ಲಾಕ್‌ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೊಳಗಾದವರ ನೆರವಿಗೆ ನಿಂತ ಸೆಲೆಬ್ರಿಟಿಗಳಲ್ಲಿ ಮುಖ್ಯವಾಗಿ ಗಮನ ಸೆಳೆದಿದ್ದು ಬಾಲಿವುಡ್ ನಟ ಸೋನು ಸೂದ್. ಬದುಕು ಅರಸಿ ಹೋದ ನಗರದಲ್ಲೂ ಇರಲಾರದೆ, ಹುಟ್ಟಿದ ಊರಿಗೂ ಹೋಗಲಾಗದೆ ಸಂಕಷ್ಟದಲ್ಲಿದ್ದ ವಲಸೆ ಕಾರ್ಮಿಕರನ್ನು ದಡ ತಲುಪಿಸಿದ್ದು ಸೂದ್. ದೇಶದ ಯಾವುದೋ ಮೂಲೆಯಲ್ಲಿದ್ದವ ಕಷ್ಟಕ್ಕೂ ಮಿಡಿದ ಕರುಣಾಮಯಿ.
ಆಂಧ್ರಪ್ರದೇಶದ ಬಡ ರೈತ ವಿ. ನಾಗೇಶ್ವರರಾವ್, ಎತ್ತುಗಳಿಲ್ಲದಿದ್ದರಿಂದ ತಮ್ಮ ಪುತ್ರಿಯರನ್ನೇ ನೊಗ ಕಟ್ಟಿ ಹೊಲದಲ್ಲಿ ಬಿತ್ತನೆ ಮಾಡಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದನ್ನು ಕಂಡು ಕರಗಿದ್ದ ಸೂದ್, ಕೃಷಿಗಾಗಿ ಅವರ ಮನೆಗೆ ₹9 ಲಕ್ಷದ ಹೊಸ ಟ್ರಾಕ್ಟರ್ ಕೊಡಿಸಿದ್ದರು. ಈ ಘಟನೆಯ ಎಳೆಯನ್ನಿಟ್ಟುಕೊಂಡು ಸೋನು ಕುರಿತು ‘ದೇವದೂತ’ ಎಂಬ ಕಿರುಚಿತ್ರ ನಿರ್ಮಿಸಿದ್ದಾರೆ ಕನ್ನಡದ ನಟ ಯತಿರಾಜ್. ನೈಜ ಘಟನೆಗೆ ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿರುವ ಅವರು, ರೈತನ ಪಾತ್ರಕ್ಕೆ ಬಣ್ಣವನ್ನೂ ಹಚ್ಚಿದ್ದಾರೆ.
‘ಸಂಕಷ್ಟದಲ್ಲಿದ್ದವರಿಗೆ ಸ್ಪಂದಿಸಿದ ಸೋನುಗೆ ಅರ್ಪಣೆಯಾಗಿರುವ ಈ ಕಿರುಚಿತ್ರ, ಅವರ ಮಾನವೀಯ ಮುಖವನ್ನು ಮತ್ತಷ್ಟು ಮನಸ್ಸುಗಳಿಗೆ ತಲುಪಿಸುವ ಪ್ರಯತ್ನ. ಲಾಕ್‌ಡೌನ್‌ನಿಂದಾಗಿ ಕೆಲಸವಿಲ್ಲದೆ ನಾನೂ ಒಂದು ರೀತಿಯಲ್ಲಿ ಖಿನ್ನತೆಗೊಳಗಾಗಿದ್ದೆ. ಆಗ, ಕಿರುಚಿತ್ರದತ್ತ ಗಮನ ಹರಿಸಿದೆ. ಲಾಕ್‌ಡೌನ್ ಪರಿಣಾಮದ ಎಳೆಗಳನ್ನಿಟ್ಟುಕೊಂಡು ಚಿತ್ರಗಳನ್ನು ನಿರ್ದೇಶಿಸಿ, ನಿರ್ಮಿಸತೊಡಗಿದೆ’ ಎಂದು ಯತಿರಾಜ್ ತಮ್ಮೊಳಗಿನ ನಿರ್ದೇಶಕ ಹೊರಬಂದ ಬಗೆಯನ್ನು ಹಂಚಿಕೊಂಡರು.
‘ಆಳುವ ಸರ್ಕಾರವೇ ಕೈಚೆಲ್ಲಿ ಕುಳಿತಾಗ, ಮುಂದೇನು? ಎಂಬ ಚಿಂತೆಯಲ್ಲಿದ್ದ ಕಾರ್ಮಿಕರಿಗೆ ‘ದೇವದೂತ’ನಂತೆ ನೆರವಿಗೆ ಬಂದಿದ್ದು ಸೋನು. ಅವರಂತೆ, ಸಾವಿರಾರು ಮಂದಿಗೆ ಸಹಾಯ ಮಾಡುವ ಸಾಮರ್ಥ್ಯ ನನಗಿಲ್ಲ. ಆದರೆ, ಸಹಾಯ ಮಾಡಿದವರ ಕುರಿತು ಕಿರುಚಿತ್ರ ನಿರ್ಮಿಸಿ ಅರ್ಪಿಸಿದರೆ ಹೇಗೆ? ಎಂಬ ಆಲೋಚನೆ ಬಂತು. ಕೂಡಲೇ, ಆಂಧ್ರಪ್ರದೇಶದ ರೈತನಿಗೆ ನೀಡಿದ ನೆರವಿನ ಎಳೆಯನ್ನಿಟ್ಟುಕೊಂಡೇ 7 ನಿಮಿಷ 32 ಸೆಕೆಂಡ್‌ಗಳ ಚಿತ್ರ ನಿರ್ಮಿಸಿದೆ. ಇದಕ್ಕೆ, ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ’ ಎಂದು ಸಂತಸ ವ್ಯಕ್ತಪಡಿಸಿದರು.
ಸೆ. 4ರಂದು ಯೂಟ್ಯೂಬ್‌ಗೆ ಅಪ್‌ಲೋಡ್ ಆಗಿರುವ ಕಿರುಚಿತ್ರವನ್ನು ಇದುವರೆಗೆ 2,500 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಫೇಸ್‌ಬುಕ್‌ನಲ್ಲೂ ಶೇರ್ ಆಗಿದ್ದು, ನೂರಾರು ಮಂದಿ ತಮ್ಮ ವಾಲ್‌ಗಳಲ್ಲಿ ಮರು ಶೇರ್ ಮಾಡಿಕೊಂಡಿದ್ದಾರೆ. ಹೀಗೆ ಸಾವಿರಾರು ಮಂದಿಗೆ ‘ದೇವದೂತ’ ತಲುಪುತ್ತಿದ್ದಾನೆ.
ಸಾವನದುರ್ಗದ ಬಳಿ ಶೂಟಿಂಗ್ ಮಾಡಿರುವ ಈ ಚಿತ್ರದಲ್ಲಿ ಹೊಸ ಮುಖಗಳಾದ ಯಶಿತಾ, ವಿನುತಾ, ಚಂದನ, ಶೀತಲ್, ಸಕ್ಕೂ, ಭಗತ್ ಸಿಂಗ್, ಶರತ್, ಚಂದ್ರಶೇಖರ್, ಕುಲದೀಪ್ ಸಿಂಗ್ ನಟಿಸಿದ್ದಾರೆ. ಅರುಣ್ ಮತ್ತು ರುದ್ರೇಶ್ ಎಲ್. ಕ್ಯಾಮೆರಾ ಹಿಡಿದಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.