ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರ ಸಂಭ್ರಮದ ಯೌವನ ಮತ್ತು ಮುಪ್ಪು

Last Updated 13 ಏಪ್ರಿಲ್ 2019, 19:30 IST
ಅಕ್ಷರ ಗಾತ್ರ

ಜನರ ಮನರಂಜನೆ ಮತ್ತು ವ್ಯಾಪಾರದ ಉದ್ದೇಶದಿಂದ ಏಳೆಂಟು ದಶಕಗಳ ಹಿಂದೆ ಶುರುವಾದ ಹತ್ತಾರು ಮನರಂಜನಾ ಕ್ಷೇತ್ರಗಳು ಬಹುತೇಕ ಇವತ್ತು ನಶಿಸಿಹೋಗಿವೆ. ಜನಸಂಸ್ಕೃತಿ ಹಿನ್ನೆಲೆಯ ಕಲಾಪ್ರಕಾರಗಳು, ಪಾರಂಪರಿಕ ಸಂಗೀತ, ನೃತ್ಯ, ಜನಪದ ಪ್ರಕಾರಗಳು ದಿನೇದಿನೇ ಜನರಿಂದ ದೂರವುಳಿಯುತ್ತಿವೆ. ಆದರೆ, ಅದೇ ಕಾಲಘಟ್ಟದಲ್ಲಿ ಜನಮಾನಸದೊಳಗೆ ನಡೆದು ಬಂದ ಸಿನಿಮಾ ಎಂಬ ಮಾಯದ ಲೋಕವು ಜಗತ್ತಿಗೆ ಪರಿಚಯವಾದಾಗಿನಿಂದ ಇವತ್ತಿನವರೆಗೆ ಜನರ ನಡುವೆ ಅದೇ ಸೆಳೆತವನ್ನು ಉಳಿಸಿಕೊಂಡಿದೆ.

ಮೊದಲ ಬಾರಿ ತೆರೆಯ ಮೇಲೆ ರೈಲು ಓಡುತ್ತಿರುವುದನ್ನು ನೋಡಿದ ಮೊಟ್ಟ ಮೊದಲ ಸಿನಿಮಾ ಪ್ರೇಕ್ಷಕರು ಚಿತ್ರಮಂದಿರದೊಳಗೇ ರೈಲು ನುಗ್ಗಿತೆಂದು ಭಯಬಿದ್ದು ಓಡಿದ ಆ ಮೊದಲ ದಿನಗಳಿಂದ ಹಿಡಿದು, ಬೆರಳತುದಿಯಲ್ಲೇ ಇಷ್ಟಬಂದ ಚಿತ್ರವನ್ನು ಸೆಕೆಂಡುಗಳಲ್ಲೇ ಎಟುಕಿಸಿಕೊಳ್ಳುವ ಈ ದಿನಗಳವರೆಗೆ ಚಲನಚಿತ್ರ ತನ್ನ ಜೀವಂತಿಕೆಯನ್ನು ದಿನದಿಂದ ದಿನಕ್ಕೆ ಹೆಚ್ಚಿಸಿಕೊಳ್ಳುತ್ತಿದೆ.

ಇವತ್ತಿಗೂ ನಮ್ಮ ಮನೆಗಳಲ್ಲಿ ಹಿರಿಯರು ಅವರ ಬಾಲ್ಯ, ಯೌವನದ ದಿನಗಳಲ್ಲಿ ಚಲನಚಿತ್ರಕ್ಕೆ ಹೋಗುವಾಗ ಇದ್ದ ಸಂಭ್ರಮದ ಕತೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುವುದಿದೆ. ಆಗೆಲ್ಲ ಚಿತ್ರ ನೋಡುವುದೆಂದರೆ ಯಾವುದೋ ಒಂದು ಮಾಯಾಲೋಕದೊಳಗೆ ಎರಡೂವರೆ ಗಂಟೆ ಜೀವಿಸಿ, ತಮ್ಮದಲ್ಲದ ಬದುಕಿನ ಕಥೆಗಳೊಳಗೆ ತಾವೇ ಓಡಾಡಿ ಬಂದ ಅನುಭವವನ್ನು ಒಳಗಿಸಿಕೊಳ್ಳುವ ಖುಷಿಯ ಕಾಲ. ಊರೊಳಗೆ ಬಂದು ಸಿನಿಮಾ ಪ್ರಚಾರ ಮಾಡುವ ಚಕ್ಕಡಿಗಾಡಿಯ ಪ್ರಚಾರ ವಾಹನ, ಅದರ ಹಾರ್ನ್ ಸ್ಪೀಕರ್‌ಗಳು, ಮಹನೀಯರೆ- ಮಹಿಳೆಯರೇ, ಹಿರಿಯರೇ, ಕಿರಿಯರೇ, ಇದೀಗ ನಿಮ್ಮೂರಿಗೆ ಬಂದಿದೆ ಪದ್ಮಭೂಷಣಡಾ.ರಾಜ್‌ಕುಮಾರ್, ಕರಾಟೆಕಿಂಗ್ ಶಂಕರ್‌ನಾಗ್ ನಟಿಸಿರುವ ಅಪೂರ್ವ ಸಂಗಮ, ಅಪೂರ್ವ ಸಂಗಮ ಮನಸೂರೆಗೊಳ್ಳುವ ಹಾಡುಗಳು, ಮೈ ನವಿರೇಳಿಸುವ ಹೊಡೆದಾಟಗಳು.

ಇಂದೇ ನೋಡಿ ಆನಂದಿಸಿ, ಮರೆಯದಿರಿ ಮರೆತು ನಿರಾಶರಾಗದಿರಿ ಎಂಬ ಪ್ರಚಾರಶೈಲಿ ಇವತ್ತಿಗೂ ನಮ್ಮ ಮನೆಗಳ ಹಿರಿಯರ ಮನಸ್ಸೊಳಗೆ ನೆನಪಾಗಿ ಉಳಿದಿದೆ. ಇಂತಹ ಪ್ರಚಾರಗಳಿಂದಲೇ ಇಂಥ ಸಿನಿಮಾವನ್ನು ಇಂಥ ದಿನ ಮನೆಮಂದಿಯೊಡನೆ ನೋಡುವುದೆಂದು ನಿಶ್ಚಯಿಸಿ ಅಕ್ಕಪಕ್ಕದೂರಿನ ಚಿತ್ರಮಂದಿರ- ಟೆಂಟುಗಳಿಗೆ ಎತ್ತಿನ ಚಕ್ಕಡಿ ಕಟ್ಟಿಕೊಂಡು ಗುಂಪುಗುಂಪಾಗಿ ಹೋಗಿ ಬರುತ್ತಿದ್ದ ದಿನಗಳನ್ನು ಆ ದಿನಗಳ ಚಿತ್ರಪ್ರೇಕ್ಷಕರು ಇವತ್ತಿಗೂ ಬಾಯಿಚಪ್ಪರಿಸಿಕೊಂಡು ನೆನಪು ಮಾಡಿಕೊಳ್ಳುತ್ತಾರೆ. ಸಿನಿಮಾ ನೋಡಲು ಚಕ್ಕಡಿಗಾಡಿ ಕಟ್ಟುವುದರಿಂದ ಹಿಡಿದು, ಆವತ್ತಿನ ಊಟದ ಬುತ್ತಿ ಕಟ್ಟಿಕೊಳ್ಳುವ ಮೂಲಕ ಚಿತ್ರ ನೋಡುವ ಸಂಭ್ರಮ ಚಿತ್ರಮಂದಿರ ತಲುಪಿ, ರಸ್ತೆಯ ಆಸುಪಾಸಿನ ಲೈಟುಕಂಬಗಳಿಗೆ ಎತ್ತುಗಳನ್ನು ಕಟ್ಟಿ, ಗಾಡಿ ನಿಲ್ಲಿಸಿ ಚಿತ್ರಮಂದಿರಕ್ಕೆ ತೆರಳುವತನಕ ಹಾಗೆಯೇ ಇರುತ್ತಿತ್ತು.

ಚಿತ್ರ ಶುರುವಾಗುವ ಮೊದಲಿನ ಹಮಾಮ್, ಲೈಫ್‌ಬಾಯ್, ಇಮಾಮಿ ಫೇರ್‌ನೆಸ್ ಕ್ರೀಂ ಜಾಹೀರಾತುಗಳನ್ನು ಸಹ ಚಿತ್ರದಷ್ಟೇ ಆಸ್ವಾದಿಸಿ ಸಿನಿಮಾದ ಸೆನ್ಸಾರ್ ಸರ್ಟಿಫಿಕೇಟಿನಲ್ಲಿ ರೀಲ್ ಎಷ್ಟಿದೆ ಎಂದು ಗಮನಿಸಿ ಚಿತ್ರ ನೋಡುತ್ತಿತ್ತು ಆ ತಲೆಮಾರು. ನಾಯಕನ ಡೈಲಾಗುಗಳಿಗೆ ತಲೆದೂಗುತ್ತ, ನಟಿಯ ವೈಯಾರವನ್ನು ಸವಿಯುತ್ತ, ಖಳನಾಯಕನ ಆರ್ಭಟಕ್ಕೆ ಕೇಡಿಗತನಕ್ಕೆ ಮನಸೊಳಗೇ ಹಿಡಿಶಾಪ ಹಾಕುತ್ತ ಇಂಟರ್ವಲ್ ಟೈಮಿಗೆ ಕುರುಕುತಿಂಡಿ ತಿಂದು ಮೈಮರೆಯುತ್ತ ಇಷ್ಟವಾದ ದೃಶ್ಯ-ಹಾಡು-ಡೈಲಾಗ್ ಬಂದಾಗಲೆಲ್ಲ ಶಿಳ್ಳೆ ಹೊಡೆಯುತ್ತ ಚಿತ್ರ ಮುಗಿದದ್ದೇ ತಿಳಿಯುತ್ತಿರಲಿಲ್ಲ.

ಚಿತ್ರ ನೋಡಿಯಾದ ನಂತರ ಸಂತೆ ಭೇಟಿ, ಸರಂಜಾಮುಗಳ ಖರೀದಿ, ಹೋಟೆಲಿನಲ್ಲಿ ಮಸಾಲೆ ದೋಸೆ, ಚಹಾ ಕುಡಿದು ಮತ್ತೆ ಗಾಡಿ ಹತ್ತಿದರೆ ಮತ್ತೆ ಮನೆ ತಲುಪುವ ತನಕ ನೋಡಿದ ಚಿತ್ರದ ಕಥೆಯನ್ನು ನಾನಾ ಆಯಾಮಗಳಿಂದ ನೆನಪು ಮಾಡಿಕೊಳ್ಳುತ್ತ ಅದು ಚೆನ್ನಾಗಿತ್ತು, ಇದು ಚೆನ್ನಾಗಿತ್ತೆಂದು ಚರ್ಚಿಸುತ್ತ ಮನೆ ತಲುಪಿಕೊಳ್ಳುತ್ತಿದ್ದ ದಿನಗಳು ಅವು. ಚಿತ್ರ ನೋಡಿ ಬಂದ ನಂತರವೂ ವಾರಗಟ್ಟಲೆ ಆ ಚಿತ್ರದ ಕಥೆಯನ್ನು ಇರುವುದರೊಡನೆ ಇನ್ನಷ್ಟು ಮಸಾಲೆ ಉದುರಿಸಿ ಗೆಳೆಯ-ಗೆಳತಿಯರು, ಊರವರೊಡನೆ ಹಂಚಿಕೊಂಡು ಅವರಿಗೂ ಸಹ ಸಿನಿಮಾ ನೋಡುವ ಆಸೆ ಹುಟ್ಟಿಸುವತನಕ ಒಂದು ಸಿನಿಮಾ ಜನರ ದೈನಂದಿನ ಬದುಕಿನೊಳಗೆ ಒಂದು ಭಾಗವೇ ಆಗಿ ಹೋಗಿತ್ತು.

ಒಂದು ಸಿನಿಮಾ ನೋಡಿ ಅದರ ಬಗ್ಗೆ ಮಾತಾಡುವಲ್ಲಿಗಷ್ಟೇ ಆವತ್ತಿನ ಸಿನಿಮಾದ ಪ್ರಭಾವ ಸೀಮಿತಗೊಂಡಿರಲಿಲ್ಲ. ನಟ, ನಟಿಯರ ಬಟ್ಟೆ ಬರೆ ದಿರಿಸುಗಳ ಶೈಲಿಯನ್ನು ತಮ್ಮದಾಗಿಸಿಕೊಳ್ಳುವ ಹುಕಿಯನ್ನೂ ಸಿನಿಮಾಗಳು ಕೊಡುತ್ತಿದ್ದವು. ನಾಯಕಿಯರ ಕೇಶವಿನ್ಯಾಸ, ಸೀರೆಯುಡುವ ಶೈಲಿ, ಹೊಸ ಬಗೆಯ ಫ್ಯಾಷನ್ ಬಟ್ಟೆಗಳು ಮಹಿಳೆಯರನ್ನು ಸೆಳೆದು ಒಳಗೆಳೆದುಕೊಳ್ಳುತ್ತಿದ್ದವು. ಊರಿನ ಟೈಲರಿಗೆ ಪ್ರಮುಖ ನಟ, ನಟಿಯರ ಚಿತ್ರಗಳು ತೆರೆಕಂಡ ತಿಂಗಳುಗಳ ತನಕ ಕೈ ತುಂಬ ಬಟ್ಟೆ ಹೊಲೆಯುವ ಹೊಸ ಆರ್ಡರುಗಳು ಸಿಗುತ್ತಿದ್ದವು. ಸ್ಲೀವ್ ಸ್ವಲ್ಪ ಕಡಿಮೆ ಇರಲಿ, ಜಾಕೆಟ್ಟಿನ ಬೆನ್ನು ಸ್ವಲ್ಪ ಅಗಲ ಇಡಿ, ಸೀರೆಗೆ ಇಂಥ ಕುಚ್ಚಿರಲಿ ಎಂದು ಟೈಲರಿನೆದುರು ತಮ್ಮ ವಸ್ತ್ರವಿನ್ಯಾಸ ಜ್ಞಾನ ಪ್ರದರ್ಶಿಸುತ್ತಿದ್ದ ಹೆಂಗಸರ ಜ್ಞಾನ ಮೂಲ ಯಾವ ಸಿನಿಮಾದ್ದೆಂದು ಟೈಲರೇ ಅರ್ಥ ಮಾಡಿಕೊಂಡು ಬಟ್ಟೆ ಹೊಲೆಯಬೇಕಿತ್ತು.

ಬಟ್ಟೆಗಂಟಿನಲ್ಲಿ ಸೀರೆ, ಬಳೆ, ಜಾಕೇಟು ಪೀಸುಗಳನ್ನು ಮಾರಿಕೊಂಡು ಬರುತ್ತಿದ್ದ ಊರೂರು ನಡೆದಾಡುವ ವ್ಯಾಪಾರಿಗಳು ಆವತ್ತವತ್ತಿನ ನಟ, ನಟಿಯರು ಮತ್ತು ಸಿನಿಮಾ ಹೆಸರುಗಳನ್ನು ಸೀರೆ, ಬಳೆಗಳಿಟ್ಟು ಮಹಿಳೆಯರನ್ನು ಬಟ್ಟೆ ವ್ಯಾಪಾರಕ್ಕೆ ಪುಸಲಾಯಿಸುವ ತಂತ್ರವನ್ನೂ ಕಂಡುಕೊಂಡಿದ್ದರು. ನೋಡಿ ಅಕ್ಕ ಡಿಂಪಲ್ ಕಪಾಡಿಯಾ ಸೀರೆ, ಅಂಬಿಕಾ ಜುಮಕಿ, ಮಂಜುಳಾ ಬಿಂದಿ, ಜ್ಯೂಲಿಲಕ್ಷ್ಮಿ ಬ್ಯಾಂಗಲ್ಸ್ ಎಂದು ಹಳೆಯ ಬಟ್ಟೆ ದಾಸ್ತಾನಿಗೇ ಹೊಸ ಹೆಸರಿಟ್ಟು ತಮ್ಮ ವ್ಯಾಪಾರವನ್ನೂ ತೂಗಿಸಿಕೊಳ್ಳುತ್ತಿದ್ದರು. ಬಿಡುವಿನ ಸಮಯದಲ್ಲಿ ಮನೆ ಹೆಂಗಸರು ಮಾತಿಗೆ ಕುಳಿತರೆ ಆ ಸಿನಿಮಾದ ಹೀರೊಯಿನ್ ಆ ಹಾಡಲ್ಲಿ ಉಟ್ಟಿದ್ದ ಸೀರೆಯ ಬಣ್ಣ, ಡಿಸೈನ್ ಇನ್ನಿತ್ಯಾದಿ ಛಪ್ಪನೈವತ್ತಾರು ಪ್ಯಾಟ್ರನ್‌ಗಳ ಬಗ್ಗೆ ಮಾತನಾಡುತ್ತ ತಮ್ಮ ದಿರಿಸಿನ ಪಾಂಡಿತ್ಯವನ್ನು ಪ್ರದರ್ಶನಕ್ಕಿಟ್ಟು ಒಬ್ಬರಿಗೊಬ್ಬರು ಬೆನ್ನು ತಟ್ಟಿಕೊಳ್ಳುತ್ತಿದ್ದುದು ಸರ್ವೇ ಸಾಮಾನ್ಯ ಸಂಗತಿಯಾಗಿತ್ತು.

ಊರಿಗೆ ಹೊಸತೊಂದು ಸಿನಿಮಾ ಹೊತ್ತು ತರುವ ಪ್ರತೀ ಶುಕ್ರವಾರ ಇನ್ನೊಂದು ಅನಾಹುತವನ್ನೂ ಹೊತ್ತು ತರುತ್ತಿತ್ತು. ಅದು ಊರೊಳಗೆ ಕದ್ದುಮುಚ್ಚಿ ನಡೆಯುತ್ತಿದ್ದ ಹುಡುಗ- ಹುಡುಗಿಯರ ಪ್ರೇಮಪ್ರಸಂಗಗಳು! ಸಿನಿಮಾ ಟಾಕೀಸಿನೊಳಗೆ ಇನ್ಯಾರದೋ ಕಣ್ಣಿಗೆ ಬಿದ್ದು, ನೋಡಿದವರು ಇಂಥೋನ ಮಗಳು ಇಂಥೋನ ಹುಡುಗನೊಂದಿಗೆ ಕಾರ್ನರ್ ಸೀಟಿನಲ್ಲಿ ಹುರಿದ ಜೋಳ ತಿನ್ನುತ್ತಿದ್ದರು. ನಾನೇ ನನ್ನ ಕಣ್ಣಾರೆ ನೋಡಿದೆ ಎಂದು ಊರೊಳಗೆ ಉಸುರಿಬಿಡುತ್ತಿದ್ದರು. ಅದು ಕಿವಿಯಿಂದ ಕಿವಿಗೆ ಅಪ್ಡೇಟ್ ಆಗುತ್ತ ಇಬ್ಬರೂ ಲೈಟ್ ಆಫ್ ಆದ್ಮೇಲೆ ಒಬ್ಬರಿಗೊಬ್ಬರು ಮುತ್ತನ್ನೂ ಕೊಡುತ್ತಿದ್ರಂತೆ ಎಂಬ ಅತಿಶಯೋಕ್ತಿಗಳ ಸಂಗಡ ಲವರ್‌ಗಳ ಗುಪ್ತ ಭೇಟಿ, ಗುಪ್ತ ಮನರಂಜನಾ ಚಟುವಟಿಕೆಗಳೆಲ್ಲವನ್ನೂ ಬಟಾಬಯಲುಗೊಳಿಸುತ್ತಿತ್ತು. ಆಗಿನ ಕಾಲದಲ್ಲಿ ಲವ್ ಮ್ಯಾರೇಜ್ ಮತ್ತು ಲವ್ ಬ್ರೇಕಪ್ ಆದವರು ಹೆಚ್ಚಾನೆಚ್ಚು ಸಿಕ್ಕಿ ಬೀಳುತ್ತಿದ್ದುದು ಸಿನಿಮಾ ಥೇಟರುಗಳಲ್ಲೇ. ಹೀಗೆ ಒಂದು ಲೆಕ್ಕದಲ್ಲಿ ಸೀಕ್ರೆಟ್ ಪ್ರೇಮಗಳು ಬಟಾಬಯಲಾಗಲು ಸಿನಿಮಾಗಳು ಕೂಡ ಕಾರಣವೇ ಆಗಿದ್ದವು.

ಹುಡುಗಿಯೊಡನೆ ನೋಡಿದ ಮೊದಲ ಸಿನಿಮಾ ಎಂದು ಇಬ್ಬರ ಟಿಕೆಟ್ಟುಗಳನ್ನು ಲೇಖಕ್ ನೋಟ್ ಪುಸ್ತಕದ ಹಿಂದಿನ ಒಳರಟ್ಟಿಗೆ ಅಂಟಿಸಿ ಅದನ್ನು ಆಗಾಗ್ಗೆ ನೇವರಿಸುತ್ತ ಹುಡುಗಿಯ ನೆನಪು ಮಾಡಿಕೊಳ್ಳುತ್ತಿದ್ದ ಹುಡುಗರು ಬೀದಿಗಿಪ್ಪತ್ತು ಜನ ಸಿಗುತ್ತಿದ್ದರು. ಹುಡುಗಿಯ ಆಸೆಯಂತೆ ಶ್ರೀನಾಥ್, ಅಂಬರೀಷರಂತೆ ಉದ್ದನೆಯ ಕ್ರಾಪ್ ಕಟಿಂಗ್ ಮಾಡಿಸಿಕೊಂಡು ಅದನ್ನು ಆಗಾಗ್ಗೆ ಅವರೆದುರು ಕೈಗಳಿಂದ ಹಿಂದಕ್ಕೆಸೆಕೊಂಡು ಹುಡುಗಿಯರ ಕುಡಿನೋಟದ ಮೆಚ್ಚುಗೆ ಪಡೆದು ಸ್ಟೈಲು ಮೆರೆಯುತ್ತಿದ್ದ ಹಳೆಯ ಹುಡುಗರ ಸಂಭ್ರಮಗಳಿಗೆ ಅಷ್ಟೆಲ್ಲ ಕೊಡುಗೆ ಕೊಟ್ಟ ಆವತ್ತಿನ ಸಿನಿಮಾಗಳಿಗೆ ಎಷ್ಟು ಮೆಚ್ಚುಗೆ ಕೊಟ್ಟರೂ ಕಡಿಮೆಯೇ. ಒಂದೇ ಊರೊಳಗೆ ಒಂದೇ ಗೆಳೆಯರ ಬಳಗದೊಳಗೆ ಬೇರೆ ಬೇರೆ ಸಿನಿಮಾ ಸ್ಟಾರ್‌ಗಳ ಫ್ಯಾನ್‌ಗಳು ಹುಟ್ಟಿಕೊಂಡು ಅವನ ನಾಯಕನನ್ನು ಇವನು ಆಡಿಕೊಳ್ಳುವುದು, ಇವನ ನಾಯಕನನ್ನು ಅವನು ಕೀಟಲೆ ಮಾಡುವುದು ಹೀಗೆ ಪರಸ್ಪರ ರೇಗಿಸಿಕೊಳ್ಳಲು ಸಿನಿಮಾ ಕಾರಣವಾಗುತ್ತಿತ್ತು. ಇಷ್ಟದ ನಟನ ಚಿತ್ರ ಬಿಡುಗಡೆಯ ದಿನ ಬಿದಿರುಕೋಲುಗಳಿಂದ ನಕ್ಷತ್ರಗಳನ್ನು ಮಾಡಿ, ಅವಕ್ಕೆ ಬಣ್ಣದ ಪೇಪರುಗಳನ್ನು ಅಂಟಿಸಿ, ಅವುಗಳ ಮೇಲೆ ಥಿಯೇಟರುಗಳಿಂದ ಹಿಂದಿನ ದಿನವೇ ಸಂಗ್ರಹಿಸಿ ತಂದ ಪೋಸ್ಟರುಗಳ ನಟ– ನಟಿಯರ ಚಿತ್ರ ಕತ್ತರಿಸಿ ಅಂಟಿಸಿ ಅವನ್ನು ಟಾಕೀಸುಗಳಿಗೆ ಕೊಂಡೊಯ್ಯುವ ಜಮಾನದ ಕಥೆಗಳೇ ರಸವತ್ತು.

ಆ ನಟನ ಅಭಿಮಾನಿಗಳು ಹೋದ ಸಲ ಇಷ್ಟೆತ್ತರದ ನಕ್ಷತ್ರ ಮಾಡಿದ್ದಾರೆ, ಈ ಸಲ ನಮ್ಮ ನಟನ ನಕ್ಷತ್ರ ಅದಕ್ಕಿಂತ ಎರಡು ಅಡಿ ಉದ್ದವಿರಬೇಕೆಂದು ದೊಡ್ಡ ಬಿದಿರು ನಕ್ಷತ್ರ ಮಾಡಿ ಅದನ್ನು ಟಾಕೀಸಿನವರೆಗೆ ಹೊತ್ತೊಯ್ಯಲಾಗದೆ ಪಡಿಪಾಟಲು ಬಿದ್ದು ಒದ್ದಾಡಿದ ಯುವಕರ ಪಡಿಪಾಟಲುಗಳನ್ನು ಅವರ ಬಾಯಿಂದಲೇ ಕೇಳಿ ಆನಂದಿಸಬೇಕು. ಸಿನಿಮಾ ಟಿಕೇಟುಗಳನ್ನು ಪಡೆಯಲು ಕ್ಯೂ ನಿಲ್ಲುವ ಸುಖವೇ ಬೇರೆಯದ್ದು. ಮೈಲುಗಟ್ಟಲೇ ಬೆಳೆಯುತ್ತಿದ್ದ ಕ್ಯೂವನ್ನು ಕಬ್ಬಿಣದ ಸರಳುಪಂಜರಗಳಿಂದ ಬಂಧಿಸಿಡಲಾಗುತ್ತಿತ್ತು. ಹಾಗಿದ್ದರೂ ಕ್ಯೂ ಮುರಿದು ಮೇಲೆ ಹತ್ತಿ ಪಂಜರದೊಳಗೆ ಧುಮುಕಿಬಿಡುತ್ತಿದ್ದ ಕೀಟಲೆ ಹುಡುಗರಿಗೆ ಲಭಿಸುತ್ತಿದ್ದ ಬೈಗುಳಗಳು ಅವುಗಳ ಕಿವಿಗೇ ಬೀಳುತ್ತಿರಲಿಲ್ಲ. ಟಿಕೇಟು ಕ್ಲೋಸಾಗಿ ಅಷ್ಟುದ್ದ ಕ್ಯೂ ನಿಂತರೂ ಟಿಕೇಟು ಸಿಗದೆ ಹ್ಯಾಪುಮೋರೆ ಹಾಕಿಕೊಂಡು ಹೊರ ಬರುತ್ತಿದ್ದವರ ಪಾಲಿಗೆ ಬ್ಲ್ಯಾಕ್ ಟಿಕೆಟ್ ಮಾರುವವರೇ ಆಪದ್ಭಾಂಧವರು. ಅವರೊಡನೆ ಚೌಕಾಸಿಗಿಳಿದು, ಯಾವ ಚೌಕಾಶಿಗೂ ಜಗ್ಗದ ಆ ಕಪ್ಪು ಟಿಕೀಟು ಹುಡುಗರು ಕೇಳಿದ್ದಷ್ಟು ಕೊಟ್ಟು ಟಾಕೀಸಿಗೆ ನುಗ್ಗಿ ಸೀಟಿಗೆ ಒರಗುತ್ತಿದ್ದಂತೆ ದೊಡ್ಡ ಯುದ್ಧವೊಂದನ್ನು ಗೆದ್ದ ಖುಷಿ.

ಯಾರದ್ದೋ ಕಲ್ಪನೆಯ ಪಾತ್ರೆಯೊಳಗೆ ಬೇಯುವ ಕಥಾಪ್ರಪಂಚ, ಅದರ ಪಾತ್ರಗಳು, ನಡೆಯುವ ಸನ್ನಿವೇಶಗಳು ಹೀಗೆ ಒಂದಿಡೀ ಜನಸಮೂಹದೊಳಗೆ ಬಸಿದುಹೋಗುವ ಈ ಮಾಯೆಗೆ ಏನೆನ್ನುವುದು?! ಕಣ್ಣೆದುರು ನಡೆಯುತ್ತಿರುವ ಯಾವೊಂದು ಸಹ ನಿಜವಲ್ಲವೆಂದು ತಿಳಿದಿದ್ದರೂ ಅದರೊಳಗೇ ಮುಳುಗಿಹೋಗುವ ಈ ಚಿತ್ರಸಮುದ್ರವನ್ನು ಏನೆಂದು ಪರಿಗಣಿಸುವುದು? ಸಂಭಾವನೆ ಪಡೆದು ನಟಿಸಿ ಹೋಗುವ ವೃತ್ತಿಪರ ನಟ ನಟಿಯರು ಕತೆಗಳ ಪಾತ್ರಗಳಾಗಿಯೇ ಸಮ್ಮೋಹಗೊಳಿಸುವ, ತೆರೆಯಾಚೆಗೂ ನಮ್ಮೊಡನಿದ್ದು ಜೀವಿಸಿಬಿಡುವ ಈ ಕಣ್ಕಟ್ಟಿಗೆ ಏನೆಂದು ಹೆಸರಿಡುವುದು? ಇಷ್ಟೆಲ್ಲ ಮಾಯಾವಿತನವನ್ನು ಆವಾಹಿಸಿಕೊಂಡ ಸಿನಿಮಾ ಎಂಬ ಕಥೆಗಳ ತಿಜೋರಿ ನಮ್ಮ ಹಳೆಯ ತಲೆಮಾರನ್ನು ಕಾಡಿದ, ಒಳಗೊಂಡ ಬಗೆಯೇ ಸೋಜಿಗ. ಮತ್ತದು ಕಾಲಾನಂತರದಲ್ಲಿ ತಲೆಮಾರುಗಳ ಅಚ್ಚರಿಯ ನೋಟ ಮತ್ತು ಆಕರ್ಷಣೆಯನ್ನು ಇಷ್ಟಿಷ್ಟೇ ಕಳೆದುಕೊಳ್ಳುತ್ತಿರುವುದೂ ನಿಜ. ಇಷ್ಟೆಲ್ಲ ಹುಲುಸಾದ ಅನುಭವಗಳನ್ನು ಹಿಂದಿನ ತಲೆಮಾರಿನ ಸಮೂಹಕ್ಕೆ ದಾಟಿಸಿದ ಸಿನಿಮಾ ಜಗತ್ತು ಇವತ್ತಿನ ಸಮಕಾಲೀನ ಜಗತ್ತಿನಲ್ಲೂ ಇದೆ.

ಆದರೆ ಅದಕ್ಕೆ ಮೊದಲಿಗಿದ್ದ ಸಂಭ್ರಮಾಚರಣೆಯ ಹಬ್ಬದಂಥ ಕಳೆ ಮಂಕುಗೊಂಡಿದೆ. ಮೊದಲಿಗೆ ಸಿನಿಮಾ ಕೈಗೆಟುಕದ ಸಿಹಿದ್ರಾಕ್ಷಿ. ಅದನ್ನು ಪಡೆಯಲು ಕೈ ನಿಲುಕಿಸಿ ದ್ರಾಕ್ಷಿ ಸಿಕ್ಕೊಡನೆ ಖುಷಿಪಡುತ್ತಿದ್ದ ಕಾಲ ಕಳೆದೇಹೋಗಿದೆ. ಈಗ ಸಿನಿಮಾ ಎಂಬ ಸಿಹಿದ್ರಾಕ್ಷಿ ನಮ್ಮ ಸುತ್ತಲೆಲ್ಲ ಚೆಲ್ಲಾಡಿಹೋಗುವಷ್ಟು ಹತ್ತಿರ ಬಂದಿದೆ. ವಿಡಿಯೋ ಕ್ಯಾಸೆಟ್, ಹಾಡಿನ ಕ್ಯಾಸೆಟ್‌ಗಳನ್ನು ಲೈಬ್ರರಿಗಳಿಂದ ಬಾಡಿಗೆ ತಂದು ನೋಡಿ ಕೇಳುತ್ತಿದ್ದ ಕಾಲ ಮುಗಿದು, ಇನ್ನೂ ಬಿಡುಗಡೆಯೇ ಆಗಿರದ ಎಡಿಟಿಂಗ್ ಟೇಬಲ್ಲಿನಲ್ಲಿ ಫಸ್ಟ್ ವರ್ಷನ್ ಮುಗಿಸಿಕೊಂಡ ಸಿನಿಮಾಗಳೇ ಲೀಕ್ ಆಗಿ ನಮ್ಮ ಮೊಬೈಲ್ ತಲುಪುತ್ತಿವೆ. ವೆಬ್ ಮೂವಿ ಸ್ಟ್ರೀಮಿಂಗ್ ವೆಬ್‌ಸೈಟುಗಳು ಮೆಂಬರ್‌ಶಿಪ್ ಪಡೆದವರಿಗೆ ಒಂದಿಡೀ ತಿಂಗಳು ದುಡ್ಡೇ ಪಡೆಯದೇ ಸಾವಿರಾರು ಸಿನಿಮಾಗಳನ್ನು ಕೊಡಮಾಡುತ್ತಿವೆ. ಟೆಲಿಗ್ರಾಂ ಎಂಬ ಸಂವಹನದ ಮೊಬೈಲ್ ಆ್ಯಪ್ ಇಂದು ಪೈರಸಿ ಸಿನಿಮಾಗಳನ್ನು ತಂದು ತಂದು ಸುರಿಯುವ ಕಾರ್ಖಾನೆಯೇ ಆಗಿಹೋಗಿದೆ.

ಮನರಂಜನೆಗೆಂದು ಏನು ಬೇಕಿದೆಯೋ ಅದರ ಸಾವಿರ ಪಟ್ಟು ಆಯ್ಕೆಗಳನ್ನು ಮನರಂಜನಾ ಉದ್ಯಮ ಜನರೆದುರು ಕಸದಂತೆ ಸುರಿಯುತ್ತಿದೆ. ಇವೆಲ್ಲವುಗಳ ಪರಿಣಾಮ ಅತಿಯಾದ ಪಾಯಸ ಕುಡಿದು ದಣಿದ ಮಗುವಿನಂತೆ ಚಿತ್ರಪ್ರೇಕ್ಷಕನೇ ಸುಸ್ತೆದ್ದು ಹೋಗುತ್ತಿದ್ದಾನೆ. ಒಂದುಚಿತ್ರನೋಡಬೇಕೆಂದರೆ ವಿಮರ್ಶೆ ನೋಡಿ, ಜನರ ಅಭಿಪ್ರಾಯಗಳನ್ನು ಕೇಳಿ, ಬುಕ್ ಮೈ ಶೋ ವೀಕ್ಷಕರ ರೇಟಿಂಗ್ ಆಧರಿಸಿ ನಾನಿಂಥಚಿತ್ರನೋಡಬೇಕು ಎಂದು ತೀರ್ಮಾನಿಸುವಂತಾಗಿದೆ. ಆಯ್ಕೆಯ ಅಪರಿಮಿತ ಅವಕಾಶಗಳು ಸಿನಿಮಾವನ್ನು ಒಂದು ಸಂಭ್ರಮವಾಗಿಸುವ ಹಿಂದಿನ ದಿನಗಳನ್ನು ಸಾರಾಸಗಟಾಗಿ ಕೊಂದುಹಾಕಿವೆ. ಒಟ್ಟೊಟ್ಟಿಗೇ ಸಾವಿರಾರು ಬಗೆಯ ತಿಂಡಿ ತಿನಿಸುಗಳನ್ನು ಹರಡಿಟ್ಟುಕೊಂಡವರಿಗೆ ಯಾವುದೂ ಬೇಡವೆನಿಸುತ್ತದೆಯಲ್ಲವೆ? ಇವತ್ತಿನ ಚಿತ್ರಪ್ರೇಕ್ಷಕನ ಸ್ಥಿತಿಯೂ ಹಾಗೆಯೇ ಇದೆ. ಈಗ ಹಳೆಯ ಕಾಲಕ್ಕೆ ಪುನಃ ಮರಳಿ ಅಲ್ಲಿನ ಸಂಭ್ರಮಗಳನ್ನೇ ಹೆಕ್ಕಿಕೊಂಡು ಚಪ್ಪರಿಸಬೇಕಾದ ಅನಿವಾರ್ಯ ಪರಿಸ್ಥಿತಿಗೆ ನಮ್ಮನ್ನು ನಾವೇ ನೂಕಿಕೊಂಡಿದ್ದೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT