ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರಗ್ಸ್‌ ನಂಟು | ದೀಪಿಕಾ ತಪ್ಪು ಕ್ಷಮಿಸಲಾಗದು: ಇಂದ್ರಜಿತ್‌

Last Updated 24 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

‘ದೀಪಿಕಾ ಪಡುಕೋಣೆ ಸಿನಿಮಾ ರಂಗದಲ್ಲಿ ಬೆಳೆದ ಪರಿಯ ಬಗ್ಗೆ ಹೆಮ್ಮೆ ಇದೆ. ಆದರೆ, ಡ್ರಗ್ಸ್‌ವ್ಯಸನಿಯಾಗಿ ಡ್ರಗ್ಸ್‌ ಮಾಫಿಯಾ ಪ್ರಕರಣದಲ್ಲಿ ಆಕೆಯ ಹೆಸರು ತಳುಕು ಹಾಕಿಕೊಂಡಿರುವುದನ್ನು ಕ್ಷಮಿಸಲಾಗದು’ ಎನ್ನುತ್ತಾರೆ ಆಕೆಯನ್ನು ಮೊಟ್ಟಮೊದಲು ಚಿತ್ರರಂಗಕ್ಕೆ ಪರಿಚಯಿಸಿದ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌.

ಬಾಲಿವುಡ್ ಡ್ರಗ್ಸ್‌ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ದೀ‍ಪಿಕಾ ಪಡುಕೋಣೆಗೆ ಎನ್‌ಸಿಬಿ ನೋಟಿಸ್‌ ನೀಡಿರುವುದು ಆಘಾತ ಮತ್ತು ಆಶ್ಚರ್ಯ ಉಂಟು ಮಾಡಿದೆ ಎಂದು ಅವರು ‘ಪ್ರಜಾಪ್ಲಸ್‌’ಗೆ ಪ್ರತಿಕ್ರಿಯಿಸಿದ್ದಾರೆ.

‘ದೀಪಿಕಾ ಅವರ ತಂದೆ, ಖ್ಯಾತ ಬ್ಯಾಡ್ಮಿಂಟನ್‌ ಆಟಗಾರ ಪ್ರಕಾಶ್‌ ಪಡುಕೋಣೆ ಗ್ರಾಮೀಣ ಸೊಗಡಿನಿಂದ ಬಂದವರು. ನಾನು ಮತ್ತು ನಮ್ಮ ತಂದೆ‍ಪಿ.ಲಂಕೇಶ್‌ ಅವರು ಪ್ರಕಾಶ್‌ ಪಡುಕೋಣೆಯವರ ದೊಡ್ಡ ಅಭಿಮಾನಿಗಳು. ಅವರ ಆಟದ ಸೊಬಗನ್ನು ನೋಡಿ ಆನಂದಿಸಿದವರು. ಆಲ್‌ ಇಂಗ್ಲೆಂಡ್‌ ಕ್ಲಬ್‌ ಚಾಂಪಿಯನ್‌ಶಿಪ್‌ ಅನ್ನು ಪ್ರಕಾಶ್‌ ಗೆದ್ದಾಗ ನಮ್ಮ ತಂದೆಯವರು ಅದ್ಭುತಲೇಖನವನ್ನೇ ಬರೆದು ಅವರನ್ನು ಪ್ರಶಂಸಿಸಿದ್ದರು. ನಾನು ಸಹ ತಂದೆ –ಮಗಳ ಜತೆಗೆ ಬ್ಯಾಡ್ಮಿಂಟನ್‌ ಆಡಿದ್ದೇನೆ. ಮಗಳನ್ನು ಬ್ಯಾಡ್ಮಿಂಟನ್‌ ಆಟಗಾರ್ತಿ ಮಾಡುವುದು ಪ್ರಕಾಶ್‌ ಅವರ ಹಂಬಲವಾಗಿತ್ತು. ಆದರೆ, ದೀಪಿಕಾ ಸಿನಿಮಾ ನಟಿಯಾಗುವ ಕನಸು ಇಟ್ಟುಕೊಂಡು ಸಿನಿಮಾರಂಗಕ್ಕೆ ಬಂದವಳು. ಈ ರಂಗದಲ್ಲಿ ಏನಾದರೊಂದು ಸಾಧಿಸುವ ಛಲವಿದ್ದಿದ್ದನ್ನು 2006ರಲ್ಲಿ ‘ಐಶ್ವರ್ಯಾ’ ಚಿತ್ರ ಮಾಡುವಾಗ ಕಂಡಿದ್ದೆ.ಮುಂಬೈ ಮತ್ತು ಬಾಲಿವುಡ್‌ ನಂಟು ಬೆಳೆದ ಮೇಲೆ ಆಕೆಯ ಬದುಕು ಬದಲಾಗಿ ಹೋಯಿತು. ಸ್ನೇಹ ಬಳಗ ಮತ್ತು ಸುತ್ತಲಿನ ವಾತಾವರಣ ಹೇಗೆಲ್ಲಾ ಹಾಳು ಮಾಡುತ್ತದೆ ಎನ್ನುವುದಕ್ಕೆ ದೀಪಿಕಾ ಬದುಕು ತಾಜಾ ಉದಾರಣೆ’ ಎಂದಿದ್ದಾರೆ ಇಂದ್ರಜಿತ್‌ ಲಂಕೇಶ್‌.

‘ದೀಪಿಕಾ ಪಡುಕೋಣೆಯನ್ನು ‘ಐಶ್ವರ್ಯಾ’ ಚಿತ್ರದ ಮುಖೇನ ಸಿನಿಮಾರಂಗಕ್ಕೆ ಪರಿಚಯಿಸಿದ್ದು ನಾನೇ ಎನ್ನುವುದುಇಂದಿಗೂ ಹಲವರಿಗೆ ಗೊತ್ತಿಲ್ಲ. ಕನ್ನಡ ಚಿತ್ರದಿಂದ ಚಿತ್ರರಂಗಕ್ಕೆ ಕಾಲಿಟ್ಟೆ ಎನ್ನುವುದನ್ನು ಆಕೆ ಹೆಮ್ಮೆಯಿಂದ ಹೇಳಿಕೊಳ್ಳಬೇಕಿತ್ತು.ಆಕೆ ಅದನ್ನು ಎಲ್ಲಿಯೂ ಹೇಳಿಕೊಳ್ಳದಿರುವುದು ಬೇಜಾರಿನ ವಿಷಯಕ್ಕಿಂತ ವಿಷಾದದ ಸಂಗತಿ’ ಎನ್ನುತ್ತಾರೆ ಅವರು.

‘ನಾನು ಸಹ ಬಾಲಿವುಡ್‌ನಲ್ಲಿ ಸಿನಿಮಾ ಮಾಡಿದವನೇ. ಉತ್ತರ ಭಾರತೀಯರು ಕನ್ನಡದ ಬದಲು ‘ಕನ್ನಡ್‌’ ಎನ್ನುತ್ತಾರೆ. ಅದು ನಮಗೆ ಮಾಡುವ ಅವಮಾನ. ದೀಪಿಕಾ ಹುಟ್ಟೂರಿನಹೆಸರನ್ನು ಉತ್ತರ ಭಾರತೀಯರುತಪ್ಪಾಗಿ ‘ಪಡುಕೋಣ್‌’ ಎಂದುಉಚ್ಛರಿಸಿದರೂ ಅದನ್ನು ಆಕೆ ಸರಿಪಡಿಸುವ ಪ್ರಯತ್ನ ಮಾಡಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಬಾಲಿವುಡ್‌ನಲ್ಲಿರುವ ಸ್ಪರ್ಧೆ, ಅಭದ್ರತೆ, ಅಗ್ರಸ್ಥಾನದ ಒತ್ತಡ ಆಕೆಯನ್ನು ಡ್ರಗ್ಸ್‌ ವ್ಯಸನಿಯಾಗಿಸಿತಾ ಅಥವಾ ಈ ಮಾಯಾಲೋಕದಲ್ಲಿ ಆಕೆ ಕಳೆದುಹೋಗಿಬಿಟ್ಟಳಾ? ಎನ್ನುವ ಪ್ರಶ್ನೆಗಳು ಕಾಡುತ್ತವೆ. ನಡೆದು ಬಂದ ದಾರಿ ಯಾವಾಗಲೂ ನೆನಪಿರಬೇಕು, ಸರಿ ಮತ್ತು ತಪ್ಪುಗಳನ್ನು ನಿರ್ಧರಿಸುವ ವಿವೇಚನೆ ಇರಬೇಕು. ನಾವು ಏನೆ ಸಂಪಾದಿಸಿದರು, ಸಾಧನೆ ಮಾಡಿದರೂ ನಮ್ಮ ದಾರಿಯನ್ನೊಮ್ಮೆ ತಿರುಗಿ ನೋಡಿದಾಗ ತಂದೆ–ತಾಯಿ ಹೆಮ್ಮೆಪಡುವಂತಿರಬೇಕು. ಮಗಳ ಡ್ರಗ್ಸ್‌ ನಂಟು ಪ್ರಕಾಶ್‌ ಅವರಿಗೆ ಎಷ್ಟೊಂದು ಘಾಸಿಗೊಳಿಸಿರಬಹುದೆಂದು ಯೋಚಿಸಿದಾಗ ನನ್ನ ಮನಸಿಗೂ ತುಂಬಾ ನೋವಾಗುತ್ತದೆ’ ಎಂದಿದ್ದಾರೆ ಇಂದ್ರಜಿತ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT