ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಣ್ಣ ನಡು ಭ್ರಮೆ ಬಿಡು

Last Updated 11 ಡಿಸೆಂಬರ್ 2018, 19:46 IST
ಅಕ್ಷರ ಗಾತ್ರ

ಬಾಲಿವುಡ್‌ ನಟ ನಟಿಯರು ತಮ್ಮ ದೇಹದ ಆಕಾರದಿಂದ ಸುದ್ದಿಯಾಗುವುದು ಹೆಚ್ಚು. ಕೆಲವರ್ಷಗಳಿಂದೀಚೆ ನಟಿಯರಲ್ಲಿ ‘ಜೀರೊ ಸೈಜ್‌’ ಹುಚ್ಚು ಮತ್ತು ನಟರಲ್ಲಿ ಸಿಕ್ಸ್‌ ಪ್ಯಾಕ್‌, ಎಂಟು ಪ್ಯಾಕ್‌ಗಳು ಹೆಚ್ಚು ಸುದ್ದಿ ಮಾಡುತ್ತಿವೆ. ಕರೀನಾ ಕಪೂರ್‌, ಕತ್ರಿನಾ ಕೈಫ್‌, ಮೌನಿ ರಾಯ್‌ ಅವರ ಸೊಂಟದ ಸುತ್ತಳತೆ ಅಸಂಖ್ಯಾತ ಯುವತಿಯರನ್ನು ಜಿಮ್‌ನತ್ತ ಮುಖ ಮಾಡುವಂತೆ ಪ್ರೇರೇಪಿಸಿತ್ತು. ತಮ್ಮ ಸೊಂಟವೂ ಕರೀನಾ, ಕತ್ರಿನಾ ಅವರ ಸೊಂಟದಷ್ಟೇ ಸಣ್ಣದು ಎಂದು ಸಾಮಾಜಿಕ ಜಾಲತಾಣದಲ್ಲಿ ಫೋಟೊ ಹಂಚಿಕೊಳ್ಳುವ ಹುಚ್ಚೂ ವೈರಲ್‌ ಆಗಿತ್ತು.

ಕರೀನಾ ಕಪೂರ್‌, ತನಿಷಾ ಮುಖರ್ಜಿ ಮತ್ತು ಮೌನಿ ರಾಯ್‌ ಅವರು ಇಷ್ಟೇ ಅಗಲದ ಸೊಂಟದ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಟ್ರೋಲ್‌ ಆಗಿದ್ದಾರೆ. ‘ನೀವು ರೋಗಪೀಡಿತರು’, ‘ನಿಮಗೆ ಅಪೌಷ್ಟಿಕತೆ ಇದೆ ಸ್ವಲ್ಪ ಚೆನ್ನಾಗಿ ತಿನ್ನೋದು ಕಲೀರಿ’, ‘ಮೂಳೆಚಕ್ಕಳ’... ಹೀಗೆ ನಾನಾ ವಿಧದ ಹೀಯಾಳಿಕೆಯ ಬಾಣಗಳನ್ನು ನೆಟಿಗರು ಎಸೆದಿದ್ದ ನೆನಪು ಇನ್ನೂ ಮಾಸಿಲ್ಲ.

ಇದಾದ ಬೆನ್ನಿಗೇ ಬಣ್ಣದ ಲೋಕದಲ್ಲಿ ‘ಬಾಡಿ ಶೇಮಿಂಗ್‌’, ‘ಫ್ಯಾಟ್‌ ಶೇಮಿಂಗ್‌’, ‘ಕಲರ್‌ ಶೇಮಿಂಗ್‌’ ಮತ್ತು ‘ಸ್ಕಿನ್‌ ಶೇಮಿಂಗ್‌’ ಎಂಬ ಪದಗಳು ಹೆಚ್ಚಾಗಿ ಕೇಳಿಬಂದಿದ್ದವು. ‘ತೆಳ್ಳಗೆ’ ಇರುವುದು ಚಿತ್ರರಂಗ, ಕಿರುತೆರೆ ಮತ್ತು ಫ್ಯಾಷನ್‌ ಜಗತ್ತಿನಲ್ಲಿ ಅನುಕೂಲಕರ, ಒಳ್ಳೊಳ್ಳೆ ಅವಕಾಶಗಳನ್ನು ಗಿಟ್ಟಿಸಿಕೊಳ್ಳಲು ಸುಲಭಮಾರ್ಗ ಎಂಬ ಪರಿಕಲ್ಪನೆ ಈಗ ಬದಲಾಗಿದೆ.

ಅಸಹಜವಾಗಿ ತೆಳ್ಳಗಿರುವ ವಿರುದ್ಧ ನೆಟಿಜನರ ಸಿಟ್ಟಿಗೆ ಮೊದಲು ಗುರಿಯಾದವರು ಅಮೆರಿಕದ ಬೆಲ್ಲಾ ಹೇಡಿಡ್‌ ಎಂಬ ಸೆಲೆಬ್ರಿಟಿ ರೂಪದರ್ಶಿ. ಪೂರ್ತಿ ಹೆಸರು ಇಸಾಬೆಲ್ಲಾ ಖೇರ್‌ ಹೇಡಿಡ್‌ ಆದರೂ ಮಾಡೆಲಿಂಗ್‌ ಜಗತ್ತಿನಲ್ಲಿ ಬೆಲ್ಲಾ ಹೇಡಿಡ್‌ ಎಂದೇ ಪರಿಚಿತರು. ‘ವಿಕ್ಟೋರಿಯಾಸ್‌ ಸೀಕ್ರೆಟ್‌ ಫ್ಯಾಷನ್‌ ಶೋ’ದ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದೇ ತಡ, ಲಕ್ಷಾಂತರ ಮಂದಿ ಆಕೆಯ ದೇಹಾಕಾರದ ಬಗ್ಗೆ ಟೀಕಿಸಿದರು.

‘ನಿನ್ನ ಮೈಯಲ್ಲಿರುವುದುದು ಬರೀ ಚರ್ಮ ಮತ್ತು ಮೂಳೆ’, ‘ಅನಾರೋಗ್ಯಕರ’, ‘ಅಪೌಷ್ಟಿಕ’ ಎಂಬ ಟೀಕೆಗಳು ವ್ಯಕ್ತವಾಗಿದ್ದವು. ‘ಎಲ್ಲರ ದೇಹ ಪ್ರಕೃತಿ ಒಂದೇ ರೀತಿ ಇರುವುದಿಲ್ಲ. ನಿರ್ದಿಷ್ಟ ವ್ಯಾಯಾಮಗಳು ಬೇರೆ ಬೇರೆ ರೀತಿಯಲ್ಲಿ ಪ್ರತಿಕ್ರಿಯಿಸುತ್ತವೆ’ ಎಂದು ಹೆಡಿಡ್ ಪ್ರತಿಕ್ರಿಯಿಸಿದ್ದರು.

ಸಾಮಾನ್ಯರ ಬದುಕಿನಲ್ಲಿಯೂ ದಪ್ಪ, ಸಣ್ಣ ದೇಹಾಕಾರದ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಲೇ ಇರುತ್ತವೆ ಎನ್ನಿ. ತೆಳ್ಳಗಿರುವ ಹುಡುಗರೂ ಇದರಿಂದ ಮುಕ್ತರಾಗಿಲ್ಲ.

‘ದಿ ಮಫ್ಲರ್‌ ಮ್ಯಾನ್‌’ ಎಂಬಯೂಟ್ಯೂಬ್‌ ವಿಡಿಯೊ ಮೂಲಕ ಪರಿಚಿತರಾಗಿರುವ ಅಭಿಲಾಷ್‌ ತಪ್ಲೀಯಳ್‌ ಅವರ ಅನುಭವದ ಮಾತು ಕೇಳಿ: ‘ನಾನು ಸಣ್ಣ ವಯಸ್ಸಿನಿಂದಲೂ ಸಪೂರ ಇದ್ದವನು. ಅದು ನನ್ನ ಮನೆಯವರಿಗೆ ಸಮಸ್ಯೆ ಎಂದು ಅನಿಸಲಿಲ್ಲ. ಆದರೆ ನೆರೆಕರೆಯವರ ಟೀಕೆ, ಹೀಯಾಳಿಕೆಯ ಮಾತುಗಳಿಗೆ ಬೇಸತ್ತು ನಮ್ಮಮ್ಮ ಕಂಡ ಕಂಡ ಆಹಾರ, ಔಷಧ ಮಾಡಿದ್ದುಂಟು’ ಎಂದು ನೆನಪಿಸಿಕೊಳ್ಳುತ್ತಾರೆ ಅವರು.

‘ಕಾಲೇಜು ದಿನಗಳಲ್ಲಿ, ‘ನೀನು ತುಂಬಾ ಹಸ್ತಮೈಥುನ ಮಾಡ್ಕೋತೀಯ ಅನ್ಸುತ್ತೆ ಅದಕ್ಕೇ ಇಷ್ಟು ಸಣ್ಣಗಿದ್ದೀಯ’ ಎಂದೂ ಸ್ನೇಹಿತರು ಅನುಮಾನಿಸಿದ್ದರು. ಈಗ ಅದೆಲ್ಲ ತಮಾಷೆ ಅನಿಸಿದರೂ ಆ ದಿನಗಳಲ್ಲಿ ಮಾನಸಿಕ ಹಿಂಸೆ ಆಗುತ್ತಿತ್ತು’ ಎನ್ನುತ್ತಾರೆ ಅಭಿಲಾಷ್.

ಅಭಿಲಾಷ್‌, ‘ದಿಲ್‌ ಜಂಗ್ಲಿ’ ಚಿತ್ರದಲ್ಲಿ ತಾಪ್ಸಿ ಪನ್ನು ಜೊತೆ ನಟಿಸಿದ ಬಳಿಕ ಹಳೆಯ ಪ್ರಶ್ನೆಗಳು ಹೊಸ ರೂಪ ಪಡೆದುವಂತೆ. ‘ನೀನು ಹೀಗಿದ್ದರೂ ಬಾಲಿವುಡ್‌ನಲ್ಲಿ ಅವಕಾಶ ಸಿಕ್ಕಿತಾ?’ ಎಂದು ಕೇಳಲಾರಂಭಿಸಿದ್ದಾರಂತೆ!

ದೀಪಿಕಾ ಎಂಬ ಯುವತಿ ಅಂತಹುದೇ ಟೀಕೆ, ಹೀಯಾಳಿಕೆಯ ಮಾತುಗಳಿಗೆ ಈಗ ತಲೆಕೆಡಿಸಿಕೊಳ್ಳುತ್ತಿಲ್ಲವಂತೆ. ‘ನನಗಿಷ್ಟದ ಬಟ್ಟೆಗಳನ್ನು ಧರಿಸುತ್ತೇನೆ. ದೈಹಿಕ ಚಟುವಟಿಕೆ ಮಾಡಿದ್ರೆ ನೀನು ಮಾಯವಾಗಿ ಹೋಗ್ತೀಯಾ ಎಂದು ಟೀಕಿಸಿದವರ ಮುಂದೆ ನನಗೆ ಬೇಕಾದಂತೆ ಬದುಕುತ್ತಿದ್ದೇನೆ’ ಎಂದು ಅವರು ಹೇಳುತ್ತಾರೆ.

ಬಾಲಿವುಡ್‌ನ ಚಾಳಿ
ಜೀರೊ ಸೈಜ್‌ ಮತ್ತು ತೂಕ ಕಳೆದುಕೊಳ್ಳುವುದನ್ನು ಕೊಂಡಾಡುವ ಚಾಳಿ ಬಾಲಿವುಡ್‌ನ ಕೊಡುಗೆ. (ಪರಿಣೀತಿ ಚೋಪ್ರಾಗೆ ತೂಕ ಕಳೆದುಕೊಂಡಿದ್ದಕ್ಕೇ ಪ್ರಶಸ್ತಿ ನೀಡಿದ್ದನ್ನು ನೆನಪಿಸಿಕೊಳ್ಳಿ). ವಿದ್ಯಾ ಬಾಲನ್‌, ಇಲಿಯಾನ ಡಿಕ್ರೂಸ್‌, ಶಿಖಾ ತಲ್ಸೇನಿಯಾ ಅವರಂತಹ ನಟಿಯರು ತಮ್ಮ ದೇಹ ತೂಕದ ಬಗ್ಗೆ ಧನಾತ್ಮಕವಾಗಿಯೇ ಮಾತನಾಡುತ್ತಾರೆ.

ತೂಕ ಕಳೆದುಕೊಳ್ಳುವುದು, ಹೆರಿಗೆ ಬಳಿಕ ತೂಕ ಇಳಿಸಿಕೊಳ್ಳುವುದು ಮತ್ತು ಅದಕ್ಕಾಗಿ ಜಿಮ್‌ನಲ್ಲಿ ಕಸರತ್ತು ಮಾಡುತ್ತಿರುವ ಫೋಟೊ/ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದು ಅಲ್ಲಿ ಸಾಮಾನ್ಯ. ಹಾಗೆ ನೋಡಿದರೆ ದಕ್ಷಿಣ ಭಾರತದ ನಟ ನಟಿಯರು ಇಂತಹ ಭ್ರಮೆಗಳಿಂದ ದೂರವಿದ್ದಾರೆ.

ಇದೂ ‘ಬಾಡಿ ಶೇಮಿಂಗ್’!
* ಯಾರಿಗಾದರೂ ‘ಸಣ್ಣಗಿದ್ದೀರಿ‘ ಅಥವಾ ‘ದಪ್ಪಗಿದ್ದೀರಿ’, ‘ನೀವು ಸಣ್ಣಗಾಗಿದ್ದೀರಲ್ಲ ಹಾಗಾಗಿ ಈ ಉಡುಪು ನಿಮಗೆ ಒಪ್ಪುತ್ತಿದೆ’ ಎಂದೆಲ್ಲ ಹೇಳುವ ಮುನ್ನ ಯೋಚಿಸಿ.

* ಮಹಿಳೆಯರು ಅಂದರೆ ಮಹಿಳೆಯರು ಅಷ್ಟೇ. ದೇಹಾಕಾರ ದಪ್ಪ, ಸಣ್ಣ, ನೆರಿಗೆ, ಬಾಗು ಬಳುಕು ಇವೆಲ್ಲಾ ನೈಸರ್ಗಿಕ.

* ‘ನೀವು ದಪ್ಪಗಿಲ್ಲ ಹಾಗಾಗಿ ಚಂದ ಇದ್ದೀರಿ’ ಎಂದೂ ಹೇಳಬೇಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT