ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ 19 ಭೀತಿಯಿಂದ ಥಿಯೇಟರ್‌ ಬಂದ್‌: ಚಿತ್ರೋದ್ಯಮಕ್ಕೆ ₹ 60 ಕೋಟಿ ನಷ್ಟ

Last Updated 14 ಮಾರ್ಚ್ 2020, 4:00 IST
ಅಕ್ಷರ ಗಾತ್ರ

ಬೆಂಗಳೂರು:ಕೋವಿಡ್‌ 19 ಭೀತಿಯಿಂದಾಗಿ ರಾಜ್ಯದಾದ್ಯಂತ ಒಂದು ವಾರ ಕಾಲ ಚಿತ್ರಮಂದಿರಗಳ ಸ್ಥಗಿತಕ್ಕೆ ರಾಜ್ಯ ಸರ್ಕಾರ ಆದೇಶಿಸಿದ್ದು, ಇದರಿಂದ ಕನ್ನಡ ಚಿತ್ರೋದ್ಯಮಕ್ಕೆ ₹ 60 ಕೋಟಿಗೂ ಹೆಚ್ಚು ನಷ್ಟವಾಗಲಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಟಿಕೆಟ್‌ವೊಂದಕ್ಕೆ ಶೇಕಡ 18ರಷ್ಟು ಜಿಎಸ್‌ಟಿ ಪಾವತಿಯಾಗುತ್ತದೆ. ಹಾಗಾಗಿ, ದಿನವೊಂದಕ್ಕೆ ಸರ್ಕಾರಗಳ ಬೊಕ್ಕಸಕ್ಕೆ ₹ 15 ಲಕ್ಷಕ್ಕೂ ಹೆಚ್ಚು ತೆರಿಗೆ ನಷ್ಟವಾಗಲಿದೆ ಎಂಬ ಅಂದಾಜಿಸಲಾಗಿದೆ.

ರಾಜ್ಯದಲ್ಲಿ 650ಕ್ಕೂ ಹೆಚ್ಚು ಚಿತ್ರಮಂದಿರಗಳಿವೆ. ಬೆಂಗಳೂರು, ಮಂಗಳೂರು, ದಾವಣಗೆರೆ, ಕಲಬುರ್ಗಿ, ಮೈಸೂರಿನಲ್ಲಿರುವ ಮಲ್ಟಿಫ್ಲೆಕ್ಸ್‌ಗಳಲ್ಲಿ ಅರವತ್ತಕ್ಕೂ ಹೆಚ್ಚು ಪರದೆಗಳಿವೆ. ಪ್ರತಿ ವಾರ ಕನ್ನಡದಲ್ಲಿ ಐದಕ್ಕೂ ಹೆಚ್ಚು ಸಿನಿಮಾಗಳು ತೆರೆ ಕಾಣುತ್ತಿವೆ. ಕೆಲವೊಮ್ಮೆ ಬಿಡುಗಡೆಯಾಗುವ ಚಿತ್ರಗಳ ಸಂಖ್ಯೆ ಎರಡಂಕಿ ದಾಟುತ್ತದೆ.

ವೀಕ್ಷಕರ ಸಂಖ್ಯೆ ಕ್ಷೀಣ
‘ಸರ್ಕಾರದ ಆದೇಶದಿಂದ ವಾರಕ್ಕೆ ಒಂದು ಥಿಯೇಟರ್‌ಗೆ ₹ 60 ಸಾವಿರದಿಂದ ₹ 1 ಲಕ್ಷದವರೆಗೆ ನಷ್ಟವಾಗಲಿದೆ’ ಎಂದು ಕರ್ನಾಟಕ ಚಲನಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ ಆರ್.ಆರ್‌. ಓದುಗೌಡರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರಸ್ತುತ ರಾಜ್ಯದಲ್ಲಿ ಚಿತ್ರಮಂದಿರಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಬಿಡುಗಡೆಯಾಗುವ ಸಿನಿಮಾಗಳು ಸಾಧಾರಣ ಪ್ರದರ್ಶನ ಕಾಣುತ್ತಿವೆ. ಕೆಲವು ಚಿತ್ರಗಳಿಗೆ ಪ್ರೇಕ್ಷಕರೇ ಇರುವುದಿಲ್ಲ. ಸಿನಿಮಾವೊಂದು ಎರಡು ಅಥವಾ ಮೂರು ವಾರ ಥಿಯೇಟರ್‌ನಲ್ಲಿ ಉಳಿಯುವುದೇ ಅಪರೂಪವಾಗಿದೆ’ ಎಂದರು.

‘ಸರ್ಕಾರದ ಆದೇಶದ ಬಗ್ಗೆ ನಿರ್ಮಾ‍ಪಕರು, ಪ್ರದರ್ಶಕರು ಮತ್ತು ನಿರ್ದೇಶಕರೊಟ್ಟಿಗೆ ಶನಿವಾರ ಚರ್ಚಿಸುತ್ತೇನೆ. ಈಗಾಗಲೇ, ಕೆಲವು ನಿರ್ಮಾಪಕರು ಸಿನಿಮಾ ಶೂಟಿಂಗ್‌ ಸ್ಥಗಿತಗೊಳಿಸಿದ್ದಾರೆ. ಕೆಲವರು ಶೂಟಿಂಗ್‌ ನಡೆಸುವುದಾಗಿ ಹೇಳುತ್ತಿದ್ದಾರೆ. ಸಭೆಯಲ್ಲಿ ಎಲ್ಲರೊಟ್ಟಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು’ ಎಂದುಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್‌ ಡಿ.ಆರ್‌. ಪ್ರತಿಕ್ರಿಯಿಸಿದರು.

ಶೂಟಿಂಗ್‌ ಸ್ಥಗಿತಕ್ಕೆ ಸೂಚಿಸಿಲ್ಲ
ಈಗಾಗಲೇ, ಕೋವಿಡ್‌ 19 ಭೀತಿಯ ಪರಿಣಾಮ ಪುನೀತ್ ರಾಜ್‌ಕುಮಾರ್‌ ನಟನೆಯ ‘ಯುವರತ್ನ’ ಮತ್ತು ಗಣೇಶ್‌ ನಾಯಕರಾಗಿರುವ ‘ಗಾಳಿಪಟ 2’ ಸೇರಿದಂತೆ ಹಲವು ಸಿನಿಮಾಗಳ ಶೂಟಿಂಗ್‌ ಸ್ಥಗಿತಗೊಂಡಿದೆ. ವಿದೇಶದಲ್ಲಿ ಶೂಟಿಂಗ್‌ ನಡೆಸಲು ನಿರ್ಧರಿಸಿದ್ದ ಚಿತ್ರತಂಡಗಳು ಹಿಂದೆ ಸರಿದಿವೆ. ಸರ್ಕಾರದ ಆದೇಶ ಸಿನಿಮಾಗಳ ಶೂಟಿಂಗ್ ಮೇಲೆಯೂ ಪರಿಣಾಮ ಬೀರಲಿದೆಯೇ ಎಂಬ ಪ್ರಶ್ನೆ ಬಹುತೇಕ ನಿರ್ಮಾಪಕರಿಗೆ ಕಾಡುತ್ತಿದೆ.

‘ಸರ್ಕಾರದ ಆದೇಶ ಪಾಲಿಸಲು ಬದ್ಧ. ಆದರೆ, ಸಂಘದಿಂದ ಶೂಟಿಂಗ್‌ ಸ್ಥಗಿತಗೊಳಿಸುವಂತೆ ಯಾವುದೇ ಸೂಚನೆ ನೀಡುವುದಿಲ್ಲ. ವಾಣಿಜ್ಯ ಮಂಡಳಿಯ ಸಭೆಯಲ್ಲಿ ಆದೇಶದ ಸಾಧಕ– ಬಾಧಕದ ಬಗ್ಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು’ ಎಂದುಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಡಿ.ಕೆ. ರಾಮಕೃಷ್ಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT