗಲ್ಯ ಬಂಧನ’ ಸಿನಿಮಾ ನಿರ್ದೇಶನ ಮಾಡುತ್ತಾರೆ. ಇದು ಭಗವಾನ್‌ ಏಕಾಂಗಿಯಾಗಿ ನಿರ್ದೇಶನ ಮಾಡಿದ ಮೊದಲ ಸಿನಿಮಾ. 2000ದಲ್ಲಿ ದೊರೈರಾಜು ತೀರಿಕೊಳ್ಳುತ್ತಾರೆ. ಅದಾದ ಬಳಿಕ ಭಗವಾನ್‌ ಕೂಡ ನಿರ್ದೇಶನ ಕ್ಷೇತ್ರದಿಂದ ದೂರವೇ ಉಳಿದು ಬಿಡುತ್ತಾರೆ.

2019ರಲ್ಲಿ ಸಂಚಾರಿ ವಿಜಯ್‌ಗೆ ‘ಆಡುವ ಬೊಂಬೆ’ ಸಿನಿಮಾ ನಿರ್ದೇಶಿಸುತ್ತಾರೆ. ಇದು ಭಗವಾನ್‌ ನಿರ್ದೇಶನದ ಕೊನೆಯ ಸಿನಿಮಾ. ಆದರ್ಶ ಫಿಲಂ ಇನ್ಸ್‌ಟಿಟ್ಯೂಟ್‌ನ ಪ್ರಾಂಶುಪಾಲರಾಗಿದ್ದ ಭಗವಾನ್‌ ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT