ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಯಾ ಬಜಾರ್‌ ಹುಡುಗಿ ಚೈತ್ರಾ ರಾವ್ ಬೆಳ್ಳಿ ಮಾತು

Last Updated 8 ಮೇ 2020, 3:13 IST
ಅಕ್ಷರ ಗಾತ್ರ

ಕಿರುತೆರೆಯಲ್ಲಿ ‘ಜಾನಕಿ ಟೀಚರ್’‌ ಎಂದೇ ಮನೆಮಾತಾಗಿರುವ ನಟಿ ಚೈತ್ರಾ ರಾವ್‌ ಬೆಳ್ಳಿತೆರೆ ಪ್ರವೇಶಿಸಿದ್ದು ‘ಮಾಯಾ ಬಜಾರ್ 2016’ ಚಿತ್ರದ ಮೂಲಕ. ಈಗ ಅವರು ‘ಅರಬ್ಬೀ’ ಮತ್ತು ‘ಟಾಮ್‌ ಆ್ಯಂಡ್ ಜೆರ್‍ರಿ’ ಸಿನಿಮಾಗಳಲ್ಲಿ ವಿಭಿನ್ನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

–––

ನಟಿ ಚೈತ್ರಾ ರಾವ್ ಅವರದು ಮೂಲತಃ ಕುಂದಾಪುರ. ಬಾಲಕಲಾವಿದೆಯಾಗಿ ಕಿರುತೆರೆ ಪ್ರವೇಶಿಸಿದ ಆಕೆಗೆ ಒಳ್ಳೆಯ ಹೆಸರು ತಂದುಕೊಟ್ಟ ಧಾರಾವಾಹಿ ‘ಜೋಡಿಹಕ್ಕಿ’. ಇದರಲ್ಲಿನ ‘ಜಾನಕಿ ಟೀಚರ್’ ಪಾತ್ರದ ಮೂಲಕವೇ ಮನೆಮಾತಾದರು. ಅವರು ಬೆಳ್ಳಿತೆರೆಗೆ ಕಾಲಿಟ್ಟಿದ್ದು ಪುನೀತ್‌ ರಾಜ್‌ಕುಮಾರ್‌ ಅವರ ಪಿಆರ್‌ಕೆ ಪ್ರೊಡಕ್ಷನ್‌ ಮೂಲಕ. ಈ ಪ್ರೊಡಕ್ಷನ್‌ನಡಿ ನಿರ್ಮಾಣಗೊಂಡ ‘ಮಾಯಾಬಜಾರ್‌ 2016’ ಚಿತ್ರದಲ್ಲಿನ ಚೈತ್ರಾ ಮತ್ತು ವಸಿಷ್ಠ ಸಿಂಹ ಅವರ ಕೆಮಿಸ್ಟ್ರಿ ಪರದೆ ಮೇಲೆ ಚೆನ್ನಾಗಿಯೇ ವರ್ಕೌಟ್‌ ಆಯಿತು. ಮೊದಲ ಸಿನಿಮಾಕ್ಕೆ ಪ್ರೇಕ್ಷಕರಿಂದ ಸಿಕ್ಕಿರುವ ಉತ್ತಮ ಪ್ರತಿಕ್ರಿಯೆಗೆ ಅವರು ಖುಷಿಯಾಗಿದ್ದಾರೆ.

‘ವಸಿಷ್ಠ ಸಿಂಹ ಎತ್ತರವಾಗಿದ್ದಾರೆ; ನೀನು ಅಷ್ಟೊಂದು ಕುಳ್ಳಕ್ಕೆ ಇರುವೆಯೆಂದು ಸಾಕಷ್ಟು ಜನರು ಪ್ರತಿಕ್ರಿಯಿಸಿದರು. ಆದರೆ, ಕಥೆಯೇ ಈ ಚಿತ್ರದ ಜೀವಾಳ. ಕಥೆಗೆ ತಕ್ಕಂತೆ ನಮ್ಮಿಬ್ಬರ ಪಾತ್ರಗಳನ್ನು ಹೆಣೆದಿದ್ದರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ’ ಎಂದು ಮುಗುಳ್ನಗುತ್ತಾರೆ.

ಪ್ರಸ್ತುತ ಚೈತ್ರಾ ಅವರು ರಾಜ್‌ಕುಮಾರ್‌ ಆ್ಯಕ್ಷನ್‌ ಕಟ್‌ ಹೇಳಿರುವ ‘ಅರಬ್ಬೀ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಂಗವಿಕಲ ಈಜುಪಟು ವಿಶ್ವಾಸ್‌ ಅವರ ಸಾಹಸಯಾನ ಕುರಿತ ಕಥೆ ಇದಾಗಿದೆ. ಇದರಲ್ಲಿ ಆಕೆಯದು ಮುಸ್ಲಿಂ ಹುಡುಗಿಯ ಪಾತ್ರ. ಇದರ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆಯಂತೆ. ‘ಈ ಸಿನಿಮಾದ ಪಾತ್ರವೂ ಜೋಡಿಹಕ್ಕಿ ಧಾರಾವಾಹಿಯಲ್ಲಿನ ಪಾತ್ರದ ಮಾದರಿಯದ್ದೇ ಆಗಿದೆ. ದ್ವೀಪವೊಂದರಲ್ಲಿ ಕಥೆ ಜರುಗುತ್ತದೆ. ನನ್ನ ವೃತ್ತಿಬದುಕಿನಲ್ಲಿ ಇದೊಂದು ಹೊಸ ಅನುಭವ’ ಎಂಬುದು ಅವರ ವಿವರಣೆ.

ರಾಘವ್ ವಿನಯ್ ಶಿವಗಂಗೆ ನಿರ್ದೇಶಿಸುತ್ತಿರುವ ‘ಟಾಮ್‌ & ಜೆರ್‍ರಿ’ ಸಿನಿಮಾಕ್ಕೂ ಚೈತ್ರಾ ಅವರೇ ನಾಯಕಿ. ಇದರ ಅರ್ಧಭಾಗದಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಇದರಲ್ಲಿ ಅವರು ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರಂತೆ. ‘ನಾನು ಈ ಹಿಂದೆ ಇಂತಹ ಲುಕ್‌ನಲ್ಲಿ ಕಾಣಿಸಿಕೊಂಡಿಲ್ಲ’ ಎನ್ನುವ ಅವರಿಗೆ ಈ ಚಿತ್ರದಲ್ಲಿನ ಪಾತ್ರ ತಮಗೊಂದು ಹೊಸ ಇಮೇಜ್ ಸೃಷ್ಟಿಸಲಿದೆ ಎಂಬ ವಿಶ್ವಾಸವಿದೆ.

ಕಿರುತೆರೆ ಮತ್ತು ಹಿರಿತೆರೆಯಲ್ಲಿನ ನಟನೆಯ ವ್ಯತ್ಯಾಸದ ಬಗ್ಗೆಯೂ ಅವರಿಗೆ ತಿಳಿವಳಿಕೆ ಇದೆ. ಅದರ ಅರಿವು ಇದ್ದಿದ್ದರಿಂದಲೇ ‘ಮಾಯಾಬಜಾರ್‌’ನಲ್ಲಿ ನಟನೆ ಸುಲಭವಾಯಿತು ಎನ್ನುವುದು ಅವರ ಅಭಿಪ್ರಾಯ.

‘ಕಿರುತೆರೆಯಲ್ಲಿ ಒಂದು ಚೌಕಟ್ಟಿನಲ್ಲಿಯೇ ಕೆಲಸ ಮಾಡಬೇಕಿರುತ್ತದೆ. ಅಲ್ಲಿ ನಟನೆಯಲ್ಲಿ ಉತ್ಪ್ರೇಕ್ಷೆ ಹೆಚ್ಚಿರುತ್ತದೆ. ಹಿರಿತೆರೆಯಲ್ಲಿ ಅದಕ್ಕೆ ಅವಕಾಶ ಇರುವುದಿಲ್ಲ. ನಮ್ಮೊಳಗಿನ ನಟನೆಯ ಅಭಿವ್ಯಕ್ತಿಗೆ ಹೆಚ್ಚಿನ ಅವಕಾಶ ಇರುತ್ತದೆ’ ಎನ್ನುವುದು ಅವರ ಅನುಭವದ ಮಾತು.

ಒಳ್ಳೆಯ ಮನರಂಜನೆ, ಉತ್ತಮ ಸಂದೇಶವಿರುವ ಸಿನಿಮಾಗಳಲ್ಲಿ ನಟನೆಗೆ ಅವರು ಮೊದಲ ಆದ್ಯತೆ ನೀಡುತ್ತಾರಂತೆ. ‘ಕುಟುಂಬದ ಸದಸ್ಯರು ಒಟ್ಟಾಗಿ ಕುಳಿತು ನೋಡುವ ಸಿನಿಮಾಗಳಲ್ಲಿ ನಟಿಸಲು ನನಗಿಷ್ಟ. ಮುಜುಗರದ ಸನ್ನಿವೇಶ ಇರುವ ಸಿನಿಮಾ ನೋಡಲು ನನಗಿಷ್ಟವಿಲ್ಲ. ಅಂತಹ ಕಂಟೆಂಟ್‌ ಇರುವ ಸಿನಿಮಾಗಳನ್ನು ನಾನು ಒಪ್ಪಿಕೊಳ್ಳುವುದಿಲ್ಲ. ಒಳ್ಳೆಯ ಕಥೆಗಳಿಗೆ ಆದ್ಯತೆ ನೀಡುತ್ತೇನೆ’ ಎನ್ನುತ್ತಾರೆ.

‘ಕನ್ನಡದಲ್ಲಿ ಮಾಲಾಶ್ರೀ, ರಾಗಿಣಿ ದ್ವಿವೇದಿ ಅವರು ಹಲವು ಆ್ಯಕ್ಷನ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ. ಭರ್ಜರಿಯಾಗಿಯೇ ಫೈಟಿಂಗ್‌ ಮಾಡಿದ್ದಾರೆ. ಆದರೆ, ಅಂತಹ ಸಿನಿಮಾಗಳು ಒಳ್ಳೆಯ ಪ್ರದರ್ಶನ ಕಾಣುವುದಿಲ್ಲ. ಪ್ರೇಕ್ಷಕರಿಗೆ ಹೆಣ್ಣುಮಕ್ಕಳ ಆ್ಯಕ್ಷನ್‌ ಸಿನಿಮಾಗಳು ರುಚಿಸುವುದಿಲ್ಲ’ ಎನ್ನುವ ಬೇಸರವೂ ಅವರಿಗಿದೆ. ಅಂದಹಾಗೆ ಅವರಿಗೆ ಐತಿಹಾಸಿಕ ಮತ್ತು ಪೌರಾಣಿಕ ಸಿನಿಮಾಗಳಲ್ಲಿ ನಟಿಸುವ ಆಸೆಯಿದೆಯಂತೆ. ‘ಅಂತಹ ಸಿನಿಮಾಗಳಲ್ಲಿನ ಯುದ್ಧದ ಸನ್ನಿವೇಶದಲ್ಲಿ ಕಾಣಿಸಿಕೊಳ್ಳುವ ಆಸೆಯಿದೆ’ ಎಂದು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT