ಭಾನುವಾರ, ಆಗಸ್ಟ್ 1, 2021
28 °C

ಮತ್ತೆ ಬಂದ ‘ರಾಮಾಚಾರಿ’

ಕೆ.ಎಂ. ಸಂತೋಷ್‌ ಕುಮಾರ್‌ Updated:

ಅಕ್ಷರ ಗಾತ್ರ : | |

Prajavani

ಶಂಕ‌ರ್‌ನಾಗ್‌ ನಟನೆಯ ‘ಮಹೇಶ್ವರ’ ಚಿತ್ರದಲ್ಲಿ ಶಂಕರ್‌ನಾಗ್‌ ಪುತ್ರನಾಗಿ ನಟಿಸಿದ್ದ ಮೂರು ವರ್ಷದ ಬಾಲಕ ಇವನೇನಾ ಎನ್ನುವ ಅಚ್ಚರಿ ಸಿನಿಪ್ರಿಯರಿಗೆ ಆಗುವುದು ಸಹಜ. ಹೌದು ಅದೇ ಬಾಲಕ ತೇಜು ನಾಯಕ ನಟ, ನಿರ್ದೇಶಕ, ನಿರ್ಮಾಪಕನಾಗಿ ಬೆಳೆದಿದ್ದಾರೆ. ‘ಅಲ್ಟಿಮೇಟ್‌ ಸ್ಟಾರ್‌’ ಬಿರುದನ್ನೂ ಅಭಿಮಾನಿಗಳಿಂದ ಸಂಪಾದಿಸಿಕೊಂಡಿದ್ದಾರೆ. ಹತ್ತು ವರ್ಷಗಳ ಹಿಂದೆ ‘ಮೀಸೆ ಚಿಗುರಿದಾಗ’ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದ ಶಿವು ಕಾಲಿವುಡ್‌ಗೂ ಕಾಲಿಟ್ಟು ಬಂದಿದ್ದಾರೆ. ಅವರು ತಮಿಳಿನಲ್ಲಿ ‘ಕಾದಲಕ್ಕು ಮರಣಂ ಇಲ್ಲೈ ’, ‘ಕೊಂಜಂ ವೇಯಿಲ್‌ ಕೊಂಜಂ ಮಳೈ’ ಹಾಗೂ ‘ಗಾಂಧಮ್’ ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದಾರೆ. ಇವರನ್ನು ತಮಿಳಿಗೆ ಪರಿಚಯಿಸಿದ್ದು ‘ಕಾದಲನ್’‌ ಸಿನಿಮಾ ಖ್ಯಾತಿಯ ನಿರ್ಮಾಪಕ ಕೆ.ಟಿ. ಕುಂಜುಮನ್‌.

ಮತ್ತೆ ಕನ್ನಡಕ್ಕೆ ವಾಪಸಾಗಿರುವ ತೇಜು ಅವರ ನಟನೆ, ನಿರ್ದೇಶನ ಹಾಗೂ ನಿರ್ಮಾಣದ ‘ರಿವೈಂಡ್‌’ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಇದರ ಬೆನ್ನಲ್ಲೇ ಹೊಸ ಚಿತ್ರವನ್ನು ಅವರು ಪ್ರಕಟಿಸಿದ್ದಾರೆ. ಲಾಕ್‌ಡೌನ್‌ ಘೋಷಣೆಯಾಗುವ ಒಂದು ವಾರ ಮೊದಲು ತಮ್ಮ ಹೊಸ ಚಿತ್ರ ‘ರಾಮಾಚಾರಿ 2.0’ ಚಿತ್ರವನ್ನು ಅವರು ಘೋಷಿಸಿದ್ದರು. ಲಾಕ್‌ಡೌನ್‌ ಕಾರಣಕ್ಕೆ ಈ ಚಿತ್ರ ನನೆಗುದಿಗೆ ಬಿದ್ದಿತ್ತು.

‘ರಾಮಾಚಾರಿ 2.0’ ಚಿತ್ರದ ಸ್ಕ್ರಿಪ್ಟ್‌ ಕೆಲಸ ಮತ್ತು ಮ್ಯೂಸಿಕ್‌ ರೆಕಾರ್ಡಿಂಗ್‌ ಕೆಲಸ ಪೂರ್ಣವಾಗಿದ್ದು, ಶೀಘ‍್ರದಲ್ಲೇ ಚಿತ್ರದ ಚಿತ್ರೀಕರಣ ಆರಂಭಿಸುವ ಯೋಜನೆಯಲ್ಲಿದ್ದಾರೆ ತೇಜು. ಹಾಗೆಯೇ ಪೂರ್ಣಗೊಂಡಿರುವ ‘ರಿವೈಂಡ್‌’ ಚಿತ್ರವನ್ನು ಒಟಿಟಿ ವೇದಿಕೆಯಲ್ಲಿ ‌ಬಿಡುಗಡೆ ಮಾಡುವ ತಯಾರಿಯಲ್ಲಿದ್ದಾರೆ. ಈಗಾಗಲೇ ಅಮೆಜಾನ್‌ ಪ್ರೈಮ್‌ ಜತೆಗೆ ಒಂದು ಸುತ್ತಿನ ಮಾತುಕತೆಯನ್ನು ಅವರು ನಡೆಸಿದ್ದಾರೆ. ಸದ್ಯದಲ್ಲೇ ಈ ಚಿತ್ರ ಅಮೆಜಾನ್‌ಪ್ರೈಮ್‌ನಲ್ಲಿ ನೇರ ಬಿಡುಗಡೆಯಾಗುವ ನಿರೀಕ್ಷೆ ಇದೆ. 

‘ರಾಮಾಚಾರಿ 2.0’ ಚಿತ್ರದ ಬಗ್ಗೆ ‘ಸಿನಿಮಾ ಪುರವಣಿ’ಯ ಜತೆಗೆ ಮಾತಿಗಾರಂಭಿಸಿದ ತೇಜು, ‘ಇಂಗ್ಲಿಷಿನಲ್ಲಿ ಒಂದು ಮಾತಿದೆ ‘ಬಟರ್‌ಫ್ಲೈ ಎಫೆಕ್ಟ್‌’. ಇದನ್ನು ನಾವು ಕನ್ನಡದಲ್ಲಿ ಸಾಂಪ್ರದಾಯಿಕವಾಗಿ ‘ಕರ್ಮ’ ಎನ್ನುತ್ತೇವೆ. ಅಂದರೆ ನಾವು ಮಾಡಿದ್ದನ್ನೇ ನಾವೇ ಅನುಭವಿಸುತ್ತೇವೆ ಎಂದರ್ಥ. ಚಿತ್ರದ ಕಥಾನಾಯಕ ಎಷ್ಟೊಂದು ಬುದ್ಧಿವಂತನೆಂದರೆ ಭವಿಷ್ಯದಲ್ಲಿ ಸಂಭವಿಸುವುದನ್ನು ತನ್ನ ಬುದ್ಧಿಶಕ್ತಿಯಿಂದ ಮೊದಲೇ ಊಹಿಸಿ, ಮುಂದೆ ಆಗುವ ಅನಾಹುತವನ್ನು ತಡೆಯುತ್ತಾನೆ. ಇದು ನನ್ನ ಚಿತ್ರದ ಕಥೆಯ ಒಂದೆಳೆಯ ಸಾರಾಂಶ’ ಎಂದು ಮಾತು ವಿಸ್ತರಿಸಿದರು.

‘ಇದೊಂದು ಹಳ್ಳಿಯ ಹಿನ್ನೆಲೆಯಲ್ಲಿ ನಡೆಯುವ ಕಥೆ. ಆಧುನಿಕ ವಿಜ್ಞಾನ ಆಧಾರಿತ ಸಾಹಸಮಯ ಕಥೆಯ ಅಂಶಗಳು ಇದರಲ್ಲಿವೆ. ಚಿತ್ರವನ್ನು ಒಂದು ನಿರ್ದಿಷ್ಟ ಜಾನರ್‌ನಡಿ ಗುರುತಿಸುವುದು ತುಂಬಾ ಕಷ್ಟ. ಕಮರ್ಷಿಯಲ್‌ ಅಂಶಗಳೂ ಇದ್ದು, ಒಂದು ಬಗೆಯ ಹೊಸ ಜಾನರ್‌ನ ಸಿನಿಮಾ ಎನ್ನಬಹುದು. ರಾಮಾಚಾರಿಯ ಪಾತ್ರವನ್ನು ನಾನೇ ನಿಭಾಯಿಸುತ್ತಿದ್ದು, ನನ್ನ ಪಾತ್ರಕ್ಕೆ ಮೂರು ಶೇಡ್‌ಗಳಿರಲಿವೆ. ‘ನಾಗರಹಾವು’ ಚಿತ್ರದಲ್ಲಿ ವಿಷ್ಣುವರ್ಧನ್‌ ನಿಭಾಯಿಸಿದ ಆ್ಯಂಗ್ರಿ ಯಂಗ್‌ಮ್ಯಾನ್‌ ರಾಮಾಚಾರಿ, ರವಿಂದ್ರನ್‌ ಅವರ ‘ರಾಮಾಚಾರಿ’ಯ ಲವರ್‌ ಬಾಯ್‌ ರಾಮಾಚಾರಿ ಹಾಗೂ ಯಶ್‌ ನಟನೆಯ ‘ಮಿಸ್ಟರ್‌ ಆ್ಯಂಡ್‌ ಮಿಸಸ್‌ ರಾಮಾಚಾರಿ’ಯ ಸ್ಟೈಲಿಶ್‌ ರಾಮಾಚಾರಿಯ ಶೇಡ್‌ಗಳಿರಲಿವೆ. ಈ ಚಿತ್ರದ ಕಥೆ ಪ್ರಮುಖವಾಗಿ ನಾಲ್ಕು ಪಾತ್ರಗಳ ಸುತ್ತ ಸುತ್ತಲಿದೆ’ ಎನ್ನುವ ಮಾತು ಸೇರಿಸಿದರು. 

ರಾಮಾಚಾರಿ ಎಂದಾಕ್ಷಣ ‌‘ನಾಗರಹಾವು’ ಚಿತ್ರದಲ್ಲಿನ ಮಾರ್ಗರೇಟ್‌, ಜಲೀಲಾ ಹಾಗೂ ‘ರಾಮಚಾರಿ’ಯ ನಂದಿನಿಯ ಪಾತ್ರಗಳನ್ನೂ ಪ್ರೇಕ್ಷಕ ನಿರೀಕ್ಷೆ ಮಾಡುವುದು ಸಹಜ. ಆ ಎಲ್ಲ ಪಾತ್ರಗಳು ನನ್ನ ಈ ಚಿತ್ರದಲ್ಲಿ ಇರಲಿವೆ. ಮಾರ್ಗರೇಟ್‌ ಪಾತ್ರಕ್ಕೆ ‘ಸಂಕಷ್ಟಕರ ಗಣಪತಿ’ ಚಿತ್ರದ ನಾಯಕಿ ಶ್ರುತಿ ಅವರನ್ನು ಆಯ್ಕೆ ಮಾಡಿದ್ದು, ನಂದಿನಿ ಮತ್ತು ಜಲೀಲಾ ಪಾತ್ರಕ್ಕೆ ಇನ್ನಷ್ಟೆ ಆಯ್ಕೆ ಮಾಡಬೇಕಿದೆ. ಜಲೀಲಾ ಪಾತ್ರಕ್ಕೆ ಒಬ್ಬರು ನಾಯಕ ನಟನೊಂದಿಗೆ ಮಾತುಕತೆ ನಡೆಸುತ್ತಿದ್ದೇನೆ. ಆಗಸ್ಟ್‌ ಅಥವಾ ಸೆಪ್ಟೆಂಬರ್‌ನಲ್ಲಿ ಚಿತ್ರೀಕರಣ ಆರಂಭಿಸಲು ಯೋಜನೆ ರೂಪಿಸಿದ್ದೇವೆ. ರಾಜ್ಯದೊಳಗೆ ಚಿತ್ರೀಕರಣ ನಡೆಸಲು ನಿರ್ಧರಿಸಿದ್ದೇವೆ’ ಎಂದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.