ಶನಿವಾರ, ಅಕ್ಟೋಬರ್ 19, 2019
27 °C

ನಟ ದರ್ಶನ್ ಎಚ್ಚರಿಕೆ ಕೊಟ್ಟಿದ್ದು ಯಾರಿಗೆ?

Published:
Updated:

‘ಪೈಲ್ವಾನ್‌’ ಚಿತ್ರ ತೆರೆಕಂಡ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ನಟರಾದ ಸುದೀಪ್‌ ಮತ್ತು ದರ್ಶನ್‌ ಅವರ ಅಭಿಮಾನಿಗಳ ನಡುವೆ ಪೈರಸಿ ವಿಚಾರ ಸಂಬಂಧ ಪರಸ್ಪರ ಆರೋಪ ಮತ್ತು ಪ್ರತ್ಯಾರೋಪ ನಡೆಯುತ್ತಿದೆ. 

‘ಪೈಲ್ವಾನ್‌’ ಬಿಡುಗಡೆಯಾದ ಮಾರನೇ ದಿನವೇ ತಮಿಳು ಕಾರರ್ಸ್‌ ಸೇರಿದಂತೆ ಕೆಲವು ವೆಬ್‌ಸೈಟ್‌ಗಳಲ್ಲಿ ಈ ಚಿತ್ರ ಸೋರಿಕೆಯಾಗಿತ್ತು. ಪೈರಸಿಗೆ ಅವಕಾಶ ನೀಡಬಾರದು ಎಂದು ಚಿತ್ರತಂಡ ಅಭಿಮಾನಿಗಳಿಗೆ ಮನವಿ ಮಾಡಿತ್ತು. ನಿನ್ನೆ ಚಿತ್ರದ ನಿರ್ಮಾಪಕಿ ಸ್ವಪ್ನಾ ಕೃಷ್ಣ ಅವರು, ಸೈಬರ್‌ ಪೊಲೀಸ್‌ ಠಾಣೆಗೆ ಭೇಟಿ ನೀಡಿ ಪೈರಸಿ ಮಾಡಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ದೂರು ಸಲ್ಲಿಸಿದ್ದರು.

ಮಾಧ್ಯಮದವರೊಂದಿಗೆ ಮಾತನಾಡುವಾಗ, ‘ಪೈರಸಿ ವಿಚಾರದಲ್ಲಿ ನಟ ದರ್ಶನ್ ಅಭಿಮಾನಿಗಳು ತಪ್ಪು ಮಾಡಿಲ್ಲ’ ಎಂದು ಹೇಳಿದ್ದರು.

ದಚ್ಚು ತನ್ನ ಅಭಿಮಾನಿಗಳನ್ನು ‘ಸೆಲೆಬ್ರಿಟಿಗಳು’ ಎಂದು ಕರೆಯುವುದು ವಾಡಿಕೆ. ಇಂದು ‘ಚಾಲೆಂಜಿಂಗ್‌ ಸ್ಟಾರ್‌’ ದರ್ಶನ್‌ ಇದಕ್ಕೆ ಟ್ವಿಟರ್‌ನಲ್ಲಿ ಯಾರೊಬ್ಬರ ಹೆಸರು ಪ್ರಸ್ತಾಪಿಸದೇ ಖಾರವಾಗಿ ಟ್ವೀಟ್‌ ಮಾಡಿದ್ದಾರೆ. 

‘ಸದ್ಯಕ್ಕೆ ನಾನು ಬೆಂಗಳೂರಿನಲ್ಲಿ ಇಲ್ಲ. ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದೇನೆ. ಸದ್ಯಕ್ಕೆ ಕೇಳಿ ಬರುತ್ತಿರುವ ಕೆಲವು ವ್ಯಕ್ತಿಗಳ ಬಗ್ಗೆ ಒಂದು ಕಿವಿಮಾತು- ನನ್ನ ಅನ್ನದಾತರು, ಸೆಲೆಬ್ರಿಟಿಗಳನ್ನು ಕೆಣಕಲು/ಪ್ರಚೋದಿಸಲು ಬರದಿರಿ’ ಖಡಕ್‌ ಆಗಿ ಪ್ರತಿಕ್ರಿಯಿಸಿದ್ದಾರೆ.

ಸುದೀಪ್ ಟ್ವೀಟ್

ಮಾತುಗಳಿಂದ  ಯುದ್ಧ ಗೆಲ್ಲುವುದಾದರೆ   ಇಂದು ಹಲವಾರು ರಾಜರು, ಆಡಳಿತಗಾರರು ಇರುತ್ತಿದ್ದರು ಎಂಬ ಟ್ವೀಟ್‌ನೊಂದಿಗೆ ಸುರ್ದೀರ್ಘ ಪತ್ರವೊಂದನ್ನು ಸುದೀಪ್ ಲಗತ್ತಿಸಿದ್ದಾರೆ.

ಪತ್ರದ ಸಾರಾಂಶ ಹೀಗಿದೆ

ಸುದೀಪ್ ಟ್ವೀಟ್‌ನಲ್ಲಿ ಸುದೀರ್ಘ ಪತ್ರವೊಂದನ್ನು ಲಗತ್ತಿಸಿದ್ದು,

ಅನಗತ್ಯ  ಸಂದರ್ಭಗಳಿಗೆ ಪ್ರತಿಕ್ರಿಯಿಸುವುದನ್ನು ಬಿಟ್ಟು ಎಲ್ಲರೂ ತಮ್ಮ ಜೀವನ ಮತ್ತು ಉತ್ತಮ ಕಾರ್ಯಗಳತ್ತ ಗಮನವಹಿಸಿ ಎಂದು ನಾನು ವಿನಂತಿಸುತ್ತೇನೆ. ಕೆಲವೊಂದು ದನಿಗಳ ಬಗ್ಗೆ ಜಾಣ ಕುರುಡು ಮತ್ತು ಜಾಣ ಕಿವುಡು ಮಾಡುವುದು ಉತ್ತಮ. ಸತ್ಯ ಯಾವತ್ತೂ ಗೆಲ್ಲುತ್ತದೆ.   ಹಾಗಾಗಿ ಈ ರೀತಿ ಮಾಡುವುದರಿಂದ ಯಾರೂ ಕಡಿಮೆ ಎಂದಾಗುವುದಿಲ್ಲ.

ಹಲವಾರು ಸಂಗತಿಗಳು ನಡೆಯುತ್ತಿದ್ದು ಇದು ಯಾರಿಗೂ ಉತ್ತಮ ವೈಬ್ಸ್ ನೀಡುತ್ತಿಲ್ಲ. ಯಾರೊಬ್ಬರೂ ಪೈರಸಿ ಬಗ್ಗೆ ನಿರ್ದಿಷ್ಟ ನಟನನ್ನು ದೂರಿಲ್ಲ. ನನ್ನ ಕಡೆಯಿಂದ ಅಥವಾ ನಿರ್ಮಾಣ ಸಂಸ್ಥೆ ಕಡೆಯಿಂದ ಯಾರೂ ಹೆಸರೆತ್ತಿಲ್ಲ. ನಿಜ, ಹಲವಾರು ಮಂದಿ ಪೈರಸಿ ಲಿಂಕ್‌ಗಳುನ್ನು ವ್ಯಾಪಕವಾಗಿ, ವೇಗವಾಗಿ ಶೇರ್ ಮಾಡುತ್ತಿದ್ದಾರೆ. ಅಂತವರ ಹೆಸರನ್ನು ಸೈಬರ್ ಪೊಲೀಸರಿಗೆ ನೀಡಿದ್ದು ಅವರು ಈ ಬಗ್ಗೆ ಕ್ರಮ ತೆಗದುಕೊಂಡು ಕೊನೆಗೆ ಸತ್ಯ ಬಯಲಾಗಲಿದೆ. ಈಗ ಸದ್ದು ಮಾಡುತ್ತಿರುವ ವಿಷಯಗಳನ್ನು ನಿಲ್ಲಿಸೋಣ.  ಪತ್ರದಲ್ಲಿ ಪರೋಕ್ಷವಾಗಿ ನನ್ನ ಹೆಸರನ್ನು ತಂದು ನನ್ನ ಬಗ್ಗೆ ನಗೆಯಾಡುವುದರಲ್ಲಿ ಕೆಲವರು ಖುಷಿ ಕಾಣುತ್ತಿದ್ದರೆ ಅದು ಹಾಗೆಯೇ ಇರಲಿ. ಇದೆಲ್ಲವೂ ನಿಮಗೆ ನೋವುಂಟು ಮಾಡುತ್ತದೆ ಎಂಬುದು ನನಗೆ ಗೊತ್ತು. ಆದರೆ ಈ ವಿಷಯಗಳಿಂದ ನಾನು ಕುಗ್ಗಲಾರೆ ಎಂಬುದನ್ನು ನೆನಪಿಟ್ಟುಕೊಳ್ಳಿ.

 ನನ್ನ ಸಿನಿಮಾ ಮತ್ತು ನನ್ನ  ನಿರ್ಮಾಪರಕರನ್ನು ಕಾಪಾಡಿಕೊಳ್ಳುವುದು ನನ್ನ ಜವಾಬ್ದಾರಿ. ನಾನು ಹೇಳಿದ್ದು ಮತ್ತು ಟ್ವೀಟಿಸಿದ್ದು ಎಲ್ಲವೂ ಇದನ್ನೇ. ನಾನು ಜೀವನದಲ್ಲಿ ಯಾರನ್ನೂ ತುಳಿಯಲು ಇಚ್ಛಿಸುವುದಿಲ್ಲ. ಸಹೋದ್ಯೋಗಿಗಳ ಒಳ್ಳೆಯತನ, ಅವರಿಗೆ ನನ್ನ ಮೇಲಿನ ಪ್ರೀತಿ  ಮತ್ತು ಅವರೊಂದಿಗೆ ನನ್ನ ಸಂಬಂಧ, ಇಂಡಸ್ಟ್ರಿಯಿಂದ ಬೆಂಬಲ ಎಲ್ಲವೂ ಸಿಕ್ಕಿದೆ. ಹಲವಾರು ಮಂದಿ ಒಳ್ಳೆಯ ವಿಷಯಗಳನ್ನು ಪೋಸ್ಟಿಸಿ ನನಗೆ ಬೆಂಬಲ ಸೂಚಿಸುತ್ತಿದ್ದು, ನಾನು ಅನುಗ್ರಹೀತನಾಗಿದ್ದೇನೆ. ಇಷ್ಟೊಂದು ಅಕ್ಕರೆಯ ಜನರಿಂದ ನನಗೆ ಪ್ರೀತಿ ಸಿಗುತ್ತಿರುವಾಗ ಯಾರಿಗಾದರೂ ನಾನು ಯಾರೆಂದು ಯಾಕೆ ಸಾಬೀತು ಪಡಿಸಬೇಕು?
ಹೀರೊಗಳ ಎರವಲು ಪಡೆದ ಸಾಲನ್ನು ಹೇಳಿ ಎಚ್ಚರಿಕೆ ನೀಡುವುದು ನನ್ನಿಂದಾಗುವ ಕೆಲಸವಲ್ಲ. ಅದು ನನ್ನ ವ್ಯಕ್ತಿತ್ವಕ್ಕೆ ಹೊಂದುವಂತದ್ದೂ ಅಲ್ಲ.

ನಿರ್ದಿಷ್ಟ ನಟನ ಬಗ್ಗೆ ನಾನು ಎಲ್ಲಿ ಹೇಳಿಕೆ ನೀಡಿದೆ? ನನ್ನ ಬಗ್ಗೆಯೂ ಹೇಳಿಲ್ಲ. ಹಾಗೆ ಮಾಡಲು ನನಗೂ ಕಾರಣವಿದೆ. ನನ್ನ ಜೀವನದಲ್ಲಿಯೂ ಈ ರೀತಿಯ ಕೆಲವು ಜಗಳಗಳು ಆಗಿವೆ. ನಮಗೆ  ಎಲ್ಲರಿಗೂ ನಮ್ಮದೇ ಕ್ರಮಗಳಿವೆ. ಅಲ್ಲವೇ?  ಅರ್ಥೈಸಿಕೊಂಡು ಬೆಳೆಯುವವನು ಉತ್ತಮ ಮನುಷ್ಯನಾಗುತ್ತಾನೆ .ಅವನು  ಜನ ಮನಸ್ಸು ಮತ್ತು ಜಗತ್ತನ್ನು ಗೆಲ್ಲುತ್ತಾನೆ. ಅದನ್ನೇ ನಾನು ಮಾಡಿದ್ದು. ನಾನು ಕ್ಷಮೆ ಕೇಳಲು ಹಿಂಜರಿಯಲಿಲ್ಲ. ಕ್ಷಮೆ ಸ್ವೀಕರಿಸಲೂ ನಾನು ಹಿಂಜರಿಯಲಿಲ್ಲ. ಎಲ್ಲವೂ ಮುಕ್ತವಾಗಿ ಮತ್ತು ಸಾರ್ವಜನಿಕವಾಗಿ ನಡೆದಿದ್ದು ನಾನು ಆ ಬಗ್ಗೆ ಖುಷಿ ಪಡುತ್ತೇನೆ.

ನನ್ನ ಕೆಲಸ ಮತ್ತು ನನ್ನ ಜೀವನ  ಮುನ್ನಡೆಸುವ ರೀತಿಯಂದ ಜನರನ್ನು ಗೆಲ್ಲಲು ಬಯಸುತ್ತೇನೆ. ಇಂಡಸ್ಟ್ರಿಯಲ್ಲಿರುವ ಜನರು ನನಗೆ ಅವರ ಜೀವನದಲ್ಲಿ ಸ್ಥಾನ ನೀಡಿದ್ದಾರೆ ಎಂದರೆ ಅದು  ಪರಸ್ಪರ ಗೌರವದಿಂದಾಗಿದೆ. ನಾನು ಕೆಲವು ಬಿರುಕುಗಳನ್ನು ಸರಿಪಡಿಸಿ, ಸುಂದರವಾದ ಸಂಬಂಧವನ್ನು ಉಳಿಯುವಂತೆ ಮಾಡಿದೆ ಎಂಬ ಖುಷಿ ನನಗಿದೆ.

 ನನ್ನ ಪರವಾಗಿ ನೀವೆಲ್ಲರೂ ನಿಂತಿದ್ದಕ್ಕೆ ನಾನು ಅಭಾರಿ, ನೀವು ನನ್ನ ಕುಟುಂಬದವರು. ನನಗೆ ನೀವು ನೀಡಿದ ಸಣ್ಣ ಪುಟ್ಟ ಸಹಕಾರವನ್ನು ನಾನು ಯಾವತ್ತೂ ಮರೆಯಲಾರೆ. ನೆನಪಿಡಿ ನಾವೆಲ್ಲರೂ ಇಲ್ಲಿ ಕ್ಷಣ ಕಾಲ ಇರುತ್ತೇವೆ. ಹಾಗಾಗಿ ಮುಂದೆ ಸಾಗೋಣ. ಕಾಲವೇ ಎಲ್ಲದಕ್ಕೂ ಉತ್ತರಿಸುತ್ತದೆ.

ವಿಸೂ: ಅಲೆಕ್ಸಾಂಡರ್ ಜಗತ್ತನ್ನು  ಬರಿ ಕೈಯಿಂದಲೇ ಗೆದ್ದಿದ್ದ.  ನಾವು ಒಳ್ಳೆಯ ಕ್ಷಣಗಳನ್ನು ಜತೆಗೆ ಕರೆದೊಯ್ಯೋಣ, ನಾವು ಹಿಂದೆ ಬಿಟ್ಟಿದ್ದೆಲ್ಲವೂ ನೆನಪುಗಳಾಗುತ್ತವೆ. ನೆನಪುಗಳು ಎಲ್ಲರನ್ನೂ ಜೀವಂತವಾಗಿರಿಸುತ್ತವೆ.
 

Post Comments (+)