ಶನಿವಾರ, ಸೆಪ್ಟೆಂಬರ್ 18, 2021
29 °C

ಚಾರ್ಲಿ 777 ವಿದೇಶಕ್ಕೆ ಹೋಗಬೇಕಿದೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ಬಳಿಕ ರಕ್ಷಿತ್‌ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ ಮತ್ತೊಂದು ಪ್ಯಾನ್‌ ಇಂಡಿಯಾ ಸಿನಿಮಾ ‘ಚಾರ್ಲಿ 777’. ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿರುವುದು ಕಿರಣ್‌ರಾಜ್. ಲಾಕ್‌ಡೌನ್‌ ಅವಧಿಯಲ್ಲಿ ಮನೆಯಲ್ಲೇ ಉಳಿದುಕೊಂಡಿರುವ ಅವರು,‌ ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.

‘ಚಿತ್ರದ ಕ್ಲೈಮ್ಯಾಕ್ಸ್‌ ಹಿಮಾಚಲಪ್ರದೇಶದಲ್ಲಿ ನಡೆಯಬೇಕಾಗಿತ್ತು. ಆದರೆ ಲಾಕ್‌ಡೌನ್‌ನಿಂದಾಗಿ ಕ್ಲೈಮ್ಯಾಕ್ಸ್‌ ದೃಶ್ಯವನ್ನು ವಿದೇಶದಲ್ಲಿ ಚಿತ್ರೀಕರಿಸಬೇಕಾದ ಪರಿಸ್ಥಿತಿ ಬಂದಿದೆ. ಸದ್ಯದ ಕೊರೊನಾ ಸ್ಥಿತಿಯಲ್ಲಿ ವಿದೇಶಕ್ಕೆ ಹೋಗಲು ಆಗದಂತಾಗಿದೆ’ ಎನ್ನುವುದು ಕಿರಣ್‌ರಾಜ್‌ ಅವರ ಅಳಲು.

‘ಕ್ಲೈಮ್ಯಾಕ್ಸ್‌ ದೃಶ್ಯಕ್ಕೆ ಹಿಮ ಪ್ರದೇಶದಲ್ಲೇ ಶೂಟಿಂಗ್‌ ಮಾಡಬೇಕು. ಆದರೆ, ಭಾರತದಲ್ಲಿ ಹಿಮ ಬೀಳುವುದಕ್ಕೆ ನವೆಂಬರ್ ತಿಂಗಳವರೆಗೆ ಕಾಯಬೇಕು. ಹೀಗಾಗಿ, ಲಾಕ್‌ಡೌನ್‌ ತೆರವಾಗಿ, ಜನಜೀವನ ಸಹಜ ಸ್ಥಿತಿಗೆ ಮರಳಿದರೆ ನವೆಂಬರ್‌ವರೆಗೂ ಕಾಯದೇ, ವಿದೇಶಗಳಲ್ಲಿರುವ ಹಿಮಚ್ಛಾದಿತ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸುತ್ತೇವೆ’ ಎಂದು ಅವರು ಮಾಹಿತಿ ಹಂಚಿಕೊಂಡರು.

‘ಚಿತ್ರೀಕರಣ ಶೇ.70ರಷ್ಟು ಮುಗಿದಿದೆ. ಈಗಾಗಲೇ ಬೆಂಗಳೂರು, ಮೈಸೂರು, ಮಂಗಳೂರು, ಸಕಲೇಶಪುರ, ಗುಜರಾತ್‌, ರಾಜಸ್ಥಾನ, ಪಂಜಾಬ್‌ನಲ್ಲಿ ಚಿತ್ರದ ಶೂಟಿಂಗ್‌ ಮುಗಿದಿದೆಯಂತೆ. ಶಿಮ್ಲಾ, ಹಿಮಾಚಲ, ಕಾಶ್ಮೀರ, ಕೊಡೈಕೆನಾಲ್‌ ಹಾಗೂ ಮೈಸೂರಿನಲ್ಲಿ ಚಿತ್ರೀಕರಣ ನಡೆಸಬೇಕಿದೆ. 30 ದಿನಗಳ ಶೂಟಿಂಗ್‌ ಬಾಕಿಯಿತ್ತು. ಲಾಕ್‌ಡೌನ್‌ ಘೋಷಣೆಯಾಗುವ ಮೂರು ದಿನಗಳ ಹಿಂದೆ ಪಂಜಾಬ್‌ನಿಂದ ಬೆಂಗಳೂರಿಗೆ ಹಿಂದಿರುಗಿದೆವು. ಒಂದು ವೇಳೆ ಚಿತ್ರೀಕರಣ ಮುಂದುವರಿಸಿದ್ದರೆ ಅಲ್ಲಿಯೇ ಸಿಕ್ಕಿಹಾಕಿಕೊಳ್ಳುತ್ತಿದ್ದೆವು’ ಎಂದರು ಕಿರಣ್‌.

‘ಪ್ರಾಣಿ ಹಾಗೂ ಮನುಷ್ಯನ ಸಂಬಂಧವನ್ನು ಸೂಕ್ಷ್ಮವಾಗಿ ಕಟ್ಟಿಕೊಡುವ ಈ ಚಿತ್ರದಲ್ಲಿ ನಾಯಕ ಮೈಸೂರಿನಿಂದ ಕಾಶ್ಮೀರದವರೆಗೂ ಬೈಕ್‌ನಲ್ಲಿ ಪ್ರಯಾಣಿಸುತ್ತಾನೆ. ತನ್ನ ಜೊತೆಗೇ ನಾಯಿ ಚಾರ್ಲಿಯನ್ನೂ ಕರೆದೊಯ್ಯುತ್ತಾನೆ. ದಾರಿಯುದ್ದಕ್ಕೂ ನಡೆಯುವ ಬೇರೆ ಬೇರೆ ಘಟನೆಗಳು ಈ ಚಿತ್ರದ ಹೂರಣ. ಚಾರ್ಲಿ ಪಾತ್ರವೂ ಚಿತ್ರದಲ್ಲಿ ಹೈಲೈಟ್‌ ಆಗಲಿದೆ. ಚಾರ್ಲಿ ಕೆಲವು ಬಾರಿ ಒಂದು ದೃಶ್ಯಕ್ಕೆ 60–70 ಟೇಕ್‌ಗಳನ್ನು ತೆಗೆದುಕೊಂಡರೆ, ಕೆಲವೊಮ್ಮೆ ಒಂದು ಅಥವಾ ಎರಡು ಟೇಕ್‌ನಲ್ಲಿ ಪಾತ್ರ ನಿಭಾಯಿಸಿದೆ’ ಎನ್ನುವುದು ಎನ್ನುವುದು ಅವರ ವಿವರಣೆ.

‌ಕಿರಣ್‌ರಾಜ್‌ಗೆ ಇದು ಚೊಚ್ಚಲ ಚಿತ್ರ. ‘ಕಿರಿಕ್‌ ಪಾರ್ಟಿ’ ಚಿತ್ರದಲ್ಲಿ ಸಹ‌ನಿರ್ದೇಶಕನಾಗಿ ಕೆಲಸ ಮಾಡಿದ್ದರು. ರಿಷಭ್‌ ಶೆಟ್ಟಿ, ರಕ್ಷಿತ್‌ ಶೆಟ್ಟಿಯಿಂದ ಕಲಿತ ನಿರ್ದೇಶನದ ಪಾಠಗಳು ಈಗ ಅವರ ಬೆನ್ನಿಗಿದೆ. ಏಳು ಕಥೆಗಳನ್ನೊಳಗೊಂಡ ‘ಕಥಾಸಂಗಮ’ದಲ್ಲಿ ಕಿರಣ್‌ರಾಜ್‌ ಅವರದೂ ಒಂದು ಕಥೆ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು