ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟಿ ಬಿ.ಜಯಾ ಶವ ಪಾದಚಾರಿ ಮಾರ್ಗದಲ್ಲಿದೆ ಎಂಬುದನ್ನು ನಂಬಬೇಡಿ: ಕುಟುಂಬದ ಮನವಿ

ವೈರಲ್‌ ಆಗಿರುವ ವಿಡಿಯೊ ಕಿಡಿಗೇಡಿಗಳ ಕೃತ್ಯ
Last Updated 4 ಜೂನ್ 2021, 14:07 IST
ಅಕ್ಷರ ಗಾತ್ರ

ಬೆಂಗಳೂರು: ಖ್ಯಾತ ಪೋಷಕ ನಟಿ ಬಿ.ಜಯಾ ಅವರ ಶವ ಅನಾಥವಾಗಿ ಪಾದಚಾರಿ ಮಾರ್ಗದಲ್ಲಿದೆ ಎನ್ನುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಶುಕ್ರವಾರ ವೈರಲ್‌ ಆಗಿದ್ದು, ಇದು ಕಿಡಿಗೇಡಿಗಳ ಕೃತ್ಯ ಎಂದು ಜಯಾ ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಪೋಷಕ ನಟಿ ಬಿ.ಜಯಾ ಅವರು ಗುರುವಾರ ಮೃತಪಟ್ಟಿದ್ದರು. ‘ಪಾರ್ಥಿವ ಶರೀರದ ಹತ್ತಿರ ನಾವು ಇರದ ಸಮಯದಲ್ಲೇ ಕಿಡಿಗೇಡಿಗಳು ಈ ರೀತಿ ವಿಡಿಯೊ ಮಾಡಿದ್ದಾರೆ. ಪೂಜೆ ಬಳಿಕ ನಾವು ಸ್ಮಶಾನದಿಂದ ಹೊರಟು ಬಂದಿದ್ದೆವು. ನನ್ನ ಮಗಳು, ಅಳಿಯ ಅಲ್ಲಿಯೇ ಇದ್ದು ಎಲ್ಲವನ್ನೂ ನೋಡಿಕೊಳ್ಳುತ್ತಿದ್ದರು. ಸ್ಮಶಾನದಲ್ಲಿ ಕಾರ್ಯಕ್ರಮವೊಂದು ನಡೆಯುತ್ತಿದ್ದ ಕಾರಣ, ವಾಹನ ದಟ್ಟಣೆ ಇತ್ತು. ಹೊರಗಡೆ ಪಾದಚಾರಿ ಮಾರ್ಗದ ಆಚೀಚೆ ಕಸವೇ ತುಂಬಿತ್ತು. ಜಾಗ ಇದ್ದಲ್ಲಿ ಪಾರ್ಥಿವ ಶರೀರ ಇಟ್ಟಿದ್ದೆವು’ ಎಂದು ಜಯಾ ಅವರ ತಮ್ಮ, ನಿರ್ದೇಶಕ ಮಲ್ಲೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಶುಕ್ರವಾರ ಬೆಳಗ್ಗೆ 9.30ರ ಸುಮಾರಿಗೆ ಕರುಣಾಶಯದಿಂದ ಜಯಾ ಅವರ ಪಾರ್ಥಿವ ಶರೀರವನ್ನು ತೆಗೆದುಕೊಂಡೆವು. ಚಿತ್ರರಂಗದವರಾಗಲಿ ಅಥವಾ ಸಂಬಂಧಿಕರಾಗಲಿ ಕೇಳಿದಾಗ ಯಾರೂ ಬರಬೇಡಿ ಎಂದೇ ಹೇಳಿದ್ದೆವು. ನಮಗೂ ತೊಂದರೆಯಾಗಲಿದೆ, ನಿಮಗೂ ತೊಂದರೆ ಎಂದಿದ್ದೆವು. ಹೀಗಾಗಿ ಸ್ಮಶಾನದ ಬಳಿ ಜನ ಹೆಚ್ಚು ಇರಲಿಲ್ಲ. ನಮಗೆ ಸ್ಮಶಾನದಲ್ಲಿ 11.30ರಿಂದ 12ಗಂಟೆಯವರೆಗೆ ಸಮಯ ನೀಡಲಾಗಿತ್ತು. ಹೀಗಾಗಿ 11 ಗಂಟೆಯ ಸುಮಾರಿಗೆ ಶವವನ್ನು ತೆಗೆದುಕೊಂಡು ಹೋಗಿದ್ದೆವು’ ಎಂದು ಮಲ್ಲೇಶ್‌ ಅವರ ಮಗಳುರಾಜೇಶ್ವರಿಮಾಹಿತಿ ನೀಡಿದರು.

‘ಅಲ್ಲಿರುವ ಪ್ರಕ್ರಿಯೆ ಅನ್ವಯ ಹೊರಗಡೆಯೇ ಪೂಜೆ ಮಾಡಿ, ನಂತರ ಶವವನ್ನು ಒಳಗೆ ತೆಗೆದುಕೊಂಡು ಹೋಗಬೇಕು. ಒಳಗೆ ತೆಗೆದುಕೊಂಡು ಹೋದಕೂಡಲೇ ಅವರು ಶವವನ್ನು ಸುಡುತ್ತಾರೆ. ಆಚೆ ಎಂದರೆ ರಸ್ತೆಬದಿ, ಬ್ಯಾರಿಕೇಡ್‌ ಹಾಕಿದ್ದಾರೆ ಆಚೆಗೆ ಶವ ಇರಿಸಬೇಕಿತ್ತು. ಎಲ್ಲರು ಎಲ್ಲಿ ಶವವನ್ನು ಇಡುತ್ತಾರೋ ಅಲ್ಲಿಯೇ ನಾವೂ ಇರಿಸಿದ್ದೆವು. ಸ್ಮಶಾನದಲ್ಲಿ ಕಿಟ್‌ ನೀಡುವ ಕಾರ್ಯಕ್ರಮ ನಡೆಯುತ್ತಿತ್ತು. ನಾವು 10–12 ಜನ ಕುಟುಂಬದವರು ಇದ್ದೆವು. ರಸ್ತೆ ಬದಿ ಮಲಗಿಸಿದ್ದನ್ನು ಈ ರೀತಿ ವಿಡಿಯೊ ತೆಗೆದಿದ್ದಾರೆ. ಯಾರೂ ಇರಲಿಲ್ಲ, ಫುಟ್‌ಪಾಥ್‌ ಮೇಲೆ ಇಟ್ಟರು ಎಂದು ವೈರಲ್‌ ಮಾಡುತ್ತಿದ್ದಾರೆ. ಇದು ತಪ್ಪು. ಪಾರ್ಶ್ವವಾಯು ಆದಾಗ ಅವರನ್ನು ಸೈಂಟ್‌ ಜಾನ್ಸ್‌ ಆಸ್ಪತ್ರೆಗೆ ದಾಖಲಿಸಿದ್ದೆವು. ಅವರನ್ನು ನಾವು ಯಾರೂ ನಿರ್ಲಕ್ಷಿಸಿರಲಿಲ್ಲ. ಈ ರೀತಿ ವಿಡಿಯೊ ವೈರಲ್‌ ಮಾಡುವುದರಿಂದ ಏನು ಸಿಗುತ್ತದೋ ತಿಳಿದಿಲ್ಲ. ಮನಸ್ಸಿಗೆ ನೋವಾಗುತ್ತದೆ. ಇದನ್ನು ಜನರು ನಂಬಬೇಡಿ. ಜಯಾ ಅವರ ಪಾರ್ಥಿವ ಶರೀರವಿದೆ ಎಂದು ತಿಳಿದ ತಕ್ಷಣ 12 ಗಂಟೆಗೇ ಕಿಟ್‌ ವಿತರಣೆ ಕಾರ್ಯಕ್ರಮ ಪೂರ್ಣಗೊಳಿಸಿ, ಕಾರ್ಯಕ್ರಮದಲ್ಲಿದ್ದವರೇ ಕೆಲವರು ಪಾರ್ಥಿವ ಶರೀರವನ್ನು ಸ್ಮಶಾನದೊಳಗೆ ಎತ್ತಿಕೊಂಡು ಹೋದರು. ಎಲ್ಲ ವಿಧಿವಿಧಾನದೊಂದಿಗೆ ಅಂತ್ಯಸಂಸ್ಕಾರ ಮಾಡಿದೆವು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT