ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಲಿವುಡ್ ನಟಿ ಲೈಲಾ ಖಾನ್‌ ಹತ್ಯೆ ಪ್ರಕರಣ: ಅಪರಾಧಿ ಮಲತಂದೆಗೆ ಮರಣದಂಡನೆ

ನಟಿ ಲೈಲಾ ಖಾನ್, ಇತರ ಐವರ ಹತ್ಯೆ * ಕನ್ನಡದ ‘ಮೇಕಪ್‌’ ಚಿತ್ರದಲ್ಲೂ ನಟಿಸಿದ್ದ ನಟಿ
Published 24 ಮೇ 2024, 16:15 IST
Last Updated 24 ಮೇ 2024, 16:15 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್ ನಟಿ, ರೂಪದರ್ಶಿ ಲೈಲಾ ಖಾನ್‌ ಹಾಗೂ ಅವರ ಕುಟುಂಬದ ಆರು ಜನರ ಹತ್ಯೆ ಕೃತ್ಯದ ಸಂಬಂಧ, ಕೃತ್ಯ ನಡೆದ 13 ವರ್ಷಗಳ ಬಳಿಕ ನಟಿಯ ಮಲತಂದೆ ಪರ್ವೇಜ್‌ ತಕ್‌ಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸಿ ಶುಕ್ರವಾರ ಸ್ಥಳೀಯ ನ್ಯಾಯಾಲಯವು ಆದೇಶ ನೀಡಿತು.

ಲೈಲಾ ಖಾನ್ ಹಾಗೂ ಇತರ ಐವರನ್ನು ಬರ್ಬರವಾಗಿ ಹತ್ಯೆಗೈದು, ನಾಸಿಕ್‌ ಜಿಲ್ಲೆಯ ಐಗತ್‌ಪುರಿಯ ತೋಟದ ಮನೆಯ ಆವರಣದಲ್ಲಿ ಹೂಳಲಾಗಿತ್ತು. ಈ ಕೃತ್ಯ ಆಗ ಮುಂಬೈನಲ್ಲಿ ಸಂಚಲನ ಮೂಡಿಸಿದ್ದು, ಚರ್ಚೆಗೆ ಗ್ರಾಸವಾಗಿತ್ತು. ಆಸ್ತಿ ವಿವಾದವು ಈ ಹತ್ಯೆಗಳಿಗೆ ಮೂಲ ಕಾರಣವಾಗಿತ್ತು. 

30 ವರ್ಷ ವಯಸ್ಸಿನ ಲೈಲಾಖಾನ್, ಆಕೆಯ ತಾಯಿ ಸಲೀನಾ ಪಟೇಲ್ (51), ಅಕ್ಕ ಅಜ್ಮೀನಾ ಖಾನ್‌ (32), ಅವಳಿ ಸೋದರರಾದ ಇಮ್ರಾನ್ ಖಾನ್‌, ಝಾರಾ ಖಾನ್‌ (25), ಮತ್ತು ದಾಯಾದಿ ರೇಷ್ಮಾ ಖಾನ್‌ (22) ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.

 ಈಗ ಮರಣದಂಡನೆಗೆ ಗುರಿಯಾಗಿರುವ ಪರ್ವೇಜ್‌ ತಕ್‌ನಿಗೆ ಲಷ್ಕರ್ ಎ ತಯಬಾ ಸಂಘಟನೆ ಜೊತೆಗೆ ನಂಟಿದೆ. ಈತ ಸಲೀನಾ ಪಟೇಲ್‌ ಅವರ 3ನೇ ಪತಿ. ನಾದಿರ್ ಪಟೇಲ್, ಆಸಿಫ್ ಶೇಖ್ ಮೊದಲ ಇಬ್ಬರು ಪತಿಯರು.

ಲೈಲಾ ಖಾನ್ ಸೇರಿ ಆರು ಜನರು 2011ರ ಫೆಬ್ರುವರಿ 7ರಿಂದ ನಾಪತ್ತೆಯಾಗಿದ್ದರು. ದಾಖಲೆಗಳನ್ನು ತಿದ್ದಿದ ‌ಪ್ರಕರಣವೊಂದಕ್ಕೆ ಸಂಬಂಧಿಸಿ ಪರ್ವೇಜ್‌ ತಕ್‌ನನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು 2012ರ ಜುಲೈ 8ರಲ್ಲಿ ಬಂಧಿಸಿದ್ದರು. ಅದರ ತನಿಖೆ ವೇಳೆ ಮಹಾರಾಷ್ಟ್ರದಲ್ಲಿ ಕೊಲೆ ಕೃತ್ಯ ನಡೆಸಿದ್ದನ್ನು ಈತ ಒಪ್ಪಿಕೊಂಡಿದ್ದ. ಈತನ ನೀಡಿದ ಮಾಹಿತಿ ಆಧರಿಸಿ 2012ರ ಜುಲೈ 18ರಂದು ಫಾರ್ಮ್‌ಹೌಸ್‌ನಿಂದ ಶವಗಳನ್ನು ಪತ್ತೆಮಾಡಲಾಗಿತ್ತು.

ನಾದಿರ್ ಪಾಟೀಲ್ ಅವರು ಲೈಲಾಖಾನ್‌ ಅವರ ತಂದೆ. ಈ ಪ್ರಕರಣದಲ್ಲಿ ಪೊಲೀಸರಿಗೆ ದೂರು ನೀಡಿದ್ದು, ಆಸಿಫ್‌ ಶೇಖ್ ಮತ್ತು ಪರ್ವೇಜ್‌ ತಕ್‌ ವಿರುದ್ಧ ಶಂಕೆ ವ್ಯಕ್ತಪಡಿಸಿದ್ದರು. 

ಪ್ರಕರಣದ ವಿಚಾರಣೆ ನಡೆಸಿದ್ದ ಹೆಚ್ಚುವರಿ ಸೆಷನ್ಸ್ ಕೋರ್ಟ್‌ನ ನ್ಯಾಯಾಧೀಶರಾದ ಎಸ್.ಬಿ.ಪವಾರ್, ‘ಇದು, ಅಪರೂಪದಲ್ಲಿಯೇ ಅಪರೂಪವಾದ ಪ್ರಕರಣ’ ಎಂದು ಹೇಳಿದರು.

ಲೈಲಾ ಖಾನ್‌ ಮೂಲ ಹೆಸರು ರೇಷ್ಮಾ ಪಟೇಲ್‌. ಇವರು 2008ರಲ್ಲಿ ರಾಜೇಶ್ ಖನ್ನಾ ಅವರೊಂದಿಗೆ ‘ವಫಾ: ಎ ಡೆಡ್ಲಿ ಲವ್ ಸ್ಟೋರಿ’ ಚಿತ್ರದಲ್ಲಿ ನಟಿಸಿದ್ದರು. 2002ರಲ್ಲಿ ಇವರು ಕನ್ನಡದ ‘ಮೇಕಪ್‘ ಚಿತ್ರದಲ್ಲೂ ನಟಿಸಿದ್ದರು.

‘ಸೆಲಿನಾ ಮತ್ತು ಕುಟುಂಬದವರು ನನ್ನನ್ನು ಸೇವಕನಂತೆ ನೋಡುತ್ತಿದ್ದಾರೆ. ಕುಟುಂಬ ಸಮೇತ ದುಬೈಗೆ ಸ್ಥಳಾಂತರಗೊಳ್ಳಲು ಚಿಂತನೆ ನಡೆಸಿದ್ದಾರೆ. ಇಲ್ಲಿ, ನನ್ನನ್ನು ಏಕಾಂಗಿಯಾಗಿಸಲಿದ್ದಾರೆ ಎಂದು ಪರ್ವೇಜ್‌ ತಕ್‌ ಭಾವಿಸಿದ್ದ. ಇದೂ ಕೂಡಾ ಕೃತ್ಯಕ್ಕೆ ಕಾರಣವಾಯಿತು ಎಂದು ತನಿಖೆ ನಡೆಸಿದ್ದ ಪೊಲೀಸರು ತಿಳಿಸಿದ್ದರು.

ಬಹುತೇಕ ಒಂದು ದಶಕ ನಡೆದ ವಿಚಾರಣೆಯಲ್ಲಿ 40 ಸಾಕ್ಷಿಗಳ ಮಾತುಗಳನ್ನು ಆಲಿಸಲಾಗಿತ್ತು. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ವಕೀಲ ಉಜ್ವಲ್ ನಿಕ್ಕಂ ಅವರು ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT