ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಾಲ್ಕೆ ಚಿತ್ರೋತ್ಸವಕ್ಕೆ ‘ತಾಯಿ ಕಸ್ತೂರ್‌ ಗಾಂಧಿ’

Last Updated 19 ಏಪ್ರಿಲ್ 2022, 9:52 IST
ಅಕ್ಷರ ಗಾತ್ರ

ಕಸ್ತೂರ್‌ ಬಾ ಗಾಂಧಿಯವರ ಜೀವನದ ಮುಖ್ಯ ಘಟನೆಗಳನ್ನು ಆಧರಿಸಿ ಬರಗೂರು ರಾಮಚಂದ್ರಪ್ಪ ಅವರು ನಿರ್ದೇಶಿಸಿರುವ ‘ತಾಯಿ ಕಸ್ತೂರ್‌ ಗಾಂಧಿ’ ಚಿತ್ರವು, 12ನೇ ದಾದಾ ಸಾಹೇಬ್‌ ಫಾಲ್ಕೆ ಅಂತರರಾಷ್ಟ್ರೀಯ ಚಿತ್ರೋತ್ಸವದ ಸ್ಪರ್ಧಾ ವಿಭಾಗಕ್ಕೆ ಆಯ್ಕೆಯಾಗಿದೆ.

ದೆಹಲಿಯ ಸಂಸ್ಥೆಯೊಂದು ಫಾಲ್ಕೆ ಅವರ ಜನ್ಮದಿನದಂದು ಈ ಚಿತ್ರೋತ್ಸವವನ್ನು ನಡೆಸಿಕೊಂಡು ಬಂದಿದೆ. ‘ತಾಯಿ ಕಸ್ತೂರ್‌ ಗಾಂಧಿ’ ಇತ್ತೀಚೆಗೆ ಲಾಸ್‌ ಏಂಜಲಿಸ್‌ ಸನ್‌ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿತ್ತು. ಬರಗೂರು ಅವರೇ ‘ಸುಧಾ’ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬರೆದ ‘ಕಸ್ತೂರ್ ಬಾ Vs ಗಾಂಧಿ’ ಕಾದಂಬರಿಯನ್ನು ಈ ಚಿತ್ರವು ಆಧರಿಸಿದೆ. ಬರಗೂರು ಅವರೇ ಚಿತ್ರಕಥೆ, ಸಂಭಾಷಣೆ ಮತ್ತು ಗೀತೆಗಳನ್ನು ಬರೆದಿದ್ದಾರೆ.

‘ಕಸ್ತೂರ್‌ ಬಾ ಮತ್ತು ಗಾಂಧಿಯವರನ್ನು ಮುಖಾಮುಖಿಯಾಗಿಸುತ್ತಾ ಇಬ್ಬರ ಸಕಾರಾತ್ಮಕ ವ್ಯಕ್ತಿತ್ವವನ್ನು ಈ ಚಿತ್ರವು ಅನಾವರಣಗೊಳಿಸುತ್ತದೆ. ಮುಖ್ಯವಾಗಿ ಕಸ್ತೂರ್‌ ಬಾ ಅವರ ಅನುಭವದ ನೋಟದಲ್ಲಿ ಗಾಂಧಿಯವರನ್ನು ಕಂಡುಕೊಳ್ಳುವ ಅಭಿವ್ಯಕ್ತಿ ವಿಧಾನವನ್ನು ಅನುಸರಿಸಲಾಗಿದೆ. ಕಸ್ತೂರ್‌ ಬಾ ಅವರು ತಾಯಿ, ಪತ್ನಿ ಮತ್ತು ಹೋರಾಟಗಾರ್ತಿಯಾಗಿ ಎದುರಿಸಿದ ಮಾನಸಿಕ ತಲ್ಲಣಗಳನ್ನು ಇಲ್ಲಿ ಚಿತ್ರಿಸಲಾಗಿದೆ’ ಎನ್ನುತ್ತಾರೆ ಬರಗೂರು ರಾಮಚಂದ್ರಪ್ಪ.

ಕಸ್ತೂರ್‌ ಬಾ ಪಾತ್ರದಲ್ಲಿ ನಟಿ ಹರಿಪ್ರಿಯಾ ಹಾಗೂ ಗಾಂಧಿ ಪಾತ್ರದಲ್ಲಿ ಬಹುಭಾಷಾ ನಟ ಕಿಶೋರ್‌ ಅಭಿನಯಿಸಿದ್ದಾರೆ. ಖ್ಯಾತ ನಟರಾದ ಶ್ರೀನಾಥ್‌, ಸುಂದರರಾಜ್‌, ನಟಿ ಪ್ರಮೀಳಾ ಜೋಷಾಯ್‌ ಅವರಲ್ಲದೆ ರೇಖಾ, ಸುಂದರರಾಜ ಅರಸು, ವೆಂಕಟರಾಜು, ರಾಘವ್‌, ವತ್ಸಲಾ ಮೋಹನ್‌ ಮುಂತಾದವರು ತಾರಾಗಣದಲ್ಲಿದ್ದಾರೆ. ಮಾಸ್ಟರ್‌ ಆಕಾಂಕ್ಷ್‌ ಬರಗೂರ್‌ ಬಾಲಕ ಗಾಂಧಿಯಾಗಿ, ಕುಮಾರಿ ಸ್ಪಂದನ ಬಾಲಕಿ ಕಸ್ತೂರ್‌ ಬಾ ಆಗಿ ನಟಿಸಿದ್ದಾರೆ. ಚಿತ್ರಕ್ಕೆ ಸುರೇಶ್‌ ಅರಸು ಸಂಕಲನ, ನಾಗರಾಜ್‌ ಆದವಾನಿ ಛಾಯಾಗ್ರಹಣ, ಶಮಿತಾ ಮಲ್ನಾಡ್‌ ಸಂಗೀತ, ಮೈತ್ರಿ ಬರಗೂರು ಅವರ ಕಲಾ ನಿರ್ದೇಶನ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT