ಸೋಮವಾರ, ಸೆಪ್ಟೆಂಬರ್ 28, 2020
21 °C
ಕಿಂಗ್‌ಖಾನ್‌ಗೆ ಮತ್ತೆ ಜತೆಯಾಗಲಿದ್ದಾರೆ ದೀಪಿಕಾ ಪಡುಕೋಣೆ

ಪಠಾಣನಾಗಿ ಮಿಂಚಲಿದ್ದಾರೆ ಬಾಲಿವುಡ್‌ ‘ಬಾದ್ ಷಾ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಲಿವುಡ್‌ ಬಾದ್ ಷಾ ಶಾರೂಖ್‌ ಖಾನ್‌ ಮತ್ತೆ ಯಾವಾಗ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಾರೋ ಎಂದು ಚಾತಕ ಪಕ್ಷಿಯಂತೆ ಎದುರು ನೋಡುತ್ತಿದ್ದ ಅವರ ಅಭಿಮಾನಿಗಳ ಕಾಯುವಿಕೆಗೆ ಕೊನೆಗೂ ತೆರೆ ಬೀಳುವ ಸಮಯ ಬಂದಿದೆ. ಶಾರೂಖ್‌, ಯಶ್‌ ರಾಜ್‌ ಫಿಲಂಸ್‌ ಬ್ಯಾನರ್‌ನಡಿ ಸಿನಿಮಾ ಮಾಡಲು ಸಹಿ ಹಾಕಿರುವುದು ಬಾಲಿವುಡ್‌ ಅಂಗಳದಲ್ಲಿ ಸುದ್ದಿಯಲ್ಲಿದೆ.

ಯಶ್‌ ರಾಜ್‌ ಫಿಲಂಸ್‌ ಚಿತ್ರ ನಿರ್ಮಾಣ ಸಂಸ್ಥೆ ಸ್ಥಾಪನೆಯಾಗಿ 50 ವಸಂತಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ಚಿತ್ರರಂಗದಲ್ಲಿ ಒಂದು ಮೈಲುಗಲ್ಲು ಆಗುವಂತಹ ಸಿನಿಮಾ ನಿರ್ಮಿಸಿರುವ ಯೋಜನೆಗೆ ಸಂಸ್ಥೆ ಕೈಹಾಕಿದೆ. ಹಾಗಾಗಿಯೇ ಎರಡು ಹಿಟ್‌ ಸಿನಿಮಾಗಳನ್ನು ನೀಡಿದ ಜೋಡಿಯನ್ನು ಹ್ಯಾಟ್ರಿಕ್‌ ಯಶಸ್ಸು ಸಾಧಿಸಬಹುದೆಂಬ ನಿರೀಕ್ಷೆಯೊಂದಿಗೆ ಪುನಾ ತೆರೆ ಮೇಲೆ ಒಟ್ಟುಗೂಡಿಸಲು ಹೊರಟಿದೆ. ಶಾರೂಕ್‌ ಕಾಣಿಸಿಕೊಳ್ಳಲಿರುವ ಈ ಹೊಸ ಚಿತ್ರದ ಹೆಸರು ‘ಪಠಾಣ್‌’. ಶಾರೂಕ್‌ ಅಭಿನಯಿಸಲಿರುವ ಪಾತ್ರದ ಹೆಸರನ್ನೇ ಚಿತ್ರಕ್ಕೂ ಇಡಲಾಗಿದ್ದು, ಇದೊಂದು ಸಾಹಸ ಪ್ರಧಾನಚಿತ್ರವಂತೆ. ಯಶ್‌ ರಾಜ್‌ ಫಿಲಂಸ್‌ ಬ್ಯಾನರ್‌ನಲ್ಲಿ ಕಳೆದ ವರ್ಷ ‘ವಾರ್‌’ ಸಿನಿಮಾ ನಿರ್ದೇಶಿಸಿದ್ದ ಸಿದ್ಧಾರ್ಥ್‌ ಆನಂದ್‌ ಅವರು ‘ಪಠಾಣ್‌’ಗೆ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ. 

‘ಓಂ ಶಾಂತಿ ಓಂ’ ಮತ್ತು ‘ಚೆನ್ನೈ ಎಕ್ಸ್‌ಪ್ರೆಸ್‌’ ಚಿತ್ರಗಳ ನಂತರ ದೀಪಿಕಾ ಪಡುಕೋಣೆ ಮತ್ತು ಶಾರೂಖ್‌ ಖಾನ್‌ ಜೋಡಿ ‘ಪಠಾಣ್‌‘ ಮೂಲಕ ಮತ್ತೆ ಜೊತೆಯಾಗುತ್ತಿದೆ. ಚಿತ್ರದ ಚಿತ್ರಕಥೆ ಬಹುತೇಕ ಪೂರ್ಣಗೊಂಡಿದ್ದು, ಚಿತ್ರೀಕರಣದ ಯೋಜನೆ ರೂಪಿಸಲಾಗುತ್ತಿದೆ. ಅಕ್ಟೋಬರ್‌ 2ರ ಗಾಂಧಿ ಜಯಂತಿಯಂದು ಈ ಚಿತ್ರದ ಬಗ್ಗೆ ಆದಿತ್ಯ ಚೋಪ್ರಾ ಅಧಿಕೃತವಾಗಿ ಘೋಷಿಸುವ ಸಾಧ್ಯತೆ ಇದೆ. ಚಿತ್ರವು ಅಕ್ಟೋಬರ್‌ನಲ್ಲಿ ಸೆಟ್ಟೇರುವ ನಿರೀಕ್ಷೆಯೂ ಇದೆಯಂತೆ.

‘ಕಿಂಗ್‌ ಖಾನ್‌’ ಕೊನೆ ಬಾರಿ ತೆರೆಯ ಮೇಲೆ ಕಾಣಿಸಿಕೊಂಡಿದ್ದು 2018ರಲ್ಲಿ ತೆರೆಕಂಡ ಆನಂದ್ ಎಲ್. ರೈ ನಿರ್ದೇಶನದ ‘ಜೀರೊ’ ಸಿನಿಮಾದಲ್ಲಿ. ರಾಜ್‌ಕುಮಾರ್‌ ಹಿರಾನಿ ನಿರ್ದೇಶನದ, ವಲಸೆ ಸಂಬಂಧಿತ ಕಥೆಯ ಹಾಸ್ಯ ಪ್ರಧಾನ ಚಿತ್ರದಲ್ಲಿ ಶಾರೂಕ್‌ ನಟಿಸಬೇಕಿತ್ತು. ಈ ಚಿತ್ರದ ಕಥೆಗೆ ಕೆನಾಡದ ನಂಟು ಇದ್ದು, ಅಲ್ಲಿಯೇ ಚಿತ್ರೀಕರಣ ಆಗಬೇಕಿದೆಯಂತೆ. ಸದ್ಯದ ಪರಿಸ್ಥಿತಿಯಲ್ಲಿ ಚಿತ್ರೀಕರಣ ನಡೆಸಲು ಅನುಮತಿ ಸಿಗದ ಕಾರಣಕ್ಕೆ ಈ ಸಿನಿಮಾ 2021ಕ್ಕೆ ಮುಂದೂಡಲಾಗಿದೆಯಂತೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು