ಶನಿವಾರ, ಜುಲೈ 31, 2021
27 °C

ಸರ್ಜಾ ಫ್ಯಾಮಿಲಿಗೆ ಜೂನ್‌ ತಿಂಗಳು ಅಪಶಕುನವೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಟ ಚಿರಂಜೀವಿ ಸರ್ಜಾ ಸಿನಿಮಾ ಕುಟುಂಬದ ಹಿನ್ನೆಲೆ ಹೊಂದಿದ್ದರೂ ಅವರ ಬಣ್ಣದಲೋಕದ ಹಾದಿ ಹೂವಿನ ಹಾಸಿಗೆಯಾಗಿರಲಿಲ್ಲ. ಕಷ್ಟಪಟ್ಟೇ ಅವರು ಬೆಳ್ಳಿತೆರೆಯಲ್ಲಿ ಒಂದೊಂದೇ ಮೆಟ್ಟಿಲು ಏರುತ್ತಿದ್ದರು. ಯಶಸ್ಸಿನ ಮೆಟ್ಟಿಲು ಹತ್ತುವಾಗ ಏರಿಳಿತಗಳನ್ನೂ ಕಂಡಿದ್ದರು. ಚಿರು ಅವರ ಅಕಾಲಿಕ ಸಾವಿಗೆ ಇಡೀ ಕನ್ನಡ ಚಿತ್ರರಂಗವೇ ಕಂಬಿನಿ ಮಿಡಿದಿದೆ.

ಚಿರು ‘ವಾಯುಪುತ್ರ’ ಸಿನಿಮಾದ ಮೂಲಕ ಬೆಳ್ಳಿತೆರೆ ಪ್ರವೇಶಿಸಿದರು. ಅವರ ವೃತ್ತಿಬದುಕಿಗೆ ಒಂದು ದಶಕ ತುಂಬಿತ್ತು. 22 ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಿಗೆ ಬಣ್ಣ ಹಚ್ಚಿದ್ದ ಅವರ ಕೈಯಲ್ಲಿ ನಾಲ್ಕೈದು ಸಿನಿಮಾಗಳಿದ್ದವು. ಆ ಸಿನಿಮಾಗಳಿಗೆ ಸಿದ್ಧತೆ ನಡೆಸುತ್ತಿರುವಾಗಲೇ ಕೊರೊನಾ ಭೀತಿ ಕಾಣಿಸಿಕೊಂಡಿತ್ತು. ಹಾಗಾಗಿ, ಅವುಗಳ ಚಿತ್ರೀಕರಣ ಸ್ಥಗಿತಗೊಂಡಿತ್ತು.

ಚಿರು ಅವರ ಅಕಾಲಿಕ ಸಾವಿನ ಬಳಿಕ ಸರ್ಜಾ ಕುಟುಂಬದ ಪಾಲಿಗೆ ಜೂನ್‌ ತಿಂಗಳು ಅಪಶಕುನವೇ? ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ. ಚಿರು ಅವರು ಹಿರಿಯ ನಟ ಶಕ್ತಿಪ್ರಸಾದ್‌ ಅವರ ಮೊಮ್ಮಗ ಎಂಬುದು ಎಲ್ಲರಿಗೂ ಗೊತ್ತು. ಅರ್ಜುನ್‌ ಸರ್ಜಾ ಮತ್ತು ಕಿಶೋರ್‌ ಸರ್ಜಾ ಅವರು ಶಕ್ತಿಪ್ರಸಾದ್‌ ಅವರ ಮುದ್ದಿನ ಗಂಡು ಮಕ್ಕಳು. ಅರ್ಜುನ್‌ ಸರ್ಜಾ ಬಾಲ್ಯದಲ್ಲಿಯೇ ‘ಸಿಂಹದ ಮರಿ ಸೈನ್ಯ’ ಚಿತ್ರದ ಮೂಲಕ ನಟನೆಯ ಜಾಡು ಹಿಡಿದರು. ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳದ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

ಆದರೆ, ಕಿಶೋರ್‌ ಸರ್ಜಾ ಅವರು ನಿರ್ದೇಶನದತ್ತ ಗಮನ ಹರಿಸಿದರು. ‘ಅಳಿಮಯ್ಯ’ ‘ತುತ್ತಾಮುತ್ತಾ’, ‘ಜೋಡಿ’ ಸೇರಿದಂತೆ ಹಲವು ಹಿಟ್‌ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ ಹೆಗ್ಗಳಿಕೆ ಅವರದ್ದು.

ಅಂದಹಾಗೆ ಚಿರು ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದು ಅರ್ಜುನ್‌ ಮತ್ತು ಕಿಶೋರ್‌ ಜೋಡಿಯೇ. ಅಳಿಯನಿಗೆ ಚಂದನವನದಲ್ಲಿ ಭದ್ರವಾದ ನೆಲೆ ಕಟ್ಟಿಕೊಡಬೇಕೆಂಬುದು ಇಬ್ಬರು ಮಾವಂದಿರ ಆಸೆಯಾಗಿತ್ತು. ಕೊನೆಗೆ, ‘ವಾಯುಪುತ್ರ’ ಸಿನಿಮಾಕ್ಕೆ ಕಿಶೋರ್‌ ಸರ್ಜಾ ಆ್ಯಕ್ಷನ್‌ ಕಟ್‌ ಹೇಳಿದರು. ಚಿತ್ರಕ್ಕೆ ಬಂಡವಾಳ ಹೂಡಿದ್ದು ಅರ್ಜುನ್ ಸರ್ಜಾ. ಆದರೆ, ಅಳಿಯನಿಗಾಗಿ ಪ್ರೀತಿಯಿಂದ ಆ್ಯಕ್ಷನ್‌ ಕಟ್‌ ಹೇಳಿದ ‘ವಾಯುಪುತ್ರ’ ಸಿನಿಮಾ ಬಿಡುಗಡೆಯಾಗುವುದಕ್ಕೂ ಮೊದಲೇ ಅಂದರೆ 2009ರ ಜೂನ್‌ 27ರಂದು ಕಿಶೋರ್‌ ಸರ್ಜಾ ಹೃದಯಾಘಾತದಿಂದ ಮೃತಪಟ್ಟರು. ಈಗ ಚಿರಂಜೀವಿ ಸರ್ಜಾ ಕೂಡ ಜೂನ್‌ ತಿಂಗಳಿನಲ್ಲಿಯೇ ನಿಧನರಾಗಿದ್ದಾರೆ. ಅವರ ಸಾವು ಸರ್ಜಾ ಕುಟುಂಬವನ್ನು ಜರ್ಜರಿತಗೊಳಿಸಿದೆ.

ಚಿರು ಒಪ್ಪಿಕೊಂಡಿದ್ದ ಚಿತ್ರ ‘ಧೀರಂ’

ಚಿರಂಜೀವಿ ಸರ್ಜಾ ಅವರು ಒಪ್ಪಿಕೊಂಡಿದ್ದ ಕೊನೆಯ ಚಿತ್ರ ‘ಧೀರಂ’. ಇದಕ್ಕೆ ವರಮಹಾಲಕ್ಷ್ಮಿ ಹಬ್ಬದಂದು ಮುಹೂರ್ತ ನಡೆಯಬೇಕಿತ್ತು.

‘ಗ್ಯಾಂಗ್‌ ಲೀಡರ್‌’ ಮತ್ತು ‘ತವರಿನ ಋಣ’ ಚಿತ್ರಗಳನ್ನು ನಿರ್ದೇಶಿಸಿದ್ದ ರಮೇಶ್‌ ರಾಜ್‌ ‘ಧೀರಂ’ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಲು ಸಿದ್ಧತೆ ನಡೆಸಿದ್ದರು. ಇದಕ್ಕೆ ಅವರೇ ಬಂಡವಾಳ ಹೂಡಲು ನಿರ್ಧರಿಸಿದ್ದರು.

‘ಆ್ಯಕ್ಷನ್‌ ಮತ್ತು ಕೌಟುಂಬಿಕ ಪ್ರಧಾನ ಕಥೆಯ ಚಿತ್ರವಿದು. ಸ್ಕ್ರಿಪ್ಟ್‌ ಕೇಳಿದ ನಂತರ ಚಿರು ತುಂಬಾ ಖುಷಿಯಾಗಿದ್ದರು. ನಾಯಕಿಯ ಆಯ್ಕೆ ಸಂಬಂಧ ಇತ್ತೀಚೆಗಷ್ಟೇ ಅವರೊಂದಿಗೆ ಚರ್ಚೆ ಮಾಡಿದ್ದೆ. ಅವರಿಗೆ ಜೋಡಿಯಾಗಿ ಹರಿಪ್ರಿಯಾ ಅವರ ಹೆಸರು ಪ್ರಸ್ತಾಪಿಸಿದ್ದೆವು. ಚಿರು ಕೂಡ ಓಕೆ ಎಂದಿದ್ದರು’ ಎನ್ನುತ್ತಾರೆ ರಮೇಶ್‌ ರಾಜ್‌.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು