ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19 ಸೋಂಕು ದೃಢ: ಮನೆಯಲ್ಲಿಯೇ ಕ್ವಾರಂಟೈನ್‌ನಲ್ಲಿರಲು ನಿರ್ಧರಿಸಿದ ತಮನ್ನಾ

ಆಸ್ಪತ್ರೆಯಿಂದ ಡಿಸ್ಟಾರ್ಜ್‌: ಮನೆಯಲ್ಲಿಯೇ ಕ್ವಾರಂಟೈನ್‌ನಲ್ಲಿರಲು ನಿರ್ಧರಿಸಿದ ‘ಬಾಹುಬಲಿ’ ನಟಿ
Last Updated 6 ಅಕ್ಟೋಬರ್ 2020, 6:41 IST
ಅಕ್ಷರ ಗಾತ್ರ

ಕೋವಿಡ್‌–19 ಸೋಂಕು ಇರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಅಕ್ಟೋಬರ್‌ 4ರಂದು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಬಹುಭಾಷಾ ನಟಿ ತಮನ್ನಾ ಭಾಟಿಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದು, ಮನೆಯಲ್ಲಿಯೇ ಕ್ವಾರಂಟೈನ್‌ನಲ್ಲಿ ಇರಲು ನಿರ್ಧರಿಸಿದ್ದಾರೆ.

ಜ್ವರ ಕಾಣಿಸಿಕೊಂಡ ಪರಿಣಾಮ ಅವರು ಕೋವಿಡ್‌ ಪರೀಕ್ಷೆಗೆ ಒಳಗಾಗಿದ್ದರು. ಆಗ ಕೋವಿಡ್‌ ಸೋಂಕು ತಗುಲಿರುವುದು ದೃಢಪಟ್ಟಿತ್ತು. ‘ನನಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಈ ಸೋಂಕಿನಿಂದ ಗುಣಮುಖಳಾಗುವ ವಿಶ್ವಾಸವೂ ಇದೆ. ಹಾಗಾಗಿಯೇ, ಆಸ್ಪತ್ರೆಯಿಂದ ಬಿಡುಗಡೆಯಾಗಿ ವೈದ್ಯರ ಸಲಹೆ ಮೇರೆಗೆ ಮನೆಯಲ್ಲಿಯೇ ಪ್ರತ್ಯೇಕವಾಗಿರಲು ನಿರ್ಧರಿಸಿದ್ದೇನೆ. ನನ್ನ ಆರೋಗ್ಯದ ಬಗ್ಗೆ ಪ್ರಾರ್ಥಿಸುತ್ತಿರುವ ಅಭಿಮಾನಿಗಳಿಗೆ ಆಭಾರಿಯಾಗಿದ್ದೇನೆ’ ಎಂದು ಟ್ವೀಟ್‌ ಮಾಡಿದ್ದಾರೆ.

‘ನಾನು ಮತ್ತು ನನ್ನ ಚಿತ್ರತಂಡದ ಸದಸ್ಯರು ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿದ್ದೆವು. ಆದರೆ, ಕಳೆದ ವಾರ ಜ್ವರದ ಲಕ್ಷಣಗಳು ಕಾಣಿಸಿಕೊಂಡಿದ್ದವು. ಪರೀಕ್ಷೆಗೆ ಒಳಗಾದಾಗ ಕೋವಿಡ್‌ ಸೋಂಕು ತಗುಲಿರುವುದು ಖಚಿತವಾಯಿತು. ಹಾಗಾಗಿಯೇ, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದೆ. ಪರಿಣತ ವೈದ್ಯರ ತಂಡ ಚಿಕಿತ್ಸೆ ನೀಡಿದೆ. ಅವರ ಸಲಹೆಯಂತೆ ಮನೆಗೆ ಮರಳುತ್ತಿದ್ದೇನೆ. ಕೋವಿಡ್‌ ನೆಗೆಟಿವ್‌ ವರದಿ ಬರುವವರೆಗೂ ಮನೆಯಲ್ಲಿಯೇ ಕ್ವಾರಂಟೈನ್‌ನಲ್ಲಿ ಇರುತ್ತೇನೆ’ ಎಂದು ತಿಳಿಸಿದ್ದಾರೆ.

‘ವಿಶ್ವದಾದ್ಯಂತ ಲಕ್ಷಾಂತರ ಜನರು ಈ ಸೋಂಕಿನ ವಿರುದ್ಧ ಜಯಿಸಿ ಚೇತರಿಸಿಕೊಂಡಿದ್ದಾರೆ. ನನಗೂ ಆ ವಿಶ್ವಾಸವಿದೆ’ ಎಂದಿದ್ದಾರೆ.

ತಮನ್ನಾ ಶೀಘ್ರ ಗುಣಮುಖರಾಗಲಿ ಎಂದು ನಟಿಯರಾದ ಸಮಂತಾ ಅಕ್ಕಿನೇನಿ ಮತ್ತು ಕಾಜಲ್‌ ಅಗರ್‌ವಾಲ್‌ ಹಾರೈಸಿದ್ದಾರೆ.

ಕಳೆದ ಆಗಸ್ಟ್‌ ತಿಂಗಳ ಅಂತ್ಯದಲ್ಲಿ ತಮನ್ನಾ ಅವರ ಅಪ್ಪ ಸಂತೋಷ್‌ ಭಾಟಿಯಾ ಮತ್ತು ಅಮ್ಮ ರಜನಿ ಭಾಟಿಯಾ ಅವರಿಗೂ ಕೋವಿಡ್‌–19 ಸೋಂಕು ಇರುವುದು ದೃಢಪಟ್ಟಿತ್ತು. ಆದರೆ, ತಮನ್ನಾ ಸೇರಿದಂತೆ ಕುಟುಂಬದ ಉಳಿದ ಸದಸ್ಯರು, ಮನೆ ಕೆಲಸದ ಸಿಬ್ಬಂದಿಗೆ ಕೋವಿಡ್‌ ನೆಗೆಟಿವ್‌ ಬಂದಿತ್ತು.

ಪ್ರಸ್ತುತ ತಮನ್ನಾ ‘ಮೈನಾ’ ಚಿತ್ರದ ಖ್ಯಾತಿಯ ನಾಗಶೇಖರ್ ಆ್ಯಕ್ಷನ್‌ ಕಟ್‌ ಹೇಳಿರುವ ‘ಗುರ್ತುಂದ ಶೀತಕಾಲಂ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದು ಕನ್ನಡದ ‘ಲವ್‌ ಮಾಕ್ವೇಲ್‌’ ಚಿತ್ರದ ತೆಲುಗು ರಿಮೇಕ್‌ ಆಗಿದೆ. ಮಿಲನಾ ನಾಗರಾಜ್‌ ನಿರ್ವಹಿಸಿದ್ದ ಪಾತ್ರದಲ್ಲಿ ತಮನ್ನಾ ನಟಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT