ಗುರುವಾರ , ಏಪ್ರಿಲ್ 15, 2021
19 °C

ನಿಂದಕರು ಇರಬೇಕು ಎಂದ ವರುಣ್‌!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ನಿಂದಕರಿರಬೇಕಿರಬೇಕು/ಹಂದಿ ಇದ್ದರೆ ಕೇರಿ ಹ್ಯಾಂಗೆ ಶುದ್ಹಿಯೋ ಹಾಂಗೆ... ’– ಪುರಂದರದಾಸರ ಭಕ್ತಿಗೀತೆ ಹೀಗೆ ಹೇಳುತ್ತದೆ.

ಬಾಲಿವುಡ್‌ ನಟ ವರುಣ್ ಧವನ್‌ಗೆ ಇದರ ಅರಿವು ಇದೆಯೋ ಇಲ್ಲವೋ ತಿಳಿಯದು. ಆದರೆ, ನಿಂದಕರು ತಮ್ಮ ಮುಂದಿನ ದಾರಿಯ ದಿಕ್ಸೂಚಿಗಳು ಎಂದು ಅವರು ಹೇಳಿಕೊಂಡಿದ್ದಾರೆ. ‘ಟೀಕೆ ಮತ್ತು ವಿಮರ್ಶೆಗಳು ನಮ್ಮ ಬೆಳವಣಿಗೆಗೆ ಸಹಕಾರಿ. ನಮ್ಮ ಮುಂದಿನ ನಡೆಯನ್ನು ಇನ್ನಷ್ಟು ಎಚ್ಚರಿಕೆಯಿಂದ ನಿರ್ಧರಿಸಲು ನೆರವಾಗುತ್ತವೆ. ಹಾಗಾಗಿ ನಾನು ಟೀಕೆಗಳನ್ನು ಸದಾ ಸ್ವಾಗತಿಸುತ್ತೇನೆ’ ಎಂದು ತಮ್ಮ ರಾಜಿಸೂತ್ರವನ್ನು ಮುಂದಿಟ್ಟಿದ್ದಾರೆ ‘ಕಳಂಕ್‌’ ನಾಯಕ.

ಈ ಪ್ರಶ್ನೆ ಅವರಿಗೆ ಎದುರಾದದ್ದು ಇತ್ತೀಚೆಗೆ ನಡೆದ ಜೀ ಪ್ರಶಸ್ತಿ ಪ್ರದಾನದ ವೇಳೆ. ಇದಕ್ಕೆ ಕಾರಣ ಮುಂದಿನ ತಿಂಗಳು ಬಿಡುಗಡೆಯಾಗಲಿರುವ ‘ಕಳಂಕ್‌’. ಕಳೆದ ವಾರ ಈ ಚಿತ್ರದ ಟೀಸರ್‌ ಬಿಡುಗಡೆಯಾಗಿ ಭಾರಿ ಮೆಚ್ಚುಗೆ ಗಳಿಸಿದೆ. ಅದರ ಬೆನ್ನಲ್ಲೇ ಮೊದಲ ಹಾಡನ್ನೂ ಅಭಿಮಾನಿಗಳು ಕೊಂಡಾಡಿದ್ದಾರೆ. ಆದರೆ ಟೀಸರ್‌ ಬಗ್ಗೆ ಆಗಲೇ ತಕರಾರು ವ್ಯಕ್ತವಾಗಿತ್ತು. ‘ಅಮೆರಿಕದ ಪ್ರಖ್ಯಾತ ಟಿವಿ ಶೋ ‘ದಿ ಫ್ಲ್ಯಾಶ್‌’ನ ಹಾಡನ್ನು ಕಳಂಕ್‌ನಲ್ಲಿ ಯಥಾವತ್‌ ಬಳಸಿಕೊಳ್ಳಲಾಗಿದೆ ಎಂದು ನೆಟಿಜನರು ತರಾಟೆಗೆ ತೆಗೆದುಕೊಂಡಿರುವುದು ಇದಕ್ಕೆ ಕಾರಣ.

ಆದರೆ ವರುಣ್‌ ಪ್ರಕಾರ ಚಿತ್ರರಂಗದಲ್ಲಿ ಅದೆಲ್ಲಾ ಕಾಮನ್‌. ತಮ್ಮ ಸಿನಿಯಾನದ ಅತಿ ದೊಡ್ಡ ಚಿತ್ರವೆಂದೇ ಪರಿಗಣಿಸಿರುವ ಕಳಂಕ್‌ ಬಗ್ಗೆ ಏನೇ ತಕರಾರು ಬಂದರೂ ಅವರು ತಲೆಕೆಡಿಸಿಕೊಳ್ಳುವುದಿಲ್ಲವಂತೆ. ಯಾಕೆಂದರೆ ಚಿತ್ರ ಬಿಡುಗಡೆಯಾದ ಬಳಿಕ ತಮ್ಮ ನಟನೆಗೆ ಎಲ್ಲರೂ ಫಿದಾ ಆಗುತ್ತಾರೆ ಎಂಬ ಬಲವಾದ ನಂಬಿಕೆ ಅವರದು. 

ನಟನೆಯ ಕುರಿತು ಟೀಕೆ ವ್ಯಕ್ತಪಡಿಸಿದರೆ ಮುಂದಿನ ಚಿತ್ರದಲ್ಲಿ ಸರಿಪಡಿಸಿಕೊಳ್ಳಲು ಸಹಕಾರಿಯಾಗುತ್ತದೆ. ಹಾಗಾಗಿ ಚಿತ್ರ ನೋಡಿ ತಮ್ಮ ‘ಜಾಫರ್‌’ ಪಾತ್ರದ ಬಗ್ಗೆ ಮಾತನಾಡಿ ಎಂದು ವರುಣ್‌ ಮನವಿ ಮಾಡಿಕೊಳ್ಳುತ್ತಾರೆ.

ಎಂಬತ್ತು ಕೋಟಿ ರೂಪಾಯಿ ಬಂಡವಾಳದಲ್ಲಿ ಮೂಡಿಬಂದಿರುವ ‘ಕಳಂಕ್‌’ ಏಪ್ರಿಲ್‌ 17ರಂದು ತೆರೆಗೆ ಬರಲಿದೆ. ಮಾಧುರಿ ದೀಕ್ಷಿತ್, ಅಲಿಯಾ ಭಟ್‌, ಸೋನಾಕ್ಷಿ ಸಿನ್ಹಾ, ಆದಿತ್ಯ ರಾಯ್ ಕಪೂರ್‌ ಮತ್ತು ಸಂಜಯ್‌ ದತ್‌ ಕೂಡಾ ಈ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು