ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಹ್ಮಚಾರಿಗೆ ಪ್ರಸ್ತದ್ದೇ ಚಿಂತೆ!

Last Updated 7 ನವೆಂಬರ್ 2019, 19:30 IST
ಅಕ್ಷರ ಗಾತ್ರ

ನೀನಾಸಂ ಸತೀಶ್‌ ಮತ್ತು ಅದಿತಿ ಪ್ರಭುದೇವ ನಟನೆಯ ‘ಬ್ರಹ್ಮಚಾರಿ’ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು, ಕಾಶೀನಾಥ್ ಅವರ ‘ಅನಂತನ ಅವಾಂತರ’ ಸಿನಿಮಾವನ್ನು ನೆನಪಿಸುವಂತಿದೆ.

ಈ ಚಿತ್ರಕ್ಕೆ ‘100% ವರ್ಜಿನಿಟಿ’ ಎಂಬ ಅಡಿಬರಹವಿದೆ. ಮದುವೆಯಾದ ಹೊಸದರಲ್ಲಿ ಗೃಹಸ್ಥನೊಬ್ಬ ಪ್ರಥಮ ರಾತ್ರಿ ಕಳೆಯಲು ಎದುರಾಗುವ ಗುಪ್ತ ಸಮಸ್ಯೆಯ ಪೀಕಲಾಟವನ್ನು ಇಡೀ ಸಿನಿಮಾದಲ್ಲಿ ಹಾಸ್ಯಮಯವಾಗಿ ಕಟ್ಟಿಕೊಟ್ಟಿರುವಂತಿದೆ. ಟ್ರೇಲರ್‌ ಉದ್ದಕ್ಕೂ ಹಾಸ್ಯ ಸಂಭಾಷಣೆ ಮತ್ತು ಹಾಸ್ಯಮಯ ದೃಶ್ಯಗಳೇ ಆವರಿಸಿವೆ. ಟ್ರೇಲರ್‌ ಯೂಟ್ಯೂಬ್‌ನಲ್ಲಿ ಸದ್ಯ ಟಾಪ್‌ ಟ್ರೆಂಡಿಂಗ್‌ನಲ್ಲಿದ್ದು, ಬಿಡುಗಡೆಯಾದ 24 ತಾಸುಗಳಲ್ಲಿ ಆರು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಸುಮಾರು 32 ಸಾವಿರ ಮಂದಿ ಇಷ್ಟಪಟ್ಟಿದ್ದಾರೆ. ಚಿತ್ರ ಇದೇ 29ರಂದು ತೆರೆಗೆ ಬರಲಿದೆ.

‘ಟ್ರೇಲರ್‌ನಲ್ಲೇ ಚಿತ್ರದ ಕಥೆ ಹೇಳಲು ಪ್ರಯತ್ನಿಸಿದ್ದೇವೆ. ಚಿತ್ರದ ಆಯ್ದ ಭಾಗವನ್ನಷ್ಟೇ ಟ್ರೇಲರ್‌ನಲ್ಲಿ ತೋರಿಸಿದ್ದೇವೆ. ಇದರಲ್ಲಿ ಯಾವುದೇ ಅಶ್ಲೀಲತೆ ಇಲ್ಲ. ಚಿತ್ರ ಟ್ರೇಲರ್‌ನಲ್ಲಿ ತೋರಿಸಿರುವುದಕ್ಕಿಂತಲೂಬೇರೆ ರೀತಿಯೇ ಇದೆ. ಇಡೀ ಕುಟುಂಬ ಸಮೇತ ಪ್ರೇಕ್ಷಕರು ಮುಜುಗರವಿಲ್ಲದೆ ನೋಡಬಹುದು. ಇದು ವಿಭಿನ್ನ ಜಾನರ್‌ನ ಸಿನಿಮಾ. ಭರಪೂರ ಮನರಂಜನೆ ಇದೆ. ಒಬ್ಬ ನಟನಾಗಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕೆಂದು ಬಹಳ ಧೈರ್ಯದಿಂದಲೇ ಇದರಲ್ಲಿ ನಟಿಸಲು ಒಪ್ಪಿಕೊಂಡೆ’ ಎಂದು ನಾಯಕ ನಟ ನೀನಾಸಂ ಸತೀಶ್‌, ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರಿಂದ ಎದುರಾದ ದ್ವಂದ್ವಾರ್ಥದ ಸಂಭಾಷಣೆಯ ಬಗೆಗಿನ ಪ್ರಶ್ನೆಗಳಿಗೆ ಸಮಜಾಯಿಷಿ ನೀಡಿದರು.

‘ಏನೂ ತಪ್ಪು ಮಾಡದ ವ್ಯಕ್ತಿಯೊಬ್ಬ ಮುಕ್ತವಾಗಿ ಹೇಳಿಕೊಳ್ಳಲಾಗದ ಖಾಸಗಿ ಸಮಸ್ಯೆ ಇದ್ದರೆ, ಅದನ್ನು ಹೇಗೆ ಎದುರಿಸುತ್ತಾನೆ ಎನ್ನುವುದನ್ನು ಹಾಸ್ಯದ ಎಳೆಯಲ್ಲಿ ಹೇಳಲಾಗಿದೆ. ಚಿತ್ರದ ಹಾಡು ಕೂಡ ಯಶಸ್ಸು ಕಂಡಿದ್ದು, ಚಿತ್ರದ ಬಗ್ಗೆ ಸಾಕಷ್ಟು ಒಳ್ಳೆಯ ಪ್ರತಿಕ್ರಿಯೆ ಬರುತ್ತಿವೆ’ ಎಂದರು ನಿರ್ದೇಶಕ ಚಂದ್ರಮೋಹನ್‌.

ನಾಯಕಿಯಾಗಿ ನಟಿಸಿರುವ ಅದಿತಿ ಪ್ರಭುದೇವ, ‘ಮೊದಲ ಬಾರಿಗೆ ಕಾಮಿಡಿ ಸಿನಿಮಾದಲ್ಲಿ ನಟಿಸಿದ್ದೇನೆ.ಚಿತ್ರದ ಹೆಸರೇ ಕೇಳಲು ತುಂಬಾ ಮಜವಾಗಿದೆ. ಚಿತ್ರವು ಎಲ್ಲ ವರ್ಗದ ಪ್ರೇಕ್ಷಕರಿಗೆ ಇಷ್ಟವಾಗಲಿದೆ’ ಎಂದರು.

ಚಿತ್ರದ ಒಂದು ಹಾಡಿಗೆಸಾಹಿತ್ಯ ಬರೆದಿರುವ ನಿರ್ದೇಶಕ ಚೇತನ್‌ಕುಮಾರ್‌, ಸಿಂಗ ಚಿತ್ರದ ‘ಶ್ಯಾನೆ ಟಾಪಗವ್ಳೆ ನಮ್‌ ಹುಡುಗಿ’ ಹಾಡು ಯಶಸ್ವಿಯಾದ ಮೇಲೆ ಧರ್ಮ ವಿಶ್‌⇒ಅವರ ಸಂಗೀತದಲ್ಲಿ ಮತ್ತೊಂದು ಯಶಸ್ವಿ ಹಾಡು ನೀಡುವುದು ತುಂಬಾ ಸವಾಲಿನದಾಗಿತ್ತು. ಆಹಾಡಿನಂತೆಯೇ ‘ಬ್ರಹ್ಮಚಾರಿ’ ಚಿತ್ರದ‘ಇಡ್ಕ ಇಡ್ಕ ವಸಿ ತಡ್ಕ ತಡ್ಕ’ಹಾಡು ಕೂಡ ಯಶಸ್ವಿಯಾಗಿದೆ. ಚಿತ್ರದಲ್ಲಿ ಸಾಕಷ್ಟು ಕಮರ್ಷಿಯಲ್‌ ಅಂಶಗಳಿದ್ದು, ಪ್ರೇಕ್ಷಕರಿಗೆ ಚಿತ್ರ ಇಷ್ಟವಾಗಲಿದೆ ಎಂದರು.

ಕಾಮಿಡಿ ನಟರಾದ ಶಿವರಾಜ್ ಕೆ.ಆರ್‌. ಪೇಟೆ, ಅಶೋಕ್‌ ಚುಟುಕಾಗಿ ಅನಿಸಿಕೆ ಹಂಚಿಕೊಂಡರು.

ಚಿತ್ರಕ್ಕೆ ಉದಯ್‌ ಕೆ. ಮೆಹ್ತಾ ಬಂಡವಾಳ ಹೂಡಿದ್ದಾರೆ.ಛಾಯಾಗ್ರಹಣ ರವಿ ವಿ. ಅವರದು. ಧರ್ಮ ವಿಶ್‌ ಸಂಗೀತ ನೀಡಿದ್ದಾರೆ.

ತಾರಾಗಣದಲ್ಲಿ ದತ್ತಣ್ಣ, ಅಶೋಕ್, ಅಕ್ಷತಾ, ಅಚ್ಯುತ್‌ ಕುಮಾರ್, ಪದ್ಮಜಾ ರಾವ್, ಬಿರಾದಾರ್, ಗಿರಿಜಾ ಲೋಕೇಶ್ ತಾರಾಗಣದಲ್ಲಿ
ಇದ್ದಾರೆ.v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT