ಮಂಗಳವಾರ, ಜನವರಿ 21, 2020
29 °C

ರಿಯಾಲಿಟಿ ಶೋಗಳ ನಿರೂಪಣೆ ಮಾಡಲ್ಲವೆಂದು ದರ್ಶನ್‌ ಅಂದಿದ್ದೇಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಸಿನಿಮಾಗಳಲ್ಲಿ ನಟನೆ ಮಾಡಿಕೊಂಡು ಸಂತಸದಿಂದ ಇದ್ದೇನೆ. ಹಿರಿತೆರೆ ಮತ್ತು ಕಿರುತೆರೆಯಲ್ಲಿ ಏಕಕಾಲಕ್ಕೆ ಕೆಲಸ ಮಾಡಲು ನನ್ನಿಂದ ಸಾಧ್ಯವಿಲ್ಲ’ ಎಂದು ‘ಚಾಲೆಂಜಿಂಗ್‌ ಸ್ಟಾರ್‌’ ದರ್ಶನ್‌ ಸ್ಪಷ್ಟಪಡಿಸಿದ್ದಾರೆ.

ರಮೇಶ್‌ ಅರವಿಂದ್, ಸುದೀಪ್‌, ಶಿವರಾಜ್‌ಕುಮಾರ್‌, ಪುನೀತ್‌ರಾಜ್‌ಕುಮಾರ್‌, ಗಣೇಶ್‌, ರವಿಚಂದ್ರನ್, ಜಗ್ಗೇಶ್‌, ಯೋಗಿ, ಯೋಗರಾಜ್ ಭಟ್‌, ರಕ್ಷಿತಾ, ರಚಿತಾ ರಾಮ್ ಸೇರಿದಂತೆ ಹಲವು ನಟ, ನಟಿಯರು ಟಿ.ವಿ. ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ದೊಡ್ಡ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರು, ನಿರೂಪಕರಾಗಿರುವುದು ಎಲ್ಲರಿಗೂ ಗೊತ್ತು.

ನಾಡಿನಾದ್ಯಂತ ಅಪಾರ ಅಭಿಮಾನಿ ಬಳಗ ಹೊಂದಿರುವ ದರ್ಶನ್‌ ಕೂಡ ಮುಂದಿನ ವರ್ಷ ಕಿರುತೆರೆಯ ದೊಡ್ಡ ರಿಯಾಲಿಟಿ ಕಾರ್ಯಕ್ರಮವೊಂದರ ನಿರೂಪಣೆ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈಗ ಅದನ್ನು ದಚ್ಚು ಸ್ಪಷ್ಟವಾಗಿ ನಿರಾಕರಿಸಿದ್ದು, ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

‘ಬೆಳ್ಳಿತೆರೆಯಲ್ಲಿನ ನಟನೆಯನ್ನು ಎಂಜಾಯ್‌ ಮಾಡುತ್ತಿರುವೆ. ಟಿ.ವಿ.ಯಲ್ಲಿ ಕಾರ್ಯಕ್ರಮ ನಿರೂಪಣೆ ಮಾಡುವ ಬಗ್ಗೆ ನಾನೆಂದಿಗೂ ಯೋಚಿಸಿಲ್ಲ. ಟಿ.ವಿ.ಯಲ್ಲಿ ಕೆಲಸ ಮಾಡಲು ನನ್ನಿಂದ ಆಗುವುದಿಲ್ಲ’ ಎಂದಿದ್ದಾರೆ.

ಪ್ರಸಕ್ತ ವರ್ಷ ತೆರೆ ಕಂಡ ‘ಯಜಮಾನ’ ಮತ್ತು ‘ಮುನಿರತ್ನ ಕುರುಕ್ಷೇತ್ರ’ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಕಂಡಿವೆ. ಡಿಸೆಂಬರ್‌ 12ರಂದು ಎಂ.ಡಿ. ಶ್ರೀಧರ್‌ ನಿರ್ದೇಶನದ ‘ಒಡೆಯ’ ಚಿತ್ರ ತೆರೆ ಕಾಣುತ್ತಿದೆ. ಈ ವರ್ಷ ಬಿಡುಗಡೆಯಾಗುತ್ತಿರುವ ದರ್ಶನ್‌ ನಟನೆಯ ಮೂರನೇ ಚಿತ್ರ ಇದು.

ಕಳೆದ ವರ್ಷ ದಚ್ಚು ನಟನೆಯ ಯಾವುದೇ ಸಿನಿಮಾ ಬಿಡುಗಡೆಯಾಗಿರಲಿಲ್ಲ. ಈಗ ಅವರು ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಹಾಗಾಗಿಯೇ, ಕಿರುತೆರೆ ಕಾರ್ಯಕ್ರಮದಿಂದ ದೂರ ಸರಿಯಲು ಕಾರಣವಿರಬಹುದು ಎನ್ನಲಾಗಿದೆ.

ತರುಣ್‌ ಸುಧೀರ್‌ ನಿರ್ದೇಶನದ ‘ರಾಬರ್ಟ್’ ಚಿತ್ರದ ಶೂಟಿಂಗ್‌ ಅಂತಿಮ ಹಂತದಲ್ಲಿದೆ. ಇದರ ಬಳಿಕ ಎಸ್‌.ವಿ. ರಾಜೇಂದ್ರಸಿಂಗ್ ಬಾಬು ನಿರ್ದೇಶನದ ‘ಗಂಡುಗಲಿ ಮದಕರಿನಾಯಕ’ ಚಿತ್ರದಲ್ಲಿ ಅವರು ನಟಿಸಲಿದ್ದಾರೆ. ಡಿಸೆಂಬರ್‌ 6ರಂದು ಈ ಚಿತ್ರದ ಮುಹೂರ್ತ ಅದ್ದೂರಿಯಾಗಿ ನಡೆಯಲಿದೆ. ಇದಕ್ಕೆ ರಾಕ್‌ಲೈನ್‌ ವೆಂಕಟೇಶ್‌ ಬಂಡವಾಳ ಹೂಡಿದ್ದಾರೆ. ಇದಾದ ಬಳಿಕ ಪ್ರಕಾಶ್‌ ಜಯರಾಂ ನಿರ್ದೇಶನದ ಸಿನಿಮಾದಲ್ಲಿ ದರ್ಶನ್ ಅವರು ನಟಿಸಲಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು