ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂರೊಂದು ನೆನಪು ಎದೆಯಾಳದಿಂದ... ನಿರ್ದೇಶಕ ಡಿ ಶಂಕರ್ ಸಿಂಗ್

Last Updated 13 ಆಗಸ್ಟ್ 2021, 2:46 IST
ಅಕ್ಷರ ಗಾತ್ರ

ಅಪ್ಪ ಹುಟ್ಟಿದ್ದು 1921ರ ಆಗಸ್ಟ್ 15ರಂದು. ಆಗಸ್ಟ್‌ 15 ಅಂದರೆ ಅವರಿಗೆ ತಮ್ಮ ಹುಟ್ಟುಹಬ್ಬ ಮಹತ್ವದ್ದಾಗಿರಲಿಲ್ಲ. ಸ್ವಾತಂತ್ರ್ಯೋತ್ಸವವೇ ಮುಖ್ಯ ಆಗಿತ್ತು.

ಅರಸಿಕೆರೆಯ ಪೇಟೆ ಬೀದಿಯಲ್ಲಿ ನಮ್ಮದೊಂದು ದೊಡ್ಡ ಮನೆ ಇತ್ತು. ನಾಡಿನ ಹಲವಾರು ರಾಜಕೀಯ ನಾಯಕರು ಅಲ್ಲಿಗೆ ಬರುತ್ತಿದ್ದರು. ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯಲ್ಲಿ ಆಗಿನ ಕಾಂಗ್ರೆಸ್‌ ಮೇಲೆ ಅತ್ಯಂತ ಅಭಿಮಾನ ಇತ್ತಲ್ಲ. ಈ ರಾಜಕೀಯ ನಾಯಕರಿಗೆ ನಮ್ಮ ಮನೆಯಲ್ಲೇ ಊಟ, ವಾಸ್ತವ್ಯ ಇತ್ತು. ನಮ್ಮ ದೊಡ್ಡಪ್ಪ ಮುನ್ಸಿಪಲ್‌ ಕೌನ್ಸಿಲ್‌ನ ಅಧ್ಯಕ್ಷರಾಗಿದ್ದರು.

ವೈದ್ಯರಾಗಬೇಕಾದವರು ಟೀ ಮಾರಿದರು: ನಮ್ಮ ಅಪ್ಪನನ್ನು ವೈದ್ಯರನ್ನಾಗಿಸಬೇಕು ಎಂದು ಅವರ ಹೆತ್ತವರು ಕನಸು ಕಂಡಿದ್ದರು. ಅದಕ್ಕಾಗಿ ಅವರನ್ನು ಅವರ ಅಪ್ಪ ಕೋಲ್ಕತ್ತಕ್ಕೆ ಕಳುಹಿಸಿದ್ದರು. ಆದರೆ ಅವರು ಅರ್ಧಕ್ಕೆ ಓದು ನಿಲ್ಲಿಸಿ ವಾಪಸಾದರು. ಇಲ್ಲಿ ಬ್ರೂಕ್‌ ಬಾಂಡ್‌ ಕಂಪನಿಯ ಟೀ ಮಾರಾಟದ ಕೆಲಸ ಮಾಡಿದರು. ಹಾಗೆ ಸುತ್ತಾಟ ಮುಗಿಸಿದ ಬಳಿಕ ಅರಸಿಕೆರೆಯಲ್ಲಿ ವಿಠ್ಠಲಾಚಾರ್‌ ಅವರ ಹೋಟೆಲ್‌ನಲ್ಲಿ ಟೀ, ದೋಸೆ ಸೇವಿಸುತ್ತಿದ್ದರು. ಹೀಗೆ ಅಪ್ಪ ಮತ್ತು ವಿಠ್ಠಲಾಚಾರ್ ಸ್ನೇಹ ಗಟ್ಟಿಯಾಯಿತು. ವಿಠ್ಠಲಾಚಾರ್‌ ಕೂಡಾ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿದ್ದವರೇ.ಅರಸಿಕೆರೆ ಆಗ ರಾಜಕೀಯದ ಕೇಂದ್ರ ಸ್ಥಾನವಾಗಿತ್ತು.

ಅದ್ಯಾಕೋ ಅಪ್ಪನಿಗೆ ಟೀ ಕಂಪನಿಯ ಉದ್ಯೋಗ ಬೇಸರ ತರಿಸಿತು. ಆಗ ಅವರು ಮತ್ತು ವಿಠ್ಠಲಾಚಾರ್‌ 1945ರಲ್ಲಿ ಎರಡು ಟೂರಿಂಗ್‌ ಟಾಕೀಸ್‌ ಶುರು ಮಾಡಿದರು. ಒಂದು ಮಹಾತ್ಮ ಟೂರಿಂಗ್‌ ಟಾಕೀಸ್‌, ಮತ್ತೊಂದು ನೆಹರು ಟೂರಿಂಗ್‌ ಟಾಕೀಸ್‌. ಅಪ್ಪ ಅಥವಾ ವಿಠ್ಠಲಾಚಾರ್‌ ಬೆಂಗಳೂರಿಗೆ ಬಂದು ಇಲ್ಲಿಂದ ಸಿನಿಮಾ ರೀಲುಗಳ ಡಬ್ಬ ಹೊತ್ತುಕೊಂಡು ಬರುತ್ತಿದ್ದರು. ಇಲ್ಲಿನ ವಿತರಕರ ಬಳಿ ಚೌಕಾಸಿ ಮಾಡಿ ರೀಲುಗಳನ್ನು ತರುವುದು ಅಂದಿನ ವ್ಯವಹಾರದ ಭಾಗ. ಈ ಟೂರಿಂಗ್‌ ಟಾಕೀಸ್‌ ಮೂಲಕ ಒಂದಿಷ್ಟು ದುಡ್ಡೂ ಬಂತು.

ಆ ಸಿನಿಮಾಗಳನ್ನು ನೋಡುತ್ತಾ ಸಾಕಷ್ಟು ಅನುಭವಗಳೂ ಅವರಿಗಾದವು. ಆಗ ನಾವ್ಯಾಕೆ ಬೆಂಗಳೂರಿನಲ್ಲೊಂದು ಥಿಯೇಟರ್‌ ಮಾಡಬಾರದು ಎಂದು ಯೋಚಿಸಿದರು. ಆಗ ಬೆಂಗಳೂರಿನಲ್ಲಿ ಪ್ರಭಾತ್‌ ಥಿಯೇಟರ್‌ ಮಾರಾಟಕ್ಕಿತ್ತು. ಅದನ್ನು ಖರೀದಿಸಲೆಂದು ಮುಂಗಡ ಹಿಡಿದುಕೊಂಡು ಬರುತ್ತಿದ್ದರು. ಆಗ ಹಾಸನದ ಬಳಿ ಸಿಕ್ಕ ಒಬ್ಬರು ನಿರ್ದೇಶಕರು ಇವರ ಬಳಿ ಹಣ ಇರುವುದನ್ನು ತಿಳಿದು, ಒಂದು ಸಿನಿಮಾ ಮಾಡೋಣ ಎಂದು ಇವರ ಮನಸ್ಸು ಬದಲಾಯಿಸಿದರು. ಅದು ಮೈಸೂರಿಗೆ ಬರಲು ಒಂದು ಟರ್ನಿಂಗ್‌ ಪಾಯಿಂಟ್‌.ಆಗ ಮೈಸೂರಿನಲ್ಲಿ ನವಜ್ಯೋತಿ ಸ್ಟುಡಿಯೊ ಇತ್ತು. ಅದು ರಾಜ್ಯದ ಮೊದಲ ಸ್ಟುಡಿಯೊ. ಅಲ್ಲಿಯೇ ಶೂಟಿಂಗ್‌ಗಳು ನಡೆಯುತ್ತಿದ್ದವು.

‘ಕೃಷ್ಣಲೀಲಾ’ದ ನಿರ್ದೇಶಕರು ಎಲ್ಲೋ ಮೋಸ ಮಾಡುತ್ತಿರುವುದು ಗಮನಕ್ಕೆ ಬಂತು. ಕೊನೆಗೆ ಅರಸಿಕೆರೆಯ ಒಂದಿಷ್ಟು ರೌಡಿಗಳನ್ನು ಕರೆಸಿ ಚೆನ್ನಾಗಿ ರುಬ್ಬಿ ಅಂತೂ ಇಂತೂ ಒಂದಿಷ್ಟು ಕೆಲಸ ಮಾಡಿಸಿದರು. ಹಾಗೂ ಹೀಗೂ ಚಿತ್ರ ಮೂಡಿ ಬಂತು. ಈ ಚಿತ್ರದಿಂದ ಸ್ವಲ್ಪ ನಷ್ಟವೇ ಆಯಿತು. ಆದರೆ, ಇದು ಮೇಡ್‌ ಇನ್‌ ಕರ್ನಾಟಕ, ಮೇಡ್‌ ಇನ್‌ ಮೈಸೂರು ಸಿನಿಮಾ.

ಆಗ ಕನ್ನಡ ಚಿತ್ರಗಳಿಗೆ ಥಿಯೇಟರ್‌ಗಳೇ ಸಿಗುತ್ತಿರಲಿಲ್ಲ. ಹಿಂದಿ, ತಮಿಳು ಚಿತ್ರಗಳಿಗಷ್ಟೇ ಅವಕಾಶ ಇತ್ತು. ಆಗ ಕೆ.ಸಿ. ರೆಡ್ಡಿ ಅವರ ಸ್ನೇಹ ಬಳಸಿ ಮೂವಿ ಲ್ಯಾಂಡ್‌ ಚಿತ್ರಮಂದಿರದಲ್ಲಿ ‘ಕೃಷ್ಣಲೀಲಾ’ ಬಿಡುಗಡೆ ಮಾಡಿಸಿದರು.

ಹೀರೊ ಅವಕಾಶ ಕಳೆದುಕೊಂಡ ದೇವರಾಜ ಅರಸು!: ಭಕ್ತ ರಾಮದಾಸ ಸಿನಿಮಾ ಮಾಡಲು ಮುಂದಾದಾಗ ಡಿ. ದೇವರಾಜ ಅರಸು ಅವರನ್ನು ಹೀರೊ ಮಾಡಲು ಎಲ್ಲ ಸಿದ್ಧತೆಗಳು ಮಾಡಿದ್ದರು. ಕೊನೆಗೆ ದೇವರಾಜ ಅರಸು ಅವರಿಗಿಂತ ಅವರ ಸಹೋದರ ಕೆಂಪರಾಜ ಅರಸು ಚೆನ್ನಾಗಿದ್ದಾರಲ್ಲಾ ಅಂದುಕೊಂಡು ಅವರನ್ನು ಹೀರೊ ಮಾಡಿದರು.

ಮುಂದೆ ‘ನಾಗಕನ್ನಿಕೆ’ ಅನ್ನುವ ಸಿನಿಮಾ ಮಾಡಿದರು. ಅದು ಸೂಪರ್‌ ಡ್ಯೂಪರ್‌ ಹಿಟ್‌ ಆಯಿತು. ತಮಿಳು, ತೆಲುಗಿಗೆ ಡಬ್‌ ಆಯಿತು. ಆಗಲೇ ಪ್ಯಾನ್‌ ಇಂಡಿಯಾ ಸಿನಿಮಾ ಪ್ರಯೋಗ ನಡೆದಿತ್ತು. ಮುಂದೆ ಅಪ್ಪ ತಾವೇ ನಿರ್ದೇಶನಕ್ಕೆ ಇಳಿದರು.

ಅಪ್ಪನದೇ ನಿರ್ದೇಶನದ ‘ಜಗನ್ಮೋಹಿನಿ’ ಆ ಕಾಲದ ಸೆನ್ಸೇಷನಲ್‌ ಹಿಟ್‌ ಆಗಿತ್ತು. ದಾವಣಗೆರೆಯಲ್ಲಿ ಎಮ್ಮೆ ಮಾರಿ ಆ ಸಿನಿಮಾ ನೋಡುತ್ತಿದ್ದದ್ದೂ ಇತ್ತಂತೆ. ವಕೀಲರೊಬ್ಬರು ಆ ಚಿತ್ರ ನಿಷೇಧಿಸುವಂತೆ ಕೋರಿ ಕೇಸು ದಾಖಲಿಸಿದ್ದರು. ಕೊನೆಗೆ ನಿರ್ಬಂಧ ತೆರವುಗೊಳಿಸಲಾಯಿತು. ಚಿತ್ರ ಮತ್ತೆ ನೂರು ದಿನ ಓಡಿತು.

ಔಟ್‌ಡೋರ್‌ ಯೂನಿಟ್‌, ಪೂರ್ಣ ಪ್ರಮಾಣದ ಪರಿಕರ ಇದ್ದದ್ದು ಮೊದಲು ನಮ್ಮ ಮಹಾತ್ಮ ಪಿಕ್ಚರ್ಸ್‌ ಕಂಪನಿಯಲ್ಲೇ. ವಿಠ್ಠಲಾಚಾರ್‌ ಮುಂದೆ ತೆಲುಗು ಚಿತ್ರರಂಗಕ್ಕೆ ಹೋದರು. ತಂದೆಯವರು ಇಲ್ಲೇ ಉಳಿದರು. ಮೈಸೂರಿನಲ್ಲಿ ಇದ್ದೇ 50 ಚಿತ್ರಗಳನ್ನು ಮಾಡಿದರು.

‘ಪ್ರಭುಲಿಂಗ ಲೀಲೆ’ ಕನ್ನಡದ ಮೊದಲ ಕಲರ್‌ ಚಿತ್ರ. ಆಗಲೇ ಆ ಪ್ರಯೋಗ ನಡೆದಿತ್ತು. ‘ಶಿವಶರಣೆ ನಂಬಿಯಕ್ಕ’ ಚಿತ್ರದ ಕಥೆಯನ್ನು ಕತೆಗಾರರು ನಮಗೂ ಬಿ.ಆರ್‌. ಪಂತುಲು ಅವರಿಗೂ ಕೊಟ್ಟಿದ್ದರು. ಆದರೆ, ಇದನ್ನು ಸವಾಲಾಗಿ ಸ್ವೀಕರಿಸಿದ ತಂದೆಯವರು, 21 ದಿನಗಳಲ್ಲಿ ಶೂಟಿಂಗ್‌ ಮುಗಿಸಿ ಬಿಡುಗಡೆ ಮಾಡಿದರು. ಅದಕ್ಕೆ ಅದ್ಭುತ ಯಶಸ್ಸು ಸಿಕ್ಕಿತು.

‘ಧರ್ಮಸ್ಥಳ ಮಹಾತ್ಮೆ’ ಚಿತ್ರದ ಪ್ರೀಮಿಯರ್‌ ಷೋಗೆ ಅಂದಿನ ಮುಖ್ಯಮಂತ್ರಿ ನಿಜಲಿಂಗಪ್ಪ ಅವರು ಬಂದಿದ್ದರು. ಆ ಸಂದರ್ಭ ಕನ್ನಡ ಚಿತ್ರರಂಗದ ಸಾಮರ್ಥ್ಯ, ಅದರ ಬೆಳವಣಿಗೆಯ ಅಗತ್ಯ ವಿವರಿಸಿ ಕನ್ನಡ ಚಿತ್ರಗಳಿಗೆ ಸಬ್ಸಿಡಿ (1963ರಲ್ಲಿ) ಕೊಡಿಸುವಂತೆ ಅಪ್ಪ ಮನವಿ ಮಾಡಿದರು. ಸಬ್ಸಿಡಿ ನೀಡುವ ಪರಿಪಾಟ ಇಂದಿಗೂ ಮುಂದುವರಿದಿದೆ.

ಈಗ ನೋಡುವ ತಂತ್ರಜ್ಞಾನದ ಬಹುಪಾಲು ಪ್ರಯೋಗವನ್ನು ಆವತ್ತೇ ಮಾಡಿದ್ದರು ಅಪ್ಪ. ಅವರಿಗೆ ಅಗಾಧವಾದ ಗ್ರಹಣ ಶಕ್ತಿ ಇತ್ತು.ನನ್ನ ಸಿನಿಮಾ ಬದುಕಿಗೆ ಬುನಾದಿ ಬಿದ್ದಿದ್ದು ಅವರಿಂದಲೇ. ಅವರು ಮೊದಲು ನನ್ನನ್ನು ಕಥೆ ಬರೆಯಲು ಹಚ್ಚಿದರು. ಹುಣಸೂರು ಕೃಷ್ಣಮೂರ್ತಿ, ತರಾಸು ಸೇರಿದಂತೆ ಹಲವರ ಜೊತೆ ಸ್ಕ್ರಿಪ್ಟ್‌ ಬರೆಯುತ್ತಿದ್ದೆ. ಸಹನಿರ್ದೇಶನ ಮಾಡಲು ಕೊಡುತ್ತಿದ್ದರು. ಕಾರ್‌ ಡ್ರೈವರ್‌ ಆಗಿಯೂ ಕೆಲಸ ಮಾಡಿದ್ದೆ.

ಒಬ್ಬ ಕುಟುಂಬದ ಯಜಮಾನನಾಗಿ ಫೆಂಟಾಸ್ಟಿಕ್‌ ವ್ಯಕ್ತಿ. ಅವರಿಗೆ ಇದ್ದದ್ದು ಎರಡು ಸಂಸಾರ.ಮೊದಲ ಪತ್ನಿ ಸುಂದರಬಾಯಿ. ನಾವು ಎರಡನೇ ಪತ್ನಿಯ (ಪ್ರತಿಮಾ ದೇವಿ) ಮಕ್ಕಳು. ಎರಡು ಮನೆಯನ್ನು ಆರಾಮವಾಗಿ ನಿರ್ವಹಿಸುತ್ತಿದ್ದರು. ಅದಕ್ಕೆ ಅದರದ್ದೇ ಆದ ಅರ್ಥವ್ಯವಸ್ಥೆಯನ್ನು ಕಲ್ಪಿಸಿದ್ದರು. ನಾವೆಲ್ಲಾ ಸೌಹಾರ್ದಯುತವಾಗಿಯೇ ಇದ್ದೇವೆ.ಅವರ ಮಕ್ಕಳಾಗಿ ಹುಟ್ಟಿದ್ದು ನಮ್ಮ ಪುಣ್ಯ.

ಕನ್ನಡ ಚಿತ್ರರಂಗಕ್ಕೆ ಒಂದು ಸೂತ್ರ ಮಾಡಿಕೊಂಡಿದ್ದರು. ಇಲ್ಲಿ ಹೆಚ್ಚು ಹಣ ಖರ್ಚು ಮಾಡಬಾರದು. ಮಿತ ಖರ್ಚು. ಒಂದಿಷ್ಟು ಆದಾಯ, ಲಾಭ ಪಡೆಯಬೇಕು ಎಂಬುದು ಅವರ ಸೂತ್ರ. ನೂರಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿ ಕನ್ನಡ ಚಿತ್ರರಂಗಕ್ಕೆ ಕರ್ನಾಟಕದಲ್ಲೇ ಅಸ್ತಿತ್ವ ಕೊಟ್ಟ ಅವರ ಹೆಸರಿನಲ್ಲಿ ಒಂದು ಪ್ರಶಸ್ತಿಯೂ ಇಲ್ಲ, ರಸ್ತೆಗೆ ಹೆಸರೂ ಇಟ್ಟಿಲ್ಲ ಎಂಬ ಕೊರಗು ಮಾತ್ರ ಕಾಡುತ್ತಿದೆ.

ನಿರೂಪಣೆ: ಶರತ್‌ ಹೆಗ್ಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT