ಗುರುವಾರ , ಏಪ್ರಿಲ್ 9, 2020
19 °C
ಕೊರೊನ ಎಫೆಕ್ಟ್‌

ಒಳ್ಳೆಯ ಸಿನಿಮಾಗಳಿಗೂ ಪೇಚು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊರೊನಾ ಸೋಂಕು ಹರಡುವ ಭೀತಿಯಿಂದಾಗಿ ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್‌ಗಳ ಬಾಗಿಲು ಬಂದ್‌ ಮಾಡುವ ಸರ್ಕಾರದ ತೀರ್ಮಾನದಿಂದಾಗಿ ಹೊಸ ಸಿನಿಮಾಗಳ ಬಿಡುಗಡೆ ಮೇಲೆ ಅನಿಶ್ಚಿತತೆಯ ಕರಿಮೋಡ ಆವರಿಸಿದೆ. ಅಷ್ಟೇ ಅಲ್ಲ, ಈಗಾಗಲೇ ಒಳ್ಳೆಯ ಪ್ರದರ್ಶನ ಕಾಣುತ್ತಿದ್ದ ಸಿನಿಮಾಗಳನ್ನೂ ಇದು ಇಕ್ಕಟ್ಟಿಗೆ ಸಿಲುಕಿದೆ.

‘ಕನ್ನಡ ಕೆಲವು ಒಳ್ಳೆಯ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಒಳ್ಳೆಯ ಮೊತ್ತ ಬಾಚಿಕೊಳ್ಳುತ್ತಿವೆ’ ಎಂಬ ಮಾತು ಕೇಳಿಸಲು ಆರಂಭವಾದ ಹೊತ್ತಿನಲ್ಲೇ ಚಿತ್ರರಂಗದ ಮೇಲೆ ‘ಕೊರೊನಾ’ ಛಾಯೆ ಆವರಿಸಿದೆ.

ರಮೇಶ್ ಅರವಿಂದ್ ಅಭಿನಯದ ‘ಶಿವಾಜಿ ಸುರತ್ಕಲ್’ ಚಿತ್ರವು ಫೆಬ್ರುವರಿ 21ರಂದು ತೆರೆಗೆ ಬಂತು. ಚಿತ್ರಕ್ಕೆ ವೀಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಕೂಡ ದೊರೆಯಿತು. ಆದರೆ ಈಗ ಎದುರಾಗಿರುವ ಸ್ಥಿತಿಯ ಕಾರಣ, ‘ಮುಂದೆ ಏನು’ ಎಂಬ ಪ್ರಶ್ನೆ ಎದುರಾಗಿದೆ.

‘ಬುಕ್‌ಮೈಶೋ ಮೂಲಕವೇ ಈ ಚಿತ್ರ
₹ 4 ಕೋಟಿ ಸಂಗ್ರಹಿಸಿತ್ತು. ವಾರಾಂತ್ಯಗಳಲ್ಲಿ ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿತ್ತು. ಮಲ್ಟಿಪ್ಲೆಕ್ಸ್‌ಗಳಲ್ಲಿ ಇದು ಐವತ್ತು ದಿನಗಳ ಪ್ರದರ್ಶನ ಕಾಣಲಿದೆ ಎಂದು ಭಾವಿಸಿದ್ದೆವು. ಆದರೆ ಈ ರೀತಿಯ ಸ್ಥಿತಿ ಎದುರಾಗಿದೆ, ಏನೂ ಮಾಡಲಾಗದು’ ಎನ್ನುತ್ತಾರೆ ರಮೇಶ್.

ಕೊರೊನಾ ಭೀತಿ ದೂರವಾದ ನಂತರ ಪರಿಸ್ಥಿತಿ ಸುಧಾರಿಸುತ್ತದೆ ಎನ್ನುವ ನಿರೀಕ್ಷೆ ಅವರದ್ದು. ‘ನಾವು, ಕೊರೊನಾ ಸಮಸ್ಯೆ ಮುಗಿದ ನಂತರವೂ ಈ ಸಿನಿಮಾದ ಪ್ರದರ್ಶನ ಮುಂದುವರಿಸುತ್ತೇವೆ. ಆಗಲೂ ಈ ಚಿತ್ರವನ್ನು ಸಿನಿಪ್ರೇಮಿಗಳು ಈಗಿನಂತೆಯೇ ವೀಕ್ಷಿಸುತ್ತಾರೆ ಎಂಬ ಭರವಸೆ ಇದೆ’ ಎಂದು ಅವರು ಹೇಳಿದರು.

ಡಾರ್ಲಿಂಗ್‌ ಕೃಷ್ಣ ನಿರ್ದೇಶನದ ‘ಲವ್‌ ಮಾಕ್‌ಟೇಲ್‌’ ಚಿತ್ರ ಕೂಡ ರಾಜ್ಯದಲ್ಲಿ ಒಳ್ಳೆಯ ಪ್ರದರ್ಶನ ಕಾಣುತ್ತಿತ್ತು. ‘ಬೆಂಗಳೂರಿನ 20 ಕಡೆಗಳಲ್ಲಿ ಸೇರಿದಂತೆ ಒಟ್ಟು 40 ಚಿತ್ರಮಂದಿರಗಳಲ್ಲಿ ಈ ಸಿನಿಮಾ ಪ್ರದರ್ಶನ ಕಾಣುತ್ತಿತ್ತು. ಆದರೆ, ಈಗ ಇಂತಹ ಸ್ಥಿತಿ ಎದುರಾಗಿದೆ. ಜನರ ಸುರಕ್ಷತೆಗಿಂತ ದೊಡ್ಡದು ಇನ್ನೇನೂ ಇಲ್ಲ’ ಎಂದರು ಕೃಷ್ಣ.

ಕೊರೊನಾ ವೈರಸ್‌ ಭೀತಿಯ ಕಾರಣದಿಂದಾಗಿ ತಮ್ಮ ಚಿತ್ರವು ಅಂದಾಜು ₹ 50 ಲಕ್ಷ ನಷ್ಟ ಅನುಭವಿಸಬಹುದು ಎಂದು ಅವರು ಹೇಳುತ್ತಾರೆ.

ನಾಗೇಂದ್ರ ಮಾಗಡಿ ನಿರ್ದೇಶನದ ‘ನರಗುಂದ ಬಂಡಾಯ’ ಚಿತ್ರವು ಮಾರ್ಚ್‌ 12ರಂದು ತೆರೆಗೆ ಬಂತು. ಈ ಚಿತ್ರವು ಎರಡು ದಿನಗಳ ಪ್ರದರ್ಶನ ಮಾತ್ರ ಕಂಡಿದೆ. ‘ಸಿನಿಮಾ ಚೆನ್ನಾಗಿದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಆದರೆ, ಈಗ ಈ ಸ್ಥಿತಿ ಎದುರಾಗಿದೆ. ಚಿತ್ರಮಂದಿರಗಳ ಬಾಗಿಲು ತೆರೆದ ನಂತರ ನಮ್ಮ ಸಿನಿಮಾ ಪ್ರದರ್ಶನ ಮುಂದುವರಿಯಲಿದೆ’ ಎಂದು ನಾಗೇಂದ್ರ ಹೇಳಿದರು.

‘ನಮ್ಮ ಸಿನಿಮಾ ಬಗ್ಗೆ ಒಳ್ಳೆಯ ಅಭಿಪ್ರಾಯ ಎಲ್ಲ ಕಡೆಗಳಿಂದ ಬಂದಿದೆ. ಹಾಗಾಗಿ, ವೀಕ್ಷಕರನ್ನು ಪುನಃ ಸೆಳೆಯಲು ತೊಂದರೆ ಆಗಲಿಕ್ಕಿಲ್ಲ’ ಎನ್ನುವ ವಿಶ್ವಾಸ ನಾಗೇಂದ್ರ ಅವರದ್ದು.

ಒಟಿಟಿಯತ್ತ ಚಿತ್ತಹರಿಸಿ

ಪಿಆರ್‌ಕೆ ಪ್ರೊಡಕ್ಷನ್‌ ನಿರ್ಮಾಣ ಮತ್ತು ರಾಜ್ ಬಿ. ಶೆಟ್ಟಿ ಅಭಿನಯದ ‘ಮಾಯಾಬಜಾರ್’ ಕೂಡ ಕೊರೊನಾ ಮಾರಿಯಿಂದಾಗಿ ಪ್ರದರ್ಶನವಿಲ್ಲದ ಸ್ಥಿತಿ ತಲುಪಿದೆ. ಈ ಚಿತ್ರ‌ಕ್ಕೆ ಕೂಡ ಉತ್ತಮ ಸ್ಪಂದನ ದೊರೆತಿತ್ತು. ‘ಒಂದು ವಾರದ ನಂತರ ಸಿನಿಮಾ ಮಂದಿರಗಳ ಬಾಗಿಲು ತೆರೆದಾಗ ಪ್ರೇಕ್ಷಕರು ಹೇಗೆ ಸ್ಪಂದಿಸುತ್ತಾರೆ ಎಂಬುದನ್ನು ಕಾದುನೋಡಬೇಕು. ಅವರು ಸಿನಿಮಾ ನೋಡಲು ಮುಗಿಬೀಳಬಹುದು ಅಥವಾ ಕೊರೊನಾ ಭೀತಿಯಿಂದ ಚಿತ್ರಮಂದಿರಗಳಿಂದ ದೂರ ಉಳಿಯಬಹುದು. ಎರಡೂ ಸಾಧ್ಯತೆಗಳಿವೆ’ ಎನ್ನುತ್ತಾರೆ ರಾಜ್.

ಆದರೆ, ಇಂತಹ ಸಂದರ್ಭಗಳಲ್ಲಿ ಒಟಿಟಿ ವೇದಿಕೆಗಳಿಂದ ಪ್ರಯೋಜನ ಪಡೆದುಕೊಳ್ಳುವುದನ್ನು ಸಿನಿಮೋದ್ಯಮ ಕಲಿತುಕೊಳ್ಳಬೇಕು, ಆ ವೇದಿಕೆಗಳ‌ ಮೂಲಕ ಸಿಗಬಹುದಾದ ಅವಕಾಶಗಳ ಬಗ್ಗೆ ಗಮನ ಹರಿಸಬೇಕು ಎಂದು ಅವರು ಹೇಳುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು