ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟ ಜಾಕಿ ಶ್ರಾಫ್‌ ಹೆಸರು, ಧ್ವನಿ ಅನುಮತಿ ಇಲ್ಲದೆ ಬಳಸುವಂತಿಲ್ಲ: ದೆಹಲಿ HC

Published 18 ಮೇ 2024, 11:01 IST
Last Updated 18 ಮೇ 2024, 11:01 IST
ಅಕ್ಷರ ಗಾತ್ರ

ನವದೆಹಲಿ: ‘ಜಾಕಿ’ ಹಾಗೂ ‘ಜಗ್ಗು ದಾದಾ’ ಇವು ಬಾಲಿವುಡ್‌ ನಟ ಜಾಕಿ ಶ್ರಾಫ್ ಅವರ ಅಡ್ಡ ಹೆಸರುಗಳು. ಇನ್ನು ಮುಂದೆ ಇವು ಹಾಗೂ ಅವರ ಧ್ವನಿಯನ್ನು ಅನುಮತಿ ಇಲ್ಲದೆ ವಾಣಿಜ್ಯ ಉ್ದದೇಶಗಳಿಗೆ ಬಳಸದಂತೆ ದೆಹಲಿ ಹೈಕೋರ್ಟ್ ನಿರ್ಬಂಧ ಹೇರಿದೆ.

ನ್ಯಾಯಮೂರ್ತಿ ಸಂಜೀವ್ ನಾರುಲಾ ಈ ಸಂಬಂಧ ಮೇ 15ರಂದು ಮಧ್ಯಂತರ ಆದೇಶ ನೀಡಿದ್ದಾರೆ. ವಾಲ್‌ಪೇಪರ್‌ಗಳು, ಟಿ–ಶರ್ಟ್ಸ್‌, ಪೋಸ್ಟರ್‌ ಮಾರಾಟ ಮಾಡುವ ಸಂಸ್ಥೆಗಳು, ಕೃತಕ ಬುದ್ಧಿಮತ್ತೆ ಚಾಟ್‌ಬಾಟ್‌ ವೇದಿಕೆ ಬಳಸುವ ಇ–ಕಾಮರ್ಸ್ ವೆಬ್‌ಸೈಟ್‌ಗಳು ಮೇಲ್ನೋಟಕ್ಕೆ ನಟನ ವ್ಯಕ್ತಿತ್ವ ಮತ್ತು ಪ್ರಚಾರದ ಹಕ್ಕುಗಳನ್ನು ಉಲ್ಲಂಘಿಸುತ್ತಿರುವುದು ಕಂಡುಬರುತ್ತಿದೆ ಎಂದು ಆದೇಶದಲ್ಲಿ ಹೇಳಿದ್ದಾರೆ.

ಅಗೌರವ ಮತ್ತು ನಿಂದನಾತ್ಮಕ ಪದಗಳನ್ನು ಬಳಸಿ ಜಾಕಿಶ್ರಾಫ್ ಅವರ ವಿಡಿಯೊ ಪ್ರಸಾರ ಮಾಡಿದ್ದ ಇಬ್ಬರು ಕಂಟೆಂಟ್‌ ಕ್ರಿಯೆಟರ್‌ಗಳಿಗೂ ಕೋರ್ಟ್‌ ಈ ಸಂಬಂಧ ಸ್ಪಷ್ಟ ನಿರ್ದೇಶನ ನೀಡಿದೆ.

ಅಲ್ಲದೆ, ಮಾನಹಾನಿ ವಿಡಿಯೊ ಪೋಸ್ಟ್‌ ಮಾಡಿದ್ದ ಯೂಟ್ಯೂಬ್‌ ಕಂಟೆಂಟ್‌ ಕ್ರಿಯೇಟರ್ ಹಾಗೂ ತನ್ನ ಮಳಿಗೆಗೆ ನೋಂದಣಿಯಾಗಿದ್ದ ಟ್ರೇಡ್‌ಮಾರ್ಕ್ ‘ಭಿಡು’ ಬಳಕೆ ಮಾಡಿಕೊಂಡಿದ್ದ ರೆಸ್ಟೊರೆಂಟ್‌ ಮಾಲೀಕರೊಬ್ಬರಿಗೂ ಕೋರ್ಟ್ ನೋಟಿಸ್ ಜಾರಿ ಮಾಡಿತು.

ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 15ಕ್ಕೆ ಮುಂದೂಡಿದ ಕೋರ್ಟ್, ದೂರಸಂಪರ್ಕ ಇಲಾಖೆ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ನೋಟಿಸ್‌ ಜಾರಿ ಮಾಡಿದ್ದು, ಸಂಬಂಧಿತ ಟೆಲಿಕಾಂ ಸೇವಾದಾರರ ಮೇಲೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿತು.

‘ಅನುಮತಿಯಿಲ್ಲದೆ ನನ್ನ ಹೆಸರು, ವ್ಯಕ್ತಿತ್ವ ಬಿಂಬಿಸುವ ವಿಶೇಷಣಗಳನ್ನು ಹಲವು ಸಂಸ್ಥೆಗಳು ವಾಣಿಜ್ಯ ಉದ್ದೇಶದ ಲಾಭಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿವೆ’ ಎಂದು ಜಾಕಿಶ್ರಾಫ್‌ ಅವರು ಈ ತಿಂಗಳ ಆರಂಭದಲ್ಲಿ ಕೋರ್ಟ್ ಮೆಟ್ಟಿಲೇರಿದ್ದರು. ಸ್ನೇಹದ ಅಭಿವ್ಯಕ್ತಿಗೆ ಮರಾಠಿ ಭಾಷೆಯಲ್ಲಿ ವಾಚ್ಯವಾಗಿ ಬಳಸುವ ‘ಭಿಡು’ ಪದದ ಮೇಲಿನ ಹಕ್ಕಿನ ಉಲ್ಲಂಘನೆಯೂ ಆಗುತ್ತಿದೆ ಎಂದು ಆರೋಪಿಸಿದ್ದರು.

ಶ್ರಾಫ್‌ ಅವರ ಪರವಾಗಿ ವಕೀಲ ಪ್ರವೀಣ್‌ ಆನಂದ್ ವಾದ ಮಂಡಿಸಿದರು. ‘ನನ್ನ ಕಕ್ಷಿದಾರರರು 200ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದು, ಅವರ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ’ ಎಂದು ಪ್ರತಿಪಾದಿಸಿದರು. ಪೂರಕವಾಗಿ ಇಂಥದ್ದೇ ಪ್ರಕರಣದಲ್ಲಿ ನಟರಾದ ಅಮಿತಾಭ್ ಬಚ್ಚನ್ ಮತ್ತು ಅನಿಲ್‌ ಕಪೂರ್‌ ಅವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ಕೋರ್ಟ್ ಹೊರಡಿಸಿರುವ ಆದೇಶಗಳನ್ನು ಉಲ್ಲೇಖಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT