ಸೋಮವಾರ, ಜನವರಿ 20, 2020
29 °C

‘ವಿರಾಟ ಪರ್ವಂ’ಪೋಸ್ಟರ್ ಫಸ್ಟ್‌ಲುಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಬಾಹುಬಲಿ’ ಖ್ಯಾತಿಯ ಆರಡಿ ಎತ್ತರದ ಅಜಾನಬಾಹು ನಟ ರಾನಾ ದಗ್ಗುಬಾಟಿ 35ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಜನ್ಮದಿನದಂದು (ಡಿ.14) ‘ವಿರಾಟಪರ್ವಂ’ ಚಿತ್ರತಂಡ ಚಿತ್ರದ ಪೋಸ್ಟರ್‌ ಫಸ್ಟ್ ಲುಕ್‌ ಬಿಡುಗಡೆ ಮಾಡಿದೆ. ರಾನಾ ಸಾಮಾಜಿಕ ಜಾಲತಾಣದಲ್ಲಿ ಫಸ್ಟ್‌ಲುಕ್‌ ಹಂಚಿಕೊಂಡಿದ್ದಾರೆ. 

‘ಕ್ರಾಂತಿ ಕೂಡ ಪ್ರೀತಿಯ ಒಂದು ಬಗೆ’ ಎಂಬ ಟ್ಯಾಗ್‌ಲೈನ್‌ ಹೊಂದಿರುವ ಚಿತ್ರ ಭಾರಿ ನಿರೀಕ್ಷೆ ಹುಟ್ಟು ಹಾಕಿದೆ. ಮುಖಕ್ಕೆ ಕೆಂಪು ಬಣ್ಣದ ಸ್ಕಾರ್ಫ್‌ ಕಟ್ಟಿಕೊಂಡ ಚಿತ್ರವನ್ನು ರಾನಾ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. 

ನಕ್ಸಲೀಯರ ಕತೆ ಹೊಂದಿರುವ ಚಿತ್ರದಲ್ಲಿ ರಾನಾ ಮತ್ತು ಸಾಯಿ ಪಲ್ಲವಿ ನಕ್ಸಲೀಯರಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಯನ್ನು ಚಿತ್ರದ ಪೋಸ್ಟರ್‌ ರುಜುವಾತು ಪಡಿಸಿದೆ. ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡುವ ಇಬ್ಬರು ನಕ್ಸಲೀಯರ ನಡುವಿನ ಪ್ರೇಮಾಂಕುರವನ್ನು ಚಿತ್ರದಲ್ಲಿ ಮನಮುಟ್ಟುವಂತೆ ಕಟ್ಟಿಕೊಡಲಾಗಿದೆ ಎಂದು ಹೇಳಲಾಗಿದೆ.  

ಇದಕ್ಕೆ ಪೂರಕ ಎಂಬಂತೆ ವಾರಂಗಲ್‌, ಕರೀಂನಗರ, ಸಿದ್ದಿಪೇಟೆ ಸೇರಿದಂತೆ ಆಂಧ್ರ ಪ್ರದೇಶದ ಕರಾವಳಿ ಮತ್ತು ತೆಲಂಗಾಣದಲ್ಲಿ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ರಾನಾ ಜುಲೈನಲ್ಲಿಯೇ ‘ವಿರಾಟಪರ್ವಂ’ ಶೂಟಿಂಗ್‌ನಲ್ಲಿ ತೊಡಗಿಕೊಳ್ಳಬೇಕಿತ್ತು. ಆದರೆ, ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದ ಕಾರಣ  ಶೂಟಿಂಗ್‌ನಲ್ಲಿ ಭಾಗವಹಿಸಿರಲಿಲ್ಲ. ನವೆಂಬರ್‌ನಲ್ಲಿ ಭಾರತಕ್ಕೆ ಹಿಂದಿರುಗಿದ ಅವರು ಈಗ ಚಿತ್ರತಂಡ ಸೇರಿಕೊಂಡಿದ್ದಾರೆ. ಈ ಚಿತ್ರದ ಮೂಲಕ ರಾನಾ ಮೊದಲ ಬಾರಿಗೆ ಸಾಯಿ ಪಲ್ಲವಿ ಜತೆ ನಟಿಸುತ್ತಿದ್ದು, ನಿರ್ದೇಶಕ ವೇಣು ಉಡುಗುಲಾ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. 

ಟಾಲಿವುಡ್‌ ಮತ್ತು ಬಾಲಿವುಡ್‌ ಇಂಡಸ್ಟ್ರಿಯವರ ಅಭಿನಂದನೆಗಳ ಮಹಾಪೂರವೇ ರಾನಾಗೆ ಹರಿದುಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಚಿತ್ರದ ಪೋಸ್ಟರ್‌ ವೈರಲ್‌ ಹರಿದಾಡುತ್ತಿದೆ. ಜನ್ಮದಿನಕ್ಕೆ ಚಿತ್ರದ ಪೋಸ್ಟರ್‌ ಫಸ್ಟ್‌ಲುಕ್‌ ಬಿಡುಗಡೆ ಮಾಡುವ ಮೂಲಕ ವಿಶೇಷ ಉಡುಗೊರೆ ನೀಡಿದ ಚಿತ್ರತಂಡಕ್ಕೆ ರಾನಾ ಅಭಿನಂದಿಸಿದ್ದಾರೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು