ಶುಕ್ರವಾರ, ಡಿಸೆಂಬರ್ 3, 2021
26 °C

ಮೈಸೂರಿನಲ್ಲಿ ‘ಸಲಗ’ದ ಒಡನಾಟ ಹಂಚಿಕೊಂಡ ಬಾಲ ಕಲಾವಿದರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಸಲಗ ಸಿನಿಮಾದ ಮೂಲಕ ಬೆಳ್ಳಿ ತೆರೆ ಮೇಲೆ ಕಾಣಿಸಿಕೊಂಡಿರುವ ಮೈಸೂರು ಭಾಗದ ಬಾಲ ಪ್ರತಿಭೆಗಳನ್ನು ಪರಿಚಯಿಸುವ ಉಮೇದು ಚಿತ್ರದ ನಿರ್ದೇಶಕ, ನಾಯಕ ನಟರೂ ಆದ ದುನಿಯಾ ವಿಜಯ್ ಅವರದ್ದು. ಮೈಕ್‌ ಹಿಡಿದ ಕಲಾವಿದರು ಚಿತ್ರದೊಂದಿಗಿನ ಒಡನಾಟ, ಆತಿಥ್ಯದ ಅನುಭವವನ್ನು ಖುಷಿಯಿಂದಲೇ ಹಂಚಿಕೊಂಡರು.

ಪತ್ರಕರ್ತರ ಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಂಡುಬಂದ ಚಿತ್ರಣವಿದು. ಚಿತ್ರದಲ್ಲಿ ಜೂನಿಯರ್‌ ಸಲಗನಾಗಿ ಮೈಸೂರಿನ ನಟನ ರಂಗಶಾಲೆಯ ಶ್ರೀಧರ ಅಭಿನಯಿಸಿದ್ದಾರೆ.

‘ನನ್ನ ಪಾತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆಯ ಪ್ರಶಂಸೆ ವ್ಯಕ್ತವಾಗಿದೆ. ನಿರ್ದೇಶಕರು ನನ್ನಲ್ಲಿನ ಪ್ರತಿಭೆಯನ್ನು ಗುರುತಿಸಿ ಅವಕಾಶ ನೀಡಿದರು. ನಮಗೆ ಯಾವುದೇ ಕೊರತೆ ಬಾರದಂತೆ ನೋಡಿಕೊಂಡರು’ ಎಂದರು.

ಚಿತ್ರದಲ್ಲಿ ಆಟೊ ಚಾಲಕನ ಮಗಳಾಗಿ ಕಾಣಿಸಿಕೊಂಡಿರುವ ಸುಚರಿತಾ ಮಾತನಾಡಿ, ‘ಚಿತ್ರದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ದೃಶ್ಯವಿದ್ದು, ನನ್ನ ಅಭಿನಯವನ್ನು ನೋಡಿ ವಿಜಿ ಸರ್ ಕಣ್ಣಲ್ಲಿ ನೀರು ಬಂತು. ಚಿತ್ರಮಂದಿರದಲ್ಲೂ ಜನರು ಕಣ್ಣೀರು ಹಾಕಿದ್ದಾರೆ’ ಎಂದು ಸ್ಮರಿಸಿದರು.

ಜೂನಿಯರ್‌ ಸಲಗನ ಸ್ನೇಹಿತನಾಗಿ ಅಭಿನಯಿಸಿರುವ ಸಂತೋಷ್‌, ‘ಸೆಟ್‌ನಲ್ಲಿ ತುಂಬಾ ಕಾಮಿಡಿ ಇತ್ತು. ವಿಜಿ ಸರ್ ಹೀರೋ ರೀತಿ ನಡೆದುಕೊಳ್ಳದೆ, ಪ್ರೀತಿ, ವಿಶ್ವಾಸದಿಂದ ನೋಡಿಕೊಂಡರು’ ಎಂದರು.

ಕಲಾವಿದರಾದ ಕಾರ್ತಿಕ್‌, ಅನಿಲ್‌, ಶಿವಮೋಹನ್‌, ಕೋಹನಾ, ರಮ್ಯಾ ತಮ್ಮ ಅನುಭವ ಹಂಚಿಕೊಂಡರು.

ದುನಿಯಾ ವಿಜಯ್‌ ಮಾತನಾಡಿ, ‘ನ.1ರಂದು ಕನ್ನಡ ರಾಜ್ಯೋತ್ಸವದ ಅಂಗವಾಗಿ ಮೈಸೂರಿನ ಸಂಗಂ, ಗಾಯತ್ರಿ ಚಿತ್ರ ಮಂದಿರಕ್ಕೆ ಚಿತ್ರ ತಂಡ ಭೇಟಿ ನೀಡಲಿದೆ. ಬಳಿಕ ರಾಜ್ಯದಾದ್ಯಂತ ಪ್ರವಾಸ ಮಾಡಲಾಗುವುದು’ ಎಂದರು.

‘ಸಲಗ ಚಿತ್ರವು ರಾಜ್ಯದಾದ್ಯಂತ 400 ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು ನಿರೀಕ್ಷೆ ಮೀರಿ ಯಶಸ್ಸು ಕಾಣುತ್ತಿದೆ. ಇದಕ್ಕೆ ಅನೇಕರ ಕೊಡುಗೆ ಇದೆ. ಮೈಸೂರು ಭಾಗದ ಈ ಕಲಾವಿದರ ಪಾಲೂ ಇದೆ’ ಎಂದು ಹೇಳಿದರು.

‘ಚಿತ್ರದಲ್ಲಿ ಭೂಗತ ಲೋಕದ ಕತೆಯನ್ನು ಹೇಳಿದ್ದೇನೆ. ತಂದೆ–ತಾಯಿಗಳಿಗೆ ಮಕ್ಕಳು ಸುಳ್ಳು ಹೇಳಬಾರದು. ದಾರಿ ತಪ್ಪಿದರೆ ಆಗುವ ಅನಾಹುತದ ಬಗ್ಗೆ ಬೆಳಕು ಚೆಲ್ಲಲಾಗಿದೆ. ಭೂಗತ ಲೋಕ ಎಂದಾಗ ಅಲ್ಲಿನ ಬೈಗುಳ, ರಕ್ತಪಾತ, ಮಚ್ಚು–ಕತ್ತಿಯನ್ನು ತೋರಿಸಬೇಕಾಗುತ್ತದೆ’ ಎಂದರು.

‘ಚಿತ್ರದಲ್ಲೂ ತಾಯಿಯನ್ನು ಕಳೆದುಕೊಳ್ಳುತ್ತೇನೆ. ನಿಜ ಜೀವನದಲ್ಲೂ ತಾಯಿಯನ್ನು ಕಳೆದುಕೊಂಡಿದ್ದೇನೆ. ಇದು ಒಂದು ರೀತಿಯ ಕಾಕತಾಳೀಯ. ತಾಯಿ ಸಾಯುವ 16 ಗಂಟೆಗಳ ಮುನ್ನ ಕಾಶಿಯಿಂದ ಗಂಗಾ ಜಲ ಬಂತು. ಅದನ್ನು ಕುಡಿದು ಪ್ರಾಣ ಬಿಟ್ಟರು. ಅಮ್ಮ ಇದ್ದಿದ್ದರೆ ಈ ಯಶಸ್ಸನ್ನು ನೋಡಿ ಖುಷಿ ಪಡುತ್ತಿದ್ದರು. ತಾಯಿ ತೀರಿಕೊಂಡ ಬಳಿಕ ತಂದೆ ತುಂಬಾ ಕುಗ್ಗಿದ್ದಾರೆ. ಪ್ರಜ್ಞೆ ಕಳೆದುಕೊಂಡಿದ್ದಾರೆ’ ಎಂದು ನೋವು ತೋಡಿಕೊಂಡರು.

ವಿಜಯ್‌ ಪತ್ನಿ ಕೀರ್ತಿ ಗೌಡ, ಮಗ ಸಾಮ್ರಾಟ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು