ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ಕನಸು, ನೆಲೆಕಾಣುವ ತವಕ...

Last Updated 2 ಮೇ 2019, 19:45 IST
ಅಕ್ಷರ ಗಾತ್ರ

ಹಳ್ಳಿಗಾಡಿನ ಸಹಜ ಮುಗ್ಧತೆಯಿಂದಲೇ ಬಣ್ಣದ ಲೋಕಕ್ಕೆ ಕಾಲಿಟ್ಟ ಲೋಕೇಶ್‌ ಬಸವಟ್ಟಿ, ನಟ ರವಿಚಂದ್ರನ್‌ ಅವರ ಪಕ್ಕಾ ಅಭಿಮಾನಿ. ಸಿನಿಮಾ ಕನಸುಗಾರ ಕೂಡ ಹೌದು. ಎಸ್ಸೆಸ್ಸೆಲ್ಸಿ ಓದುವಾಗ ಅವರ ತಾತ ತೀರಿ ಹೋದರಂತೆ. ತಿಥಿ ದಿನದಂದು ಯಳಂದೂರು ಮಹದೇಶ್ವರ ಟಾಕೀಸ್‌ನಲ್ಲಿ ಬಿಡುಗಡೆಯಾದ ‘ಪ್ರೀತ್ಸೋದ್‌ ತಪ್ಪಾ’ ಸಿನಿಮಾ ನೋಡಿ ಬಂದ ಕುಡಿ ಮೀಸೆ ಹೈದ ಆಗಲೇ ಸಿನಿಮಾ ಸೆಳೆತದ ಜಾಡು ಹಿಡಿದರಂತೆ.

ಹೀಗೆ ಬಣ್ಣದ ಬದುಕಿನ ಸೆಳೆತದ ಬಗ್ಗೆ ಮಾತನಾಡುತ್ತಲೇ ಲೋಕೇಶ್‌ ಬಾಲ್ಯದ ದಿನಗಳತ್ತ ಜಾರಿದರು. ಶಾಲೆಯಲ್ಲಿದ್ದಾಗ ‘ಏಕಲವ್ಯ’ ನಾಟಕದಲ್ಲಿ ಪಾತ್ರ ಮಾಡಿದ್ದು, ಚಾಮರಾಜನಗರ ಸುತ್ತಮುತ್ತ ಯಾವುದೇ ಹಳ್ಳಿಯಲ್ಲಿ ‘ದಕ್ಷಯಜ್ಞ’ ನಾಟಕ ಪ್ರದರ್ಶನವಾದರೆ ಗೆಳೆಯರ ಪಟಾಲಂನೊಂದಿಗೆ ಅಲ್ಲಿಗೆ ಸೈಕಲ್‌ ಏರಿ ಹೊರಟು ನಾಟಕ ವೀಕ್ಷಿಸಿದ ಗಳಿಗೆಗಳ ಸವಿ ನೆನಪು‌ಗಳನ್ನು ಮೆಲುಕು ಹಾಕಿದರು.

ಸಿನಿಮಾ ಗುಂಗಿಗೆ ಬಿದ್ದು ರಾತ್ರೋರಾತ್ರಿ ಊರು ಬಿಟ್ಟು ಓಡಿ ಬಂದವರು, ಹೆತ್ತವರಿಂದ ದೂರವಾದವರು, ಒಂದೊಳ್ಳೆ ಕೆಲಸ ಬಿಟ್ಟವರು, ಗಾಂಧಿನಗರದಲ್ಲಿ ಅವಕಾಶಕ್ಕಾಗಿ ಅಲೆದು ಚಪ್ಪಲಿ ಸವೆಸಿದವರು, ಕೊನೆಗೆ ಏನೂ ಆಗದೆ ಊರ ದಾರಿ ಹಿಡಿದ ನೂರಾರು ಜನರ ಕಥೆ – ವ್ಯಥೆ ಚಂದನವನದ ಸಿನಿಮಾ ಪೆಟ್ಟಿಗೆ ತೆರೆದಾಗ ಕಾಣಸಿಗುತ್ತದೆ. ಇಂತಹ ಯಾವ ಪೇಚಾಟಕ್ಕೂ ಸಿಲುಕದ ಲೋಕೇಶ್, ಸ್ನೇಹಿತರೊಬ್ಬರ ಪರಿಚಯದ ಮೇರೆಗೆ ಮಂಡ್ಯ ರಮೇಶ್‌ ಅವರ ಗರಡಿ ಸೇರಿದರು. ಅಲ್ಲಿ ನಟನೆಯಲ್ಲಿ ಪಳಗಿ ಪಕ್ವತೆ ಸಾಧಿಸುತ್ತಾ ಹೋದರು.

ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದ ಲೋಕೇಶ್, ಮೆಕ್ಯಾನಿಕಲ್‌ ವಿಷಯದಲ್ಲಿ ಐಟಿಐ ಓದು ಮುಗಿಸಿ ಮೈಸೂರಿನ ಎಲ್‌ಎನ್‌ಟಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದರು. ರಂಗಭೂಮಿ ಸೆಳೆತ, ಬಿಡುವಿಲ್ಲದ ರಂಗ ಚಟುವಟಿಕೆಯಿಂದಾಗಿ ಕೆಲಸಕ್ಕೆ ಗುಡ್‌ಬೈ ಹೇಳಿದರು. ಸಾಂಬಶಿವ ಪ್ರಹಸನ, ಅಗ್ನಿ ಮತ್ತು ಮಳೆ, ಒಂದು ಸೈನಿಕ ವೃತ್ತಾಂತ, ಚೋರ ಚರಣದಾಸ ನಾಟಕಗಳಲ್ಲಿ ಅಭಿನಯಿಸಿ ತಮ್ಮದೇ ಛಾಪು ಮೂಡಿಸಿದರು. ಚಾಮರಾಜನಗರ ಜಿಲ್ಲೆಯ ಪ್ರಾದೇಶಿಕ ನುಡಿಗಟ್ಟಿನ ಸಂಭಾಷಣೆ ಮೂಲಕ ಎಲ್ಲರ ಮನಗೆದ್ದವರು.

ಮೈಸೂರಿನಲ್ಲಿ ಒಮ್ಮೆ ಚೋರ ಚರಣದಾಸ ನಾಟಕ ನೋಡಿದ ಸಿಹಿಕಹಿ ಚಂದ್ರು, ಲೋಕೇಶ್‌ ಅಭಿನಯಕ್ಕೆ ತಲೆದೂಗಿದರು. ಅವರ ನಿರ್ದೇಶನದ ಜೀ ಟಿವಿಯಲ್ಲಿ ಈ ಹಿಂದೆ ಪ್ರಸಾರವಾದ ‘ಪಾರ್ವತಿ ಪರಮೇಶ್ವರ’ ಧಾರಾವಾಹಿಯಲ್ಲಿ ಅವಕಾಶ ಕೊಟ್ಟರು. ಆ ಧಾರಾವಾಹಿಯ ಲಾಯರ್ ಗುಂಡಣ್ಣ ಪಾತ್ರ ಜನ ಮೆಚ್ಚುಗೆ ಗಳಿಸಿತು. ‘ಶ್ರೀಮಾನ್‌ ಶ್ರೀಮತಿ’ ಧಾರಾವಾಹಿಯ ಗೌಡ್ರು ಪಾತ್ರ ಅವರನ್ನು ಜನಪ್ರಿಯತೆಯಲ್ಲಿ ತೇಲುವಂತೆ ಮಾಡಿತು. ನಂತರ ಡಾನ್ಸ್ ಕರ್ನಾಟಕ ಡಾನ್ಸ್‌ ರಿಯಾಲಿಟಿ ಷೋ ಬದುಕಿನ ಗತಿ ಬದಲಿಸಿತು.

ಕಸ್ತೂರಿ ಟಿವಿಯಲ್ಲಿ ಪ್ರಸಾರವಾದ ಪಾಯಿಂಟ್‌ ಪರಿಮಳ, ಸುವರ್ಣ ಟಿವಿಯ ‍ಪರಿಣಿತ ಧಾರಾವಾಹಿಗಳು ಹೆಸರು ತಂದುಕೊಟ್ಟವು. ಸಹಜವಾಗಿಯೇ ಬೆಳ್ಳಿತೆರೆ ಕಡೆ ಆಕರ್ಷಿತರಾದರು. ಸಿನಿಮಾದಲ್ಲಿ ಗಟ್ಟಿಯಾಗಿ ನೆಲೆಯೂರಲು ಲೋಕೇಶ್ ಬಸವಟ್ಟಿ ‘ಆರ್ವ’ ಆಗಿ ಬದಲಾದರು.

ಅವರು ನಾಯಕ ನಟನಾಗಿ ಅಭಿನಯಿಸಿದ ಸುರ್‌ ಸುರ್‌ ಬತ್ತಿ, ಚತುರ್ಭುಜ ಚಿತ್ರಗಳು ಗಳಿಕೆಯಲ್ಲಿ ಹಿಂದೆ ಬಿದ್ದರೂ ಹೆಸರು ಹಾಗೂ ಅವಕಾಶ ತಂದುಕೊಟ್ಟವು. ಈಗ ಅವರ ಅಭಿನಯದ ‘ಡಿಂಗಾ ಬಿ ಪಾಸಿಟಿವ್’ ಚಿತ್ರವನ್ನು ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಐಫೋನ್‌ನಲ್ಲಿ ಚಿತ್ರೀಕರಣ ಮಾಡಲಾಗಿದೆಯಂತೆ. ಚಿತ್ರದ ಡಬ್ಬಿಂಗ್‌ ಕೆಲಸ ನಡೆದಿದ್ದು, ಮೂವರು ಸ್ನೇಹಿತರು, ಒಂದು ನಾಯಿ ಸುತ್ತ ಕತೆ ಸಾಗುತ್ತದೆ.

ರಂಗಭೂಮಿ, ಕಿರುತೆರೆ, ರಿಯಾಲಿಟಿ ಷೋ, ಸಿನಿಮಾ ಯಾವುದಾದರೂ ಸೈ ನಿಭಾಯಿಸುವ ಛಾತಿ ಅವರಿಗಿದೆಯಂತೆ. ಈಗಾಗಲೇ ದೊಡ್ಡ ಬಜೆಟ್‌ನ ಎರಡು ಚಿತ್ರಗಳು ಅವರ ಕೈಯಲ್ಲಿದ್ದು ಅದಕ್ಕೆ ತಯಾರಿ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT