ಅಮೀರ್‌ ಖಾನ್‌ನ ‘ಮೊಗಲ್‌’ ನೋಡಲು ಒಂಬತ್ತು ತಿಂಗಳು ಕಾಯಬೇಕು

ಶನಿವಾರ, ಮಾರ್ಚ್ 23, 2019
31 °C

ಅಮೀರ್‌ ಖಾನ್‌ನ ‘ಮೊಗಲ್‌’ ನೋಡಲು ಒಂಬತ್ತು ತಿಂಗಳು ಕಾಯಬೇಕು

Published:
Updated:
Prajavani

ಬಾಲಿವುಡ್‌ನ ಖಾನ್‌ತ್ರಯರಲ್ಲೇ ವಿಶಿಷ್ಟ ಚಿತ್ರಗಳಿಗೆ ಹೆಸರು ಮಾಡಿದಾತ ಅಮೀರ್‌ಖಾನ್‌. ಆದರೆ ಈ ವರ್ಷ ಆತನ ಹೊಸ ಚಿತ್ರ ನೋಡಲು ಪ್ರೇಕ್ಷಕರು ಕ್ರಿಸ್ಮಸ್‌ವರೆಗೂ ಕಾಯಬೇಕು.

ಕ್ರಿಸ್ಮಸ್‌ ವೇಳೆಗೆ ಆತನ ನಟಿಸಿದ ‘ಮೊಗಲ್‌’ ಚಿತ್ರ ತೆರೆ ಕಾಣಲಿದೆ. ಒಂದು ಕಾಲದಲ್ಲಿ ಟಿ ಸಿರೀಸ್‌ ಕ್ಯಾಸೆಟ್‌ಗಳ ಮೂಲಕ ಸಂಗೀತಲೋಕವನ್ನು ಮೊಗಲ್‌ ದೊರೆಯಂತೆ ಆಳಿದ ಗುಲ್ಶನ್‌ ಕುಮಾರ್‌ ಜೀವನ ಆಧಾರಿತ ಚಿತ್ರವಿದು. ಸಂಗೀತಲೋಕ ಮತ್ತು ಮುಂಬೈನ ಭೂಗತ ದೊರೆಗಳ ನಡುವಣ ಸಖ್ಯದಿಂದಾಗಿ ಗುಂಡಿಗೆ ಬಲಿಯಾದ ಗುಲ್ಶನ್‌ ಕುಮಾರ್‌, 90ರ ದಶಕದಲ್ಲಿ ಬಾಲಿವುಡ್‌ಅನ್ನು ಹುಚ್ಚೆಬ್ಬಿಸಿದಂತಹ ಹಾಡುಗಳ ಹಲವು ಕ್ಯಾಸೆಟ್‌ಗಳನ್ನು ನಿರ್ಮಿಸಿದಾತ.

‘ಮೊಗಲ್‌’ ಚಿತ್ರದ ಕುರಿತು ಅಮೀರ್‌ ತುಂಬ ನಿರೀಕ್ಷೆ ಇಟ್ಟುಕೊಂಡಿದ್ದಾನಂತೆ. ಹೊಸ ವರ್ಷದ ಆರಂಭದಲ್ಲಿ ಅಮೀರ್ ಪ್ರಕಟಿಸಿದ ಐದು ನಿರ್ಣಯಗಳಲ್ಲಿ ಎರಡು ಮುಖ್ಯವಾದ ನಿರ್ಣಯಗಳೆಂದರೆ, ‘2018ರಲ್ಲಿ ಮಾಡಿದ ತಪ್ಪುಗಳಿಂದ ಪಾಠ ಕಲಿಯುತ್ತೇನೆ’ ಮತ್ತು ‘ನನ್ನ ವೃತ್ತಿಜೀವನದ ಅತ್ಯುತ್ತಮ ಚಿತ್ರವೊಂದನ್ನು ನಿರ್ಮಿಸುತ್ತೇನೆ’ ಎನ್ನುವುದು. ‘ಥಗ್ಸ್‌ ಆಫ್‌ ಹಿಂದೂಸ್ತಾನ್‌’ ಚಿತ್ರದ ಫ್ಲಾಪ್‌ ಷೋ ಬಳಿಕ ಅಮೀರ್‌ಖಾನ್‌ನ ಈ ಆತ್ಮವಿಮರ್ಶೆ ಹೊರಬಿದ್ದಂತಿದೆ.

ಹಾಗೆಯೇ ಜಗತ್ತಿನಾದ್ಯಂತ ₹2000 ಕೋಟಿಬಾಕ್ಸಾಫೀಸ್‌ ಕಲೆಕ್ಷನ್‌ ಮಾಡಿದ ‘ದಂಗಲ್‌’ ಚಿತ್ರದ ಯಶಸ್ಸಿನ ಬಳಿಕ, ವೃತ್ತಿಜೀವನದ ಅತ್ಯುತ್ತಮ ಚಿತ್ರ ಮಾಡುವ ಹುಚ್ಚೊಂದು ಆತನನ್ನು ಹೊಕ್ಕಂತಿದೆ. ₹200 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಲಿರುವ ‘ಮಹಾಭಾರತ’ದ ಬಗ್ಗೆ ಅಮೀರ್‌ ಈ ಮಾತನ್ನು ಹೇಳಿರಬಹುದೆ ಎನ್ನುವ ಚರ್ಚೆಯೂ ನಡೆದಿದೆ. ಈ ಚಿತ್ರದಲ್ಲಿ ಅಮೀರ್‌ ಕೃಷ್ಣನ ಪಾತ್ರ ವಹಿಸಲಿದ್ದು, ‘ಬಾಹುಬಲಿ’ ಖ್ಯಾತಿಯ ರಾಜಮೌಳಿ ನಿರ್ದೇಶಿಸುತ್ತಿದ್ದಾರೆ.

ಅಂದ ಹಾಗೆ ‘ಮೊಗಲ್‌’ ಚಿತ್ರದ ಗುಲ್ಶನ್‌ ಕುಮಾರ್‌ ಪಾತ್ರವನ್ನು ಮೊದಲ ಸುದ್ದಿಯಂತೆ ಅಕ್ಷಯ್‌ ಕುಮಾರ್‌ ನಿರ್ವಹಿಸಬೇಕಿತ್ತು. ಆದರೆ ಕಾಲ್‌ಷೀಟ್‌ ಮತ್ತು ಸಂಭಾವನೆಯ ವಿಷಯದಲ್ಲಿ ಅಕ್ಷಯ್‌ ರಾಜಿಗೆ ಒಪ್ಪದ್ದರಿಂದ ಅದು ಸಾಧ್ಯವಾಗಲಿಲ್ಲವಂತೆ. ಅಮೀರ್‌ ಖಾನ್‌, ಅಕ್ಷಯ್‌ಗಿಂತ ಹೆಚ್ಚು ಸಂಭಾವನೆ ಪಡೆಯುವಾತ. ಈ ಚಿತ್ರಕ್ಕೆ ಅಮೀರ್‌ ಕಡಿಮೆ ಸಂಭಾವನೆಗೆ ಒಪ್ಪಿರಬಹುದೆ ಎನ್ನುವ ಗುಸುಗುಸು ಕೂಡಾ ಇದೆ.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !